(ಲೇಖನ -93) ನಗಬೇಕಿದ್ದರೆ ಇವತ್ತು ನಕ್ಕು ಬಿಡು, ಒಳ್ಳೆಯ ತಿನಸು ತಿನ್ನಬೇಕಿದ್ದರೆ ಇಂದೇ ತಿಂದು ಬಿಡು, ಹಾಡಿ ಕುಣಿಯುತ ಬಾಳಬೇಕಿದ್ದರೆ ಇಂದು ಮಾಡಿ ಬಿಡು, ನಾಳೆ ಎಂಬುವುದ ಅರಿತವರಿಲ್ಲ,
(ಲೇಖನ -93) ಬೆಂಕಿ, ನೀರು, ಗಾಳಿ ಇದರಲ್ಲಿ ಪೌರುಷವನ್ನು ತೋರಿಸಬೇಡ, ಪ್ರಕೃತಿಯ ಶಕ್ತಿಗೆ ಸೆಡ್ಡು ಹೊಡೆಯಬೇಡ, ಸಮಾಜದಲ್ಲಿ ಮಾನವ ಹುಳು ಜೀವಿ ಒಮ್ಮೊಮ್ಮೆ ತನ್ನ ಸ್ತಿಮಿತವನ್ನು ಕಳೆದುಕೊಂಡು ತನ್ನದೇ ಜೀವವನ್ನು ಪ್ರಕೃತಿಯ ತೆಕ್ಕೆಗೆ ಹಾಕಿಕೊಳ್ಳುತ್ತಾನೆ. ಸಾವನ್ನು ಆಹ್ವಾನ ಮಾಡಿ ಜೀವ ಕಳೆದುಕೊಳ್ಳುವವರು ಸಾಕಷ್ಟು ಇದ್ದಾರೆ, ಕೆಲವರು ಆಕಸ್ಮಿಕವಾಗಿ ಪ್ರಕೃತಿಯ ಕೋಪಕ್ಕೆ ಬಲಿಯಾಗುತ್ತಾರೆ, ಇನ್ನು ಕೆಲವರು ತಿಳಿದು ತಿಳಿಯದೆ ನಾನಾಥರಗಳಲ್ಲಿ ಜೀವವನ್ನು ಕಳೆದುಕೊಳ್ಳುತ್ತಾರೆ. ಸಾವು ಯಾರಿಗೂ ಯಾವತ್ತು ಕೂಡ ಬರಬಹುದು ಅದು ಸಹಜ, ಆದರೆ ನಿರ್ಲಕ್ಷದಿಂದ ಸಾಯುವ ಜೀವಗಳು ತುಂಬಾನೇ ಇದೆ. ವಿಧಿಯ ಬರಹ ದೇವರು ಎಲ್ಲಿ ಬರೆದಿದ್ದಾನೋ ಅಲ್ಲಿ ಸಾಯುತ್ತಾನೆ ಎಂಬುವುದು ಮಾತಾದರೆ, ದೇವರು ಕೊಟ್ಟ ಬುದ್ದಿಯನ್ನು ಉಪಯೋಗಿಸದೆ ಅಹಂಕಾರಕ್ಕೆ ಒಳಗಾಗಿ ಸಾಯುವವರು ಕೂಡ ಒಂದೆಡೆ ಇರುತ್ತಾರೆ. ಯಾರದೋ ತಪ್ಪಿನಿಂದ ಸಾವನ್ನಪ್ಪುವ ಜನ, ಉದ್ದೇಶದಿಂದ ಮಾಡುವ ಕೊಲೆ, ತನ್ನ ನಿರ್ಲಕ್ಷದಿಂದ ಅಪಘಾತ ನಡೆಸಿ ಇನ್ನೊಬ್ಬರ ಜೀವ ಬಲಿ ತೆಗೆದುಕೊಳ್ಳುವ ಸಂಧರ್ಭಗಳು ಕೂಡ ನೀವುಗಳು ಅಲ್ಲಲ್ಲಿ ನೋಡುತ್ತಾ ಇರುತ್ತಿರಿ. ಇಲ್ಲಿ ತಪ್ಪುಗಳು ಗೊತ್ತಿದ್ದೂ ಮತ್ತು ಗೊತ್ತಿಲ್ಲದೇ ಕೂಡ ನಡೆಯುತ್ತಾ ಇರುತ್ತದೆ. ಆದರೆ ಹೆಚ್ಚಿನವು ಅಜಾಗರೂಕತೆಯಿಂದ ನಡೆಯುವಂತದ್ದು.
