(ಲೇಖನ -129) ನ್ಯಾಯ ಮತ್ತು ಅನ್ಯಾಯದ ಹೋರಾಟ
ಬದುಕೊಂದು ಹೋರಾಟವೇ ಆದರೆ ಇದರ ನಡುವೆ ನಮ್ಮ ಜೀವನದಲ್ಲಿ ಹಲವು ಸಂಧರ್ಭಗಳು ನ್ಯಾಯಕ್ಕಾಗಿ ಹೋರಾಟ, ಜೀವನಕ್ಕಾಗಿ ಹೋರಾಟ, ಯಶಸ್ಸಿಗಾಗಿ ಹೋರಾಟ ಮತ್ತು ಕೆಲವರು ಹೋರಾಡುವವರನ್ನು ಧಮನಿಸಲು ಮಾಡುವ ಕಪಟ ಹೋರಾಟಗಳು ನಡೆಯುತ್ತಿರುತ್ತವೆ.
ಬ್ರಿಟಿಷರು ನಮ್ಮ ದೇಶವನ್ನು ಆಳುತಿದ್ದ ಸಂಧರ್ಭದಲ್ಲಿ ಸ್ವಾತಂತ್ರ್ಯ ಕ್ಕಾಗಿ ಹೋರಾಟ ಮಾಡಿ ತಮ್ಮ ಜೀವನವನ್ನು/ ಜೀವವನ್ನು ಮುಡಿಪಾಗಿಸಿ ಇಂದಿಗೂ ನಾವೆಲ್ಲರೂ ಅವರನ್ನು ಸ್ಮರಿಸುತ್ತ ಸ್ವಾತಂತ್ರ್ಯ ಆಚರಿಸುತ್ತೇವೆ, ಸಿಹಿ ತಿಂಡಿ ಹಂಚುತ್ತೇವೆ, ಒಂದಷ್ಟು ಭಾಷಣಗಳನ್ನು ಮಾಡುತ್ತೇವೆ, ಆದರೂ ಹೋರಾಟ ಮಾಡಿ ಮಡಿದ ಜನರನ್ನು ಬಿಡದೆ ಕೀಳು ರಾಜಕೀಯ ಕೂಡ ಮಾಡುತ್ತಿರುತ್ತೇವೆ. ಮತ್ತು ಪ್ರಸ್ತುತ ಸ್ಥಿತಿಗೆ ಅನುಸಾರವಾಗಿ ಬಾಯಿಗೆ ಬಂದ ಹಾಗೆ ಮಾತನಾಡುವ ಅನೇಕ ನಾಯಕರುಗಳನ್ನು ನಾವು ನೋಡುತ್ತಲೇ ಇದ್ದೇವೆ. ಹೋರಾಟದ ಹಾದಿಯಲ್ಲಿ ಒಂದಷ್ಟು ಜನರು ತನ್ನ ಜೇಬು ತುಂಬಿಸಿಕೊಳ್ಳಲು ಪ್ರಯತ್ನಿಸುತ್ತ ಕಣ್ಣೆದುರು ಸತ್ಯ ಕಾಣುತಿದ್ದರೂ ಸುಳ್ಳನ್ನು ಸೃಷ್ಟಿಮಾಡಿ ಹೋರಾಟದ ಚಿತ್ರಣವನ್ನು ಬದಲಿಸಲು ಪ್ರಯತ್ನಪಡುತ್ತಾರೆ. ಇಲ್ಲಿ ಅವರ ಸ್ವಾರ್ಥ, ಕೆಟ್ಟ ವರ್ತನೆ, ಅಹಂಕಾರ, ದಬ್ಬಾಳಿಕೆ, ಗೂಂಡಾಗಿರಿ, ಶೋಷಣೆ, ಗದರಿಸುವಿಕೆಯ ಅಂಶಗಳು ಮೇಲೆದ್ದು ಕಾಣುತ್ತವೆ.
