(ಲೇಖನ -96)ನನ್ನ ಪ್ರೀತಿಯ ಅಣ್ಣನಿಗೆ ಪ್ರೀತಿಯ ನಮಸ್ಕಾರಗಳು, ನೀನು ಕ್ಷೇಮವಾಗಿದ್ದೀ ಎಂದು ಭಾವಿಸುತ್ತೇನೆ. ಮನೆಯಲ್ಲಿ ನಾವೆಲ್ಲರೂ ಸೌಖ್ಯವಾಗಿದ್ದೇವೆ,

✍️Madhav. K. Anjaru 

(ಲೇಖನ -96)ನನ್ನ ಪ್ರೀತಿಯ ಅಣ್ಣನಿಗೆ ಪ್ರೀತಿಯ ನಮಸ್ಕಾರಗಳು, ನೀನು ಕ್ಷೇಮವಾಗಿದ್ದೀ ಎಂದು ಭಾವಿಸುತ್ತೇನೆ. ಮನೆಯಲ್ಲಿ ನಾವೆಲ್ಲರೂ ಸೌಖ್ಯವಾಗಿದ್ದೇವೆ, ನಿನಗೆ ಒಂದು ಸಂತೋಷದ ಸುದ್ದಿ ತಿಳಿಸಲು ಈ ಪತ್ರವನ್ನು ಬರೆಯುತ್ತಿದ್ದೇನೆ, ನಿನ್ನ ನೆನಪು ಸದಾ ಕಾಡುತ್ತಿರುತ್ತದೆ. ನೀನಿಲ್ಲದೆ ಇಲ್ಲಿ ನಮಗೆ  ಬಹಳ ಬೇಸರವಾಗುತ್ತದೆ. ಹಬ್ಬ ಜಾತ್ರೆ ಮತ್ತು ಯಕ್ಷಗಾನ ದೇವರ ಕೆಲಸಗಳು ಆಗುತ್ತಿರುವಾಗ ನಿನ್ನ ನೆನಪಾಗುತ್ತದೆ. ನೀನು ನಮ್ಮೊಂದಿಗೆ ಇರುವಾಗ ಅದೇನು ಧೈರ್ಯ ನಮಗೇನು ಚಿಂತೆ ಇರಲಿಲ್ಲ. ಇವಾಗ ನಮಗೆ ಸ್ವಲ್ಪ ಕಷ್ಟವಾಗುತ್ತದೆ ಆದರೂ ಪರವಾಗಿಲ್ಲ ನೀನು ನಮಗಾಗಿ ದೂರವಿದ್ದೀಯ ತುಂಬಾ ಜಾಗ್ರತೆ ಮಾಡಿಕೊಳ್ಳು ಊರಿನ ಬಗ್ಗೆ ಜಾಸ್ತಿ ಚಿಂತಿಸಬೇಡ ನಾವೆಲ್ಲರೂ ಒಟ್ಟಿಗೆ ಇದ್ದೇವೆ ನೀನು ತುಂಬಾ ಜಾಗ್ರತೆ ಮಾಡುತ್ತಿರು. ನಿನ್ನ ಹುಟ್ಟುಹಬ್ಬದಂದು ನಾವು ಮನೆಯಲ್ಲಿ ಪಾಯಸ ತಿಂಡಿ ಗಳನ್ನು ಮಾಡುತ್ತೇವೆ. ನಮ್ಮ ಪರವಾಗಿ ನೀನು ಕೂಡ ಚೆನ್ನಾಗಿ ಆಹಾರವನ್ನು ತೆಗೆದುಕೊಳ್ಳುತ್ತಿರು. ಹಾಗೆಯೇ ಪತ್ರ ಬರೆಯುತ್ತ ವಿಷಯವನ್ನು ಹೇಳಲು ಮರೆತುಬಿಟ್ಟೆ ಅದೇನೆಂದರೆ ನಾನು ನನ್ನ ತರಗತಿಯಲ್ಲಿ ಫಸ್ಟ್ ಕ್ಲಾಸ್ ಪಾಸಾಗಿದ್ದೇನೆ ಇನ್ನು ಮುಂದೆ ಚೆನ್ನಾಗಿ ಓದಬೇಕೆಂಬ ಆಸೆ........

