(ಲೇಖನ -15)ದೇವರು ಕೊಟ್ಟ ವರ...!

ದೇವರು ಕೊಟ್ಟ ವರ,

   ಮಾನವನಾಗಿ ಹುಟ್ಟುವುದೇ ದೇವರು ಕೊಟ್ಟ ವರ, ಸಕಲ ಜೀವ ರಾಶಿಗಳಲ್ಲಿ ಮಾನವ ಜೀವ  ಬುದ್ದಿವಂತನೆಂದು ಹೇಳಿಕೊಳ್ಳುತ್ತಿದ್ದರೂ, ಆತನ ಬುದ್ದಿವಂತಿಕೆ,ಉದ್ದಾರ, ಸರ್ವ ನಾಶಕ್ಕೂ ಕಾರಣವಾಗುತ್ತಿದೆ.  ದೇಶ ವಿದೇಶಗಳಲ್ಲಿ ಬೆಳೆದು ಅಂತ್ಯದಲ್ಲಿ ದುರ್ಜನರಾಗಿ ಅಥವಾ ಸಜ್ಜನರಾಗಿ ಸಾಯುತ್ತೇವೆ. ಬದುಕಿನ ಪ್ರತಿಯೊಂದು ಸಂಧರ್ಭದಲ್ಲಿ ಹೊಸ ಪಾಠವನ್ನು ಕಲಿಯುತ್ತೇವೆ. ಕೆಲವರು  ತಪ್ಪುಗಳನ್ನು ಮಾಡಿ ಶಿಕ್ಷೆ ಅನುಭವಿಸಿದರೆ, ಕೆಲವರು ತಪ್ಪುಗಳನ್ನೇ ಮಾಡದೇ ಶಿಕ್ಷೆಗೆ ಒಳಗಾಗುತ್ತಾರೆ. ಒಟ್ಟಾರೆ ದೇವರು ಕೊಡುವ ಶಿಕ್ಷೆಗಿಂತ ಜಾಸ್ತಿ ಜನರಿಂದ ಜನರೇ ತೊಂದರೆ, ಮತ್ಸರ, ಮೋಸ ಗಳನ್ನು ಮಾಡಿ ಸರಿಯಾಗಿ ಜೀವಿಸಲಾಗದಷ್ಟು ಕೆಟ್ಟದಾಗಿ ಬದುಕುತ್ತಾರೆ.

        ಜೀವನದಲ್ಲಿ ನಡೆಯುವ ಅನಿರೀಕ್ಷಿತ ಘಟನೆ ಮುಂದಿನ ಜೀವನಕ್ಕೆ ಮತ್ತಷ್ಟು ಕಷ್ಟಗಳನ್ನು ತಂದೊಡ್ಡಬಹುದು, ಅಥವಾ ಸವಾಲಾಗಿ ಸ್ವೀಕರಿದವರು ಹೊಸ ಜೀವನ ಮಾಡಬಹುದು, ಅಥವಾ ಭಯ, ಉದ್ವೆಗ, ತಪ್ಪು ನಿರ್ಧಾರಕ್ಕೂ ದಾರಿ ತೋರಿಸಬಹುದು, ಯಾರ ಬದುಕು ಯಾವ ದಿಕ್ಕಿನಲ್ಲಿ ಹೋಗುತ್ತದೆ ಅನ್ನುವುದು ನಿಘುಡವಾಗಿರುತ್ತದೆ. ನಿಮ್ಮ ಕಣ್ಣಲ್ಲಿ ನೋಡುವ ಎಲ್ಲಾ ದೃಶ್ಯಗಳನ್ನು ನಂಬುವುದು ಕಷ್ಟ,  ಪ್ರತಿಯೊಂದು ಚಿತ್ರ, ಸಂದರ್ಭ, ದೃಶ್ಯಗಳಿಗೆ, ವಿವಿಧ ಕಾರಣಗಳು ಇರುತ್ತವೆ, ಆದರೆ ಆ ಕಾರಣಗಳು ಕೆಲವು ನ್ಯಾಯೋಚಿತ ಆಗಿದ್ದರೆ ಕೆಲವು ಉದ್ದೇಶಪೂರ್ವಕ ಅನ್ಯಾಯದಿಂದ ತುಂಬಿ ತುಳುಕುತಿರುತ್ತದೆ. ಮನುಷ್ಯನು ತನ್ನ ಆರೋಗ್ಯ, ಸಂಪತ್ತು, ವಿದ್ಯೆ, ಬುದ್ದಿ ಸರಿಯಿರುವಾಗ ಅತೀ ಆಸೆಗಾಗಿ ಅನ್ಯರನ್ನು ಬಲಿಪಶುಮಾಡಿಕೊಳ್ಳುತ್ತಾನೆ, ಅತೀ ಸ್ವಾರ್ಥ ಮನೋಭಾವನೆ ಹೊಂದಿರುವ ಪ್ರತಿಯೊಬ್ಬ ಮನುಜ ಒಂದಲ್ಲ ಒಂದು ರೀತಿಯಲ್ಲಿ ಅನ್ಯರ ಜೀವನದಲ್ಲಿ ಕೆಟ್ಟ ಪ್ರಭಾವ ಬೀರುತ್ತಾನೆ.

        ಅಧಿಕಾರದ ಆಸೆ, ಹಣದ ಆಸೆ, ಸಂಪತ್ತಿನ ಆಸೆಗಾಗಿ ಜೀವನಪೂರ್ತಿ ಶ್ರಮಪಡುವ ಮನುಜರು, ತನ್ನ ಕೈ ಕಾಲಲ್ಲಿರುವ ಬಲವಿರುವ ತನಕ ಹೋರಾಟ ಮಾಡುತ್ತಾರೆ, ತಾನು ಮಾಡಿದ ಸಂಪತ್ತು ಅಡ್ಡದಾರಿಯಲ್ಲಿ ಹೊಂದಿದ್ದರೆ ಕೊನೆಕಾಲದಲ್ಲಿ ಹೆಚ್ಚಿನವರು ಕಣ್ಣೀರುಹಾಕಿ ಜೀವ ಬಿಡುತ್ತಾರೆ, ಪಶ್ಚಾತಾಪಪಡುತ್ತಾರೆ. ಆದರೆ ತನ್ನ ಬದುಕಿನಲ್ಲಿ ಸತ್ಯಕ್ಕೆ ಬೆಲೆಕೊಟ್ಟು ಬದುಕಿರುವವನು ಸಾವು ಬಂದರೂ ಸಾವನ್ನು ಸಂತೋಷವಾಗಿ ಸ್ವೀಕರಿಸುತ್ತಾನೆ, ಅವನ ಬದುಕಲ್ಲಿ ಯಾವುದೇ ಸಂಧರ್ಭ ಬಂದರೂ ಧೈರ್ಯವಾಗಿ, ಧೀರನಾಗಿ ಬದುಕುತ್ತಾನೆ. ಹೆಚ್ಚೇನು ಹೇಳಬೇಕಾಗಿಲ್ಲ,  ಬದುಕಿರುವಷ್ಟು ಕಾಲ ಅನ್ಯರಿಗೆ ಉಪದ್ರವಿಸದಂತೆ ಬದುಕು, ಬದುಕಿರುವಷ್ಟು ಕಾಲ ಅನ್ಯರಿಗೆ ಸಾಧ್ಯವಾದಷ್ಟು ಉಪಕರಿಸಿ ಬದುಕು. ನಿನ್ನ ಸೇವಾ ಮನೋಭಾವನೆಯಲ್ಲಿ ಮನುಷ್ಯನನ್ನು ಒಂದೇ ದೃಷ್ಟಿಯಲ್ಲಿ ನೋಡುವಂತಿರಲಿ, ಇಲ್ಲಿ ಹುಟ್ಟಿ ಬಂದವರು ಜೀವಿಸಲಿಕ್ಕಾಗಿ ಹೊರತು ವರ್ಣ, ಧರ್ಮ, ಬೇಧ ಭಾವನೆಗಳಿಗೆ ಒಳಗಾಗಿ, ಅಧರ್ಮ ಯುದ್ಧವನ್ನು ಮಾಡಿ ಒಬ್ಬೊರನೊಬ್ಬರನು ಕೆಡವಿ ಬದುಕಲು ಅಲ್ಲ.

        ಇಂದು ನಿನ್ನಲಿರುವ ಶಕ್ತಿ ನಾಳೆ ಇಲ್ಲವಾಗಬಹುದು, ಇಂದು ನಿನ್ನಲಿರೋ ಯುಕ್ತಿ ನಾಳೆ ಇಲ್ಲವಾಗಬಹುದು, ಇಂದು ನಿನ್ನಲಿರೋ ಹಣ, ಜನ ನಾಳೆ ಇಲ್ಲವಾಗಬಹುದು. ನೀನೇನು ಸಂಪಾದಿಸಿದರೂ ನಾಳೆ ಇಲ್ಲವಾಗುತ್ತದೆ, ಆದರೆ ನೀನು ನಿನ್ನ ಜೀವನದಲ್ಲಿ ಮಾಡಿದ ಸತ್ಕಾರ್ಯ ನೀನು ಜೀವಿಸಿರುವಾಗ ಖುಷಿಯನ್ನು ಕೊಡುತ್ತದೆ ಅಷ್ಟೆ ಹೊರತು ನಿನಗೆ ನಷ್ಟವನ್ನ ಕೊಡುವುದಿಲ್ಲ.

           ಇಂದಿನಿಂದ ಸುಂದರ ಬದುಕು ಆರಂಭಿಸು, ಆಗಿರುವುದನ್ನು ಮರೆತುಬಿಡು, ಭವಿಷ್ಯದ ಬದುಕು ನಿನ್ನ ಕೈಲಿ ಇಲ್ಲ, ನಾಳೆಯ ಭರವಸೆ ನಿನಗಿರಲಿ!

          

                    


                ✍️ಬರಹ : ಮಾಧವ. ಕೆ. ಅಂಜಾರು.

        

     

       





 




Comments

Post a Comment

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