(ಲೇಖನ -60) ಆಡಂಬರವಾಗುತ್ತಿರುವ ಹಬ್ಬ ಹರಿದಿನಗಳು! ದೇವರೊಬ್ಬ ನಾಮ ಹಲವು
(ಲೇಖನ -60) ಆಡಂಬರವಾಗುತ್ತಿರುವ ಹಬ್ಬ ಹರಿದಿನಗಳು! ದೇವರೊಬ್ಬ ನಾಮ ಹಲವು, ನಾವು ಪೂಜಿಸಿ, ಆರಾಧಿಸಿ, ಕೈಮುಗಿದು ಬೇಡಿಕೊಳ್ಳುವ ದೇವರನ್ನು ಗೊತ್ತಿದ್ದು, ಗೊತ್ತಿಲ್ಲದೇ ಆಡಂಭರದ ಪ್ರಪಂಚಕ್ಕೆ ಕೊಂಡೋಯುತ್ತಿದ್ದೇವೆ. ಮನುಜ ದಿನದಿಂದ ದಿನಕ್ಕೆ ಬದಲಾಗುತ್ತಾ, ತನಗಿಷ್ಟದಂತೆ ಸಂಸ್ಕಾರ, ಸಂಸ್ಕೃತಿಯ ನಿಜ ರೂಪವನ್ನು ಬದಲಾಯಿಸಿ ಹೊಸ ಹೊಸ ಆಚಾರಗಳನ್ನು ಸೃಷ್ಟಿಸಿ ತನ್ನ ಹೊಟ್ಟೆ ತುಂಬಿಸಲು, ಅತಿಯಾದ ಹಣ ಸಂಪಾದಿಸಲು ನಂಬಿಕೆಯನ್ನು ಅಸ್ತ್ರವಾಗಿಸಿ ಕೆಲವರು ಜೀವಿಸುತಿದ್ದರೆ, ಕೆಲವರು ಇನ್ನಿಲ್ಲದ ಕಥೆಗಳನ್ನು ಸೃಷ್ಟಿಸಿ ದೇವರೆಂಬ ನಂಬಿಕೆಯನ್ನು ನಂಬಿಕಸ್ತನ ಮೇಲೆಯೇ ಪ್ರಯೋಗ ಮಾಡಿ ವಿಲಾಸಿ ಜೀವನವನ್ನು ಮಾಡುತ್ತಿರುವವರನ್ನು ನೀವು ನೋಡುತ್ತಲೇ, ಪೋಶಿಸುತ್ತ, ಜೀವಿಸುತ್ತಿರುವ ಕಾಲವಾಗಿ ಹೋಗಿದೆ.
ಹೌದು, ದೇವರೆಂದರೆ ನಮ್ಮ ಜೀವನವನ್ನು, ಜೀವಿತವನ್ನು ಯಾವುದೇ ತೊಂದರೆಗಳು ಇಲ್ಲದೆ, ತೊಂದರೆಗಳು ಬಂದಾಗ ಎದುರಿಸಲು ಶಕ್ತಿಕೊಡು, ದೈರ್ಯವಾಗಿ ಬದುಕುವ ಮತ್ತು ಹಣ ವಂತ, ಗುಣವಂತ, ಆರೋಗ್ಯವಂತನನ್ನಾಗಿ, ರಕ್ಷಣೆ ಮಾಡು ಎನ್ನುವ ಬೇಡಿಕೆಗಳನ್ನು ನಾವುಗಳು ನಂಬಿರುವ ಶಕ್ತಿ ಅಥವಾ ದೇವರುಗಳ ಮುಂದಿಡುತ್ತೇವೆ. ಆದರೆ ನಂಬಿಕೆಗಳು ಪ್ರಾಮಾಣಿಕವಾಗಿಲ್ಲದಿದ್ದರೆ ಆಡಂಬರದ ದಾರಿಗೆ ಹೋಗಿಬಿಡುತ್ತದೆ. ಯಾವುದೇ ಹಬ್ಬಗಳು, ಅಥವಾ ದೈವ ದೇವರುಗಳ ಕೆಲಸಗಳು ಕೆಲವೊಂದು ಕಡೆ ಪೈಪೋಟಿಯಲ್ಲಿ ತೊರ್ಪಡಿಕೆಗೆ ನಡೆಯುತ್ತಿದೆ. ಇಂತಹ ಆಚರಣೆಗಳನ್ನು ಯಾರಿಂದಲೂ ನಿಲ್ಲಿಸಲು ಸಾಧ್ಯವಿಲ್ಲ ಮತ್ತು ತುಂಬಾ ವ್ಯವಸ್ಥಿತವಾಗಿ ನಡೆಯುತ್ತಿರುವ ಜಾಲಕ್ಕೆ ಹೆಚ್ಚಿನ ಜನರು ಬೀಳುತ್ತಾರೆ, ಮತ್ತು ದಾಸರಾಗಿಬಿಡುತ್ತಾರೆ. ಒಂದು ಕಾಲದಲ್ಲಿ ತಂತ್ರ, ಮಂತ್ರಗಳನ್ನು ಜನರ ಒಳಿತಿಗಾಗಿ ಬಳಸುತಿದ್ದರೆ, ಇಂದು ಹಣಕ್ಕಾಗಿ ಕೆಲವರು ಉಪಯೋಗಿಸುತ್ತಿದ್ದಾರೆ. ಹಾಗೆಯೆ ಇನ್ನು ಕೆಲವರು ಎಲ್ಲಾ ಸುಳ್ಳು ಎಂಬ ವಾದಗಳನ್ನು ಮಾಡುತ್ತ, ದೇವರೇ ಇಲ್ಲ ಹೇಳುತ್ತಾ, ಎಲ್ಲವನ್ನೂ ಬದಿಗೊತ್ತಿ, ಸಂಸಾರ, ಸಂಸ್ಕಾರ, ಸಂಸ್ಕೃತಿ, ನಂಬಿಕೆಗಳನ್ನು ಗಾಳಿಗೆ ತೂರಿ ಹೆಣವಾಗುವವೆರೆಗೂ ಹಣದ ಕಂತೆಗಳನ್ನು ಕಟ್ಟಿಡುತ್ತಾ ಸಮಾಜವನ್ನು ಒಂದಲ್ಲ ಒಂದು ರೀತಿಯಲ್ಲಿ ಕೊಳ್ಳೆಹೊಡೆಯುತ್ತಾ ಬದುಕುತಿದ್ದಾರೆ. ನಾಸ್ತಿಕ ಮತ್ತು ಆಸ್ತಿಕರ ವಿಚಾರಗಳು ಬೇರೆ ಬೇರೆಯಾದರೂ ಹೆಚ್ಚಿನ ವಿಷಯಗಳಲ್ಲಿ ಕೊನೆಗೆ ಹಣದ ವಿಚಾರದಲ್ಲಿಯೇ ಒಳಗೊಂಡಿರುತ್ತದೆ. ಸ್ವಚ್ಛ ಮನೋಭಾವದ ಜನರ ಸಂಖ್ಯೆ ಬಹಳ ವಿರಳವಾಗಿ ಹೋಗುತ್ತಿದೆ.
ಬಹಳ ಹಿಂದಿನ ಕಾಲದಿಂದಲೂ ಅಮಾಯಕರ ಭಯ ಭಕ್ತಿಯನ್ನು, ದುರುಪಯೋಗ ಮಾಡಿ ಹಣ ಗಳಿಸಿದವರೇ ಹೆಚ್ಚು. ಪೂಜೆ, ಸೇವೆಗಳನ್ನು ವ್ಯಾಪಾರವಾಗಿಸಿ ದೇಣಿಗೆಗಳನ್ನು ಪಡೆದುಕೊಂಡು ಹಂಚಿ ತಿಂದ ಜನಗಳೇ ಜಾಸ್ತಿ. ಹಲವು ಜಾತಿಗಳನ್ನು ಹುಟ್ಟುಹಾಕಿ, ಒಬ್ಬರನೊಬ್ಬರನ್ನು ಕೀಳೆಂದು ಹೇಳುತ್ತಾ ಧನರಾಶಿಯನ್ನು ತುಂಬಿಸಿಕೊಂಡ ಜನಗಳು ಈ ಹಿಂದಿನಿಂದಲೂ ಇಂದಿಗೂ ಬೆವರಿಲ್ಲದ ದುಡಿಮೆಯಲ್ಲಿ ಜೀವನ ಮಾಡುತ್ತಿದ್ದಾರೆ. ಇಂದಿಗೂ ನೀವು ನೋಡುತ್ತಿರಬಹುದು, ಸಾಮಾಜಿಕ ಜಾಲತಾಣ, ದಿನಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ಎಗ್ಗಿಲ್ಲದೇ ಜಾಹಿರಾತುಗಳನ್ನು ಹಾಕಿ, ಕೋಟಿಗಟ್ಟಲೆ ಹಣವನ್ನು ಮಾಡಿದ ಉದಾಹರಣೆಗಳು ಎಸ್ಟಿವೆ!
