(ಲೇಖನ -32)ಯಾರೂ ನಮ್ಮ ಆಳುಗಳಲ್ಲ -ಸೇವಕರಲ್ಲ
ಯಾರೂ ನಮ್ಮ ಆಳುಗಳಲ್ಲ - ಸೇವಕರಲ್ಲ.
ಮಾನವನೊಬ್ಬನೇ ಬೇಧ ಭಾವ, ಕೀಳರಿಮೆ, ಮೇಲ್ಜಾತಿ, ಕೀಳು ಜಾತಿ, ವಿವಿಧ ಧರ್ಮ, ಕಚ್ಚಾಟ, ಮದ ಮತ್ಸರ ಜಾಸ್ತಿನೇ ಬೆಳೆಸಿಕೊಂಡಿದ್ದಾನೆ. ಹುಟ್ಟಿಬರುವಾಗ ಭುವಿಯ 100% ಜನರು ಒಳ್ಳೆಯವರೆ, ದುರದೃಷ್ಟ ಹುಟ್ಟಿದ ಮೇಲೆ ಬೆಳೆಸುವ ರೀತಿಗಳು ಮಾನವ ಕುಲಕ್ಕೆ ಕೆಟ್ಟಹೆಸರು ಬರುವಷ್ಟರಮಟ್ಟಿಗೆ ಬೆಳೆದು ಕೊನೆಗೆ ಅರ್ಧ ದಾರಿಯಲ್ಲಿ ಸಾಯುವವರೇ ಜಾಸ್ತಿಯಾಗಿದ್ದಾರೆ.
ನಾವು ಮಾಡುವ ಉದ್ಯೋಗದಲ್ಲಿ, ಸಂಘ ಸಂಸ್ಥೆ, ಸಮಾಜದಲ್ಲಿ ಬೇಧ ಭಾವಗಳ ಸರಮಾಲೆ ಜೀವಂತವಾಗಿ ಇದ್ದು ಒಬ್ಬರ ಉನ್ನತಿಯ ಬದಲಾಗಿ ಅಳಿವಿಗಾಗಾಗಿ ಶ್ರಮಿಸುವ ಜನರು ಎಲ್ಲಾ ಕಡೆ ಕಾಣಲು ಸಿಗುತ್ತಾರೆ. ಇದಕ್ಕೆ ಕಾರಣ ತಾನೊಬ್ಬನೇ ಬದುಕಿದರೆ ಸಾಕು, ಬೇರೆಯವರು ಏನಾದರೂ ನನಗೆ ಬೇಕಾಗಿಲ್ಲ ಅನ್ನೋ ಮನೋಭಾವನೆ. ಕೆಲವರಿಗೊಂದು ಪೊಗರು, ಉನ್ನತ ಹುದ್ದೆ ಅಥವಾ ಅಧಿಕಾರಕ್ಕೆ ಹೋದಮೇಲೆ ತನ್ನ ಕೆಳ ಹುದ್ದೆಯಲ್ಲಿರೋ ಜನರು ಸೇವಕರು ಅನ್ನೋ ರೀತಿ ನಡೆಯುತ್ತಾರೆ. ಹೌದು ನೈಜ ಘಟನೆ, ನಾನೊಂದು ಕಡೆ ಕೆಲಸ ಮಾಡುತಿದ್ದಾಗ ಒಬ್ಬ ಕೂಲಿ ಕೆಲಸಗಾರ, ಪೈಂಟ್, ಗಾರೆ, ಇನ್ನಿತರ ಕೆಲಸ ಮಾಡುವವನ ಮುಂದೆ ಸಿವಿಲ್ ಸೂಪರ್ವೈಸರ್ ಒಬ್ಬ ಬಡಪಾಯಿ ಕೆಲಸಗಾರನಿಗೆ ಏರುದನಿಯಿಂದಲೇ ಕೆಲಸವನ್ನು ಕೊಡುತಿದ್ದ, ಅವನ ಹಾವಬಾವ ಬಡಪಾಯಿ ಕೆಲಸಗಾರ ಅಡಿಯಾಳಂತೆ ನೋಡಿಕೊಳ್ಳುತ್ತಿದ್ದುದನು ಅರಿತಾಗ. ರಾಜಸ್ಥಾನದಿಂದ ಕುವೈಟ್ ಮಣ್ಣಲಿ ಬಿಸಿ ಬೇಗೆಯೆ ನಡುವೆ ಅನ್ನಕ್ಕಾಗಿ ಪರಿತಪಿಸುವ ಅದೆಷ್ಟೋ ಕೂಲಿಗಾರರು ತನ್ನ ಮನೆಯವರಿಗಾಗಿ, ಮೇಲ್ವಿಚಾರಕ ಹೇಳುವ ಎಲ್ಲಾ ಕೆಟ್ಟ ಶಬ್ದಗಳನ್ನು ಕೇಳುತ್ತ ದಿನಾಲೂ ಕೆಲಸಕ್ಕೆ ಹೋಗುತ್ತಿರುತ್ತಾರೆ.
