(ಲೇಖನ -95) ನಿನ್ನ ಮಾತು ಕೊನೆಯ ಮಾತಾಗಬಹುದು, ನಿನ್ನ ಹೆಜ್ಜೆ ಕಟ್ಟ ಕಡೆಯ ಹೆಜ್ಜೆಯಾಗಬಹುದು, ನಿನ್ನ ನಗು ಕೊನೆಯ ನಗುವಾಗಬಹುದು,

 (ಲೇಖನ -95) ನಿನ್ನ ಮಾತು ಕೊನೆಯ ಮಾತಾಗಬಹುದು,  ನಿನ್ನ ಹೆಜ್ಜೆ ಕಟ್ಟ ಕಡೆಯ ಹೆಜ್ಜೆಯಾಗಬಹುದು, ನಿನ್ನ ನಗು  ಕೊನೆಯ ನಗುವಾಗಬಹುದು,  ನಿನ್ನ ಕನಸು ಕೊನೆಯ ಕನಸಾಗಬಹುದು, ನಿನ್ನ ನೋಟ  ಕೊನೆಯ ನೋಟವಾಗಬಹುದು, ಬದುಕಿನ ಬಂಡಿ  ಓಡುತ್ತಿರುವಾಗಲೇ  ನಿಂತು ಬಿಡಬಹುದು. ಯಾರಿಗೂ  ಏನನ್ನೂ ಮಾಡಲು ಸಾಧ್ಯವಿಲ್ಲ. ನಿನ್ನಲ್ಲಿರುವ  ಅಧಿಕಾರಗಳು  ಪ್ರಯೋಜನಕ್ಕೆ ಬರದು, ನಿನ್ನಲಿರುವ  ಹಣ ಐಶ್ವರ್ಯಗಳು  ಉಪಯೋಗಕ್ಕೆ ಬರದು, ನಿನ್ನಲ್ಲಿರುವ  ಎಲ್ಲಾ ಸಂಬಂಧಗಳು  ಕೈ ಚೆಲ್ಲಿ ಕುಳಿತುಕೊಳ್ಳಲುಬಹುದು. ಜೊತೆಯಲ್ಲಿದ್ದ  ಎಲ್ಲವೂ  ನಿಂತು ಹೋಗಬಹುದು. ನಾನು ನನ್ನದು, ನಮ್ಮವರು, ಎಲ್ಲವೂ  ಶೂನ್ಯವಾಗಬಹುದು. ಬದುಕೆಂಬ  ದೋಣಿಯು ಬೀರುಗಾಳಿಗೆ ಸಿಕ್ಕಿ ದಡ ಸೇರುವ ಮುನ್ನವೇ  ಮುಳುಗಬಹುದು. ಭರವಸೆಯ ಜೀವನ  ನಿನ್ನದಾಗಿರಲಿ, ಪ್ರಾಮಾಣಿಕ ಜೀವನ  ನಿನ್ನದಾಗಿರಲಿ,  ಅನ್ಯರ ಜೀವಕ್ಕೆ  ಬೆಲೆ ಕೊಡುವ ಜೀವನ  ನಿನ್ನದಾಗಿರಲಿ, ಅತಿಯಾಸೆಗೆ ಬೀಳದೆ  ನೆಮ್ಮದಿಯ ಬದುಕು  ಸಾಗಿಸುವ  ದಾರಿ   ನಿನ್ನದಾಗಿರಲಿ. ಸತ್ಯದ ಹೆಜ್ಜೆ  ನಿನ್ನ ಹೆಜ್ಜೆಯಾಗಲಿ,  ಗೌರವದ ಬದುಕು ನಿನ್ನದಾಗಿರಲಿ, ಮಾನವನಾಗಿ ಬಾಳುವ  ಧೈರ್ಯ ನಿನಗಿರಲಿ. ಅವರಿವರ ಮನೆಗೆ ಕನ್ನ ಹಾಕಬೇಡ, ಅವರಿವರ ಮನಸಿಗೆ  ಕಲ್ಲು ಹಾಕಬೇಡ, ಅವರಿವರ  ದಾರಿಗೆ  ಮುಳ್ಳು ಹಾಕಬೇಡ, ಅವರಿವರ ಕನಸಿಗೆ ಅಡ್ಡಗೋಡೆ ಆಗಬೇಡ. ಪ್ರಪಂಚದಲ್ಲಿ ನೀನೊಬ್ಬನೇ ಇರುವುದೆಂದು  ತಿಳಿದುಕೊಳ್ಳಬೇಡ, ಈ ಪ್ರಪಂಚವು  ಬಹಳಷ್ಟು ವಿಶಾಲವಾದುದು ಎಂದು ಮರೆಯಲು ಬೇಡ.  ಅಮಾಯಕರನ್ನು  ಬಲಿ ತೆಗೆದುಕೊಳ್ಳಬೇಡ, ಅಮಾಯಕರನ್ನ ಲೂಟಿ ಮಾಡಿ  ಹಾಯಾಗಿ ಜೀವಿಸಬೇಡ. ನಿನ್ನಲ್ಲಿ ಏನಿದ್ದರೂ  ಭೂಮಿಯ ಮೇಲೆ ನಡೆಯಬೇಕು, ನಿನ್ನಲ್ಲಿ ಎಷ್ಟಿದ್ದರೂ  ನಯ ವಿನಯತೆ ಇರಲೇಬೇಕು, ನಿನ್ನ ಬದುಕು ಎಷ್ಟು ದಿನವೆಂದು  ನಿನಗೆ ತಿಳಿದಿಲ್ಲವೆಂದಾಗ ನಿನ್ನಲ್ಲಿರುವ ಅಹಂಕಾರಕ್ಕೆ ಕೊನೆಯಿಲ್ಲವೆಂದು ತಿಳಿದುಕೊಳ್ಳಬೇಡ. ಒಂದು  ಕ್ಷಣ ಸಾಕು  ಪೂರ್ಣವಿರಾಮಕ್ಕೆ. ಒಂದು ಕಾರಣ ಸಾಕು ಹಾಸಿಗೆ ಹಿಡಿಯೋಕೆ, ಒಂದು ಮಾತು ಸಾಕು ನೆಗೆದು ಬೀಳೋಕೆ, ಒಂದು ನಿರ್ಧಾರವೇ ಸಾಕು  ನಾಶವಾಗುವುದಕೆ.

