(ಲೇಖನ -94 ) ನನ್ನೊಂದಿಗೆ ನನ್ನ ಸಹಪಾಠಿ ಕೂಡ ಕಾರಲ್ಲಿ ಮಾತನಾಡುತ್ತಾ ಹೋಗುತ್ತಿರುವಾಗ ರೋಗಿಯ ಗೆಳೆಯನ ಮಾತುಗಳನ್ನು ಕೇಳಿದಾಗ ಭಯವಾಯಿತು

✍️Madhav. K. Anjar 

 (ಲೇಖನ -94 )  ಸಮಯಕ್ಕೆ ತಕ್ಕಂತೆ ಬದಲಾಗುವ ಜನರು ಈ ಪ್ರಪಂಚದಲ್ಲಿ, ಕಪಟ ಪ್ರೀತಿ ವಾತ್ಸಲ್ಯ ಮೋಹ, ಸಂಬಂಧಗಳನ್ನು  ಮಾಡಿ ನಿಜವಾದ ಸಮಸ್ಯೆಗಳು ಎದುರಾದಾಗ  ನಿನಗಾಗಿ ನಾನಿದ್ದೇನೆ, ನಿನ್ನ ನನ್ನ ಪ್ರೀತಿಯ ಗೆಳೆಯ, ಗೆಳತಿ, ನೀನು ನನ್ನ ಪ್ರೀತಿಯ ಗಂಡ, ಹೆಂಡತಿ, ನನ್ನ ಪ್ರೀತಿಯ ಅಪ್ಪ ಅಮ್ಮ, ಎಂಬೆಲ್ಲ ಮಾತುಗಳನ್ನ ಹೇಳುತ್ತಾ ಕೊನೆಗೆ ಈ ಎಲ್ಲಾ ಮಾತುಗಳನ್ನು ಗಾಳಿಗೆ ತೂರಿ ಬಣ್ಣ ಬದಲಾಯಿಸಿರುವ ಅದೆಷ್ಟೊ ನಿದರ್ಶನಗಳು ನಮ್ಮ  ಕಣ್ಣ ಮುಂದೆ. ಇಲ್ಲಿ ಯಾರು ಯಾರಿಗೋಸ್ಕರ ಯಾವ ರೀತಿಯಲ್ಲಿ  ಬದುಕುತ್ತಿರುತ್ತಾರೆ ಅನ್ನೋದೇ ಸಂಶಯವಾಗಿರುತ್ತದೆ. ಹಣವಿರುವಾಗ, ಸಂಪಾದನೆ ಇರುವಾಗ ಇದ್ದಂತಹ ಪ್ರೀತಿ  ಒಮ್ಮೆಲೆ ಮಾಯವಾಗುವ ಘಟನೆಗಳು  ನಮ್ಮ ಜೀವನದಲ್ಲಿ  ಕಾಣುತ್ತಿರುತ್ತೇವೆ. ಜವಾಬ್ದಾರಿಯುತ  ತಂದೆಯೊಬ್ಬನು  ವಿದೇಶ ಪ್ರಯಾಣ ಮಾಡಿ  ತನ್ನ ಜೀವನವನ್ನೇ  ಹೆಂಡತಿ ಮಕ್ಕಳಿಗಾಗಿ  ಮುಡಿಪಾಗಿಟ್ಟು  ತನ್ನೆರಡು ಮಕ್ಕಳನ್ನು  ಉತ್ತಮ ವಿದ್ಯಾಭ್ಯಾಸಕೊಟ್ಟು, ಸಂಪಾದನೆಗೆ  ತಯಾರಿ ಮಾಡಿದ  ಅಪ್ಪನನ್ನೇ  ನೋಡಲು ಬಯಸದೆ ಇರುವ  ಹೆಂಡತಿ ಮಕ್ಕಳು. ಎಲ್ಲರಂತೆ ನನ್ನ ಮಕ್ಕಳು ಒಳ್ಳೆ ವಿದ್ಯಾಭ್ಯಾಸವನ್ನು ಕಲಿತು ಇಂಜಿನಿಯರ್ ಡಾಕ್ಟರ್ ಆಗಬೇಕೆಂಬ ಬಯಕೆಯಿಂದ  ತನ್ನ ಸಂಪೂರ್ಣ ಸಂಪಾದನೆಯನ್ನು  ಮಕ್ಕಳಿಗಾಗಿ ವ್ಯಯಿಸಿದ ವ್ಯಕ್ತಿ ಒಮ್ಮೆಲೆ  ಪಾರ್ಶುವಾಯುಗೆ ತುತ್ತಾಗಿ ಆಸ್ಪತ್ರೆಗೆ ಸೇರಿದಾಗ  ಅತಿಯಾಗಿ ಪ್ರೀತಿಸುತ್ತಿದ್ದ  ಹೆಂಡತಿ  ಮಕ್ಕಳು ಹೆಚ್ಚೇನು ತಲೆಕೆಡಿಸಿಕೊಳ್ಳದೆ  ಅಪ್ಪ ನೀನು  ಅಲ್ಲಿಯೇ ಹುಷಾರಾಗಿ ಬಾ, ಏನಿದ್ದರೂ  ವಿಷಯವನ್ನು ತಿಳಿಸುತ್ತಿರು  ನಿನಗೆ ಬೇಕಾದ  ವ್ಯವಸ್ಥೆಯನ್ನು ಗೆಳೆಯರ ಮುಖಾಂತರ ಮಾಡಿಸುತ್ತೇನೆ ಎಂದು ಹೇಳಿದ ಪ್ರೀತಿಯ ಹೆಂಡತಿಯ ಮಾತು ಕೇಳಿ  ನನ್ನೆದೆ ನಡುಗಿಹೋಯಿತು.

