ಲೇಖನ -80)- ಕ್ಷಮೆ ಇರಲಿ - ಕ್ಷಮಿಸಿ ಬಿಡು ನನ್ನನು , ಈ ಹಿಂದೆ ನಾನು ಮಾಡಿರುವ ಪ್ರತಿ ತಪ್ಪಿಗೆ ಕ್ಷಮೆಯಿರಲಿ.
(ಲೇಖನ -80)- ಕ್ಷಮೆ ಇರಲಿ - ಕ್ಷಮಿಸಿ ಬಿಡು ನನ್ನನು , ಈ ಹಿಂದೆ ನಾನು ಮಾಡಿರುವ ಪ್ರತಿ ತಪ್ಪಿಗೆ ಕ್ಷಮೆಯಿರಲಿ. ನಾನು ನಿನ್ನ ಹೀಯಾಳಿಸಿರಬಹುದು, ನಾನು ನಿನನ್ನು ಬೈದಿರಬಹುದು, ನಾನು ನಿನ್ನನ್ನು ಹೊಡೆದಿರಬಹುದು, ನಾನು ನಿನಗೆ ಸಂತೋಷ ಕೊಡದಿರಬಹುದು, ಗೊತ್ತಿಲ್ಲದೆ ಮಾಡಿದ ಪ್ರತಿಯೊಂದು ತಪ್ಪಿಗೆ ನಿನ್ನಲ್ಲಿ ಕ್ಷಮೆ ಕೇಳುವೆ, ಎನ್ನ ಗುರುವೇ, ಎನ್ನ ತಂದೆ ತಾಯಿ, ಬಂದು ಬಳಗ, ಸಂಬಂಧಿಗಳೇ, ಮತ್ತು ನನ್ನ ಹೆಂಡತಿ ಮಕ್ಕಳೇ. ಸಹ ಕೆಲಸಾಗರರೇ, ಎನ್ನ ಶ್ರಮಕ್ಕೆ ಬೆಲೆ ಕೊಡುವ ನೀವುಗಳೇ ನನ್ನಿಂದ ನಿಮಗೆ ನೋವಾಗಿದ್ದರೆ ಕ್ಷಮಿಸಿಬಿಡಿ. ಈ ಪ್ರಪಂಚದಲ್ಲಿ ಬದುಕಿರುವ ಪ್ರತೀ ಜೀವಿಗಳೇ, ನನ್ನನು ಕ್ಷಮಿಸು. ಮಾನವನಾದ ಎನಗೆ ದ್ವೇಷ, ಮೋಹ, ಮದ ಮತ್ಸರ, ನಗು, ಗೌರವ, ಸೌಜನ್ಯ, ಮರ್ಯಾದೆ, ಸಹಾಯ, ಪ್ರೀತಿ, ಪ್ರೇಮ ಎಲ್ಲವನ್ನು ಕಲಿಸಿದ್ದಾರೆ, ನನ್ನ ಇತಿಮಿತಿಯನ್ನು ದಾಟಿ ವ್ಯವಹರಿಸಿದ್ದರೆ ದಯವಿಟ್ಟು ಕ್ಷಮಿಸಿಬಿಡು.
ನನ್ನ ವಯಸ್ಸು ಇದ್ದರೆ ಇರಬಹುದು 60 70 80, ಅದಕ್ಕಿಂತಲೂ ಮುಂಚೆ ನಾನು ಇಹಲೋಕ ತ್ಯಜಿಸಬಹುದು, ಭವಿಷ್ಯವನ್ನು ಅರಿಯದ ನಾನು ಈವರೆಗೆ ಇರುವುದೇ ನಿಮ್ಮೆಲ್ಲರ ಆಶೀರ್ವಾದದಿಂದ, ದೇವರು ನೀಡಿರುವ ಆಯುಷ್ಯದಿಂದ, ಮತ್ತು ಆರೋಗ್ಯದಿಂದ. ನನ್ನ ಬದುಕಿನಲ್ಲಿ ಆಸೆ ಆಕಾಂಕ್ಷೆಗಳು ಜೀವಂತವಾಗಿದೆ, ಆಸೆ ಆಕಾಂಕ್ಷೆಗಳಿಗೆ ನಿಮ್ಮನ್ನು ಬಲಿಪಶು ಮಾಡಲು ನನ್ನ ನನ್ನ ಮನಸು ಒಪ್ಪದು, ಆಡಂಬರದ ಜೀವನ ನನ್ನ ಆಯ್ಕೆ ಅಲ್ಲ, ಅನ್ಯಾಯ ಸಂಪಾದನೆ ನನ್ನಿಂದ ಆಗೋಲ್ಲ, ಇನ್ನೊಬ್ಬರ ಮನೆ ಹಾಳು ಮಾಡಿ ಬದುಕುವ ಕೆಲಸ ಎನಗೆ ಸಾಧ್ಯವೇ ಇಲ್ಲ, ನ್ಯಾಯ ಸಂಪಾದನೆ ಎನಗಿದ್ದರೆ ಅಷ್ಟೇ ಸಾಕು. ನನ್ನ ಶ್ರಮ ಎನ್ನನು ಉದ್ದರಿಸಲಿ. ನನ್ನ ಪುಣ್ಯ ನನ್ನ ಕೈ ಸೇರಲಿ. ದೇವರಾಗಲು ಎನಗೆ ಸಾಧ್ಯವಿಲ್ಲ, ಪ್ರಪಂಚ ತೃಪ್ತಿ ಪಡಿಸಲು ಎನಗೆ ಸಾಧ್ಯವಿಲ್ಲ, ಯಾರಿಗೂ ಕೆಡುಕು ಬಯಸದೇ ಬದುಕುವ ಜೀವ, ಜೀವನ ಎನ್ನದು. ನಿನಗಿಷ್ಟವಾಗುತ್ತೇನೋ, ಇಲ್ಲವೋ ನನಗೆ ತಿಳಿಯದು, ಆದರೆ ನಾಟಕವಾಡುವ ಜೀವನ ನನ್ನಿಂದ ಸಾಧ್ಯವಾಗದು.