ಉದಾಹರಣೆಗೆ, ನದಿ ತೀರ, ಸಮುದ್ರ ತೀರ, ಜಲಪಾತಗಳ ಅತೀ ತೀರಕ್ಕೆ ಹೋಗಿ ಫೋಟೋ, ವಿಡಿಯೋ ಅಥವಾ ಇನ್ನಿತರ ಕಾರಣಗಳಿಂದ ಸಾಹಸಕ್ಕೆ ಇಳಿಯುವುದು, ಬೆಂಕಿ, ವಿದ್ಯುತ್ ಉಪಕರಣ, ಸಿಗರೇಟು ಸೇದಿ ಆರಿಸದೆ ಬಿಸಾಕಿ ಸಂಭವಿಸಿರುವ ಘಟನೆಗಳು, ಬೆಂಕಿಯೊಂದಿಗೆ ಆಟವಾಡಿ ನಡೆದ ದುರ್ಗಟನೆ, ಎರಡು, ನಾಲ್ಕು ಚಕ್ರದ ವಾಹನ ಓಡಿಸುವಾಗ ನಿರ್ಲಕ್ಷದಲ್ಲಿ ನಡೆಯುವ ಘಟನೆ ಇಂತಹ ಅನೇಕ ಉದಾಹರಣೆಗಳು. ಜೀವನದ ಪ್ರತಿಯೊಂದು ನಿಮಿಷಕ್ಕೂ ಎಚ್ಚರಿಕೆಯಿಂದ ಬದುಕುವ ಬಗ್ಗೆ ಕಾಳಜಿ ವಹಿಸಲೇಬೇಕು ಇಲ್ಲವಾದಲ್ಲಿ ನಮ್ಮ ತಪ್ಪಿನಿಂದ ನಡೆಯುವ ಘಟನೆಗೆ ನಾವೇ ಹೊಣೆಗಾರಾಗುತ್ತೇವೆ. ನಮ್ಮಿಂದ ಇನ್ನೊಬ್ಬರಿಗೆ ತೊಂದರೆಯಾಗಬಾರದು ಅನ್ನುವ ಮನಸ್ಥಿತಿಯನ್ನು ಬೆಳೆಸಿಕೊಂಡು ಮತ್ತವರಿಗೂ ಒಳ್ಳೆಯ ನಡವಳಿಕೆಯ ಬಗ್ಗೆ ತಿಳಿಸಿ ಚಿಕ್ಕ ಸೇವೆಯನ್ನು ಸಮಾಜಕ್ಕೆ ಕೊಡಬಹುದು.
ಸಮಾಜವನ್ನು ಸುಧಾರಿಸಲು, ಅಥವಾ ನಮ್ಮ ಸುತ್ತಲಿನ ಜನರನ್ನು ತಿದ್ದಲು ಹೋಗಬಾರದು ಎನ್ನುವವರು ಕನಿಷ್ಟ ಪಕ್ಷ ತಮ್ಮ ಸಂಗಡಿಗರ ಕಾಳಜಿಗೆ ಅಲ್ಪವಾದರೂ ಗಮನಕೊಟ್ಟಾಗ ಇಂತಹ ಅನೇಕ ಘಟನೆಗಳನ್ನು ತಡೆಯಬಹುದು. ನಾವುಗಳು ಮಾಡುವ ಒಂದು ಚಿಕ್ಕ ತಪ್ಪಿನಿಂದ ಬಹು ದೊಡ್ಡ ಅವಾಂತರಗಳು ಆಗಲೂ ಸಾಧ್ಯವಿದೆ. ನಮ್ಮ ತಪ್ಪಿಲ್ಲದಿದ್ದರೂ ಬೇರೆಯವರ ತಪ್ಪಿಗೆ ನಾವು ಕೂಡ ಬಲಿಯಾಗುವ ಸಾಧ್ಯತೆ ಕೂಡ ಇರುತ್ತದೆ. ಮನೆಯ ಒಳಗೂ ಹೊರಗೂ ಅತೀ ಎಚ್ಚರಿಕೆಯಿಂದ ನಡೆಯುವುದು ನಮ್ಮೆಲ್ಲರ ಜವಾಬ್ದಾರಿ. ಒಮ್ಮೊಮ್ಮೆ ನಮ್ಮಿಂದ ಸಾಧ್ಯವಿಲ್ಲವೆಂದು ತೋರಿದರೂ ನೀವುಗಳು ಮಾಡುವ ಚಿಕ್ಕ ಚಿಕ್ಕ ಕೆಲಸಗಳು ಬಹುದೊಡ್ಡ ಬದಲಾವಣೆ ತರಬಹುದು. ಸಹಾಯದ ಮನೋಭಾವನೆ ಎಲ್ಲರಲ್ಲೂ ಹುಟ್ಟುವುದಿಲ್ಲ, ಕೇವಲ ಕೆಲವರಲ್ಲಿ ಮಾತ್ರ ಇರುತ್ತದೆ. ಸಹಾಯವೆಂಬುದು ಹಣದ ರೂಪದಲ್ಲಿ ಮಾತ್ರ ಮಾಡಬೇಕಾಗಿಲ್ಲ ಮನುಷ್ಯತ್ವ ಅಥವಾ ಭಾವನೆಗಳನ್ನು ಅರ್ಥ ಮಾಡಿ ಬದುಕುವ ರೀತಿಯನ್ನು ಅಳವಡಿಸಿಕೊಂಡಾಗ ನಮ್ಮಲ್ಲಿ ಅನುಕಂಪ ಅನ್ನುವುದು ಮೂಡುತ್ತದೆ. ನಾವು ಸಹಾಯ ಮಾಡಿ ನಮಗೇನು ಸಿಗುತ್ತದೆ ಅನ್ನುವವರು ಹೆಚ್ಚಾಗಿ ಇನ್ನೊಬ್ಬರ ಸಹಾಯ ಪಡೆದುಕೊಂಡು ಬದುಕುತ್ತಾರೆ.
ಜೀವನ ಕೇವಲ ಕೆಲವು ವರುಷಗಳು, ಇಂದು ಇದ್ದ ವ್ಯಕ್ತಿ ನಾಳೆ ಇರುವನೋ ತಿಳಿದಿಲ್ಲ, ನಿನ್ನೆಯವರೆಗೆ ನಮ್ಮೊಂದಿಗೆ ಬಹಳಷ್ಟು ಸಂತೋಷದಲ್ಲಿ ಬದುಕುತಿದ್ದ ವ್ಯಕ್ತಿ ಇಂದು ದೊಡ್ಡ ರೋಗಕ್ಕೆ ಬಲಿಯಾದ, ಇನ್ನಿತರ ಕಾರಣಗಳಿಂದ ನಮ್ಮಿಂದ ದೂರ ವಾದ ಅನ್ನುತ್ತೇವೆ. ಅದೇ ವಾಕ್ಯಗಳು ನಮಗೂ ಅನ್ವಯವಾಗುತ್ತದೆ. ಬದುಕೆಂಬ ನೌಕೆ ದಡ ಸೇರುವತನಕ ಉತ್ತಮವಾದ ಆರೋಗ್ಯ, ನಗು, ನೆಮ್ಮದಿ ನಮಗಿದ್ದರೆ ಸಾಕು ನಮ್ಮ ಜೀವನ ಸಾರ್ಥಕ.
ನಗಬೇಕಿದ್ದರೆ ಇವತ್ತು ನಕ್ಕು ಬಿಡು, ಒಳ್ಳೆಯ ತಿನಸು ತಿನ್ನಬೇಕಿದ್ದರೆ ಇಂದೇ ತಿಂದು ಬಿಡು, ಹಾಡಿ ಕುಣಿಯುತ ಬಾಳಬೇಕಿದ್ದರೆ ಇಂದು ಮಾಡಿ ಬಿಡು, ನಾಳೆ ಎಂಬುವುದ ಅರಿತವರಿಲ್ಲ, ಇಂದಿನ ದಿನ ಸಮಯವನ್ನು ನಿಲ್ಲಿಸುವವರೂ ಇಲ್ಲ. ನಯ ವಿನಯತೆ ಸುಖ ಸೌಭಾಗ್ಯದಿಂದ ನಿಮ್ಮ ನಮ್ಮೆಲ್ಲರ ಜೀವನ ಸಾಗಲಿ ಬದುಕು ಬಂಗಾರವಾಗಲಿ.
✍️ಮಾಧವ. ಕೆ ಅಂಜಾರು.
Comments
Post a Comment