        ಹೌದು ಇಂತಹ ಅನೇಕ ಪತ್ರಗಳನ್ನು ನಮ್ಮ ಬದುಕಿನಲ್ಲಿ ನೋಡಿ ಓದಿ ಸಂತೋಷ ಪಟ್ಟ ದಿನಗಳು ಇಂದು ಬರಲು ಸಾಧ್ಯವೇ ಇಲ್ಲ ಯಾಕೆಂದರೆ ಇಂದು ನಾವುಗಳು ಬಹಳಷ್ಟು ಮುಂದುವರಿದಿದ್ದೇವೆ ಮತ್ತು ಪತ್ರಗಳು ಮಾಯವಾಗಿದೆ.  ಊರಿಂದ ಊರಿಗೆ, ಕಾಗದ ಪತ್ರಗಳನ್ನು ಹಂಚುತ್ತಿದ್ದ ಪೋಸ್ಟ್ ಮ್ಯಾನ್  ತನ್ನ ಚೀಲದಲ್ಲಿ ಒಂದಿಷ್ಟು ಪ್ರೇಮ ಪತ್ರ, ಕ್ಷೇಮ ಪತ್ರ  , ತಂದೆ ತಾಯಿ, ಅಕ್ಕ ತಂಗಿ, ಚಿಕ್ಕಮ್ಮ ದೊಡ್ಡಮ್ಮ, ಅಣ್ಣ ತಮ್ಮ  ಎಲ್ಲ ಬಾಂಧವ್ಯಗಳ ನಡುವೆ  ಸೇತುವೆಯಾಗಿ  ಸೇವೆಯನ್ನು ಮಾಡುತ್ತಿದ್ದ. ಒಂದೊಂದು ಪತ್ರಗಳನ್ನು  ಓದುವಾಗಲೇ ನಾವು ಪ್ರತಿಯೊಂದು ಶಬ್ದಕ್ಕೆ ಸೇರಿಕೊಂಡು ಪ್ರತಿ ಶಬ್ದದ ಅರ್ಥಗಳನ್ನು  ಮನದಟ್ಟು ಮಾಡಿಕೊಂಡು  ಕಣ್ಣ ಮುಂದೆ   ಪತ್ರ ಬರೆದ ವ್ಯಕ್ತಿಯನ್ನೇ  ನೋಡುತ್ತಿದ್ದೆವು. ಅದೆಷ್ಟು ಬಾರಿ  ಪತ್ರಗಳನ್ನು ಓದಿ  ಬಿಗಿದಪ್ಪಿಕೊಂಡು  ಕಣ್ಣೀರನ್ನು ಹಾಕಿದ ಸಂದರ್ಭ ಈಗಲೂ ಮನಸಿನಲ್ಲಿದೆ. ಪ್ರತಿಯೊಂದು  ವಾಕ್ಯದಲ್ಲೂ  ಪ್ರೀತಿ  ವಾತ್ಸಲ್ಯ  ಎಲ್ಲವನ್ನು  ಕಾಣುತ್ತಿದ್ದೆವು ಅನುಭವಿಸುತ್ತಿದ್ದೆವು. ಈಗಲೂ  ಕವಿ ನೆನಪಿಗಾಗಿ ಬರೆದ ಪತ್ರಗಳು ನನ್ನ ಕೈಯಲ್ಲಿದೆ. ಇಂದಿನ ದಿನಗಳಲ್ಲಿ  ಭಾವನೆಗಳಲ್ಲಿ ಕೂಡಿದ  ಪತ್ರಗಳು  ಸಿಗಲಿಕ್ಕಿಲ್ಲ. ಎಲ್ಲವೂ ಮೊಬೈಲ್ ಎಂಬ  ಸಾಧನದೊಳಗೆ ಹೋಗಿ ಬಿಟ್ಟಿದೆ. ವಾಟ್ಸಾಪ್, ಫೇಸ್ಬುಕ್, ಮೆಸೆಂಜರ್ ಗಳು  ನಮ್ಮ ಕೈಯೊಳಗಿದ್ದರೂ  ಅಂದಿನ ಅನುಭವಗಳು ಇಂದು ಬರಲು ಸಾಧ್ಯವಿಲ್ಲ. ಒಂದು ಪತ್ರಕ್ಕಾಗಿ  ಅಂಚೆ ಕಚೇರಿಯಲ್ಲಿ  ಕಾದು ನಿಂತು  ಪತ್ರ ಕೈಗೆ ಸಿಕ್ಕಿದ ಕೂಡಲೇ ಬಹಳ ಅವಸರ ಅವಸರವಾಗಿ  ಓದಿದ ಅನೇಕ ಜನಗಳು ಇದ್ದಾರೆ.  ಒಂದು ಪತ್ರದಲ್ಲಿ  ಅದೆಷ್ಟೋ  ಪ್ರೀತಿ ಪ್ರೇಮಗಳು  ಸಂಬಂಧಗಳು ದೂರವಾಗಿರುವ  ಸಂದರ್ಭಗಳು ಇದೆ. ಆದರೆ ಆ ಪತ್ರಗಳಿದ್ದ ಬೆಲೆ  ಇಂದಿನ  ಮೊಬೈಲ್ ಮೆಸೇಜ್ ಗಳಿಗೆ ಇರಲು ಸಾಧ್ಯವೇ ಇಲ್ಲ. ಯಾಕೆಂದರೆ  ಬಹಳ ಸುಲಭವಾಗಿ ನಮ್ಮ ಕೈಗೆ ಸಿಕ್ಕಿರುವ ಮೊಬೈಲ್  ಎಲ್ಲಾ ಸಂಬಂಧಗಳನ್ನು  ಎಷ್ಟು ವೇಗವಾಗಿ ಹತ್ತಿರ ಮಾಡುತ್ತದೊ ಅಷ್ಟೇ ವೇಗವಾಗಿ ದೂರ ಮಾಡುತ್ತಿದೆ. ಒಂದು ಮೊಬೈಲ್ ಕರೆಯಿಂದ  ಅಥವಾ ಒಂದು ಮೆಸೇಜ್ ಇಂದ  ಅದೆಷ್ಟೋ  ಸಂಬಂಧಗಳು  ಜೀವಗಳು ಕಳೆದು ಹೋಗಿದ್ದೀರಬಹುದು.? ನಮ್ಮ ಒಂದು ಕ್ಷಣದ  ಮಾತಿನಿಂದ ಎದುರಿನ ವ್ಯಕ್ತಿಯು  ಏನೇನೋ ಚಿಂತನೆಗಳನ್ನು ಮಾಡಿ , ಚಿಕ್ಕ ವಿಷಯಗಳನ್ನು  ಅತಿ ದೊಡ್ಡದಾಗಿ ಮಾಡುತ್ತಾ  ಇರುವ ನೆಮ್ಮದಿಯನ್ನು ಕೂಡ  ಕಳೆದುಕೊಂಡಿರಬಹುದು.

