(ಲೇಖನ -31)ಮನಸುಗಳು ಕಿರಿದಾಗುತ್ತಿವೆ -ಹೃದಯಗಳು ಕಲ್ಲಾಗುತ್ತಿವೆ
ಮನಸುಗಳು ಕಿರಿದಾಗುತ್ತಿವೆ - ಹೃದಯಗಳು ಕಲ್ಲಾಗುತ್ತಿವೆ
ಪ್ರೀತಿಗಾಗಿ ಬದುಕುವವರು, ಸಮಾಜಕ್ಕಾಗಿ ಬದುಕುವವರು, ಸ್ವಾರ್ಥವಿಲ್ಲದೆ ಬದುಕುವವರು, ತೊಂದರೆಕೊಡುತ್ತಲೇ ಬದುಕುವವರು ನಮ್ಮ ಸುತ್ತಮುತ್ತ ಇರಬಹುದು. ಬದುಕೊಂದು ಸುಂದರ ತೋಟ ಅದರಲ್ಲಿ ಹೂ ಮೂಡಿ ಬರಬೇಕಿದ್ದರೆ ಸುತ್ತಲಿನ ವಾತಾವರಣ ಚೆನ್ನಾಗಿಯೇ ಇರಬೇಕು ಅಥವಾ ಆರೈಕೆ ಚೆನ್ನಾಗಿರಬೇಕು, ಗಿಡಗಳ ಪೋಷಣೆ ಸರಿಯಾಗಿರಬೇಕು. ನಮ್ಮ ಬದುಕು ಕೂಡ ಅದರಂತೆಯೇ ನಾವು ಬೆಳೆದು ಬರುವ ವಾತಾವರಣ, ಸಮಯ, ಸಂಧರ್ಭ, ಸೋಲು, ಗೆಲುವು ಮುಂತಾದವೆಲ್ಲ ಒಬ್ಬ ಮನುಷ್ಯನ ಉನ್ನತಿಗೆ ಅಥವಾ ಅವನತಿಗೆ ಕಾರಣವಾಗುತ್ತದೆ. ವಿಶಾಲ ಹೃದಯ ನಿಮ್ಮಲ್ಲಿದ್ದರೆ ಅದರ ಕೊಡುಗೆ ನಿಮ್ಮ, ತಂದೆ ತಾಯಿಯ, ಗುರು ಹಿರಿಯರ ಆಶೀರ್ವಾದವೇ ಆಗಿರುತ್ತದೆ. ನೀವು ಎಷ್ಟೇ ಕಷ್ಟದಲ್ಲಿದ್ದರೂ ಬೆರೆತು ಖುಷಿಯಾಗಿ ಜೀವನ ಮಾಡುವ ಬುದ್ದಿ ನಿಮ್ಮಲ್ಲಿದ್ದರೆ ಅದು ನಿಮ್ಮೊಬ್ಬರ ಗುಣವಲ್ಲ, ನಿಮಗೆ ಹುಟ್ಟಿದಂದಿನಿಂದ ತಂದೆ ತಾಯಿ, ಬಂಧು ಬಳಗ ನೀಡಿದ ಕೊಡುಗೆಯಾಗಿರುತ್ತದೆ. ಹೌದು ಕೆಲವರಿಗೆ ಅದೆಷ್ಟು ಬುದ್ದಿ ಹೇಳಿದರೂ ಅರ್ಥವೇ ಆಗೋದಿಲ್ಲ, ಒಬ್ಬ ಮನುಜ ತನ್ನದೇ ಬುದ್ದಿಯಲ್ಲಿ ಬದುಕುವವರೆಗೂ ತಾನು ಮಾಡಿದ ಕೆಟ್ಟಕೆಲಸ, ಒಳ್ಳೆಯ ಕೆಲಸಗಳನ್ನು ತುಲನೆ ಮಾಡುವಷ್ಟು ಶಕ್ತಿಯನ್ನು ಸಾಯುವ ವರೆಗೂ ಹೊಂದಿರುವುದಿಲ್ಲ ಅದಕ್ಕೆ ಕಾರಣ ಅವರ ಜೀವನದ ಪ್ರತಿಯೊಂದು ಘಟನೆಗಳು ಅಥವಾ ನೋವುಗಳು. ದೈಹಿಕ ಮತ್ತು ಮಾನಸಿಕವಾಗಿ ಸದೃಢವಾಗಿರುವ ಮನುಜರನ್ನು ಹಾಳುಗೆಡಹುವ ಕೆಲಸವನ್ನು ವಿಕೃತ ಮನಸಿನ ಜನರೇ ಜಾಸ್ತಿ ಮಾಡುತ್ತಾರೆ. ಅದಕ್ಕೆ ಕಾರಣ ಅವರು ಹುಟ್ಟಿಬಂದ ರೀತಿ, ವಾತಾವರಣ. ಉದಾಹರಣೆಗೆ ಒಬ್ಬ ಮನುಷ್ಯ ವೇದಿಕೆಯನ್ನೇ ನೋಡದವ, ವೇದಿಕೆಯಲ್ಲಿ ಮಾತಾಡಿಯೂ ಗೊತ್ತಿಲ್ಲದವ, ಯಾರದೋ ಒಂದು ಆಹ್ವಾನಕ್ಕೆ ತಲೆಬಾಗಿ ವೇದಿಕೆಗೆ ಹೋಗಿ ಎರಡು ಮಾತನ್ನು ಆಡುವಾಗ ಬಾಯಿ ತೊದಲಿ, ನಡುಗುತ್ತಲೇ ಮಾತಾಡಿದಾಗ ಎದುರಲ್ಲಿ ಕುಳಿತ ಕೆಲವು ಜನರು ಹಾಸ್ಯ ಮಾಡಬಹುದು, ಬಾಯಿಗೆ ಬಂದದ್ದು ಬೈಯಬಹುದು, ಇಲ್ಲ ಸಲ್ಲದ ಕೆಟ್ಟ ಶಬ್ದ ಬಳಸಿ ಹೀಯಾಳಿಸಬಹುದು ಅಥವಾ ಸಂಪೂರ್ಣ ಬೊಬ್ಬೆ ಹೊಡೆದು ಅವಮಾನಿಸಲೂಬಹುದು. ವೇದಿಕೆಯಲ್ಲಿದ್ದವನ ಧೈರ್ಯವನ್ನು ಇನ್ನಷ್ಟು ಕುಗ್ಗಿಸಲೂಬಹುದು. ನೀವು ಕೆಲವು ಸಭಾ ಕಾರ್ಯಕ್ರಮದಲ್ಲಿ ಅಥವಾ ದಿನನಿತ್ಯ ಸಂಧರ್ಭದಲ್ಲಿ ನೋಡಿದ್ದಿರಬಹುದು. ಇದರಲ್ಲಿ ಒಂದು ವಿಷಯ ಅರ್ಥ ಮಾಡಿಕೊಳ್ಳಬಹುದು. ವೇದಿಕೆಗೆ ಆಹ್ವಾನಿಸಿದ ವ್ಯಕ್ತಿ ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿರಬಹುದು, ವೇದಿಕೆಗೆ ಬಂದಿರುವ ವ್ಯಕ್ತಿ ವಾಕ್ಚತುರ್ಯ ಹೊಂದದೆ ಇನ್ನಿತರ ಸಾಧನೆ, ಸದ್ಗುಣ ಹೊಂದಿರುವ ವ್ಯಕ್ತಿ ಆಗಿರ್ಬಹುದು. ಅಲ್ಲೊಬ್ಬ ಪ್ರೇಕ್ಷಕ ಅಥವಾ ಯಾವುದೇ ವ್ಯಕ್ತಿ ಅವನನ್ನು ಹೀಯಾಳಿಸಿದರೆ ಅದು ಅವನ ಬುದ್ದಿಯನ್ನು ಗುಣವನ್ನು ವ್ಯಕ್ತಪಡಿಸಿದಂತೆ ಆಗುತ್ತದೆ. ಹೌದು ಪ್ರಪಂಚದಲ್ಲಿ ಎಲ್ಲರೂ ಒಳ್ಳೆಯವರಲ್ಲ ಹಾಗಂತ ಎಲ್ಲರೂ ಕೆಟ್ಟವರೂ ಅಲ್ಲ ಆದರೆ ಅವರವರ ಯೋಗ್ಯತೆ ಒಂದೊಂದು ಸಂಧರ್ಭದಲ್ಲಿ ವ್ಯಕ್ತವಾಗುತ್ತದೆ.
