ಲೇಖನ -123) ಹೊರದೇಶದಲ್ಲಿರುವ ಉದ್ಯೋಗಸ್ಥರು ಅದೆಷ್ಟು ಸುರಕ್ಷಿತರು?
(ಲೇಖನ -123) ಹೊರದೇಶದಲ್ಲಿರುವ ಉದ್ಯೋಗಸ್ಥರು ಅದೆಷ್ಟು ಸುರಕ್ಷಿತರು? ದೇಶ ಬಿಟ್ಟು ಹೊರದೇಶಕ್ಕೆ ಸಾವಿರಾರು ಕನಸುಗಳೊಂದಿಗೆ ಹೆಜ್ಜೆ ಹಾಕಿ ಸುಂದರ ಬದುಕನ್ನು ಕಟ್ಟಿಕೊಳ್ಳಲು ಹರಸಾಹಸ ಪಟ್ಟು ಕೆಲವರು ತನ್ನ ಕನಸನ್ನು ನನಸು ಮಾಡಿಕೊಂಡರೆ, ಇನ್ನು ಕೆಲವರು ಜೀವನಪರ್ಯಂತ ವಿದೇಶದಲ್ಲಿ ದುಡಿದು ಕೊನೆಗಾಲಕ್ಕೆ ಏನು ಇಲ್ಲದೆ ಮರುಗುವ ಪರಿಸ್ಥಿತಿಯನ್ನು ಎದುರಿಸುತ್ತಾರೆ. ಒಬ್ಬೊಬ್ಬರಿಗೆ ಒಂದೊಂದು ತರಹದ ಸಮಸ್ಯೆಗಳು, ಒಂದೊಂದು ತರಹದ ಜವಾಬ್ದಾರಿಗಳು, ಇನ್ನು ಕೆಲವರಿಗೆ ಮುಂದಿನ ಬದುಕಿನ ಅರಿವಿಲ್ಲದೆ ಸಂಪಾದಿಸಿದ ಹಣವನ್ನು ವ್ಯಯಮಾಡಿ ಕೊನೆಗೆ ಪರಿತಪಿಸುವ ಅನೇಕ ಮಂದಿ, ತಾನು ಸಂಪಾದಿಸುವ ಕಾಲದಲ್ಲಿ ಅನೇಕ ಜನರು ತನ್ನನ್ನು ಉಪಯೋಗಿಸಿಕೊಳ್ಳಲು ಆರಂಭಿಸುತ್ತಾರೆ. ತನ್ನ ಸಂಪಾದನೆಯಲ್ಲಿ ಬಂದ ಹಣವನ್ನು ಕುಟುಂಬ, ಸಂಬಂಧಿಗಳು, ಗೆಳೆಯ ಗೆಳತಿಯರು ಎನ್ನುತ್ತಾ ಭಾವನೆಗಳಿಗೆ ಅಂಟಿಕೊಂಡು ಕೈ ಖಾಲಿ ಮಾಡಿಕೊಂಡು ಮಾಡಿರುವ ಹಣದ ಸಹಾಯವನ್ನು ನೆನೆಯುತ್ತಾ ಕೊರಗಿ ಬದುಕುವ ಅದೆಷ್ಟೋ ಪರದೇಶಿಗಳು.
ಹೊರದೇಶವೆಂದರೆ, ಸುಲಭದಲ್ಲಿ ಹಣ ಸಂಪಾದನೆ ಮಾಡುವ ಜಾಗವೆಂದು ತಿಳಿದುಕೊಳ್ಳುವ ಅನೇಕ ಮಂದಿ ಹೊರದೇಶಕ್ಕೆ ಕಾಲಿಟ್ಟಾಗ ಮಾತ್ರ ಅನುಭವಿಸುತ್ತಾರೆ, ಅಲ್ಲಿರುವ ವಾತಾವರಣ, ನಿಯಮಗಳನ್ನು ಪಾಲಿಸುತ್ತ ಸರಿಯಾಗಿ ಹೊಟ್ಟೆಗೂ ತಿನ್ನದೇ, ತನ್ನ ಕುಟುಂಬ ಸಂಸಾರಕ್ಕಾಗಿ ಜೀವನಪರ್ಯಂತ ದುಡಿದು ಹಣವನ್ನು ಕಳುಹಿಸುತ್ತಲೇ ಇರುತ್ತಾರೆ. ತನ್ನ ತಂಗಿ, ತಮ್ಮ, ಅಣ್ಣ, ಎಂಬ ಭಾವನೆಗಳಿಗೆ ಒತ್ತು ಕೊಟ್ಟು ಅಲ್ಪ ಪ್ರಮಾಣದ ಉಳಿತಾಯ ಮಾಡಿ ಹೆಚ್ಚಿನ ಸಂಪಾದನೆಯನ್ನು ಮನೆಯ ಆಗುಹೋಗುಗಳಿಗೆ ಕೊಡುವವರು