         ಮೆಸೇಜ್ಗಳು,  ಮಾತುಗಳು ಕೆಲವರು ಸಮಾಧಾನದಿಂದ ವಿವೇಕದಿಂದ  ಓದಿ ಅರ್ಥೈಸಲು  ಪ್ರಯತ್ನಪಟ್ಟರೆ  ಇನ್ನು ಕೆಲವರು  ಅಪಾರ್ಥಗಳನ್ನು ಸೃಷ್ಟಿಸಿಕೊಂಡು  ರಾದ್ದಂತ ಮಾಡಿಕೊಳ್ಳುತ್ತಾರೆ. ಇಂದಿನ ದಿನಗಳಲ್ಲಿ  ಮೊಬೈಲ್ ಮುಖಾಂತರ  ನಡೆದ ಸಂಭಾಷಣೆಗಳು  ಮೆಸೇಜ್ ಗಳನ್ನು  ಪುನಹ  ನೋಡುತ್ತಲೇ  ಮೇಲಿಂದ ಮೇಲೆ ಸಮಸ್ಯೆಗಳನ್ನು  ಸೃಷ್ಟಿಸಿಕೊಂಡು  ಗಂಡ ಹೆಂಡತಿ  ಬೇರೆ ಬೇರೆಯಾದ ಉದಾಹರಣೆಗಳು  ತುಂಬಾನೇ ಇದೆ. ಒಂದೇ ಮನೆಯಲ್ಲಿ  ವಾಸ ಮಾಡುತ್ತಿದ್ದರೂ  ಬಾಯಿ ಬಿಚ್ಚಿ ಮಾತನಾಡಲು  ಒಪ್ಪದಿರುವ  ಅನೇಕ ಜನರು  ತನ್ನ  ಅಹಂ ಗೆ ಒಳಗಾಗಿ ಸಮಸ್ಯೆಗಳನ್ನು  ಸರಿಪಡಿಸಿಕೊಳ್ಳುವ ಬದಲು  ಇನ್ನಷ್ಟು ಹೆಚ್ಚಿಸಿಕೊಂಡು ಜೀವನಕ್ಕೆ ಪೂರ್ಣವಿರಾಮ  ಹಾಕಿಕೊಂಡುವರು ಇದ್ದಾರೆ. ಈ ಸಂದರ್ಭಗಳಿಗೆ ನಾನು ಕೂಡ  ಸಿಕ್ಕಿಬಿದ್ದಾನುಭವಗಳು ನೆನಪಿನಲ್ಲಿದೆ. ಇಂದಿನ ಕಾಲದಲ್ಲಿ  ಎಲ್ಲರೂ ಬಹಳಷ್ಟು ಬ್ಯುಸಿ, ಸಮಯ  ಯಾರ ಹತ್ತಿರವೂ ಇಲ್ಲ. ದಿನಕ್ಕೆ  ಒಂದು ಬಾರಿ ಅಡುಗೆ ಮಾಡಲು  ಸಮಯವಿಲ್ಲ, ದಿನಕ್ಕೆ  ಒಂದು ಬಾರಿ  ದೇವರಿಗೂ ಕೈಮುಗಿಯಲು ಸಮಯವಿಲ್ಲ, ದಿನದ ಯಾವ ಕೆಲಸಗಳನ್ನು ವ್ಯವಸ್ಥಿತವಾಗಿ ಮಾಡುವಷ್ಟು  ಸಮಯವೇ ಇಲ್ಲ, ಆದರೆ ಸರಿಸುಮಾರು  ದಿನಕ್ಕೆ  16 ಗಂಟೆಗಳ ಕಾಲ  ಮೊಬೈಲ್ ಎಂಬ  ಸಾಧನದೊಳಗೆ  ಸಮಯವನ್ನು  ಕಳೆಯುವಷ್ಟು  