ಲೇಖನ -120) ಅಪ್ಪ ನೆಂಬ ಎರಡಕ್ಷರದ ಶಕ್ತಿ ಜಗತ್ತನ್ನು ಗೆಲ್ಲಿಸುತ್ತದೆ,

 (ಲೇಖನ -120) ಅಪ್ಪ ನೆಂಬ ಎರಡಕ್ಷರದ ಶಕ್ತಿ ಜಗತ್ತನ್ನು ಗೆಲ್ಲಿಸುತ್ತದೆ, ಅಪ್ಪನಿಲ್ಲದ ಬದುಕು ಅಲ್ಲೋಲಕಲ್ಲೋಲ. ನಿಜವಾದ ನೋವನ್ನು ತಿಳಿಯಬೇಕಾದರೆ ಅಪ್ಪನನ್ನು ಬೇಗ ಕಳೆದುಕೊಂಡು ಬದುಕಿದ ಅದೆಷ್ಟೋ ಜನರಲ್ಲಿ ಕೇಳಬಹುದು. ನಿಮ್ಮ ಜೀವನದಲ್ಲಿ ಕೊನೆಯತನಕ ನಿಮ್ಮ ತಂದೆ ತಾಯಿ ಜೊತೆಯಲ್ಲಿ ಇದ್ದಾರೆ ಅಂದರೆ ನಿಮ್ಮ ಪುಣ್ಯವೇ ಸರಿ. ಆದರೆ ತಂದೆ ತಾಯಿಯನ್ನು ಸರಿಯಾಗಿ ನೋಡಿಕೊಳ್ಳದೆ ಇರುವ ಅನೇಕ ಜನರು ಅಲ್ಲಲ್ಲಿ ಕಾಣಸಿಗುತ್ತಾರೆ. ಕಾರಣಗಳು ಹಲವಾರು ಇದ್ದರೂ ಅತೀ ಕಷ್ಟದಲ್ಲಿ ಜೀವನ ತೆಗೆಯುವ ತುಂಬಾ ಜನರು ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಅದೆಷ್ಟು ಆಸ್ತಿ ಅಂತಸ್ತು ಹೊಂದಿದ್ದರೂ ಮುಪ್ಪಾದ ತಂದೆ ತಾಯಿಯರು ಮಕ್ಕಳ ನಿರ್ಲಕ್ಷದಿಂದ ಬೇಗನೆ ಹಾಸಿಗೆ ಹಿಡಿದು, ಅನಾಥಶ್ರಮ ಅಥವಾ ಮನೆಯಿಂದ ಹೊರದಬ್ಬಾಲ್ ಪಡುತ್ತಾರೆ. ಜೀವದ ಅಂತ್ಯ ಭಯಾನಕವಾಗಿ ಅನುಭವಿಸುತ್ತಾರೆ. 



