(ಲೇಖನ -27)ಕತ್ತಲ -ನೆತ್ತರು

ಕತ್ತಲ  ನೆತ್ತರು 


ಜೀವನಪಾಠ ಬರೆದಷ್ಟು ಮುಗಿಯದು  ಓದಿದಷ್ಟೂ ಸಾಲದು ಹೊಸ ಹೊಸ ಅಧ್ಯಾಯಗಳ ಸರಮಾಲೆ ನಮಗೆ ಸಿಗುತ್ತಲೇ ಇರುತ್ತದೆ. ಪ್ರತಿಯೊಬ್ಬ ಮನುಷ್ಯ ತನ್ನ ಜೀವನದ ಅವಧಿಯಲ್ಲಿ ಪಾಠವನ್ನು ಕಲಿಯುತ್ತಲೇ ಇರುತ್ತಾನೆ , ಹೊಸ ಅನುಭವಗಳನ್ನು ಅನುಭವಿಸುತ್ತ ಇರುತ್ತಾನೆ . ಒಬ್ಬೊಬರು  ಒಂದೊಂದು ಸಮಯಕ್ಕೆ ಮರೆಯಲಾಗದ ಪಾಠ ಕಲಿತರೆ , ಕೆಲವರು ಜೀವನಪೂರ್ತಿ ಇನ್ನೊಬ್ಬರಿಗೆ ಪಾಠ ಕಲಿಸಲು ಪ್ರಯತ್ನಿಸುತ್ತಾರೆ , ಕೆಲವರು ತಾನೊಬ್ಬನೇ ಶ್ರೇಷ್ಠ ಎಂಬಂತೆ ತನ್ನನ್ನು ತಾನು ತೋರ್ಪಡಿಸುವ ಅಹಂಕಾರವನ್ನು ಹೊಂದಿರುತ್ತಾರೆ . ಅವರವರ ಜೀವನದ ಗುಟ್ಟು ಅವರಿಗೆ ಮಾತ್ರ ಗೊತ್ತಿರುತ್ತದೆ  ಮತ್ತು ಒಳಿತು ಕೆಡುಕಿನ ಕೊಡವನ್ನು ತುಂಬಿಸಿಕೊಳ್ಳುತ್ತಿರುತ್ತಾರೆ . 

ನನ್ನ ಅನುಭವ ತಪ್ಪಾಗಿರಲೂಬಹುದು ಆದರೆ ಸಹಜವಾಗಿ ಮನುಜ , ಮಾಹಿತಿ , ಅನುಭವಗಳ ಕೊರತೆಯಿಂದ ತಪ್ಪುಗಳನ್ನು ಮಾಡಬಹುದು ಆದರೆ  ಬುದ್ದಿವಂತನೆಂದು-  ತಿಳಿದು ಮಾಡುವ ತಪ್ಪಿಗೆ ಯಾವ ಮದ್ದು ಕೂಡ ನಾಟುವುದಿಲ್ಲ ಹಾಗೆಯೆ ಅವನತಿ ಹಾದಿ ಹೊಂದದಿರೋದಿಲ್ಲ.  ಮತ್ತು ಮಾಡಿದ ತಪ್ಪುಗಳನ್ನು ಸರಿ ಮಾಡಿ ಮುಂದುವರೆದರೆ ಸ್ವಲ್ಪಮಟ್ಟಿಗೆ ತನ್ನ ಜೀವನವನ್ನು ಮುಂದುವರೆಸಿ ನಡೆಯಲೂಬಹುದು . 