ಸಮಯವಿರುವ  ಕೆಲವು ಜನಗಳು. ಇಲ್ಲಿ  ಪ್ರಾಮುಖ್ಯತೆ  ಬರೆ  ಮೊಬೈಲ್ ಗೆ ಹೊರತು ಒಂದೆರಡು ನಿಮಿಷ  ಕುಳಿತುಕೊಂಡು ಮಾತನಾಡಲು  ಕೂಡ  ವ್ಯವಧಾನ ಇಲ್ಲದೆ ಇರುವ  ಅದೆಷ್ಟು ಕುಟುಂಬಗಳು  ಜೀವಂತವಾಗಿದ್ದಾರೆ.  ಎಲ್ಲಾ ಸಂಬಂಧಗಳು  ಕೇವಲ  ಹೆಸರಿಗಷ್ಟೇ ಹೊರತು  ನಿಜವಾದ ಸಂಬಂಧಗಳನ್ನು  ಹೆಣೆದುಕೊಳ್ಳುವುದರಲ್ಲಿ ನಾವೆಲ್ಲರೂ  ಸೋತಿದ್ದೇವೆ. ಸಮಯವಿಲ್ಲ ಸಮಯವಿಲ್ಲ  ಎಂದು ಹೇಳುತ್ತಿರುವವರು  ತುಂಬಾ ಸಮಯವನ್ನು ಮೊಬೈಲ್ ಉಪಕರಣದಲ್ಲಿ  ಕಳೆಯುತ್ತಿದ್ದಾರೆ, ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುವುದನ್ನೇ  ಮರೆತುಬಿಟ್ಟಿದ್ದಾರೆ, ಮುಖದಲ್ಲಿರುವ ನಗುವನ್ನೇ  ಕಳೆದುಕೊಂಡು ಬಿಟ್ಟಿದ್ದಾರೆ  ಕಣ್ಣಿನಲ್ಲಿರುವ ದೃಷ್ಟಿಯನ್ನು ಕಳೆದುಕೊಳ್ಳುತ್ತಿದ್ದಾರೆ, ತಂದೆ ತಾಯಿ  ತಮ್ಮ ತಂಗಿ, ಅಕ್ಕ ಅಣ್ಣ  ಇದೆಲ್ಲವೂ ಕೇವಲ ನಾಮಾವಸ್ಥೆಗೆ  ತಲುಪಿಸುತ್ತೇವೆ. ಅಕ್ಕ ಪಕ್ಕದ ಮನೆಯವರು  ಬೇಡವಾಗಿದ್ದಾರೆ, ಮನೆಯೊಳಗಿನ ಅಜ್ಜ ಅಜ್ಜಿಯಂದಿರು ಬೇಡವಾಗಿದ್ದಾರೆ, ಗಂಡ ಮಕ್ಕಳು,  ಹೆಂಡತಿ ಬೇಡವಾಗಿದ್ದಾರೆ. ಮೊಬೈಲ್ ನ  ಪ್ರಾಬಲ್ಯತೆಗೆ ಇಂದಿನ ಜನಾಂಗ  ಬಿದ್ದು  ಒದ್ದಾಡುತ್ತಿವೆ. ಆಟ ಓಟ, ವ್ಯಾಯಾಮ, ಸಾಧನೆಗಳೆಲ್ಲವೂ  ಕಡಿಮೆಯಾಗುತ್ತಿದೆ, ಯುವಕ ಯುವತಿಯರ  ಜೀವನಶೈಲಿಯನ್ನು  ಅತಿ ವೇಗದಲ್ಲಿ  ನಾಶಪಡಿಸುತ್ತಿದೆ.