ಕಳೆದ ಬಾರಿ, ಕರೋನವೆಂಬ ಮಹಾಮಾರಿಯಿಂದ, ಅದೆಷ್ಟೋ ನನ್ನ ಪ್ರೀತಿ ಪಾತ್ರರು, ಇಹಲೋಕ ತ್ಯಜಿಸಿಬಿಟ್ಟರು, ಅದೆಷ್ಟೋ ನನ್ನ ಊರಿನ ಗೆಳೆಯ ಗೆಳತಿಯರು, ಇಹಲೋಕ ತ್ಯಜಿಸಿಬಿಟ್ಟರು, ನನ್ನ ಕಣ್ಣೆದುರೇ ಸಾಲು ಸಾಲು ಮರಣಗಳನ್ನು ಕಂಡು ಬಿಟ್ಟೆ, ನನ್ನ ಕಣ್ಣೆದುರೆ ಅತಿ ಐಶ್ವರ್ಯವಂತರು ಮಣ್ಣಾಗಿ ಹೋದರು, ನನ್ನ ಕಣ್ಣೆದುರೇ ನಮ್ಮ ಪ್ರೀತಿ ಪಾತ್ರ ಜನರು ಮಾಯವಾಗಿ ಬಿಟ್ಟರು. ಕಳೆದ ದಿನ ಸಿಕ್ಕಿರುವವನು ಮರುದಿನ ಸಿಗಲೇ ಇಲ್ಲ, ಕಳೆದ ದಿನ ಸಂತೋಷ ವ್ಯಕ್ತಪಡಿಸಿದವನು ಮರುದಿನ ಕಾಣಲಿಲ್ಲ, ಕಳೆದ ದಿನ ಅಹಂಕಾರ ತೋರಿಸಿದವನು, ಮರುದಿನ ಹೆಣವಾಗಿ ಬಿಟ್ಟ, ಕಳೆದ ದಿನ ಅನ್ಯಾಯವಾಗಿ ಸಂಪಾದಿಸಿದವನು ಹಣವನ್ನು ತಿನ್ನದೇ ಬೂದಿಯಾಗಿ ಬಿಟ್ಟ. ಇಂದು ನಾನು ಬದುಕಿರುವೆನೆಂದರೆ ಅದು ಎನ್ನ ಪುಣ್ಯವೇ? ಇಂದು ಏನು ಬದುಕಿರುವೆ ಎಂದರೆ ನಾಳೆ ಮಾಡುವ ಪಾಪಕ್ಕೆ? ಅಲ್ಲ, ಎನ್ನ ಬದುಕು ಅಲ್ಪವಾದರೂ ಇನ್ನೊಬ್ಬರಿಗೆ ಸಹಾಯವಾಗಲಿ. ಎನ್ನ ಬದುಕು ಮತ್ತವರಿಗೆ ತೊಂದರೆ ಕೊಡದೆ ಇರಲಿ. ಎನ್ನ ಬದುಕು ಆರೋಗ್ಯ ಸಂಪತ್ತನ್ನು ಹೊಂದಿರಲಿ, ಎನ್ನ ಬದುಕು ಸುಖಮಯವಾಗಿರಲಿ, ಆದರೆ ನಾನು ಮಾಡುವ ಪಾಪ ಎನ್ನ ಬೆನ್ನು ಹತ್ತಿ ಬಿಡಲಿ.
