(ಲೇಖನ -16)ಪಾಪ - ಪುಣ್ಯ - ಕರ್ಮ

 ಪಾಪ - ಪುಣ್ಯ - ಕರ್ಮ

      ತಿಳಿದು ಮಾಡುವ ತಪ್ಪು, ಮೋಸ, ವಂಚನೆ, ದ್ರೋಹ, ಅನಾಚಾರ, ಅತ್ಯಾಚಾರ, ಕೊಲೆ, ದರೋಡೆ, ಸುಳ್ಳು, ಹಿಂಸೆ ಅಧರ್ಮ ಮತ್ತು ವಿಕೃತಿಯ ಕೆಲಸಗಳು ಪಾಪದ ಪಟ್ಟಿಯಾದರೆ, ಈ ಪಾಪದ ಪಟ್ಟಿಗೆ ಇಂದಿನ ದಿನಗಳಲ್ಲಿ ಹೆಚ್ಚಿನ ಜನರು ಸೇರಿಕೊಳ್ಳುತ್ತಿದ್ದಾರೆ. ಇದು ಬಹಳ ಆತಂಕಕಾರಿಯಾಗಿದ್ದರೂ, ವಾಸ್ತವ ಸ್ಥಿತಿ ಮತ್ತು  ಸಜ್ಜನರಾಗಿ ಬಾಳುವ ಜನರಿಗೆ ಸವಾಲು ಕೂಡ. ದಿನ ಕಳೆದಂತೆ ಗೌರವ, ಮಾನ, ಮರ್ಯಾದೆ, ಎಲ್ಲವನ್ನೂ ಮರೆತು ಬದುಕುವ ಜನರು ಹೆಚ್ಚುತಿದ್ದಂತೆ ಸಮಾಜದಲ್ಲಿ ಕಲಹ, ದ್ವೇಷ, ಹೊಡೆದಾಟ, ಎಲ್ಲವೂ ಹೆಚ್ಚಾಗುತ್ತಿದೆ. ಹೆಚ್ಚು ತಿಳಿಯಬೇಕಿದ್ದರೆ, ದಿನ ಬಿಡದೆ ದಿನಪತ್ರಿಕೆಯಲ್ಲಿ ಬರುತ್ತಿರುವ ವಿವಿಧ ಸುದ್ದಿಗಳು, ಅಥವಾ ನಿಮ್ಮ ಕಣ್ಣ ಮುಂದೆ ನಡೆಯುತ್ತಿರುವ ಅದೆಷ್ಟೋ ನಿದರ್ಶನಗಳು.ಒಂದಲ್ಲ ಎರಡಲ್ಲ, ಒಂದೂವರೆ ವಯಸ್ಸಿನ ಕೂಸಿನಿಂದ ಹಿಡಿದು ವೃದ್ದೆಯನ್ನು ಕೂಡ ಬಿಡದೆ ನಡೆದಿರುವ ಅತ್ಯಾಚಾರಗಳು, ಆಸ್ತಿಗಾಗಿ ಅಣ್ಣನ ಕೊಲೆ, ತಮ್ಮನ ಕೊಲೆ, ತಾಯಿಯ ಕತ್ತು ಹಿಸುಕಿದ ಮಕ್ಕಳು, ಮಕ್ಕಳಿಗೆ ವಿಷ ಉಣಿಸಿ ಅನ್ಯ ಪುರುಷರೊಂದಿಗೆ ಓಡಾಟ, ತಂದೆಯೇ ಮಗಳನ್ನು ಅತ್ಯಾಚಾರಗೊಳಿಸಿದ ಘಟನೆಗಳು, ಮಕ್ಕಳನ್ನೇ ತಂದೆ ಮದುವೆಯಾದ ಘಟನೆ, ತಾಯಿಯೇ ಮಗಳನ್ನು ವೇಶ್ಯೆ ಯಾಗಿ ದುಡಿಯಲು ಸಹಕಾರ, ವಿಕೃತರಿಂದ ಪ್ರಾಣಿಗಳ ಮೇಲೆ ಅತ್ಯಾಚಾರ, ಮತಾಂಧರಿಂದ ಅಮಾಯಕರ ಕೊಲೆ, ವಿದ್ಯಾವಂತರಿಂದ ಅವಿದ್ಯಾವಂತ ಜನರಿಗೆ ಮೋಸ, ಆಸ್ತಿ, ಮನೆ,ಬಂಗಾರ, ಮೌಲ್ಯದ ಹಿಂದೆ ಬಿದ್ದು, ಮಾನವ ಕುಲಕ್ಕೆ ಕಪ್ಪು ಚುಕ್ಕೆಯಾಗಿ ಬದುಕುವ ಜನರು ಸಮಾಜಕ್ಕೆ ಒಳಿತಾಗಿ ಇರಲು ಸಾಧ್ಯವೇ?