         ಯಾವುದೊ ಒಂದು ಸಂಧರ್ಭದಲ್ಲಿ ಅಪ್ಪನ ಬೈಗುಳವನ್ನು ಕೇಳುವ ಮಕ್ಕಳು ಅಪ್ಪನ ಒಳ ಮನಸ್ಸನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲರಾಗಿರುತ್ತಾರೆ, ಅಪ್ಪನ ತ್ಯಾಗ, ಸಹಾಯ, ಚಿಕ್ಕಂದಿನಿಂದಲು ಬೆಳೆಯುವ ತನಕ ತನಗಾಗಿ ಮಾಡಿ ಇಡದೆ ಸರ್ವಸ್ವವನ್ನು ತನ್ನ ಹೆಂಡತಿ ಮಕ್ಕಳಿಗಾಗಿ ಬದುಕಿದರು ಕೊನೆಗಾಲದಲ್ಲಿ ಅಪ್ಪನನ್ನು ದೂಷಿಸುವ ಅನೇಕ ಮಂದಿ ಅಪ್ಪನನ್ನು ಕಳೆದುಕೊಂಡಾಗ ಮೊಸಳೆ ಕಣ್ಣೀರು ಹಾಕಿ ಅಪ್ಪ ಮಾಡಿದ ಆಸ್ತಿಯ ಹಿಂದೆ ಓಡಾಡುತ್ತಾರೆ. ಅಪ್ಪ ಬದುಕಿರುವಾಗಲೇ ಅಪ್ಪನನ್ನು ಪ್ರಶ್ನಿಸುವ ಮಕ್ಕಳು, ಅಪ್ಪ ನೀನು ನನ್ನನ್ನು ಯಾಕಾಗಿ ಹುಟ್ಟಿಸಿದ್ದೀಯ? ನಿನಗೆ ಸಾಕಲು ಸಾಧ್ಯವಿಲ್ಲದಿದ್ದರೆ ಯಾಕೆ ಮದುವೆಯಾಗಿದ್ದೀಯ? ಅವರೆಲ್ಲರೂ ಹೇಗಿದ್ದಾರೆ ನೋಡು ನಮ್ಮ ಮನೆಯಲ್ಲಿ ಏನೂ ಇಲ್ಲ ಎಂದು ಹೇಳುವ ಮಕ್ಕಳು ಹುಟ್ಟಿದ್ದರೆ ಅದಕ್ಕಿಂತ ದೊಡ್ಡ ಬೇಸರದ ಸಂಗತಿ ಇರಲಿಕ್ಕಿಲ್ಲ. ಅಪ್ಪ ಅಥವಾ ಅಮ್ಮ ಮಕ್ಕಳನ್ನು ಉತ್ತಮವಾದ ಸಂಸ್ಕಾರವನ್ನು ಕೊಟ್ಟು ಬೆಳೆಸಿದಲ್ಲಿ ಮಕ್ಕಳ ಬಾಯಲ್ಲಿ ಕೆಟ್ಟ ಮಾತು ಹೊರಡಲು ಸಾಧ್ಯವಿಲ್ಲ ಮತ್ತು ಅಪ್ಪ ಮಾಡುವ ಪ್ರತಿಯೊಂದು ಕೆಲಸದ ಬಗ್ಗೆ ಅಮ್ಮ ತನ್ನ ಮಕ್ಕಳಿಗೆ ಚೆನ್ನಾಗಿ ಮನವರಿಕೆ ಮಾಡದೆ ಹೋದಲ್ಲಿ ಅಪ್ಪನ ಬದುಕು ದುಸ್ತರ.

      ಇಲ್ಲಿ ಜವಾಬ್ದಾರಿ ಅನ್ನುವುದು ತಂದೆ ತಾಯಿಗೆ ಮಾತ್ರವಲ್ಲ ಬೆಳೆದುನಿಂತ ಮಕ್ಕಳದ್ದು ಕೂಡ ಆಗಿರುತ್ತದೆ. ದಿನಬೆಳಗ್ಗೆಯಿಂದ ಕುಡಿದು ಕುಪ್ಪಳಿಸಿ ಮನೆಗೊಂದು ತುತ್ತು ತರದ ಅಪ್ಪ, ಮನೆತುಂಬ ಅಕ್ಕಿ ಕಾಳು ಇದ್ದೂ ಸರಿಯಾಗಿ ಅನ್ನ ಹಾಕದ ಅಮ್ಮ ಹುಟ್ಟಿದ ಮಕ್ಕಳಿಗೆ ಕಷ್ಟವನ್ನು ತಂದಿಟ್ಟರೂ, ಮಕ್ಕಳ  ಭಾವನೆಗಳಿಗೆ ಪೆಟ್ಟು ಬಿದ್ದು ವಿಕೃತಿಯನ್ನು ಮೆರೆಯುವ ಮಕ್ಕಳು ಕೂಡ ಇರುತ್ತಾರೆ. ತನ್ನ ಹೊಟ್ಟೆ ಪಾಡಿಗಾಗಿ ಮತ್ತು ಹೆಂಡತಿ ಮಕ್ಕಳ ಸುಖಕ್ಕಾಗಿ ಪ್ರಾಮಾಣಿಕವಾಗಿ ದುಡಿದು ತಂದು ಸಂಸಾರವನ್ನು ಚೆನ್ನಾಗಿ ನೋಡಿಕೊಳ್ಳುವ ಅಪ್ಪನನ್ನು ಕೂಡ ತೆಗಳುವ ಅದೆಷ್ಟೋ ಅತೃಪ್ತ ಹೆಂಡತಿ ಮಕ್ಕಳು ಅಪ್ಪನ ಕಣ್ಣಲ್ಲಿ ನೀರನ್ನು ತರಿಸುತ್ತಾರೆ. 