ಹೊರದೇಶದಲ್ಲಿ ಕೆಲಸ ಮಾಡುವವರು! ಯಾಕೆಂದರೆ ಹೆಚ್ಚಿನವರು ತನ್ನ ಸಂಸಾರದ ಜವಾಬ್ದಾರಿಯನ್ನು ಹೊತ್ತುಕೊಂಡು, ಎಲ್ಲಾ ಹಬ್ಬಗಳನ್ನು, ಸುಂದರವಾದ ಪ್ರಕೃತಿಯನ್ನು ಬಿಟ್ಟು ನನ್ನ ಮನೆಯವರು ಚೆನ್ನಾಗಿರಲಿ ನನ್ನಿಂದ ಸುಖವಾಗಿ ಬದುಕಲಿ ಅನ್ನೋ ಭಾವನೆಯಿಂದ ಹೊರದೇಶದಲ್ಲಿ ಎಷ್ಟು ಕಷ್ಟವಿದ್ದರೂ ಮನೆಯವರಿಗೆ ತಿಳಿಸದೆ ಒಳಗೊಳಗೆ ಕಣ್ಣೀರು ಹಾಕುತ್ತಾ ಜೀವಿಸುವ ಅನೇಕ ಮಂದಿ ಇರಬಹುದು.
ಹೊರದೇಶದಲ್ಲಿ, ನನ್ನ ಊರಿಗಿಂತ ಸ್ವಲ್ಪ ಜಾಸ್ತಿ ಹಣದ ಸಂಪಾದನೆಯ ನೆಪದೊಂದಿಗೆ ಹೊರಡುವ ಪರದೇಶಿಯರು ಅಲ್ಪಸಂಪಾದನೆ ಮಾಡಿದ ಹಣವನ್ನು ಹೇಗೆ ಉಪಯೋಗಿಸಬೇಕೆಂದು ತಿಳಿಯದೆ ಕಷ್ಟಪಡುವವರು ಕೂಡ ಇದ್ದಾರೆ, ತನ್ನ ಸುತ್ತಮುತ್ತಲು ತುಂಬಾ ಜನರು ತನ್ನ ಬೇಡಿಕೆಗಳನ್ನು ಇಟ್ಟಾಗ ಏನು ಜಾಸ್ತಿಯಾಗಿ ಮಾತನಾಡದೆ ಶಕ್ತಿಮೀರಿ ಹಣದ ಸಹಾಯವನ್ನು ಮಾಡುವವರು ಹೆಚ್ಚಿನ ಜನರು ಇರುತ್ತಾರೆ. ಬರ ಬರುತ್ತಾ ತನ್ನ ಉದ್ಯೋಗದ ಅವಧಿ ಮುಗಿಯುವ ಕಾಲದಲ್ಲಿ ಎಲ್ಲವನ್ನು ಕಳೆದುಕೊಂಡಿರುವ ಜನರು ನಾಳೆ ನಾನೇನು ಮಾಡಲಿ ನನಗಾಗಿ ನಾನು ಸ್ವಲ್ಪವೂ ಕೂಡ ಇಡಲಿಲ್ಲ ಅಲ್ಲವೇ? ನಾನು ನನ್ನ ಊರಿಗೆ ಹೋಗಿ ಏನು ಮಾಡಲಿ? ಹೇಗೆ ಬದುಕಲಿ? ನನಗೆ ಇನ್ನೂ ಸಾಲವಿದೆ, ಮಕ್ಕಳ ವಿದ್ಯಾಭ್ಯಾಸ ಇದೆ, ಯಾವುದೇ ಉಳಿತಾಯ ಮಾಡಿಲ್ಲ ಎಂಬ ಚಿಂತೆಯಲ್ಲಿ ಬೀಳುವ ಜನರು ಕೂಡ ಇರಬಹುದು. ಪರದೇಶಿಗಳು ಅವರಲ್ಲಿ ಬೇಕಾದಷ್ಟು ಹಣವಿದೆ, ಒಂದಕ್ಕಿಂದ ಹೆಚ್ಚು ಪಟ್ಟು ಹಣವನ್ನು ಪಡೆದರೂ ಪರವಾಗಿಲ್ಲ ಎಂಬ ಭಾವನೆಯೊಂದಿಗೆ ವ್ಯವಹಾರ ಮಾಡುವ ಕೆಲವರಾದರೆ, ಪರದೇಶಿಗಳು ಅವರಿಂದ ನಮಗೇನು ಪ್ರಯೋಜನ ಎಂದು ಹೇಳಿಕೊಳ್ಳುವ ಕೆಲವರು, ಅಂತೂ ಇಂತೂ ಪರದೇಶದಲ್ಲಿ ಬದುಕು ಕಟ್ಟಿಕೊಂಡು ಬದುಕುವ ಜೀವಕ್ಕೆ ಕಷ್ಟವೆಂಬುದು ಕಟ್ಟಿಟ್ಟಬುತ್ತಿ.