ಮೋಸ ,ವಂಚನೆ , ಕೊಲೆ ,ದರೋಡೆ ,ವಿಸ್ವಾಸ ದ್ರೋಹ , ಪಿತೃ ದ್ರೋಹ , ಸಂಬಂಧಗಳ ದ್ರೋಹ ನಮ್ಮ ಸುತ್ತಮುತ್ತಲೂ ಕಾಣುತ್ತಲೇ ಇದ್ದೇವೆ ಆದರೆ ಪ್ರಪಂಚದಲ್ಲಿ ನಡೆಯುವ ಒಂದೊಂದು ಘಟನೆಗಳು ಪಾಠವೆಂದು ತಿಳಿದುಕೊಳ್ಳಲು ಕೂಡ ಕಷ್ಟ. ಯಾವ ಸಮಯದಲ್ಲಿ ಏನು ನಡೆಯುತ್ತವೆ ಅನ್ನೋದನ್ನು ಗ್ರಹಿಸುವಷ್ಟು ಕೂಡ ಸಮಯ ಸಿಗುತ್ತಿಲ್ಲ ಇಂದಿನ ದಿನಗಳಲ್ಲಿ. ಇದಕ್ಕೆ ಕಾರಣ ಯಾರು ಅನ್ನೋದನ್ನು  ಕೂಡ ಬೊಟ್ಟು ಮಾಡಿ ಹೇಳುವಂತೆ ಕೂಡ ಇಲ್ಲ . ಹೌದು ಮಾನವ ಮುಂದುವರೆದಿದ್ದಾನೆ ಅದೆಷ್ಟೋ ಸಾಧನೆಗಳನ್ನು  ಮಾಡಿದ್ದಾನೆ , ಚಂದಿರ , ಮಂಗಳ ಗ್ರಹಗಳ ಕಡೆಗೆ ಗಮನ ಹರಿಸಿದ್ದಾನೆ ಆದರೆ ಬುವಿಯಲಿ ನಡೆಯುವ ಅವಾಂತರಗಳಿಗೆ ತಾನೇ ಕಾರಣನಾಗಿದ್ದಾನೆ . ಅದೆಷ್ಟು ಮಟ್ಟಿಗೆ ಅಂದರೆ , ಹುಟ್ಟಿಸಿದ ತಂದೆಯನ್ನೇ ಕೊಂದುಬಿಡುತ್ತಾನೆ , ತಾನು ಉಂಡ ಮನೆಗೆ ಎರಡು ಬಗೆಯುತ್ತಾನೆ , ತಂದೆ ತಾಯಿಯನ್ನು ಮರೆಯುತ್ತಾನೆ , ಅಣ್ಣ ತಮ್ಮನ ಬಾಂಧವ್ಯ ಮರೆಯುತ್ತಾನೆ , ಮದುವೆಯಾದವಳು  ಗಂಡನ ತೊರೆದು ಬದುಕುತ್ತಾಳೆ, ಅನ್ಯರನ್ನು ಅರಸುತ್ತಾಳೆ,  ಮದುವೆಯಾದವನು ಅನ್ಯ ಸ್ತ್ರೀಯ ದಾಸನಾಗುತ್ತಾನೆ , ಅಪ್ಪನಾದವನು ಮಕ್ಕಳನ್ನು ಅತ್ಯಾಚಾರ ಮಾಡುತ್ತಾನೆ, ಹೀಗೆ ಸಾವಿರಾರು ತಪ್ಪುಗಳ ಸರದಾರ ಮಾನವನೇ ಆಗಿರುತ್ತಾನೆ.  ಇದಕ್ಕೆಲ್ಲ ಕಾರಣ ನಶಿಸಿಹೋಗುತ್ತಿರುವ ಬಾಂಧವ್ಯಗಳು, ಭಾವನೆಗಳು, ಸಂಬಂಧಗಳು,  ಗೌರವಗಳು.  

ಮನುಷ್ಯ ಎಷ್ಟೇ ಸಂಪಾದಿಸಿದ್ದರೂ,  ಓದಿದ್ದರೂ,  ಸನ್ಮಾನವನ್ನು ಪಡೆದಿದ್ದರೂ, ಸೂಟು ಬೂಟು ಧರಿಸಿ ದೊಡ್ಡ ದೊಡ್ಡ ಸಾಧನೆಗಳನ್ನು ಮಾಡಿದ್ದರೂ ಸಂಸ್ಕಾರ, ಬಾಂಧವ್ಯ,  ಮಾನವ ಮೌಲ್ಯಗಳ ವಿರುದ್ಧವಾಗಿ ಇದ್ದರೆ ಮಾನವನೆಂದು ಹೇಳಿಕೊಳ್ಳಲು ಅರ್ಹರಾಗಿರೋದಿಲ್ಲ. 

ಮುಂದುವರಿದ ಯುಗವೆಂದು ಹೇಳಿಕೊಳ್ಳುತ್ತಿರುವ ಭರಾಟೆಯಲ್ಲಿ ಮುಂದಿನ ದಿನಗಳಲ್ಲಿ ಮಾನವನಿಗೆ ನಾನೊಬ್ಬ ಮಾನವ ಎಂದು ಹೇಳುವುದಕ್ಕೂ ಸಂಶಯಪಡುವ ಸನ್ನಿವೇಶಗಳು ಎದುರಾಗುವ ಸಾಧ್ಯತೆಗಳು ಹೆಚ್ಚು ದೂರವಿಲ್ಲ ಅನಿಸುತಿದೆ.  

ನಮ್ಮ ಮುಂದಿನ ಪೀಳಿಗೆಯಲ್ಲಿ,  ಶಿಕ್ಷಣ ಪದ್ದತಿಯಲ್ಲಿ,  ಸಮಾಜದಲ್ಲಿ ಅನಾಚಾರಗಳು ತೊಲಗಲಿ ಸುಂದರ ಪ್ರಪಂಚ ಸೃಷ್ಟಿಯಾಗಲಿ. ಕತ್ತಲಲ್ಲಿ ನೆತ್ತರು ಹರಿಯುವಾಗ ತಿಳಿದುಕೊಳ್ಳೋದು ಸುಲಭವಲ್ಲ, ಬೆಳಕು ಚೆಲ್ಲಿ ಕಂಡಾಗಲೇ ಗಾಯದ ಪ್ರಮಾಣ ತಿಳಿಯೋದು.  

(ಇಲ್ಲಿ ಬರೆಯುವ ಎಲ್ಲಾ ಕವನ, ಕಥೆಗಳು ಕಾಲ್ಪನಿಕ ಹಾಗು ಈ ಬರಹ ಯಾರಿಗೂ ನೇರ ಮತ್ತು ವಿರುದ್ಧವಾಗಿ ಬರೆದಿರುವುದಿಲ್ಲ.  ಓದುಗರು ಕೇವಲ ಕನ್ನಡ ಅಕ್ಷರಗಳ ಜೋಡಣೆ ಎಂದು ಪರಿಗಣಿಸಿ ಕನ್ನಡ ಭಾಷೆಗೆ ಪ್ರೋತ್ಸಾಹ ಕೊಡಬೇಕಾಗಿ ವಿನಂತಿ )
✍️ಮಾಧವ ನಾಯ್ಕ್ ಅಂಜಾರು 🌹






Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