         ನಿಕಲಿತ ವಿದ್ಯೆ  ಒಳಿತಿಗಾಗಿ ಉಪಯೋಗಿಸು, ನೀ ಗಳಿಸುವ ಹಣ ಐಶ್ವರ್ಯ  ಅನ್ಯಾಯದ ಮಾರ್ಗ  ಹೊಂದಿರದೆ ಇರಲಿ. ನೀನು ಮಾತ್ರ ಬದುಕಿದರೆ ಸಾಕೆಂದು  ಯೋಚನೆ ಮಾಡಬೇಡ. ನಿನ್ನ ನಿರ್ಧಾರಗಳನ್ನು  ಆ ಶಕ್ತಿಯು  ಮೊದಲೇ ನಿರ್ಧರಿಸಿರುತ್ತದೆ. ನಿನ್ನ ಆಸೆ ಆಕಾಂಕ್ಷೆ ಗಳನ್ನು ಈಡೇರಿಸುವ ಶಕ್ತಿ  ತಾನಾಗಿಯೇ ಬಂದು ಬಿಡುತ್ತದೆ.  ಪ್ರಯತ್ನ ಮಾತ್ರ  ಒಳಿತಿನ ಮಾರ್ಗದಲ್ಲಿರಲಿ, ಕನಸು ಕಾಣುವುದನ್ನು ಬಿಡಬೇಡ, ನಿನ್ನ ಉಪಯೋಗಿಸುವವರನ್ನು  ಗಮನದಲ್ಲಿಟ್ಟುಕೋ, ನಿನ್ನ ಬಗ್ಗು ಬಡಿಯೋರನ್ನು ಗೌರವಿಸಬೇಡ,  ಸ್ವಾಭಿಮಾನವನ್ನು ಬಿಟ್ಟು ಬದುಕು ನಡೆಸ ಬೇಡ.  ಕರೆಯದವರ ಮನೆಗೆ  ಹೋಗಬೇಡ, ಕರೆದವರ ಮನೆಗೆ ಹೋಗದಿರಲು ಬೇಡ. ಜೀವದ ಬಣ್ಣ  ನೋಡಿ ಮರುಳಾಗಬೇಡ, ಮನಸ್ಸಿನ ಬಣ್ಣ  ನೋಡಿ ಕಂಗೆಡಬೇಡ. ಕಾಲ ಎಳೆಯುವುದನ್ನು ಮಾಡಬೇಡ, ಕೈ ಹಿಡಿದು  ನಡೆಯುವುದನ್ನು  ಮರೆಯಬೇಡ. ಹಿರಿಯರನ್ನು ತುಳಿಯಬೇಡ  ಕಿರಿಯರನ್ನು ಜರೆಯಬೇಡ, ಅಸೂಯೆಯೊಂದಿಗೆ  ದಿನ ಕಳೆಯಬೇಡ. ಸಂಸಾರವನ್ನು ದೂರ ಮಾಡಬೇಡ, ತಂದೆ ತಾಯಿಯರನ್ನು  ತೆಗಳಬೇಡ. ಭಿಕ್ಷುಕನನ್ನು ಬೈಯಬೇಡ, ಪಾಪಿಗಳಿಗೆ ಆಶಯ ಕೊಡಬೇಡ.