ಹೊಸ ವರುಷ ಬರುತ್ತಿದೆ, ಹೊಸ ಹರುಷ ತರುತ್ತಿರಲಿ, ಹೊಸ ಹೊಸ ಚಿಂತನೆಗಳು ಮೂಡಿಬರಲಿ, ಪ್ರೀತಿ ಪ್ರೇಮ, ನಗು, ಸಂತೋಷ ಇವೆಲ್ಲವೂ ತುಂಬಿ ತುಳುಕುತ್ತಿರಲಿ, ಆದರೆ ಇನ್ನೊಬ್ಬರಿಗೆ ನೋವನ್ನುಂಟು ಮಾಡದಿರಲಿ. ಪಾಪಿಗಿರುವುದಿಲ್ಲ ನ್ಯಾಯ ನೀತಿ ಸತ್ಯ ಧರ್ಮ, ಕೋಪಿಗೆ ಇರುವುದಿಲ್ಲ ಕರುಣೆ, ಆಸೆ ಬುರುಕನಿಗೆ ಇರುವುದಿಲ್ಲ ಸಂಬಂಧಗಳು. ದ್ವೇಷದಿಂದ ಬದುಕುವವನಿಗೆ ಪ್ರಪಂಚವೆಲ್ಲ ಕಪ್ಪಾಗಿ ಕಾಣುತ್ತದೆ, ಅತಿಯಾದ ಮೋಹವು ತನ್ನನ್ನೇ ಸರ್ವನಾಶಗೊಳಿಸುತ್ತದೆ. ಯಾರು ಅರಿತಿಹರು ನಾಳೆಯನ್ನು? ಯಾರು ಆರತಿಹರು ಆಯುಷ್ಯವನ್ನು? ಯಾರು ಅರಿತಿರ್ಹರು ಮರು ಕ್ಷಣವನ್ನು?
ಮುಂಬರುವ ದಿನಗಳಲ್ಲಿ , ಲೋಕಕಲ್ಯಾಣವಾಗಲಿ, ಮುಂಬರುವ ದಿನಗಳಲ್ಲಿ ಪಾಪಿಗಳ ಸರ್ವನಾಶವಾಗಲಿ, ಮುಂಬರುವ ದಿನಗಳಲ್ಲಿ ನಮ್ಮೆಲ್ಲರಿಗೂ ಒಳಿತಾಗಲಿ. ನಮ್ಮ ಮನೆಗಳು ಉದ್ಧಾರವಾಗಲಿ, ನನ್ನ ಮನವು ಶುದ್ದಿಯಾಗಿರಲಿ, ನನ್ನ ಊರು ಹಸಿರಾಗಿರಲಿ, ನನ್ನ ದೇಶದ ಭವಿಷ್ಯ ಉಜ್ವಲವಾಗಲಿ. ತಪ್ಪಾಗಿ ಬರುವವರಿಗೆ ನನ್ನಲ್ಲಿ ಆಸ್ಪದವಿಲ್ಲ, ಹೊಟ್ಟೆ ಕಿಚ್ಚನ್ನು ಪಡುವವರಿಗೆ ನನ್ನಲ್ಲಿ ಜಾಗವಿಲ್ಲ, ಮೋಸ ವಂಚನೆ ಮಾಡುವವರಿಗೆ ನನ್ನಲ್ಲಿ ಕಿಂಚಿತ್ತು ಬೆಲೆ ಇಲ್ಲ, ಸುಳ್ಳು ಹೇಳಿ ಬದುಕುವವರಿಗೆ ನನ್ನ ಸಹಾಯವಂತೂ ಇಲ್ಲ. ಲೋಕವನ್ನು ಮೋಸಗೊಳಿಸಿ ಆಡಂಬರದಲ್ಲಿ ಇರುವವನಿಗಂತೂ ಆಸ್ಪದವೇ ಇಲ್ಲ.
ಈ ಲೇಖನ ನನ್ನ ಪ್ರೀತಿಯ ಗೆಳತಿಗೆ ಅರ್ಪಣೆ...
ಯುಗ ಯುಗಾದಿ, ಕಳೆದರೂ ಯುಗಾದಿ ಮರಳಿ ಬರಲಿ, ವರುಷ ವರುಷ ಕಳೆದರೂ ಹರುಷ ಸದಾ ಇರಲಿ. ಏನೇ ಬರಲಿ ಏನೇ ಇರಲಿ ಆರೋಗ್ಯ ಮಾತ್ರ ಇರಲಿ.
ನಿಮಗೆಲ್ಲರಿಗೂ ಹೊಸ ವರುಷದ ಶುಭಾಶಯಗಳು
✍️Anjar Madhav Naik
Comments
Post a Comment