             ಸದಾ ದೇವನಾಮಸ್ಮರಣೆ ಮಾಡುತ್ತಾ, ಎಲ್ಲರಿಗೂ ಒಳಿತನ್ನು ಬಯಸುತ್ತಿದ್ದ ವ್ಯಕ್ತಿ ನೋಡ ನೋಡುತ್ತಲೇ  ಪಾರ್ಶ್ವಾಯು ತುತ್ತಾಗಿ ಆಸ್ಪತ್ರೆಗೆ  ಸೇರಿ ಹಲವು ದಿನಗಳೆ ಕಳೆದೋಯ್ತು. ಈ ನಡುವಿನಲ್ಲಿ  ಪ್ರೀತಿಯಿಂದ  ಮಾತನಾಡುತ್ತಿದ್ದ , ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಹೇಳುತ್ತಿದ್ದ ಅವರ ಹೆಂಡತಿ  ನಿಜವಾದ ಸಮಸ್ಯೆ ಬಂದಾಗ  ದೂರ ಸರಿದು ನಿಲ್ಲಲು ಪ್ರಯತ್ನ ಪಡುತ್ತಿದ್ದ  ಸಂದರ್ಭವನ್ನು ಬಾಯಲ್ಲಿ ಕೇಳಿದಾಗ ,  ಈ ಪ್ರೀತಿ ವಾತ್ಸಲ್ಯ, ಪ್ರೇಮ, ಸಂಬಂಧ ನಂಬಿಕೆ ಎಲ್ಲವೂ  ಹಣಕ್ಕಾಗಿ ಮಾತ್ರವೇ ನಡೆಯುತ್ತಿತ್ತೆ? ಎಂಬ ಸಂಶಯ ನನ್ನಲ್ಲಿ ಮೂಡಿ ಬಿಟ್ಟಿತು. ಸಂಬಂಧವನ್ನು  ಬರೆ ಹಣ ಸಂಪಾದನೆಯ  ಮತ್ತು ಆ ವ್ಯಕ್ತಿಯ  ಒಳ್ಳೆತನವನ್ನು ದುರುಪಯೋಗ ಮಾಡಿ ಬದುಕುವ  ಜನರು ಕೂಡ  ಪ್ರಪಂಚದಲ್ಲಿ ಇದ್ದಾರೆ ಅನ್ನೋದು ಸಾಬೀತಾಯಿತು. ಕಾರಣಗಳು ಹಲವು ಇರಬಹುದು  ಆದರೆ ಒಂದು ವ್ಯಕ್ತಿಯ  ಬೆಲೆ ಸಂಬಂಧ ಇದೆಲ್ಲವೂ  ಸುಳ್ಳೆಂದು ಹೇಳುವ  ತುಂಬಾ ನಿದರ್ಶನಗಳು  ಅಲ್ಲಲ್ಲಿ ಕೇಳುತ್ತಿರುತ್ತೇವೆ. ಆದರೆ ಬಹಳ ಹತ್ತಿರದಿಂದ ನೋಡಿದಾಗ ದುಃಖವೆನಿಸುತ್ತದೆ.