         ದೈವ ಭಕ್ತಿ ಮರೆಯಬೇಡ, ದೈವಶಕ್ತಿ ತೆಗಳ ಬೇಡ, ಅನ್ಯ ಧರ್ಮ  ದೂಷಿಸಬೇಡ, ಸ್ವಧರ್ಮ ಮರೆಯಲು ಬೇಡ, ಸಂಸ್ಕಾರವಿಲ್ಲದೆ  ಬದುಕಬೇಡ, ಯಾರೂ ಇಲ್ಲವೆಂದು ಮರುಗಬೇಡ. ಮಾನವ ಜಾತಿಗೆ  ಬೆಲೆಯ ಕೊಡು, ಜಾತಿ ಜಾತಿಯಳು  ದ್ವೇಷ ಬಿಡು, ಹೆಚ್ಚು ಹೊಗಳುವವರನ್ನು  ನಂಬಬೇಡ, ಹುಚ್ಚರಾಗಿರುವವರನ್ನು ಕೆಣಕಬೇಡ. ಕಾಲಿಲ್ಲದವನ ಎದುರಲಿ  ಕುಣಿಯಬೇಡ, ಬಟ್ಟೆ ಇಲ್ಲದವನ ಎದುರಲ್ಲಿ ಹೊಸ ಬಟ್ಟೆಯ ಜಂಬ ಬೇಡ. ಬಡವನ ಮನೆಯಲ್ಲಿ  ಆಸನ ಬಯಸಬೇಡ , ಸಿರಿವಂತನ ಮನೆಯಲ್ಲಿ ಆಸೆಯನ್ನು ಮುಂದಿಡಬೇಡ. ಅವರಲ್ಲಿರುವುದು  ನನ್ನಲ್ಲಿ ಇಲ್ಲವೆಂಬುದನ್ನು  ಹೇಳಿಕೊಳ್ಳಬೇಡ, ನಾನೇನು ಮಾಡಬಲ್ಲೆ ಎಂದು ಕೂಡ  ಹತಾಶೆಗಳಾಗ ಬೇಡ. ಸಹಾಯ ಮಾಡಿದವರನ್ನು ಮರೆಯಬೇಡ, ಕಷ್ಟ ಕೊಟ್ಟವರನ್ನು ಮರೆಯಬೇಡ, ಇಷ್ಟಪಡುವವರನ್ನು  ದೂರ ಮಾಡಬೇಡ, ಬೆಟ್ಟ ತೋರಿಸುವವರ  ತೋರ್ ಬೆರಳ ನೋಡಬೇಡ. ಮೋಸ ಮಾಡುವವರ ಬಗ್ಗೆ  ಜಾಗೃತನಾಗಿರು. ನಿನ್ನತನವ ನಿನಗಿರಲಿ, ನಿನ್ನ ಬೆಲೆಯು ನಿನಗೆ ಗೊತ್ತಿರಲಿ.