     ಈ ಹಿಂದೆ ವಿದ್ಯಾವಂತರಲ್ಲದೆ, ಅಮಾಯಕ ಜನರಲ್ಲಿರುವ, ಗೌರವ, ಸತ್ಯವಾದ, ಪ್ರಾಮಾಣಿಕತೆ ಇಂದಿನ ಜನರಲ್ಲಿ ಕಾಣದೆ ಇರುವುದಕ್ಕೆ ಹಲವು ಕಾರಣಗಳು, ನನ್ನ ಮಕ್ಕಳು ಶ್ರೇಷ್ಠ, ನನ್ನ ಮಕ್ಕಳೇ ಅತೀ ಹೆಚ್ಚು ವಿದ್ಯೆ ಪಡೆಯಬೇಕು, ಎಲ್ಲರಿಗಿಂತಲೂ ಜಾಸ್ತಿ ಅಂಕ ಪಡೆಯಬೇಕು, ಇಂತಹ ಅನೇಕ ಕಾರಣಗಳಿಂದ ಮಕಳನ್ನು ನಿಜವಾದ ಶಿಕ್ಷಣದಿಂದ ವಂಚಿರಾಗಿಸಿ, ಕೊನೆಗೆ ಸಾಕಿದ ತಂದೆ ತಾಯಿಯನ್ನೂ ಗೌರವಿಸದ ಮಟ್ಟಕ್ಕೆ ಬೆಳೆಸಿ ಪಶ್ಚಾತಾಪ ಪಡುವ ಅದೆಷ್ಟು ಪೋಷಕರು! ಅಯ್ಯೋ ದೇವರೇ ನಾವೇ ಸಾಕಿದ ಮಕ್ಕಳು ಹೀಗಾಗಿಬಿಟ್ಟರೆಲ್ಲವೇ " ಹೌದು ನಿಜವಾದ ಶಿಕ್ಷಣವೆಂದರೆ ಯಾವ ಕೆಲಸ ಕೆಟ್ಟದು ಯಾವ ಕೆಲಸಗಳು ಒಳಿತು, ಸಮಾಜದಲ್ಲಿರುವ ಜವಾಬ್ದಾರಿ ಏನು? ಮನೆಯ ಜವಾಬ್ದಾರಿ? ವಿದ್ಯಾವಂತರಾಗಿ ಯಾವ ಒಳಿತಿನ ಕೆಲಸ ಮಾಡಬೇಕು ಅನ್ನುವ ಪರಿಜ್ಞಾನ ಇರುವವರು ನಿಜವಾದ ಮನುಜರಾಗಿ ಮಾರ್ಪಡುತ್ತಾರೆ.

       ಪುಣ್ಯ, ನೀವು ಮಾಡುವ ಒಳಿತಿನ ಕೆಲಸ ಪುಣ್ಯವಾಗಿ ಪರಿಗಣಿಸಿದರೆ, ಯಾವುದೆಲ್ಲ ಪುಣ್ಯ ಕೆಲಸವೆಂದು ಅರಿಯದೇ ಮಾಡುವುದು ಪಾಪದ ಪಟ್ಟಿಗೂ ಸೇರಬಹುದು. ಜೀವನದ ದಾರಿಯಲ್ಲಿರುವ ಮುಳ್ಳು, ಕಲ್ಲನ್ನು ಬದಿಗೆ ಸರಿಸುವುದು, ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು, ನೀವು ಮಾಡುವ ಸಹಾಯದಲ್ಲಿ ಯಾವುದೇ ಪ್ರತಿಫಲ ಬಯಸದಿರುವುದು,ಅನ್ಯರಿಗೆ ಉಪದ್ರವಿಸದೆ ಸತ್ಯವಂತನಾಗಿ ಬಾಳುವುದೆಲ್ಲವೂ ನಿಮ್ಮ ಜನ್ಮಕ್ಕೆ ಪುಣ್ಯಪ್ರಾಪ್ತಿಯಾಗಿ ಮಾರ್ಪಡುವುದು.

       ಕರ್ಮ, ನಿನ್ನ ಜೀವನದಲ್ಲಿ ಮಾಡುವ ಪ್ರತಿಯೊಂದು, ಒಳಿತಿನ ಕೆಲಸ, ಕೆಡುಕಿನ ಕೆಲಸಕ್ಕೆ ಕರ್ಮವೆಂದು ಪರಿಗಣಿಸಬಹುದು ಸಾಮಾನ್ಯವಾಗಿ ನಾವು ಉಪಯೋಗಿಸುವ " ಕರ್ಮ " ಶಬ್ದ  ಪಾಪ ಮತ್ತು ಪುಣ್ಯದ ಲೆಕ್ಕಾಚಾರವನ್ನು ಇಡುವ ಶಬ್ದವಾಗಿರುತ್ತದೆ. ನೀನು ಮಾಡಿದ ಕರ್ಮ ನೀನೇ ಅನುಭವಿಸಬೇಕು, ಹೆಚ್ಚಿನ ಜನರು ಕರ್ಮ ಶಬ್ದವನ್ನು  ಜೀವನದ ಕೆಟ್ಟ ಸಂಧರ್ಭಗಳು ಬಂದಾಗ ಮಾತ್ರ ಉಪಯೋಗಿಸುತ್ತಾರೆ, ಯಾವುದೇ  ಕೆಟ್ಟ ಘಟನೆ, ಅಥವಾ ಅತೀವ ಕಷ್ಟವನ್ನು ಎದುರಿಸುವ ಜನರನ್ನು ನೋಡಿ, ಇದು ಅವರು ಮಾಡಿದ ಕರ್ಮದ ಫಲ ಎಂದು ದೂರ ನಿಲ್ಲುತ್ತಾರೆ, ಎದುರಲ್ಲಿ ಇರುವವನು ನಿಜವಾದ ಸಮಸ್ಯೆಯಲ್ಲಿದ್ದರೂ ಯಾವುದೇ ಸಹಾಯ ಮಾಡದೇ ಗಾಯಕ್ಕೆ ಬರೆ ಎಳೆದು ಅವನು ಮಾಡಿದ ಕರ್ಮವೆಂದು ದೂರ ಸರಿಯುತ್ತಾನೆ. ನೀನು ಯಾವುದೇ ಕಲ್ಮಶವಿಲ್ಲದೆ ಒಳಿತಿನ ಕೆಲಸಕ್ಕೆ ಸತ್ಕರ್ಮ ಎಂದು ಹೇಳಿದರೆ, ದುರ್ನಡೆತೆಯ ಕೆಲಸಕ್ಕೆ ದುಷ್ಕರ್ಮ ಎಂದೂ ಪರಿಗಣಿಸಬಹುದು.