ನಾನು ಸುಮ್ಮನೆ ಯಾಕೆ ಆ ತರ ನಿಮಗೆ ಬೈಯುತಿದ್ದಾನೆ ಅಂತ ವಿಚಾರಿಸಿದಾಗ ಅವನು ಹಾಗೆಯೇ ಬಯ್ಯುತ್ತಾನೆ ಏನು ಮಾಡಲಿ ನಮ್ಮನ್ನು ಯಾರು ಕೇಳುವವರಿದ್ದಾರೆ ಅನ್ನುತ್ತಲೇ ಕಣ್ಣಂಚಲಿ ನೀರು ತುಂಬಿಕೊಂಡ ಮುಗ್ದ ಕೆಲಸಗಾರ.
ಹೌದು ಬದುಕು ಎಲ್ಲರಿಗೂ ಸುಖವಾಗಿರೋಲ್ಲ, ಹಾಗಂತ ಕಷ್ಟ ಪಟ್ಟು ಬದುಕುವವರು ನಮ್ಮ ಆಳುಗಳು ಅಲ್ಲವೇ ಅಲ್ಲ. ನನಗೆ ಮನಸು ನೋವಾಗಿ ಮೇಲ್ವಿಚಾರಕನಿಗೆ ನೇರವಾಗಿ ಹೇಳಿಯೇ ಬಿಟ್ಟೆ. ನಿನ್ನಂತೆಯೇ ಅವನೂ ಒಬ್ಬ ಕೆಲಸಗಾರ ನೀನೂ ಕೂಡ ಅವನಂತೆಯೇ ಒಬ್ಬ ಮನುಷ್ಯ ಆದರೆ ವ್ಯತ್ಯಾಸ ಇಷ್ಟೇ ನೀನು ಬಯ್ಯೋದೆಲ್ಲವನು ಅವನು ಕೇಳುತ್ತಾನೆ ಅಂದರೆ ಅವನು ಬೆಳೆದುಬಂದ ರೀತಿ, ಅವನ ದುಃಖಗಳು ಆ ಸ್ಥಿತಿಗೆ ತಂದು ನಿಲ್ಲಿಸಿದೆ ಅತಿಯಾದ ದಬ್ಬಾಳಿಕೆ ಮಾಡಬೇಡ ನಿನ್ನ ಸ್ಥಿತಿ ನಾಳೆ ಅರಿತವರಿಲ್ಲ ಅಂತ ಹೇಳಿದಾಗ ಸೂಪರ್ವೈಸರ್ ತಣ್ಣಗಾಗಿಬಿಟ್ಟ. ನಾವು ಯಾರನ್ನೂ ದೂರುತ್ತಾ ಬದುಕೋಕೆ ಆಗೋದಿಲ್ಲ, ಆದರೆ ಕೆಲವು ಮುಗ್ದರಿಗೆ ಅಂತವರಲ್ಲಿ ಹೇಗೆ ವರ್ತಿಸಬೇಕೆಂದು ಕೂಡ ತಿಳಿದಿರೋದಿಲ್ಲ.