    ನೋವಿರುವ ಮನಸಿಗೆ  ಬಿಸಿ ತುಪ್ಪವಾಗಬೇಡ, ನಗುತಲಿರುವ ಸಂಸಾರಕ್ಕೆ ವಿಷವಾಗಬೇಡ, ಕೆಟ್ಟ ಜನರ ಬಾಯಿಗೆ  ಬಲಿಯಾಗ ಬೇಡ, ಸಜ್ಜನರ  ಸಂಗವ  ಮಾಡದಿರಬೇಡ. ಹುಟ್ಟಿದ ಮಗುವಿಗೆ ಹಾರೈಸಲು ಮರೆಯಬೇಡ, ಬಿಟ್ಟು ಹೋದ ಜೀವಕ್ಕೆ ಕೆಟ್ಟ ಶಬ್ದಗಳ ಬಳಸಬೇಡ. ತಪ್ಪುಗಳನ್ನು ತಿದ್ದು ಕೊಳ್ಳುವವರಿಗೆ ಅವಕಾಶ ಕೊಡು, ಸದಾ ತಪ್ಪುಗಳನ್ನೇ ಮಾಡುತ್ತಿರುವವರನ್ನು ಬಿಟ್ಟುಬಿಡು. ಹೆಚ್ಚು ಯೋಚನೆಗಳಿಗೆ ಬೀಳಬೇಡ, ನಿನ್ನ ಮನಸ್ಸಿನ ಹತೋಟಿಯನ್ನು ಕಳೆದುಕೊಳ್ಳುಬೇಡ, ಪ್ರೀತಿಸುವವರನ್ನು ಪ್ರೀತಿಸು. ದ್ವೇಷಿಸುವವರ   ನಡುವೆ ಎದ್ದು ನಿಲ್ಲು. ವೈರಿಗೆ  ವೈರಿ ಆಗಬೇಡ, ವೈರಿಗೆ  ಹೆದರಲು ಬೇಡ.ಗುರುಗಳನ್ನು ಮರೆಯಬೇಡ.

       ನೀನು ನೀನಾಗಿರು, ನಿನಗೆ ನೀನೇ  ಬಲವಾಗಿರು, ನಿನಗೆ ನೀನೇ ಶಕ್ತಿಯಾಗಿರು, ನಿನಗೆ ನೀನೇ  ಯುಕ್ತಿಯಾಗಿರು, 

          ✍️ 



Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.

(ಲೇಖನ -100), "ಕುವೈಟ್ ಕಲಾ ಮಾಣಿಕ್ಯ" ಒಬ್ಬ ಕಲಾಗಾರನ ನಿಜವಾದ ಜೀವನ ಕ್ರಮ, ಶ್ರಮ ಮತ್ತು ಸಾಧನೆಯ ಹಾದಿ, ಕಲೆ ಎಂಬುವುದು ಎಲ್ಲರಿಗೂ ಒಲಿಯುವುದಿಲ್ಲ ಆದರೆ ಒಂದಲ್ಲ ಒಂದು ರೀತಿಯ ಕಲೆಯ ಶಕ್ತಿ ಪ್ರತಿಯೊಬ್ಬರಲ್ಲೂ ಇರುತ್ತದೆ