(ಲೇಖನ - 98) ಜೀವನ ಚಕ್ರ - ಹುಟ್ಟು ಮತ್ತು ಸಾವಿನ ನಡುವೆ ಬದುಕು ನಡೆಸುವುದು ಜೀವನವಾದರೆ, ಹುಟ್ಟು ಮತ್ತು ಸಾವಿನ ನಡುವೆ ಮಾಡುವ ತಪ್ಪು ಒಪ್ಪುಗಳು ಕರ್ಮಗಳಾಗುತ್ತವೆ. ಜೀವನವನ್ನು ಕೇವಲವಾಗಿ ಒಂದು ಸುತ್ತು ಅಥವಾ 24 ಗಂಟೆಗೆ ಹೋಲಿಸಬಹುದು

✍️Madhav. K. Anjar 

(ಲೇಖನ - 98) ಜೀವನ ಚಕ್ರ - ಹುಟ್ಟು ಮತ್ತು ಸಾವಿನ ನಡುವೆ ಬದುಕು ನಡೆಸುವುದು ಜೀವನವಾದರೆ, ಹುಟ್ಟು ಮತ್ತು ಸಾವಿನ ನಡುವೆ ಮಾಡುವ ತಪ್ಪು ಒಪ್ಪುಗಳು ಕರ್ಮಗಳಾಗುತ್ತವೆ. ಜೀವನವನ್ನು ಕೇವಲವಾಗಿ ಒಂದು ಸುತ್ತು ಅಥವಾ 24 ಗಂಟೆಗೆ ಹೋಲಿಸಬಹುದು, ಇಪ್ಪತ್ತನಾಲ್ಕು ತಾಸುಗಳಲ್ಲಿ ನಾವೆದ್ದು, ಮಿಂದು, ತಿಂದು, ಕೆಲಸ ಕಾರ್ಯಗಳನ್ನು ಮಾಡಿ ವಿಶ್ರಾಂತಿಗಾಗಿ ಮಲಗಿ ಮತ್ತೆ ಮೇಲೆದ್ದರೆ ಮತ್ತೆ 24 ತಾಸು ಓಡಾಡಬಹುದೇನೆಂಬ ಭರವಸೆ. ಇನ್ನು ಸೂರ್ಯೋದಯದ ಮುಂದೆ ಏಳದೆ ಹೋದರೆ ಜೀವನವೆಂಬ ಪದಕ್ಕೆ ಪೂರ್ಣವಿರಾಮ. ಎಷ್ಟು ಕ್ಷಣಿಕವಲ್ಲವೇ? ಇಂದು ಬದುಕಿದ್ದ ಮನುಷ್ಯ, ಅಥವಾ ಯಾವುದೇ ಜೀವಿಗಳು ನಾಳೆ ಎಂಬ ಭರವಸೆಯಲ್ಲಿ ಬದುಕುತ್ತವೆ ಹೊರತು ನಾಳೆ ಎಂಬುವುದು ನಮ್ಮದಾಗಿರುತ್ತದೆ ಎಂದು ಖಂಡಿತವಾಗಿ ಹೇಳಲಾಗುವುದಿಲ್ಲ. ಆದರೆ ಕೆಲವು ಅವಿವೇಕಿ ಮನುಷ್ಯರ ಲಕ್ಷಣಗಳು ಅಮೃತ ಕುಡಿದ ದೇವರಂತೆ ಇರುತ್ತದೆ ಅಲ್ಲವೇ? ನಾನು ಎಂಬುವುದನ್ನು ಕೂಗಿ ಹೇಳುತ್ತಾ, ಅವನು ಎಂಬುವುದನ್ನು ದ್ವೇಷ ಸಾದಿಸುತ್ತ, ಹಿಡಿತವಿಲ್ಲದ ನಾಲಿಗೆಯೊಂದಿಗೆ ತನಗೆ ಬೇಕಾದಂತೆ ಬಣ್ಣ ಬದಲಾಯಿಸಿ ನಾಟಕೀಯವಾಗಿ ಬದುಕು ನಡೆಸುವ ಕೆಲವು ಕಳ್ಳ ಮನುಜರು ಹಳ್ಳಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ದಿನಕಳೆಯುತ್ತಾರೆ.