ಆಯಗ್ ದಾನಿ ಕಾಸುಂಡು, ಪಿದಾಯಿ ಊರುದಾಯೆ ದಾಲ ಕಮ್ಮಿ ಇಜ್ಜಿ ಎಂದು ಹೇಳುವ ಕೆಲವರಾದರೆ, ಇನ್ನೂ ಕೆಲವರು ನಿಜ ಸ್ಥಿತಿಯನ್ನು ಅರ್ಥ ಮಾಡಿಕೊಂಡು ಅನುಕಂಪ ತೋರುವ ಜನರು ಕೂಡ ನಮ್ಮೊಂದಿಗೆ ಇರುತ್ತಾರೆ. ಒಟ್ಟಾರೆ ಕತ್ತರಿಯಲ್ಲಿ ಕುತ್ತಿಗೆ ಇಟ್ಟಂತೆ ಪರದೇಶಿಗಳ ಬದುಕು. ಇದು ಕೇವಲ ಕೆಲಸಗಾರರಿಗೆ ಸೀಮಿತವಾಗಿಲ್ಲ ಹೊರತಾಗಿ ಸ್ವ ಉದ್ಯೋಗ ಮಾಡುವ ಜನರಿಗೂ ಅನ್ವಯ ಆಗಬಹುದು. ಕುಟುಂಬ ಸಂಸಾರಕ್ಕಾಗಿ ದುಡಿಯುವ ಪರದೇಶಿಗಳೇ ನಿಮ್ಮಿಂದ ಒಂದಷ್ಟು ಜನ ಅನ್ನ ತಿನ್ನಲಿ ಆದರೆ ನಿಮ್ಮನ್ನೇ ತಿನ್ನುವಷ್ಟು ಮಂಕಾಗಿ ಹೋಗಕೂಡದು. ಒಂದುವೇಳೆ ಹೋದಲ್ಲಿ ಪರದೇಶಿಗಳು ಪರದೇಶದಲ್ಲಿ ಉಳಿಯುವ ಸಾಧ್ಯತೆಯೇ ಹೆಚ್ಚು.
ತಮ್ಮ ಸಂಪಾದನೆಯ ಗುರಿ ಎಷ್ಟು ವರುಷ ? ಎಷ್ಟು ಹಣ ಸಾಕು? ಒಂದುವೇಳೆ ಕೆಲಸ ಇಲ್ಲದೇ ಹೋದರೆ ಏನು ಮಾಡಬೇಕು? ನೀವು ಸಹಾಯ ಮಾಡಿದ ಹಣವೆಷ್ಟು? ನಿಮ್ಮನ್ನು ಎಲ್ಲಿ ಯಾವ ರೀತಿಯಲ್ಲಿ ಉಪಯೋಗಿಸುತ್ತಾರೆ? ಯಾರು ನಿಮ್ಮವರು? ನಿಮ್ಮ ಹಣಕ್ಕೆ ಮತ್ತು ನಿಮಗೆ ಎಷ್ಟು ಬೆಲೆ ಕೊಡುತ್ತಾರೆ? ನಿಮ್ಮ ಮಕ್ಕಳು, ಹೆಂಡತಿ, ಗಂಡ,ಎಲ್ಲಾ ಬಂದು ಬಳಗ, ಗೆಳೆಯ ಗೆಳತಿಯರು ನಿಮ್ಮನ್ನು ಯಾವ ದೃಷ್ಟಿಯಲ್ಲಿ ನೋಡುತ್ತಾರೆ? ಹಣವಿದ್ದಾಗ ಹೇಗಿರುತ್ತಾರೆ? ಹಣವಿಲ್ಲದಾಗ ಹೇಗಿರುತ್ತಾರೆ? ಹಣ ಕೊಟ್ಟಾಗ ಹೇಗಿರುತ್ತಾರೆ? ಹಣ ಕೊಡದೇ ಇದ್ದಾಗ ಹೇಗಿರುತ್ತಾರೆ? ಕೊಟ್ಟ ಹಣ ಕೇಳಿದಾಗ ಹೇಗಿರುತ್ತಾರೆ? ಹಣದ ಸಹಾಯ ಕೇಳಿದಾಗ ಹೇಗಿರುತ್ತಾರೆ? ಮತ್ತು ಹಣಕ್ಕಾಗಿಯೇ ನಿಮ್ಮ ಜೊತೆಯಲ್ಲಿ ಇರುತ್ತಾರೆಯೇ ಎಂಬುವುದನ್ನು ತಿಳಿದುಕೊಂಡರೆ ಅಲ್ಪವಾದರೂ ಒಳಿತಾಗಬಹುದು. ಇಲ್ಲವಾದಲ್ಲಿ ಬೆರಳು ಕೊಟ್ಟು ಕೈಯನ್ನು ಕಳೆದುಕೊಳ್ಳುವ ಸ್ಥಿತಿಗೆ ತಲುಪುವ ಸಾಧ್ಯತೆ ಕೂಡ ಇರುತ್ತದೆ.