           ಅತಿಯಾದ ಸೌಕರ್ಯಗಳಿಂದ ಮನುಜನಿಗೆ  ಎಷ್ಟು ಒಳಿತು ಇದೆಯೋ  ಅದಕ್ಕಿಂತ  ನಾಲ್ಕು ಪಟ್ಟು  ಕೆಡುಕು ಕೂಡ ಇದೆ  ಇತಿಮಿತಿಯಾದ ಬಳಕೆ  ನಮ್ಮ ಜೀವನ ಶೈಲಿಯನ್ನು  ಉತ್ತಮ ಮಾರ್ಗದಲ್ಲಿ ಕೊಂಡು ಹೋಗಬಹುದು ಇಲ್ಲವಾದಲ್ಲಿ  ಇದರಲ್ಲಿ ಆಗುತ್ತಿರುವ ಅವಾಂತರಗಳಿಗೆ  ನಾವುಗಳೇ  ಕಟ್ಟಿಕೊಳ್ಳುವ ಗೋರಿ ಕೂಡ ಆಗಬಹುದು. ಮಕ್ಕಳಿಗೆ ಯುವಕ ಯುವತಿಯರಿಗೆ ಹೆಚ್ಚಾಗಿ  ಮೊಬೈಲ್ ಉಪಕರಣಗಳನ್ನು ಉಪಯೋಗಿಸಲು  ಆಸ್ಪದ ಮಾಡದೆ  ದೈಹಿಕ ಮತ್ತು ಮಾನಸಿಕ ಸ್ಟಿಮಿತತೆ ಕಾಪಾಡಿಕೊಳ್ಳಲು ಪೋಷಕರು ಅತಿಯಾಗಿ ಗಮನ ಕೊಡಲೇಬೇಕು. ಮಕ್ಕಳಲ್ಲಿ ಮೊಬೈಲ್ ಟಿವಿಗಳನ್ನು  ಮಿತವಾಗಿ ಬಳಸಿಕೊಳ್ಳಲು ಹೇಳಿದರೆ ಅಲ್ಪವಾದರೂ  ಬದಲಾವಣೆಗಳಾಗಬಹುದು.

        ✍️ಮಾಧವ. ಕೆ ಅಂಜಾರು 

             

   



        









Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.

(ಲೇಖನ -100), "ಕುವೈಟ್ ಕಲಾ ಮಾಣಿಕ್ಯ" ಒಬ್ಬ ಕಲಾಗಾರನ ನಿಜವಾದ ಜೀವನ ಕ್ರಮ, ಶ್ರಮ ಮತ್ತು ಸಾಧನೆಯ ಹಾದಿ, ಕಲೆ ಎಂಬುವುದು ಎಲ್ಲರಿಗೂ ಒಲಿಯುವುದಿಲ್ಲ ಆದರೆ ಒಂದಲ್ಲ ಒಂದು ರೀತಿಯ ಕಲೆಯ ಶಕ್ತಿ ಪ್ರತಿಯೊಬ್ಬರಲ್ಲೂ ಇರುತ್ತದೆ