(ಲೇಖನ -30)ನಾ ನಿನ್ನ ನಿಜವಾಗಿ ಪ್ರೀತಿಸುವೆ
ನಾ ನಿನ್ನ ನಿಜವಾಗಿ ಪ್ರೀತಿಸುವೆ
ಪ್ರೀತಿ ಪ್ರೇಮವೆಂದರೆ ಸಹಜವಾಗಿ ನಮ್ಮ ಮನಸ್ಸು ನೇರ ಯವ್ವನದ ಕಡೆ ಕೊಂಡು ಹೋಗಬಹುದು, ಆದರೆ ನಿಜವಾದ ಪ್ರೀತಿ ಅಂದರೆ ಹೃದಯಯಾಂತರಾಳದಲಿ ಇನ್ನೊಬ್ಬರಿಗಾಗಿ ತಾವು ತೋರಿಸುತ್ತಿರುವ ನಯ ವಿನಯತೆ, ಸಹಕಾರ, ಗೌರವ. ಪ್ರೀತಿಯನ್ನು ಒಂದೇ ವಾಕ್ಯದಲ್ಲಿ ಹೇಳಲಾಗದು ಮತ್ತು ವ್ಯಕ್ತಪಡಿಸಲೂ ಆಗದು.
ಅಮ್ಮನ ಪ್ರೀತಿ ತನ್ನ ಮಕ್ಕಳು ಮನೆಯವರ ಮೇಲೆ ಅದೆಷ್ಟು ಇರುತ್ತದೆ, ಹೆಂಡತಿಯ ಪ್ರೀತಿಯು ಗಂಡನ ಮೇಲೆ ಅತಿಯಾಗಿರುತ್ತದೆ, ಗಂಡನ ಪ್ರೀತಿಯು ತನ್ನ ಹೆಂಡತಿಯ ಮೇಲೆ ಅದಕ್ಕಿಂತಲೂ ಜಾಸ್ತಿನೇ ಇರುತ್ತದೆ. ಆದ್ರೆ ವ್ಯಕ್ತ ಪಡಿಸಲು ಕೆಲವರು ಶಕ್ತರಾಗಿದ್ದಾರೆ, ಕೆಲವರಿಗೆ ತಾನು ಪ್ರೀತಿಸುತ್ತಿದ್ದೇನೆ ಎಂದು ಹೇಳುವಷ್ಟು ಕೂಡ ಹೊಳೆಯುವುದಿಲ್ಲ ಮತ್ತು ಕೆಲವರಿಗೆ ಅದಕ್ಕೆ ಬೇಕಾದ ಹಾವಭಾವಗಳನ್ನು ಮಾಡಿ ತೋರಿಸಲು ಬರೋದಿಲ್ಲ. ಪ್ರೀತಿ ಅನ್ನೋದು ಪ್ರತಿಯೊಂದು ಮನುಷ್ಯ ಹಾಗು ಪ್ರಾಣಿಗಳಲ್ಲಿ ಇದೆ, ಪ್ರೀತಿಯಿಂದ ಸರ್ವ ಜೀವಿಗಳು ಜೀವಿಸುತ್ತವೆ. ನಿಮಗೆ ಗೊತ್ತಿಲ್ಲದೆಯೇ ಪ್ರೀತಿಸುವವರು ಅದೆಷ್ಟು ಜನಗಳು ಇರಬಹುದು.
ತಾಯಿಯೊಬ್ಬಳು ತಾನು ತಿನ್ನದೆ ಮಕ್ಕಳಿಗಾಗಿ ಸಂಸಾರಕ್ಕಾಗಿ ಶ್ರಮಪಟ್ಟು ಯಾವುದೇ ಕಷ್ಟಗಳನ್ನು ವ್ಯಕ್ತಪಡಿಸದೆ ಇರುವುದು, ಯಾವತ್ತೂ ಆಶೀರ್ವದಿಸುವುದು, ಒಬ್ಬಳೇ ಕಣ್ಣೀರು ಹಾಕಿ ಏನಿಲ್ಲ ಮಗು ಅನ್ನೋದು, ತಂದೆಯೊಬ್ಬ ತನ್ನ ಮಕ್ಕಳಿಗಾಗಿ, ಮನೆಯ ಅನ್ನಕ್ಕಾಗಿ ಒಂದು ತುತ್ತು ಅನ್ನವ ತಿನ್ನುವಾಗ ಕೂಡ ಮನೆಯವರನ್ನು ನೆನೆದು ನಾಳೆಗಾಗಿ ತನ್ನ ಜೀವನವನ್ನು ತ್ಯಾಗ ಮಾಡುವುದು.