        ಗೊಸುಂಬೆ ಬಣ್ಣ ತಾನು ಹೋದಲ್ಲೆಲ್ಲ ಬದಲಾಯಿಸುವಂತೆ ನಿಮ್ಮ ಜೀವನದಲ್ಲೂ ಇಂತಹ ಕೆಲವರನ್ನು ನೋಡಿರಬಹುದು. ಅಂತಹ ವ್ಯಕ್ತಿತ್ವವುಳ್ಳ ವ್ಯಕ್ತಿ ತಾನಲ್ಲದೆ ತನ್ನ ಸುತ್ತಲೂ ಅದೇ ರೀತಿಯಲ್ಲಿ ಬದುಕುತ್ತಾರೆ. ಮಾತಿನಲ್ಲಿ ಸ್ಪಷ್ಟತೆ ಇರುವುದಿಲ್ಲ, ದಿನಕ್ಕೊಂದು ತರಹ ಮಾತಾನ್ನಾಡುವುದು, ಕಳೆಗುಂದಿದ ಮುಖ, ಅಸೂಯೆಯ ಮನಸ್ಸು, ದ್ವೇಷದ ಬೀಜ ಬಿತ್ತುತ್ತ, ಶಾಂತವಾಗಿರುವ ವಾತಾವರಣವನ್ನು ಹಾಳುಗೆಡವಿ ಸಮಾಜಕ್ಕೆ ಮಾರಕವಾಗಿ ಬದಲಾಗುತ್ತಾರೆ. ಇಲ್ಲಿ ಆ ವ್ಯಕ್ತಿ ಸತ್ಕಾರ್ಯಕ್ಕಿಂತ ಜಾಸ್ತಿ ಅಶಾಂತಿಯನ್ನು ಸೃಷ್ಟಿಸಿ ಬದುಕನ್ನು ನಡೆಸುತ್ತಾನೆ. ಇಂತಹ ವ್ಯಕ್ತಿಗಳು ಅದೆಷ್ಟು ದೊಡ್ಡ ಆಸ್ತಾನದಲ್ಲಿ ಕುಳಿತರೂ ಅವರಿಗೆ ಸಿಗುವ ಗೌರವ ಬರೇ ತೊರ್ಪಡಿಕೆ ಆಗಿರುತ್ತದೆ ಹೊರತು ನಿಜ ಸ್ವರೂಪ ಹೊಂದಿರುವುದಿಲ್ಲ. ಮನುಷ್ಯ ತಾನು ಉಟ್ಟುಕೊಳ್ಳುವ ಬಟ್ಟೆ ಶುದ್ಧವಾಗಿದ್ದರೆ ಸಾಲದು ಮನಸ್ಸಿನೊಳಗಿನ ಕೊಳಕನ್ನು ತೆಗೆದು ಬದುಕು ನಡೆಸಲು ಪ್ರಯತ್ನಿಸಬೇಕು. ಶುದ್ಧ ಮನಸ್ಸಿನ ವ್ಯಕ್ತಿ ಎಲ್ಲಿ ಹೋದರೂ ಧೈರ್ಯ ಮತ್ತು ಹೊಳಪುತ್ತಲೇ ಇರುತ್ತಾನೆ, ಅವನಲ್ಲಿ ನಯ ವಿನಯತೆ, ಮೌಲ್ಯಗಳನ್ನು ಗಮನಿಸಬಹುದು. ಪ್ರೀತಿ, ಹಾರೈಕೆ, ನಗು ಎಲ್ಲವೂ ಶುದ್ಧವಾಗಿರುತ್ತದೆ ಮತ್ತು ಅವನ ಒಂದೊಂದು ಮಾತುಗಳು ಕೂಡ ಸೌಜನ್ಯದಿಂದ ಕೂಡಿರುತ್ತದೆ. ಆ ಶಕ್ತಿಯನ್ನು ಕೇವಲ ಕೆಲವರು ಮಾತ್ರ ಪಡೆದುಕೊಳ್ಳಬಹುದು, ಹುಂಬರಿಗೆ, ಸುಳ್ಳರಿಗೆ, ನೂರು ಜನ್ಮ ಸಿಕ್ಕಿದರೂ ಸಾಧ್ಯವಿಲ್ಲ.