            ನನ್ನೊಂದಿಗೆ ನನ್ನ ಸಹಪಾಠಿ ಕೂಡ  ಕಾರಲ್ಲಿ  ಮಾತನಾಡುತ್ತಾ ಹೋಗುತ್ತಿರುವಾಗ  ರೋಗಿಯ ಗೆಳೆಯನ  ಮಾತುಗಳನ್ನು ಕೇಳಿದಾಗ  ಭಯವಾಯಿತು. ರೋಗಿಯ ಗೆಳೆಯನು ರೋಗಿಯ ಹೆಂಡತಿಗೆ ಕರೆ ಮಾಡಿ  ವಿಷಯವನ್ನು ತಿಳಿಸಿದಾಗ  ಆ ವ್ಯಕ್ತಿಯ ಬಗ್ಗೆ ಅಷ್ಟೇನು ಅನುಕಂಪ ತೋರದೆ ನೀವು ಅಲ್ಲಿಯೇ ಅವರಿಗೆ  ಚಿಕಿತ್ಸೆಯನ್ನು ನೀಡಿ  ಎಂದು ಹೇಳಿದಾಗ, ಬಾಂಧವ್ಯವೊಂದು ಎಷ್ಟು ಗಟ್ಟಿಯಾಗಿದೆ, ಯಾರು ಯಾರನ್ನು ಎಷ್ಟು  ಅತಿಯಾಗಿ ಪ್ರೀತಿಸುತ್ತಾರೆ? ಅತಿಯಾಗಿ ಪ್ರೀತಿಸಿದವರ  ನಿಜ ಬಣ್ಣಗಳು  ನಿಜವಾದ ಸಮಸ್ಯೆಗಳು ಎದುರಾದಾಗ  ಮಾತ್ರ ಗೊತ್ತಾಗುತ್ತದೆ ಎನ್ನುವುದಕ್ಕೆ ಇದೊಂದು ನಿದರ್ಶನವಾಯಿತು. ನನ್ನ ಗೆಳೆಯನ  ಮತ್ತು ನನ್ನ ಕಣ್ಣಂಚಲಿ  ನೀರು ತುಂಬಿತು ಹೊರತು  ಏನನ್ನು ಹೇಳದ ಪರಿಸ್ಥಿತಿ. ಈ ಹಣವೆಂಬುದು  ಮನುಷ್ಯನನ್ನು  ಯಾವ ಹಂತಕ್ಕೂ ತಲುಪಿಸಬಹುದು ಅಲ್ಲವೇ? ಅವಶ್ಯಕತೆಗೆ ತಕ್ಕಂತೆ  ಬಳಸಿಕೊಳ್ಳುವ  ಸಂಬಂಧಗಳು, ಗೆಳೆತನ  ಇವೆಲ್ಲವೂ  ನಡೆಯುತ್ತಲೇ ಇದೆ. ನಾಳಿನ  ಬಾಳಿಗಾಗಿ  ನಮ್ಮ ಸಂಪಾದನೆ ಕೂಡಿಟ್ಟು  ಹೆಂಡತಿ ಮಕ್ಕಳಿಗೆ  ಉಪಯೋಗಿಸಿ ಅದೇ ಹೆಂಡತಿ ಮಕ್ಕಳು ಸಂಪಾದಿಸುತ್ತಿದ್ದ ವ್ಯಕ್ತಿ  ಶಕ್ತಿಯನ್ನು ಕಳೆದುಕೊಂಡಾಗ  ನಡೆಯುವ ರೀತಿಯಲ್ಲಿ  ಜೀವನವನ್ನೇ ಮುಡಿಪಾಗಿಟ್ಟ ವ್ಯಕ್ತಿಯ ಬದುಕು  ಶೂನ್ಯವಾಗಿರುತ್ತದೆ. ತನ್ನೆಲ್ಲ  ಸಂತೋಷವನ್ನು ಬದಿಗಿಟ್ಟು ಸಂಸಾರಕ್ಕಾಗಿ  ಬದುಕಿ  ಕೊನೆ ಗಳಿಗೆಯಲ್ಲಿ   ಕಿಮ್ಮತ್ತಿಲ್ಲದೆ   ಮಣ್ಣಾಗಿ ಹೋಗಿರುವ  ಸಾವಿರಾರು ಜೀವಗಳು ಇರಬಹುದು.