ಕೆಲವೊಂದು ಉದಾಹರಣೆಗಳು, ವಾಸ್ತುವೆಂಬ ಶಬ್ದದ ವಿಚಾರದಲ್ಲಿ ಅದೆಷ್ಟು ಜನರು ಸಾಮಾನ್ಯ ಜನರನ್ನು ಮೋಸಗೋಳಿಸಿದ್ದಾರೆ! ನಾಗದೇವರುಗಳ, ದೈವ ದೇವರುಗಳ, ಕಾಡು, ಊರಿನ ದೇವರುಗಳ ಹೆಸರಲ್ಲಿ ಹೆದರಿಕೆಯನ್ನು ಹುಟ್ಟಿಸಿ, ನಂಬಿಸಿ, ಕೊನೆಗೆ ಹೋಮ ಹವನಗಳ ಅವಶ್ಯಕತೆ ಇದೆಯೆಂದು ಹೇಳಿ ಲಕ್ಷಗಟ್ಟಲೆ ಹಣ ಲೂಟಿ ಮಾಡುವ ಪ್ರಸಂಗಗಳು ನಮ್ಮ ಕಣ್ಣೆದುರಿಗೆ ನಡಿತಾನೆ ಇದೆ. ಇದಕ್ಕೇನು ತೆರಿಗೆ ಇಲ್ಲ, ಬರೇ ಸುಳ್ಳು ಮಾತು ಮತ್ತು ಚತುರತೆ ಇದ್ದರೆ ಸಾಕು. ಮೋಸ ಹೋಗುವವರೇ ಹೆಚ್ಚು, ತಮ್ಮ ಮೇಲೆ ನಂಬಿಕೆ ಇರದವರು ಇನ್ನೊಬ್ಬರ ಮನೆಯ ಗುಡಿ ಸರಿಮಾಡಿಕೊಡಲು ಹೋಗುವವರು ಅಲ್ಲಲ್ಲಿ ಕಾಣಬಹುದು. ಸಾಮಾನ್ಯವಾಗಿ ಜೀವನದಲ್ಲಿ ಸಮಸ್ಯೆಗಳು ಬಂದಾಗ ದೇವರ ಗುಡಿಗೆ ಅಥವಾ ಮಸೀದಿ ಮಂದಿರಕ್ಕೆ ಹೋಗುವುದು ಸಹಜ, ಆದರೆ ಹೋದಾಗ ದೇವರ ಮೇಲೆ ಭರವಸೆಯನ್ನು ಬಿಟ್ಟು ಅಲ್ಲಿರುವ ಸೇವಕರ ಮಾತಿಗೆ ಮಾರುಹೋಗಿ ನಿಮ್ಮ ಕಷ್ಟವನ್ನು ಇನ್ನಷ್ಟು ಹೆಚ್ಚು ಮಾಡಿಕೊಳ್ಳಲು ಕಾರಣರಾಗುತ್ತೀರಿ. ಉದಾಹರೆಣೆಗೆ, ನಿಮಗಾಗಿ ಪ್ರಾರ್ಥನೆಮಾಡಿ ನಿಮ್ಮ ಸಮಸ್ಯೆಯನ್ನು ದೇವರಿಗೆ ಹಸ್ತಾಂತರಿಸುವ ಕೆಲಸಕ್ಕೆ ಸೇವಕನೊಬ್ಬ ನಿಮ್ಮ ಕಿಸೆಯೊಳಗೆ ಕೈ ಹಾಕಿ ಒಂದು ಅಥವಾ ಇನ್ನೊಂದು ಕಾರಣ ಹೇಳಿ ಹಣ, ಆಸ್ತಿ ರೂಪದಲ್ಲಿ ಕಾಣಿಕೆ ಅಥವಾ ಹರಕೆ ಮಾಡಿಸಿಕೊಳ್ಳುವ ಪ್ರವೃತ್ತಿ ನಿಮಗೆ ಗೊತ್ತಿರುವಂತೆಯೇ ಮಾಡಿ ಬಿಡುವ ಕೆಲವು ಜನರು. ಇಲ್ಲಿ ನಾವುಗಳು ಗಮನಿಸಬೇಕಾದ ವಿಷಯಗಳು, ನಿಮ್ಮ ತಲೆಯೊಳಗೆ ಇಲ್ಲದ ಭಯವನ್ನು ತುಂಬಿ ಸಾಧ್ಯವಿಲ್ಲದಷ್ಟು ಹೊರೆಯನ್ನು ತೆಗೆದುಕೊಂಡು ಮತ್ತೆ ಮನೆಗೆ ಬಂದು ಅಲ್ಲಿಲ್ಲಿ ಹಣ ಒಟ್ಟು ಮಾಡಿ ಮಾಡುವ ಯಾವುದೇ ಸೇವೆ, ಅಥವಾ ಹೋಮ ಹವನ, ಹರಕೆಗಳು ತಾತ್ಕಾಲಿಕ ನೆಮ್ಮದಿ ತರಬಹುದು, ಆದರೆ ನಿಮಗೆ ಅರಿವಿಲ್ಲದೆ ಇನ್ನಷ್ಟು ಸಮಸ್ಯೆಗೆ ಬೀಳುವ ಸಾಧ್ಯತೆಗಳೇ ಹೆಚ್ಚು. ನಾವಿಲ್ಲಿ ಎಲ್ಲವನ್ನೂ ಅಲ್ಲಗಳೆಯಬೇಕೆಂದೀನಿಲ್ಲ, ಭಯ ಭಕ್ತಿ ನಿಮ್ಮಲ್ಲಿ ಇರಲಿ, ಸೇವೆಗಳೂ ನಿಮ್ಮಲ್ಲಿ ಇರಲಿ, ಸಾಲಮಾಡಿ, ಸಾಧ್ಯತೆ ಇಲ್ಲದೇ ಯಾವುದೇ ಧಾರ್ಮಿಕ ಚಟುವಟಿಕೆ ಮಾಡಿ ಇನ್ನಷ್ಟು ಸಾಲಗಾರನಾ ಗಬೇಡ, ಯಾವ ದೇವರು ಕೂಡ ನಿನ್ನಲಿರುವ ಶಕ್ತಿಯನ್ನು ನೋಡುವುದಿಲ್ಲ, ಭಕ್ತಿಯನ್ನು ಮಾತ್ರ ನೋಡುತ್ತಾನೆ. ಸೇವೆಗಳನ್ನು ಮಾಡುವುದಿದ್ದರೆ ಬಡವ ಬಲ್ಲಿದನಿಗೆ ಮಾಡು, ಸೇವೆ ಗಳನ್ನು ಮಾಡುವುದಿದ್ದರೆ ರೋಗಿಗಳಿಗೆ, ಸಮಾಜಕ್ಕಾಗಿ ಮಾಡು, ಸಮಾಜ ನಿನ್ನನ್ನು ಗುರುತಿಸಲು ಎಲ್ಲರನ್ನೂ ಸೇರಿಸಿ ಆಡಂಭರದ ದಾರಿಗೆ ಹೋಗಿ ಶಾಲು ಹೊದಿಸಿಕೊಳ್ಳುವುದಕ್ಕಿಂತ ನಿಜವಾದ ದೇವರು ಬಯಸುವ ಕೆಲಸವನ್ನು ಸಾಧ್ಯವಾದಷ್ಟು ಮಾಡು ಅವಾಗ ಭೂಲೋಕದಲ್ಲಿ ಇರುವ ಪ್ರತೀ ದೇವರು ನಿಮ್ಮನ್ನು ಹಾರೈಸಿ ರಕ್ಷಣೆ ಮಾಡುತ್ತಿರುತ್ತಾನೆ.
ವಶೀಕರಣ, ಆಸ್ತಿ ಕಲಹ, ನೆಮ್ಮದಿ ಬರಲು ಅಲ್ಲಲ್ಲಿ ಬೋರ್ಡು ಗಳನ್ನು ಹಾಕಿಕೊಂಡು ಮೈ ಮುರಿದು ಜೀವನ ಮಾಡದ ಅದೆಷ್ಟು ಜನರು ತನ್ನ ಬೇಳೆ ಬೇಯಿಸಿಕೊಳ್ಳುತ್ತಾರೆ, ನಾಗ ಬೀದಿ ಬದಲಾವಣೆ, ಮೃತ್ಯುಂಜಯ ಹೋಮ, ಬ್ರಹ್ಮ ಕಲಶ ಗಳ ಬಿತ್ತಿ ಪತ್ರಗಳನ್ನು ಹಂಚಿ ನಿರ್ದಿಷ್ಟ ಜನಗಳು ಹಂಚಿ ತಿನ್ನುವ ಕೆಲಸಗಳು ಕೆಲವು ಕಡೆ ನಡೆಯುತ್ತಿರಬಹುದು. ಭಕ್ತರು ಜಾಗ್ರತರಾಗಿ, ನಿಮ್ಮ ಭಕ್ತಿ ದೇವರು ಮೆಚ್ಚುವಂತೆ ಇರಲಿ, ನಿಮ್ಮ ಸೇವೆಗಳು ಪ್ರತಿಯೊಂದು ಜೀವಿಯ ಮೇಲೆ ಇರಲಿ. ಪ್ರಾಣಿ ಪಕ್ಷಿ, ಗಿಡ ನದಿಗಳಲ್ಲಿ ದೇವರನ್ನು ಕಾಣುವ ನಾವೆಲ್ಲರೂ ಮೋಜು, ಮೋಸಕ್ಕೆ ಬಲಿಯಾಗದೆ ನಿಜವಾದ ದೇವರ ಸೇವೆಯನ್ನು ಮರೆಯದಿರೋಣ.
✍️ಮಾಧವ ಅಂಜಾರು.
Comments
Post a Comment