(ಲೇಖನ -52)ಅಪ್ಪಾ...... ನೀನು ಹಾಕಿರುವ ಬಟ್ಟೆ ನನ್ನ ಗೌರವಕ್ಕೆ ಧಕ್ಕೆ ತರುತ್ತದೆ, ನೀನು ನನ್ನ ಜೊತೆಯಲ್ಲಿರಬೇಡ, ನಿನಗಾಗಿ ಅನಾಥಶ್ರಮವಿದೆ

ಅಪ್ಪಾ...... ನೀನು ಹಾಕಿರುವ ಬಟ್ಟೆ ನನ್ನ ಗೌರವಕ್ಕೆ ಧಕ್ಕೆ ತರುತ್ತದೆ, ನೀನು ನನ್ನ ಜೊತೆಯಲ್ಲಿರಬೇಡ, ನಿನಗಾಗಿ ಅನಾಥಶ್ರಮವಿದೆ.ಹೌದು ಈ ಮಾತು ಕೇಳಿದಾಗ ಹೃದಯ ದಂಗಾಗುತ್ತದೆ, ಮನಸು ಕುಗ್ಗಿಬಿಡುತ್ತದೆ, ಮಕ್ಕಳೇ ಬೇಡವೆನಿಸುತ್ತದೆ. ಈ ಲೋಕದಲ್ಲಿ ಇಂತಹ ಘಟನೆಗಳನ್ನು ಅದೆಷ್ಟು  ತಂದೆಯಂದಿರು ಅನುಭವಿಸುತ್ತಿದ್ದಾರೆ ಅಲ್ಲವೇ!



          ತನ್ನ ಮಕ್ಕಳಿಗಾಗಿ ಸರ್ವಸ್ವವನ್ನೇ ತ್ಯಾಗ ಮಾಡಿ, ತಾನು ತಿನ್ನದೆ ತನ್ನ ಮಕ್ಕಳಿಗಾಗಿ, ಸಂಸಾರಕ್ಕಾಗಿ ಜೀವನ ಮಾಡುವ ಜೀವ ಎಂದರೆ ಅಪ್ಪ, ಅಪ್ಪನೆಂದರೆ ಶಕ್ತಿ, ಅಪ್ಪನೆಂದರೆ ಹುಮ್ಮಸ್ಸು, ಅಪ್ಪನೆಂದರೆ ಧೈರ್ಯ, ಅಪ್ಪನೆಂದರೆ ಮೌಲ್ಯ, ಅಪ್ಪನೆಂದರೆ ಪ್ರಪಂಚ, ಅಪ್ಪನೆಂದರೆ ಸರ್ವಸ್ವ. ಹುಟ್ಟಿರುವ ಮಕ್ಕಳಿಗೆ ಅಪ್ಪನಿಲ್ಲದೇ ಇದ್ದರೆ ಅವರ ಜೀವನ ಒಂದಲ್ಲ ಒಂದು ರೀತಿಯಲ್ಲಿ ಬಹಳಷ್ಟು ಕಷ್ಟಪಟ್ಟು ಬದುಕಿರುತ್ತಾರೆ. ಅಪ್ಪನಿದ್ದರೆ ಏನೆಲ್ಲಾ ಮಾಡುತಿದ್ದೆ ಎಂಬ ಕನಸನ್ನು ಕಾಣುತ್ತ ತನ್ನ ಕಣ್ಣಲ್ಲಿ ನೀರು ಸುರಿಸುವ ಮಕ್ಕಳನ್ನು ನಾವುಗಳು ನೋಡಿರಬಹುದು. ಹಾಗೆಯೇ ಮಕ್ಕಳು ದೊಡ್ಡವರಾದ ಮೇಲೆ ಅಪ್ಪನ ಮೇಲೆ ಎಗರಾಡಿ ಅಪ್ಪನ ಕಣ್ಣಲ್ಲಿ ನೀರು ಬರುವಂತೆ ಮಾಡುವ ಮಕ್ಕಳು.

        ಅಪ್ಪಾಜಿ ನನಗೆ, ಸೈಕಲ್ ಬೇಕು, ಅಪ್ಪಾಜಿ ನನಗೆ ಕಾರು ಬೇಕು, ನನಗೆ ಆಟವಾಡುವ ವಸ್ತುಗಳು ಬೇಕು, ನನಗೆ ಹೊರಗಡೆ ಸುತ್ತಾಡಲು ಕರೆದುಕೊಂಡು ಹೋಗು, ಹೆಗಲ ಮೇಲೆ ಕುಳ್ಳಿರಿಸು, ಅಪ್ಪ ನನ್ನ ಜೊತೆ ಆಟವಾಡು ಇಂತಹ ಅನೇಕ ಬೇಕುಗಳಿಗೆ ಆಯ್ತು ಮಗೂ ಎನ್ನುತ್ತಾ ಎಷ್ಟು ಕಷ್ಟದಲ್ಲಿದ್ದರೂ ತನ್ನ ಮಕ್ಕಳಿಗಾಗಿ ಏನಾದರು ಮಾಡಿ ತಾನು ಹರುಕು ಮುರುಕು ಬಟ್ಟೆ, ಚಪ್ಪಲಿ, ಒಂದೊತ್ತಿನ ಊಟವನ್ನು ಮಾಡಿ ಮಕ್ಕಳ ಬಯಕೆಯನ್ನು ತೀರಿಸುತ್ತ ತನ್ನೆಲ್ಲ ಸಂತೋಷವನ್ನು ಬದಿಗಿಟ್ಟು ಹೋರಾಟಮಾಡುತ್ತ ಮುದಿಪ್ರಾಯಕ್ಕೆ ಬಂದಾಗ. ಇದನೆಲ್ಲ ಮರೆತು ಯುವಕರಾಗಿ, ಮದುವೆ ಮಾಡಿಕೊಂಡು ಒಂದಷ್ಟು ಹುದ್ದ ಐಶ್ವರ್ಯ ಪಡೆದು ಸಾಕಿದ ತಂದೆಗೆ ತಿರುಗಿ ಬೀಳುವ ಮಕ್ಕಳ ಬಾಯಲ್ಲಿ, ಅಪ್ಪಾಜಿ ನೀನು ಹಾಕಿರುವ ಬಟ್ಟೆ ಬಹಳ ಹಳೇದು, ನಿನ್ನ ಬಟ್ಟೆ ಚೆಂದವಿಲ್ಲ, ನೀನ್ನ ಬಟ್ಟೆ ಬೆವರುವಾಸನೆ ಬರುತ್ತದೆ, ನನ್ನ ಗೆಳೆಯ, ಗೆಳತಿ ಬಂದಾಗ ನೀನು ನನ್ನ ಅಪ್ಪ ಎಂದು ಹೇಳಲು ಮುಜುಗರವಾಗುತ್ತದೆ. ನೀನು ನನ್ನ ಜೊತೆಯಲ್ಲಿರಬೇಡ, ನಿನ್ನನ್ನು ಅನಾಥಶ್ರಮ ಬಿಡಲು ವ್ಯವಸ್ಥೆ ಮಾಡಿದ್ದೇನೆ, ಹಣ ನಾನು ಕೊಡುತ್ತೇನೆ ಎಂದು ಹೇಳುವ ಮಕ್ಕಳನ್ನು ಹೆತ್ತ ತಂದೆ ತಾಯಿಯ ಪರಿಸ್ಥಿತಿ ಹೇಗಿರಬೇಕು ಅಲ್ಲವೇ?

           ಇದು ನಿಜವಾದ ಘಟನೆ, ಕಟ್ಟು ಕತೆಯಲ್ಲ, ಇಂತಹ ನಿದರ್ಶನ ಅದೆಷ್ಟು ಅಲ್ಲವೇ, ತನ್ನ ಸ್ವತಃ ತಾಯಿಯನ್ನೇ ಯಾರೋ ಏನೋ ಎಂದು ಹೇಳಿ ವೃದ್ದಾಶ್ರಮಕ್ಕೆ ಸೇರಿಸಿದ ಉದಾಹರಣೆ ನಾನು ಕಿವಿಯಾರೆ ಕೇಳಿದ್ದೇನೆ! ಕೆಲವು ಅಪ್ಪಂದಿರು ಮಕ್ಕಳ ಪ್ರತಿಯೊಂದು ಕನಸನ್ನು ನನಸು ಮಾಡಲು ರಾತ್ರಿ ಹಗಲು ಶ್ರಮಪಡುತ್ತಿರುತ್ತಾರೆ. ಆದರೆ ಅಪ್ಪನ ಜೀವನಪರ್ಯಂತ ಸೇವೆ, ಶ್ರಮಕ್ಕೆ ಕಿಂಚಿತ್ತೂ ಗೌರವ ಕೊಡದ ಮಕ್ಕಳು ಯಾವ ತಂದೆಗೂ ಬರದಿರಲಿ. ನಿನ್ನ ಅಪ್ಪ, ಕುಡುಕನಾಗಿರಲಿ, ಅವಿದ್ಯಾವಂತನಾಗಿರಲಿ, ಬಡವನಾಗಿರಲಿ, ಅಂದವಿಲ್ಲದೆ ಇರಲಿ, ಯಾವ ತರಹದ ಬಟ್ಟೆಯನ್ನು ಹಾಕಿರಲಿ ಅಪ್ಪನನ್ನು ಹೀಯಾಳಿಸಿ ಪಾಪವನ್ನು ಕಟ್ಟಿಕೊಳ್ಳಬೇಡ. ಅಪ್ಪನ ಒಂದು ಕಣ್ಣೀರ ಹನಿ ನಿನ್ನ ಅಂತಸ್ತು ಕೆಳಗೆ ತಳ್ಳ ಬಹುದು, ಒಂದು ಮಾತು ನಿನ್ನ ಆಸ್ತಿಯನ್ನು ನೆಲಕಚ್ಚಿಸಲು ಬಹುದು.