         ತನ್ನ ಹೆಂಡತಿಗೆ ಸೀರೆ ಬಂಗಾರ, ಬದುಕಿಗಾಗಿ ಅಲ್ಪ ಹಣ ಕೂಡಿಟ್ಟು, ಮಕ್ಕಳ ಮನಸ್ಸನ್ನು ನೋಯಿಸದೆ, ಸರಿದಾರಿಗೆ ಬರಲು ಅಲ್ಪ ಜೋರು ಮಾತನ್ನು ಆಡಿ, ಕೇಳಿದ್ದನ್ನು ಕೊಡಿಸಿ ನನ್ನ ಮಕ್ಕಳು ಬೆಳೆದು ಉತ್ತಮವಾದ ವ್ಯಕ್ತಿಯಾಗಲಿ ಸಮಾಜದಲ್ಲಿ ಅತ್ಯುನ್ನತ ಸ್ಥಾನವನ್ನು ಗಳಿಸಿ ಏನಾದರು ಸಾಧನೆಯನ್ನು ಮಾಡಲಿ ಎನ್ನುತ್ತಾ, ಒಂದು ಹೊತ್ತಿನ ಊಟವನ್ನು ತಿಂದು ಬದುಕುವ ಅಪ್ಪಜಿ ಇನ್ನೇನು ನನಗೆ ಬೇಕು ನಿಮ್ಮ ಬದುಕು ಸುಂದರವಾಗಿರಲಿ ನನಗೇನು ಬೇಡ ಎಂದು ಹೇಳುವ ಜೀವ ಅಪ್ಪ ಮಾತ್ರ.  ಮಕ್ಕಳು ವಿದ್ಯಾಭ್ಯಾಸ, ಸಂತಸದ ಸಮಯಕ್ಕಾಗಿ ತನ್ನ ಸಂತೋಷವನ್ನು ಬದಿಗಿಟ್ಟು ಬದುಕುವ ಜೀವವೇ ಅಪ್ಪ. 

         ಜೀವನದಲ್ಲಿ ಮಕ್ಕಳು ದಾರಿ ತಪ್ಪಲು ಹಲವಾರು ಕಾರಣ ಇರಬಹುದು ಆದರೆ, ಜವಾಬ್ದಾರಿಯುತ ಅಪ್ಪ ನೀಡುವ ಬೋಧನೆ, ಧೈರ್ಯ, ಸಾಹಸ, ಶಿಸ್ತು, ಎಲ್ಲವೂ ಸದೃಢ ಮಕ್ಕಳನ್ನು ರೂಪಿಸುತ್ತದೆ, ಹಾಗೆಯೇ ಮಕ್ಕಳಲ್ಲಿ ದ್ವೇಷ, ಅಸೂಯೆ, ಆಸ್ತಿಯ ಆಸೆಯನ್ನು ಹುಟ್ಟಿಸಿ ಕುಟುಂಬ ದಲ್ಲಿ ಕೆಟ್ಟ ಹುಳುವಾಗಿ ಬದುಕುವ ಮಕ್ಕಳನ್ನು ಪೋಷಿಸುವ ಅನೇಕ ಪೋಷಕರು ತನ್ನ ಮಕ್ಕಳ ಭವಿಷ್ಯವನ್ನು ದುಷ್ಟರಗೋಳಿಸುತ್ತಾರೆ. ಸಂಸಾರವೆಂಬ ರಥವನ್ನು ಸರಿಯಾಗಿ ಎಳೆಯುವ ತಂದೆ ಮತ್ತು ತಾಯಿ ಸಂತಸದ ಜಾತ್ರೆಯನ್ನು ಸೃಷ್ಟಿರಿಸುತ್ತಾರೆ, ತಪ್ಪಿದಲ್ಲಿ ಸಂಸಾರದ ದಾರಿಯನ್ನೇ ತಪ್ಪಿಸುತ್ತಾರೆ.  