ಹಾಗಂತ ಯಾರಿಗೂ ಸಹಾಯವನ್ನು ಮಾಡದೆ ಬದುಕಲು ಸಾಧ್ಯವಿಲ್ಲ, ಕೆಲವರು ಸಹಾಯ ಪಡೆದುಕೊಂಡು ಅದಕ್ಕೆ ಬೇಕಾದಂತೆ ಉಪಕಾರವನ್ನು ಮಾಡುತ್ತಾರೆ, ಇನ್ನು ಕೆಲವರು ಸಹಾಯವನ್ನು ಪಡೆದುಕೊಂಡು ನಿಮ್ಮನ್ನೇ ಮರೆತುಬಿಡುತ್ತಾರೆ. ಇಲ್ಲಿ ಜಾಗ್ರರಾಗಿರಬೇಕಾಗಿರುವುದು ಪ್ರತಿಯೊಬ್ಬರೂ! ನೀವು ಹೊರದೇಶದಲ್ಲಿ ಇರುವುದು ಎಂಬ ಕಾರಣಕ್ಕೆ ನಿಮ್ಮನ್ನು ಚೆನ್ನಾಗಿ ಉಪಯೋಗಿಸುವ ಜನರು ಮತ್ತು ನಿಜ ಬೆಲೆಗಿಂತ ಜಾಸ್ತಿ ಬೆಲೆಯನ್ನು ಹೇಳುತ್ತಾ ಮೋಸ ಮಾಡುವ ಜನರು ಕೂಡ ನಿಮ್ಮ ಅನುಭವಕ್ಕೆ ಬಂದಿರುತ್ತದೆ.
ಪ್ರಾಮಾಣಿಕವಾದ ಪ್ರಪಂಚದಲ್ಲಿ ದೇಶಿಗರು ಮತ್ತು ಪರದೇಶಿಗರು ಇಲ್ಲ ಆದರೆ ಪರದೇಶಿ ಎಂಬ ಕಾರಣಕ್ಕೆ ಬಲಿಯಾಗುವುದು ಕೂಡ ಸಹಜ. ನಿಮ್ಮಲ್ಲಿ ಉತ್ತಮ ಗೆಳೆಯ, ಸಂಬಂಧಗಳು ಇರಲಿ, ನಿಮ್ಮನ್ನು ಉಪಯೋಗಿಸುವ ಮೋಸ ಮಾಡುವ ಜನರ ಸಂಘದಿಂದ ಆದಷ್ಟು ದೂರದಲ್ಲಿ ಇರಬೇಕು, ಪರದೇಶಿ ನಾನು ಸ್ವದೇಶಕ್ಕೆ ಹೋಗಿ ಬದುಕಬೇಕು ಎಂಬ ಕನಸು ಕೂಡ ಇರಲಿ, ಪರದೇಶಿ ನಾನು ಸ್ವದೇಶ ಹೋದರೂ ಬದುಕುವೆನೆಂಬ ಧೈರ್ಯ ನಿಮ್ಮಲ್ಲಿ ಬರಲಿ. ಪರದೇಶಿಯಾದರೂ ಜೀವನವೆಲ್ಲ ಪರಚಿಕೊಳ್ಳುತ್ತಾ ಬದುಕುವ ಸಂಧರ್ಭ ಬಾರದಿರಲಿ.
ಎಲ್ಲರಿಗೂ ಶುಭಾವಾಗಲಿ, ಸರ್ವೇ ಜನ್ಹ ಸುಖಿನೋ ಭವಂತು.
( ಬರಹ ಯಾರಿಗೂ ನೋವನ್ನು ಕೊಡಲು ಅಥವಾ ಚರ್ಚೆಗಾಗಿ ಅಲ್ಲ, ಮನದಲ್ಲಿ ಮೂಡಿದ ಕನ್ನಡ ಪದ ಗುಂಚ ತಪ್ಪಿದ್ದರೆ ಕ್ಷಮೆ ಇರಲಿ 🙏🏿)
✍🏿 ಮಾಧವ. ಕೆ ಅಂಜಾರು.
Comments
Post a Comment