           ಹೌದು, ತನ್ನ ಮಗನ ಮಾತಿಗೆ ಬೇಸತ್ತು, ಅಪ್ಪ ಅನಾಥಶ್ರಮ ಸೇರಲೇಬೇಕಾಯಿತು. ಅನಾಥಶ್ರಮ ಸೇರಿಬಿಟ್ಟ ಅಪ್ಪ ತನ್ನ ಮಕ್ಕಳಿಗಾಗಿ ಶ್ರಮಪಟ್ಟ ಪ್ರತಿಯೊಂದು ಕ್ಷಣಗಳನ್ನು ನೆನೆಯುತ್ತ ಬಿಕ್ಕಿ ಬಿಕ್ಕಿ ಅಳುತ್ತಾ, ತನ್ನ ತಲೆಯನ್ನು ಗೋಡೆಗೆ ಚಚ್ಚಿಕೊಳ್ಳುತ್ತಾ, ನನ್ನ ಮಕ್ಕಳು ನನಗಾಗಿ ಹೀಗೆ ಮಾಡಿ ಬಿಟ್ಟರೆಲ್ಲವೇ ದೇವರೇ!! ನನ್ನನ್ನು ಯಾಕಾಗಿ ಬದುಕಿಸಿರುವೆ ಬೇಗ ಬಂದು ಕರೆದುಕೊಂಡು ಹೋಗು ಅನ್ನುವ ಹೊತ್ತಲ್ಲಿಯೇ..... ಅದೇ ಅಪ್ಪನ ಕಿವಿಯಾರೆ ತನ್ನ ಮಗನು ಹೃದಯಘಾತದಿಂದ ಸತ್ತು ಹೋದ ಅನ್ನುವ ಸುದ್ದಿ! ಏನು ವಿಚಿತ್ರ ಅಲ್ಲವೇ ದೇವರ ಮಹಿಮೆ ಅನ್ನುತ್ತಿರಾ? ಖಂಡಿತಾ ಅಲ್ಲ ಇದು ಪಾಪದ ಪರಮಾವಧಿ! ಹೃದಯಘಾತವಾದಾಗ ಆ ಮನೆಯಲ್ಲಿ ಹೆಂಡತಿ ಬಿಟ್ಟು ಅವನ ಆಸ್ತಿಗಳು ಮಾತ್ರ ಇತ್ತು, ಆಸ್ಪತ್ರೆಗೆ ಕೊಂಡೊಯ್ಯುವ ಸಮಯದಲ್ಲಿ ಮಗನ ಕಣ್ಣಲ್ಲಿ ಘಳ ಘಳನೆ ನೀರು! ಅಪ್ಪಾಜಿ ನನಗೆ ನೀನು ಬೇಕಪ್ಪ ನಾನು ಸಾಯುತ್ತಿದ್ದೇನೆ, ಎಲ್ಲಿದ್ದರೂ ಬಾರಪ್ಪ. ನನಗೆ ನೀನು ಬೇಕು...... ನೀನು ಬೇಕು... ನೀನಿಲ್ಲದೆ ನಾನು ಏನಿಲ್ಲ. ವಿಧಿಯಾಟ, ಕೊನೆಗಾಲದಲ್ಲಿ ನೀರು ಕುಡಿಸಿದ ರಿಕ್ಷಾ ಚಾಲಕ. ಈ ಮಾತನ್ನು ಕೇಳಿ ಕಣ್ಣೀರು ಹಾಕಿದ, ಅಪ್ಪಾಜಿ ನೀನು ನನ್ನನ್ನು ಬಹಳ ಬೇಗನೆ ಬಿಟ್ಟು ಹೋಗಿರುವೆ! ಆದರೆ ಈ ಮಗನಿಗೆ ಅಪ್ಪನಿದ್ದರೂ ಅನಾಥಶ್ರಮದಲ್ಲಿ!

      ಬರುವ ಜನ್ಮವಿದ್ದರೆ ನನಗೆ ನನ್ನ ಜೀವನಪೂರ್ತಿ ಅಪ್ಪನೊಂದಿಗೆ ಇರುವ ಭಾಗ್ಯಕೊಡು ದೇವರೇ ಎನ್ನುತ್ತಾ ಬಡ ರಿಕ್ಷಾ ಚಾಲಕನ ಕಣ್ಣಲ್ಲಿ ಕಣ್ಣೀರ ಧಾರೆ.

    "ಭಾರತದ ಅನುರಾಗ " ಈ ಸಮಾಜದಲ್ಲಿರುವ ಎಲ್ಲಾ ತಂದೆಗೆ ಉತ್ತಮ ಮಕ್ಕಳು ಕೊನೆಯವರೆಗೂ ಇರಲಿ ಎಂಬ ಹಾರೈಕೆಯೊಂದಿಗೆ

( ಈ ಮಾತು ಬರಹ ರೂಪಕ್ಕೆ ಬರಲು ಕಾರಣ ನನ್ನ ಪ್ರೀತಿಯ ಗೆಳೆಯ ಪ್ರದೀಪ್ ಕುಂದರ್ ಬೈಕಾಡಿ ಅವರಿಗೆ ನನ್ನ ಪ್ರೀತಿಯ ನಮನಗಳು )

ಬರಹ : ಮಾಧವ ಕೆ. ಅಂಜಾರು.


      










Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