ಗಂಡನೊಬ್ಬ ತನ್ನ ಹೆಂಡತಿಗಾಗಿ ಮನದ ನೋವನ್ನೆಲ್ಲ ಹೇಳದಿರುವುದು, ತನ್ನನ್ನು ತಾನೇ ಸಮಾಧಾನ ಮಾಡಿಕೊಳ್ಳುವುದು, ಮನೆಯವರ ಸುಖವನ್ನೇ ಆಶಿಸುತ್ತಿರುವುದು. ಅಣ್ಣನೊಬ್ಬ ತಂಗಿಯ ಬೇಕು ಬೇಡಗಳ ಪೂರೈಸುವುದು, ಹೊಡೆದಾಟ ಮಾಡಿದಾಗ ತನ್ನ ಕೈಯನ್ನೇ ಚಚ್ಚಿಕೊಳ್ಳುವುದು. ತಮ್ಮನಿಗೆ ಬುದ್ಧಿಮಾತನು ಹೇಳುವುದು, ಹೇಳಿದ್ದು ಕೇಳದಿದ್ದರೆ ಮೌನದ ಉತ್ತರ ಅಥವಾ ಇನ್ನಷ್ಟು ಬುದ್ಧಿಯನು ಹೇಳೋಕೆ ಪ್ರಯತ್ನಿಸೋದು. ಗೆಳೆಯನೊಬ್ಬ ಗಂಟಿಗಟ್ಟಲೆ ಕಾಯೋದು, ಕಷ್ಟದಲ್ಲೂ ದುಃಖದಲ್ಲು ಎಲ್ಲಾ ಸರಿಯಾಗುತ್ತದೆ ಹೆದರಬೇಡ ಅನ್ನೋದು. ಅಪ್ಪನಿಗೆ ಮಗನೊಬ್ಬ ನೀನ್ಯಾಕೆ ದುಡಿಯುತ್ತೀಯಾ ನಾ ನಿನಗೆ ಅನ್ನ ಹಾಕುವೆ ಅನ್ನೋದು, ಹಾಯಾಗಿರು ಹೇಳುವುದು. ಹೀಗೆ ಇನ್ನಿತರ ವಿಧಗಳು, ಸಿಟ್ಟು, ಜೋರು ಮಾತು ಕೂಡ ಅತೀ ಪ್ರೀತಿಯ ಸಂಕೇತವಾಗಿರುತ್ತದೆ.
ಪ್ರೀತಿಯೆಂದರೆ ಮೈಗಂಟಿ ಕುಳಿತುಕೊಳ್ಳುವುದು, ಗುಲಾಬಿ ಹೂ ಕೀಳಿ ಕೊಡುವುದು, ಕಣ್ಣು ಕಣ್ಣು ನೋಡುವುದು, ಬಟ್ಟೆ ಬರೆ ತೆಗೆಸಿಕೊಡುವುದು, ದೂರ ಪ್ರಯಾಣ ಮಾಡುವುದು, ಮೊಬೈಲ್, ಗಿಫ್ಟ್ ಕೊಡುವುದು ಮಾತ್ರವಲ್ಲ, ನಿಜವಾದ ಪ್ರೀತಿ ಜೀವನದ ಪ್ರತಿಯೊಂದು ಕ್ಷಣದಲ್ಲಿ ಸ್ವಾರ್ಥಬಿಟ್ಟು ಎಲ್ಲರೂ ನಮ್ಮವರೆಂದು ಭಾವಿಸಿ ಜಾಗರೂಕರಾಗಿ ಕಷ್ಟ ಸುಖದಲ್ಲಿ ಭಾಗಿಯಾಗುವುದು. ಮತ್ತೊಬ್ಬರಿಗೆ ತೊಂದರೆ ಕೊಡದೆ ಬದುಕುವುದು.
✍️ಮಾಧವ ನಾಯ್ಕ್ ಅಂಜಾರು 🌹🙏
Comments
Post a Comment