         ದುರಾಲೋಚನೆಯಿಂದ ಒಬ್ಬನನ್ನು ನೆಲಕ್ಕೆ ಉರುಳಿಸಬಹುದು ಎಂಬ ಕನಸುಗಳನ್ನು ಕಾಣುತಿದ್ದರೆ ಅದು ಅವನಿಗೇ ಹಾಕಿಕೊಳ್ಳುವ ಅಂಕುಶ, ಕಪಟ ಪ್ರೀತಿ ವಾತ್ಸಲ್ಯವೆಂಬ ನಾಟಕೀಯ ಮಾತುಗಳು ಕೂಡ ಒಂದಲ್ಲ ಒಂದು ದಿನ ತಾನಾಗೇ ಹಾಕಿಕೊಳ್ಳುವ ಕಾಲಿನ ಸರಪಳಿ, ತಾನು ಕಟ್ಟಿದ ಕೋಟೆಯೊಳಗೆ ಬಿದ್ದು ಒದ್ದಾಡುವ ಸ್ಥಿತಿಗೆ ತಲುಪಿಸಿಕೊಳ್ಳುತ್ತಾನೆ. ತುಂಬಿದ ಕೊಡ ತುಳುಕುವುದಿಲ್ಲ, ನಂಬಿದ ದೇವರು ಕೈ ಬಿಡುವುದಿಲ್ಲ, ಮಾಡಿದ ಪಾಪ ಕರ್ಮಗಳು ಬೆನ್ನು ಬಿಡುವುದಿಲ್ಲ. ಯಾರಿಗೂ ಸಹಾಯ ಮಾಡಲು ಸಾಧ್ಯವಿಲ್ಲದಿದ್ದರೆ ಸುಮ್ಮನಿದ್ದರೂ ಸಾಕು, ತೊಂದರೆಯನ್ನು ಮಾತ್ರ ಕೊಡಬೇಡ. ನೀನು ಮಾಡಿದ ಕೆಲಸಕ್ಕೆ ತಕ್ಕ ಲಾಭ ಸಿಗದಿದ್ದರೂ ಪರವಾಗಿಲ್ಲ ನಿನ್ನಲ್ಲಿ ಮೋಸ ಇರದಿದ್ದರೆ ಸಾಕು. ನಿನ್ನ ಕನಸುಗಳು ನನಸಾಗದಿದ್ದರೂ ಪರವಾಗಿಲ್ಲ ಇನ್ನೊಬ್ಬರ ಕನಸಿಗೆ ಅಡ್ಡಿಯಾಗಬೇಡ. ನಿನ್ನ ಒಳಿತಿನ ಕೆಲಸವನ್ನು ಯಾರೂ ಗಮನಿಸದಿದ್ದರೂ ಪರವಾಗಿಲ್ಲ, ಗಮನಿಸಲೆಂದೆ ಸಹಾಯ ಮಾಡಬೇಡ.

        ಅರಮನೆ ಕಟ್ಟಿದ ಕೂಡಲೇ ರಾಜನಾಗುವುದಿಲ್ಲ, ಯೋಗ್ಯತೆ ಇಲ್ಲದ ಮನುಜ ಅರಸನಾಗುವುದಿಲ್ಲ. ಮನೆ, ಮನಸ್ಸು ತಿಳಿಯದವಳು ಹೆಂಡತಿಯಾಗುವುದಿಲ್ಲ, ಜೀವನ ಹಣೆಬರಹಕ್ಕೆ ಹೋಲಿಸುವವನೂ ಬದುಕು ನಡೆಸಲು ಸಾಧ್ಯವಿಲ್ಲ. ಕೆಸರಿನ ಮೀನನ್ನು ಸ್ವಚ್ಛ ನೀರಲ್ಲಿ ಪೋಷಿಸಲು ಸಾಧ್ಯವಿಲ್ಲ, ಸ್ವಚ್ಛ ನೀರಿನ ಮೀನನ್ನು ಕೆಸರಲ್ಲಿ ಹಾಕಿದರೆ ಬದುಕುವುದಿಲ್ಲ. ಮಂತ್ರ ಪಟಿಸಿದ ಕೂಡಲೇ ಮೇಧಾವಿಯಾಗುವುದಿಲ್ಲ, ಯಂತ್ರ ಓಡಿಸಿದ ಮಾತ್ರಕೆ ಬುದ್ದಿವಂತನಾಗುವುದ್ದಿಲ್ಲ. ನಿನ್ನ ಜೀವನ ಸಾಲದು ಎಲ್ಲವನ್ನೂ ತಿಳಿದುಕೊಳ್ಳಲು, ನಿನ್ನ ಜೀವನ ಸಾಲದು ಎಲ್ಲವನ್ನೂ ಪಡೆದುಕೊಳ್ಳಲು, ನಿನ್ನ ಜೀವನ ಸಾಲದು ಎಲ್ಲವನ್ನೂ ಅನುಭವಿಸಲು. ಜೀವನ ಚಕ್ರದೊಳಗೆ ನಿನಗಾಗಿ ಸಿಗುವ ಅಲ್ಪ ಸಮಯವನ್ನು ನೆಮ್ಮದಿಯಾಗಿ ಕಳೆಯುವ ವಿದ್ಯೆಯನ್ನು ಆದಷ್ಟು ಬೇಗ ಕಲಿತುಕೊಂಡಾಗ ಜೀವನ ಚಕ್ರ ಓಡುತ್ತಿದ್ದಂತೆ ನಿಂತು ಬಿಟ್ಟರೂ ಯೋಚಿಸಲು ನಾವಿರುವುದಿಲ್ಲ.

          ✍️ಮಾಧವ. ಕೆ. ಅಂಜಾರು.










         

Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