ನಿಮ್ಮನ್ನು ಅವಮಾನಿಸಿದವನ ಬುದ್ದಿ, ನಿಮ್ಮನ್ನು ಪ್ರೋತ್ಸಾಹ ಮಾಡಿದವನ ಬುದ್ದಿ ಬೇರೆ ಬೇರೆಯಾಗಿರುತ್ತದೆ ಅದು ಹೇಗೆಂದರೆ ತೋಟದಲ್ಲಿ ಕೆಲವರು ಮುಳ್ಳಾಗಿ ಬೆಳೆದರೆ ಕೆಲವರು ಹೂವಾಗಿ ಬೆಳೆದಂತೆ. ಮುಳ್ಳಾಗಿ ಬೆಳೆದವರು ಯಾವಾಗಲೂ ಚುಚ್ಚುತ್ತಾರೆ, ಹೂವಾಗಿ ಬೆಳೆದವರು ಎಲ್ಲರನು ಆಕರ್ಷಿಸುವರು, ಪ್ರೀತಿಯಿಂದ ಬದುಕುವರು.
ಮನಸುಗಳು ಕಿರಿದಾಗುತ್ತಿವೆ ಹೂವಿನಂತಹ ಜನರು ನಶಿಸಿ ಹೋಗುತ್ತಿರುವಾಗ -ಹೃದಯಗಳು ಕಲ್ಲಾಗುತ್ತಿವೆ ನಿಮ್ಮ ಸುತ್ತಮುತ್ತಲಲಿ ಮುಳ್ಳಿನಂತಹ ಜನರು ಹುಟ್ಟುತ್ತಿರುವಾಗ. ಹಾಗಂತ ಹೂವು ಯಾವತ್ತೂ ಹಾವಾಗೋದಿಲ್ಲ, ಮುಳ್ಳು ಯಾವತ್ತೂ ಹೂವಾಗೋದಿಲ್ಲ. ನೋವಾದಾಗ ಹೂವಂತಹ ಮನಸಿನ ಜನರೇ ಆಸರೆ ಕೊಡುತ್ತಾರೆ ಒಂದು ಸುಂದರ ಹೂವಾಗಿ ಬದುಕುವ ರೀತಿ ಬೆಳೆಸಿಕೊಂಡಲ್ಲಿ. ನಿಮ್ಮನು ಕಾಯುವ ದೇವರು ಕಾಯುತ್ತಿರುತ್ತಾನೆ. ಒಂದು ಮುಳ್ಳಾಗಿ ಬದುಕುವ ಹಂಬಲವಿದ್ದರೆ ಮುಳ್ಳು ಮುಳ್ಳಿನಿಂದಲೇ ಸಾಯುತ್ತಿರುತ್ತಾನೆ.
ನಮ್ಮ ಮಕ್ಕಳಿಗೆ, ವಾತಾವರಣಕ್ಕೆ ನಾವೊಂದು ಹೂವಾಗಿ ಇರುವಂತೆ ಆ ದೇವರು ಹಾರೈಸಲಿ, ಸಮಾಜದಲ್ಲಿ ನಿಮ್ಮಂತಹ ಹೂವುಗಳು ಬೆಳೆದುಬರಲಿ. ಲೋಕದಲ್ಲಿ ಸದಾ ಶಾಂತಿ ತುಂಬಲಿ.
✍️ಮಾಧವ ನಾಯ್ಕ್ ಅಂಜಾರು 🌹🙏
beautifully written :)
ReplyDelete