ಸಾಮಾನ್ಯವಾಗಿ, ಸುಳ್ಳನ್ನು ಶೋಷಣೆಯನ್ನು ಗದರಿಕೆ, ಮತ್ತು ಅನೇಕ ಮಾನಸಿಕ ಹಿಂಸೆಗಳನ್ನು ಅನುಭವಿಸುತ್ತ ಮುನ್ನುಗ್ಗುವವನೆ ನಿಜವಾದ ಹೋರಾಟಗಾರ, ಹೋರಾಟವೆಂದರೆ ಸುಲಭದ ಮಾತಲ್ಲ, ಅದಂತೂ ಇಂದಿನ ಕಾಲದಲ್ಲಿ ಸತ್ಯ, ನ್ಯಾಯ, ನೀತಿ, ಗೌರವ, ಮಾನ, ಮರ್ಯಾದೆ ಎಲ್ಲವನ್ನೂ ಕಳೆದುಕೊಂಡಿರುವ ಜನರೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರಾಭಲ್ಯ ಹೊಂದಿರುವ ಜನರ ಹಿಂದೆ ಸುತ್ತಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ, ಹಣಕ್ಕಾಗಿ ತಮ್ಮನ್ನೇ ಮಾರಿಕೊಂಡು ಮೇಧಾವಿಗಳಂತೆ ಭಾಷಣ ಬಿಗಿದು ಕತ್ತಲಾಗುತ್ತಲೇ ಹೋರಾಟ ಮಾಡಿ ಕಡಿಮೆ ಬೆಳಕಿನ ಮದ್ಯೆ ನಾಳೆಯ ಹೋರಾಟಕ್ಕೆ ಅಣಿಯಗುತ್ತಾರೆ. ಇದು ಅವರ ದಿನ ನಿತ್ಯದ, ಮತ್ತು ಬಿಡುವಿನ ಸಮಯದಲ್ಲಿ ಮಾಡುವ ಉದ್ಯೋಗವಾಗಿರುತ್ತದೆ. ಇಲ್ಲಿ ಸಾಮಾನ್ಯವಾಗಿ ಪಟ್ಟು ಹಿಡಿದು ಮಾಡುವ ಹೋರಾಟ ತಮ್ಮ ಬದುಕಿನಲ್ಲಿ ಯಾವುದೇ ಸ್ಥಿತಿ ಬಂದರೂ ದೃತಿಗೆಡುವುದಿಲ್ಲ, ಮತ್ತು ಯಾವುದಕ್ಕೂ ಹೆದರಿ ಇರುವುದಿಲ್ಲ ಮತ್ತು ಸತ್ಯವನ್ನು ಘಾಢವಾಗಿ ಅರಿತಿರುವವನು ಮುನ್ನುಗುತ್ತಲೇ ಇರುತ್ತಾನೆ, ಕೊನೆಗೆ ಮಾಡು ಇಲ್ಲವೇ ಮಡಿ ಎಂಬ ನಿರ್ಧಾರಕ್ಕೂ ಬಂದುಬಿಡುತ್ತಾನೆ. ಅಂತಹ ಹೋರಾಟಗಾರನಿಗೆ ನಿಜವಾದ ಬೆಂಬಲ ಜನರಿಂದ ಸಿಗುತ್ತದೆ ಮತ್ತು ಹೋರಾಟದಲ್ಲಿ ಜಯಗಳಿಸುತ್ತಾನೆ.
ತಪ್ಪು ಮಾಡಿರುವವನು ಸದಾ ಆತಂಕದಲ್ಲಿ ಬದುಕುತ್ತಾನೆ, ತನ್ನ ತಪ್ಪನ್ನು ಮುಚ್ಚಿ ಹಾಕಲು ಹಲವು ಮಾರ್ಗಗಳನ್ನು ಹುಡುಕುತ್ತಾನೆ ತನ್ನ ಎದುರಾಳಿಯನ್ನು ದಮನಿಸಲು ಹಲವು ದಾರಿಯನ್ನು ಹುಡುಕುತ್ತಾನೆ, ತನ್ನ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಿ ನಾನು ಬಹಳಷ್ಟು ಒಳ್ಳೆಯ ವ್ಯಕ್ತಿ ಎಂಬುದನ್ನು ತೊರ್ಪಡಿಸಿಕೊಳ್ಳಲು ಪ್ರಯತ್ನ ಮಾಡುತ್ತಲೆ ಇರುತ್ತಾನೆ ಅದಕ್ಕಾಗಿ ತನ್ನ ಎಲ್ಲಾ ಶಕ್ತಿಯನ್ನು ಉಪಯೋಗಿಸಿ ಬೆಂಬಲಕ್ಕಾಗಿ ಒಂದಷ್ಟು ಜನರನ್ನು ಸೇರಿಸಿ ನಿಜವಾದ ಕಾರಣವನ್ನು ಮುಚ್ಚಿ ಜನರು ದಂಗೆ ಏಳುವಂತೆ ಮಾಡುತ್ತಾನೆ. ಅದರಲ್ಲಿ ಜಾತಿ, ಧರ್ಮ, ನಂಬಿಕೆಗಳನ್ನು ಎದುರಿಟ್ಟು ಸತ್ಯವನ್ನು ಮರೆಮಾಚಲು ಪ್ರಯತ್ನಿಸುತ್ತಾನೆ. ಆದರೆ ನಿಜವಾದ ನ್ಯಾಯಕ್ಕಾಗಿ ಹೋರಾಟ ಮಾಡುವವನು ತನ್ನ ಗುರಿ ಮುಟ್ಟುವ ತನಕ ಬರುವ ಎಲ್ಲಾ ಸವಾಲು ಸ್ವೀಕರಿಸಿ ಮುನ್ನಡೆಯುತ್ತಾನೆ. ಇಲ್ಲಿ ಸತ್ಯ ಮತ್ತು ನಿಜವಾದ ಧರ್ಮ ಕೆಲಸ ಮಾಡುತ್ತಲೆ ಇರುತ್ತದೆ.
ಸತ್ಯವೆಂಬುವುದು ಹಾಗೆ, ಯಾರೇ ಬಂದರೂ ಎಷ್ಟು ದಬ್ಬಾಳಿಕೆ, ಮೋಸ ವಂಚನೆ ಮಾಡಿದರೂ ಜಗ್ಗದೆ ಮುನ್ನುಗುವಷ್ಟು ಶಕ್ತಿ ಹೊಂದಿರುತ್ತದೆ ಅದರಲ್ಲಿ ಮೋಸ ಮಾಡುವವರು ಎದುರಿಗೆ ಬಂದರೂ ನಾಶವಾಗುತ್ತಾರೆ, ಕಪಟಿಗಳು, ಸತ್ಯ ಮುಚ್ಚಲು ಸಹಾಯ ಮಾಡಿದವರೂ ಒಂದಲ್ಲ ಒಂದು ರೀತಿಯಲ್ಲಿ ಸಿಕ್ಕಿಬೀಳುತ್ತಾರೆ. ರಾಜಕೀಯವಿರಲಿ, ನಿಜವಾದ ಬೆಂಬಲಿಗರು ಇಲ್ಲದ ಬಣ ಗಳೆಲ್ಲವೂ ಸತ್ಯವಾದದ ಎದುರು ಚೂರಾಗಿ ಹೋಗುತ್ತವೆ. ಕೊನೆಗೆ ಸತ್ಯವೇ ಗೆಲ್ಲುತ್ತದೆ. ಸತ್ಯಕ್ಕೆ ಸಾವಿರ ದಾರಿ, ಅಸತ್ಯಕ್ಕೆ ಸಾವಿರ ತೊಂದರೆಗಳು ಇರುತ್ತವೆ.