        ಪ್ರತೀ ಮಕ್ಕಳು ಹುಟ್ಟುವಾಗ ಮುಗ್ದರಾಗಿ ಇರುತ್ತಾರೆ ಮನೆಯೇ ಮೊದಲ ಪಾಠ ಶಾಲೆ ಎಂಬಂತೆ ಹೆಚ್ಚಿನ ವಿಷಯಗಳನ್ನು ತನ್ನ ಮನೆಯಲ್ಲಿ ಕಲಿತು ಸಮಾಜದಲ್ಲಿ ವ್ಯಕ್ತಪಡಿಸುತ್ತಾರೆ. ತಂದೆಯನ್ನು ಬೇಗ ಕಳೆದುಕೊಂಡ ಮಕ್ಕಳು ಜೀವನದುದ್ದಕ್ಕೂ ಅಪ್ಪನನ್ನು ನೆನೆಸುತ್ತ ಅಪ್ಪನ ಸಮಾನರಾಗಿರುವ ಜನರಲ್ಲಿ ಪ್ರೀತಿಯನ್ನು ಬಯಸುತ್ತಾ ಲೋಕಕ್ಕೆ ತನ್ನ ಅಪ್ಪನ ಆದರ್ಶಗಳನ್ನು ತೋರಿಸುತ್ತಾರೆ, ಸತ್ಯ ನ್ಯಾಯ ನೀತಿಯನ್ನು ಪಾಲಿಸಿ ಸಮಾಜಕ್ಕೆ ಆಸರೆಯಾಗಿ ನಿಲ್ಲುತ್ತಾರೆ.  ತಾನು ಮುದುಕನಾದರೂ ತನ್ನ ಅಪ್ಪ ಜೀವಂತವಾಗಿದ್ದು ಸಮಾಜಕ್ಕೆ ತೊಂದರೆಗಳನ್ನು ಕೊಡುವ ಅಪ್ಪ ಮಕ್ಕಳು ಬದುಕಿನಲ್ಲಿ ಅನ್ಯರಿಗೆ ತೊಂದರೆಯನ್ನು ಕೊಡುತ್ತಾ ಬದುಕುತ್ತಾರೆ. 

     ಅಪ್ಪ ಏನು ಮಾಡಿ ಹಾಕಿಲ್ಲವಾದರೂ ತೆಗಳಬೇಡ, ಅಪ್ಪ ಎಷ್ಟು ಮಾಡಿ ಹಾಕಿದ್ದರು ಹಿಗ್ಗಬೇಡ, ಅಪ್ಪ ಬೈದರೆಂದು ಮನೆಯ ಬಿಟ್ಟು ಹೋಗಬೇಡ, ಅಪ್ಪ ಏನು ಮಾಡಿದರೂ ನಿನಗಾಗಿ ನಿನ್ನ ಜೀವನಕ್ಕಾಗಿ. ಈ ಹಿಂದೆ ಮಾಡಿದ ತಪ್ಪುಗಳನ್ನು ಕ್ಷಮಿಸಿ ಅಪ್ಪಾಜಿ ಎಂದು ಕಾಲಿಗೆ ಬಿದ್ದು ಕೇಳು, ಅಪ್ಪನ ವಯಸ್ಸಿನ, ಅಥವಾ ಹಿರಿಯರಲ್ಲಿ ಅತೀ ಹೆಚ್ಚು ಮಾತನ್ನಾಡು, ಅಪ್ಪ ನೆಂಬ ಶಕ್ತಿಯ ಕಾಲಿಗೆ ಬಿದ್ದು ನಮಸ್ಕರಿಸುತ್ತಲೇ ಇರು ನಿನ್ನ ಜೀವನ ಸಾರ್ಥಕ ವಾಗುವುದು.

    ✍🏿ಮಾಧವ. ಕೆ ಅಂಜಾರು 

Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