         ಬದುಕೆಂದರೆ  ಕೇವಲ ಇನ್ನೊಬ್ಬರ ಸಂತೋಷಕ್ಕಾಗಿ ಮಾತ್ರವಲ್ಲ, ತನಗಾಗಿ  ಅಲ್ಪವಾದರೂ  ಸಮಯವನ್ನು ಮೀಸಲಿಟ್ಟು  ಹಣದ ಹೊರತಾಗಿ  ಜೀವನದಲ್ಲಿ ವಿವಿಧ ರೂಪದಲ್ಲಿ  ಸಂತೋಷವನ್ನು ಹುಡುಕಿಕೊಂಡು  ಬದುಕನ್ನು ಸಾಗಿಸಿದಾಗ  ಕೊನೆಯ ಪಕ್ಷ ಇಂಥ ಸ್ಥಿತಿಗಳು ಬಂದರೂ ಕೂಡ  ಹೆಚ್ಚೇನು ಪಶ್ಚತಾಪ ಪಡದೆ  ಕೊನೆಯುಸಿರು ಎಳೆಯಬಹುದು. ಜೀವನದಲ್ಲಿ ಇತಿಮಿತಿಗಿಂತ ಜಾಸ್ತಿ  ಸಾಲ, ಆಕಾಂಕ್ಷೆಗಳನ್ನು  ಇಟ್ಟುಕೊಳ್ಳದೆ  ತನ್ನ ಸಂಪಾದನೆಯಲ್ಲಿ  ಒಂದಿಷ್ಟು ತನ್ನ ಸ್ವಂತ ಸಂತೋಷಕ್ಕಾಗಿ  ಸಮಯವನ್ನು ವಿನಿಯೋಗಿಸಿಕೊಂಡಾಗ  ಆತ್ಮ ತೃಪ್ತಿಯಾದಾಗ  ಬದುಕಿನಲ್ಲಿ ಅಲ್ಪವಾದರೂ  ತೃಪ್ತಿ ಪಡೆದುಕೊಳ್ಳಲು ಸಾಧ್ಯವಿದೆ. ಆಟವಾಡಲು, ಊಟ ಮಾಡಲು, ವಿಶ್ರಾಂತಿ ಪಡೆಯಲು, ನಕ್ಕುನಗಲು, ಊರು ದೇಶವನ್ನು ಸುತ್ತಬೇಕೆಂಬ ಆಸೆಗಳನ್ನು ಹೊಂದಿದ್ದಲ್ಲಿ ಈಡೇರಿಸುವಲ್ಲಿ  ತಡ ಮಾಡಿಕೊಳ್ಳಬಾರದು. ದೇಹವೆಂಬುದು  ಇಂದಲ್ಲ ನಾಳೆ  ಮಣ್ಣು ಪಾಲಾಗುವುದು  ಖಂಡಿತ. ಸಂತೋಷಮಯ ಜೀವನ  ನನಗೂ  ನಿಮಗೂ ಸಿಗಲೆಂಬ ಹಾರೈಕೆ.

            ✍️ಮಾಧವ. ಕೆ. ಅಂಜಾರು.












Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

( ಲೇಖನ -122) ಭೂ - ಕೈಲಾಸ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.