ಅನಾದಿ ಕಾಲದಿಂದಲೂ ಕೆಲವೇ ಪ್ರಭಾವಿಗಳು ಒಂದಲ್ಲ ಒಂದು ರೀತಿಯಲ್ಲಿ ಶೋಷಣೆ, ಕೊಲೆ, ದಬ್ಬಾಳಿಕೆ ಮಾಡಿ ಅನೇಕ ಜೀವವನ್ನು ಬಲಿ ತೆಗೆದುಕೊಂಡಿರುತ್ತಾರೆ. ಸಮಾಜದಲ್ಲಿ ನಡೆಯುವ ಹೆಚ್ಚಿನ ಅನಾಚಾರಗಳು ಅಹಂಕಾರವುಳ್ಳ ಅಧಿಕಾರಿಗಳು, ಪುಡಾರಿಗಳು, ಮುಖವಾಡ ಹಾಕಿರುವ ಜನರಿಂದಲೇ ಜಾಸ್ತಿಯಾಗಿರುತ್ತದೆ. ಸಮಾಜದಲ್ಲಿ ಆಗುತ್ತಿರುವ ಅನ್ಯಾಯಕ್ಕೆ ಹೋರಾಟ ಮಾಡುವವರು ಕೆಲವೇ ಕೆಲವು ಮಂದಿ ಮಾತ್ರ ಇರುತ್ತಾರೆ. ಕೆಲವರು ನೈಜ ಹೋರಾಟಕ್ಕೆ ಅಣಿಯಾದರೆ ಇನ್ನು ಕೆಲವರು ಹಣಕ್ಕಾಗಿ ಹೋರಾಟದಲ್ಲಿ ಮೂಗು ತೂರಿಸುತ್ತಾರೆ ಅಡ್ಡಿ ಅಡಚನೆಗಳನ್ನು ಮಾಡುತ್ತಾರೆ. ನಾವುಗಳು ನೋಡುವ ಹೋರಾಟಕ್ಕೂ ಅದರಲ್ಲಿ ನಡೆಯುತ್ತಿರುವ ಅನೇಕ ಸಂಗತಿಗಳನ್ನು ವಿವಿಧ ರೀತಿಯಲ್ಲಿ ಅವಲೋಕನ, ವಿಮರ್ಶೆ ಮಾಡಿದಾಗ ಮಾತ್ರ ಸತ್ಯ ವಿಚಾರವು ತಿಳಿಯುತ್ತದೆ.
ಹೆಣ್ಣಾಗಲಿ, ಗಂಡಾಗಲಿ ಅನ್ಯಾಯ ಆದವರಿಗೆ ನ್ಯಾಯ ಸಿಗಲೇಬೇಕು, ಇಂದಲ್ಲ ನಾಳೆಯಾದರೂ ಸತ್ಯ ಗೆಲ್ಲಲೇ ಬೇಕು, ಸಮಾಜದಲ್ಲಿ ನಡೆಯುವ ಅನಾಚಾರಗಳು ಕಡಿಮೆಯಾಗಬೇಕು. ಸುಳ್ಳರು ಹೆದರಬೇಕು, ಕಳ್ಳರು ಶಿಕ್ಷೆಯನ್ನು ಅನುಭವಿಸಲೇ ಬೇಕು ಆಗ ಮಾತ್ರ ಎಲ್ಲಾ ನಂಬಿಕೆಗಳಿಗೆ ಬೆಲೆ ಇರುತ್ತದೆ, ದೈವ ದೇವಸ್ಥಾನ, ಮಂದಿರ, ಮಸೀದಿಗಳ ಪಾವಿತ್ರ್ಯ ತೆ ಉಳಿಯುತ್ತದೆ ಸಮಾಜ ಉತ್ತಮ ಗುಣಮಟ್ಟದ ಹಾದಿ ಹಿಡಿಯುತ್ತದೆ.
✍🏻ಮಾಧವ. ಕೆ. ಅಂಜಾರು
Comments
Post a Comment