       ಸತ್ಕಾರ್ಯದ ಕರ್ಮ ಫಲ ನಿನ್ನ ಜೀವನವನ್ನು ಯಾವುದೇ ಸಂಧರ್ಭದಲ್ಲೂ ರಕ್ಷಿಸಿದರೆ, ದುಷ್ಟಕೆಲಸದ ಕರ್ಮ ಫಲ ನಿನ್ನ ಜೀವನವನ್ನು ಮತ್ತಷ್ಟು ಪಾತಾಳಕ್ಕೆ ತಳ್ಳಿ, ಜೀವನದುದ್ದಕ್ಕೂ ನರಳಿ ಸತ್ತರೂ ಬಿಡದ ಘೋರವಾದ ಶಿಕ್ಷೆಯಾಗಿ ಮಾರ್ಪಟ್ಟು, ಒಮ್ಮೆ ಸತ್ತರೆ ಸಾಕು ಅನ್ನುವ ಮಟ್ಟಕ್ಕೆ ಕೊಂಡೊಯ್ಯುತ್ತದೆ. ಹಾಗಾಗಿ, ಪಾಪ -  ಕರ್ಮ - ಪುಣ್ಯ ದೇವರುಗಳು ಕೊಡುವ ಶಿಕ್ಷೆಯಲ್ಲ, ಬದಲಾಗಿ ದೇವರೆಂಬ ಶಕ್ತಿಎದುರಿಗೆ ನೀನು ಮಾಡುವ ಕರ್ಮಕ್ಕೆ ಅನುಸಾರವಾಗಿ, ನೀನು ಸಂಪಾದಿಸಿ ಅನುಭವಿಸುವ ಕಾರ್ಯಗಳು.

       ನಿನ್ನ ಬದುಕು ಮಾತ್ರ ಸುಂದರವಾಗಿದ್ದರೆ ಸಾಕು ಎನ್ನುವುದು ನಿನ್ನ ಪಾಪ, ನಿನ್ನಂತಯೇ ಅವರೂ ಎಂದು ತಿಳಿದು ಬದುಕುವುದು ಪುಣ್ಯ, ನೀನು ಮಾಡಿದ ಕೆಲಸ ಮಾತ್ರ ಸರಿಎನ್ನುವುದು ನಿನ್ನ ಕರ್ಮ. ಜೀವನವೆಂಬುವುದು ನೀನು ಮಾಡಿದ ಕರ್ಮಕ್ಕೆ ಮತ್ತು ಅನ್ಯರು ಮಾಡಿದ ಕರ್ಮಕ್ಕೂ ಅನುಸಾರವಾಗಿರುತ್ತದೆ.  ಏನಿದ್ದರೂ ನೀನು ಮಾಡಿದ ಕರ್ಮ ನೀನೇ ಅನುಭವಿಸಿ ಸಾಯಬೇಕು!

         ✍️ಬರಹ : ಮಾಧವ. ಕೆ. ಅಂಜಾರು 

        


















  








Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.

(ಲೇಖನ -100), "ಕುವೈಟ್ ಕಲಾ ಮಾಣಿಕ್ಯ" ಒಬ್ಬ ಕಲಾಗಾರನ ನಿಜವಾದ ಜೀವನ ಕ್ರಮ, ಶ್ರಮ ಮತ್ತು ಸಾಧನೆಯ ಹಾದಿ, ಕಲೆ ಎಂಬುವುದು ಎಲ್ಲರಿಗೂ ಒಲಿಯುವುದಿಲ್ಲ ಆದರೆ ಒಂದಲ್ಲ ಒಂದು ರೀತಿಯ ಕಲೆಯ ಶಕ್ತಿ ಪ್ರತಿಯೊಬ್ಬರಲ್ಲೂ ಇರುತ್ತದೆ