ಯಾರೇ ಆಗಲಿ, ಒಬ್ಬ ಉದ್ಯೋಗವನ್ನು ಮಾಡುತ್ತಿರುವುದು ಅವನ ಹೊಟ್ಟೆಪಾಡಿಗೆ, ಒಂದು ವೇಳೆ ಉದ್ಯೋಗ ಸರಿಯಾಗಿ ಮಾಡಿಲ್ಲವೆಂದಾಗ ಅಥವಾ ತಪ್ಪುಗಳನ್ನು ಮಾಡಿದ್ದಲ್ಲಿ ಸರಿಪಡಿಸುವ ಬಗ್ಗೆ ಪ್ರಯತ್ನಿಸಬೇಕು. ಒಂದು ವೇಳೆ ಸರಿಯಾಗಿಲ್ಲವೆಂದರೆ ನಯವಿನಯತೆಯಿಂದಲೇ ಹೇಳಿ ಬಿಡಬಹುದು. ಸೆಕ್ಯೂರಿಟಿ ಒಬ್ಬ ನಮಸ್ಕಾರ ಮಾಡಿದಾಗ ಪ್ರತಿನಮಸ್ಕಾರ ಮಾಡಲು ಹಿಂಜರಿಯುವ ಕೆಲ ದೊಡ್ಡ ಮನುಷ್ಯರು. ಮನೆಕೆಲಸ, ಕಛೇರಿ ಸ್ವಚ್ಛತೆ, ಚಾ ಕೊಡುವವನ ಕಂಡಾಗ ಗೌರವದ ಬದಲು ಕೀಳಾಗಿ ನೋಡುವ ಜನರನ್ನು ನನ್ನ ಕಣ್ಣಾರೆ ಕಂಡಿದ್ದೇನೆ. ಅವರಿಗೊಂದು ನನ್ನ ಮಾತು " ಇಲ್ಲಿ ಕೇಳು, ನಿನ್ನಲಿರುವ ದೇಹ ನಿನ್ನದಲ್ಲ, ನಿನ್ನಲಿರುವ ಹಣವೂ ನಿನ್ನದಲ್ಲ, ನಿನ್ನಲಿರುವ ಗುಣ ನಿನ್ನದೇ, ನಿನ್ನಲಿರುವ ಜನ ನಿನ್ನವರಲ್ಲ, ನಿನ್ನಲಿರುವ ಅಹಂಕಾರ ನಿನ್ನದೇ, ಎಷ್ಟಿದ್ದರೂ ಏನಂತೆ ನಿನ್ನ ಹೆಣ ಹೊರಲು ನಾಲ್ಕು ಜನ ಕೂಲಿಗಳೇ ಬೇಕು, ನಿನ್ನ ಅಹಂಕಾರ ನಿಲ್ಲಿಸು ಸಾಕು.
ಅವರವರು ಮಾಡುವ ಉದ್ಯೋಗಕ್ಕೆ ಗೌರವಕೊಡಿ, ಯಾಕೆಂದರೆ ಅವರು ಮಾಡುವ ಕೆಲಸ ನಾವು ಮಾಡೋಕೆ ಆಗೋದಿಲ್ಲ, ಅವರಿಲ್ಲದೆ ನಾವಿಲ್ಲ. ದೊಡ್ಡ ಹುದ್ದೆ, ದೊಡ್ಡ ವಿದ್ಯೆ ಪಡೆದ ಭಾಗ್ಯವಿದ್ದರೆ ಒಳಿತಿಗಾಗಿ ಉಪಯೋಗಿಸು, ಮನುಜನಾಗಿ ಜೀವಿಸು.
ಸಾಧ್ಯವಿದ್ದರೆ ನಾಲ್ಕು ಜನರಿಗೆ ಉಪಕರಿಸು ಇಲ್ಲದಿದ್ದರೆ ಸುಮ್ಮನಿದ್ದು ನಿದ್ರಿಸು.
✍️ಮಾಧವ ನಾಯ್ಕ್ ಅಂಜಾರು 🌹🙏
Comments
Post a Comment