(ಲೇಖನ 78 ) ಅರಣ್ಯ ನಾಶ = ನಮ್ಮೆಲ್ಲರ ನಾಶ. ಎಗ್ಗಿಲ್ಲದೇ ನಡೆಯುತ್ತಿದೆ ಅರಣ್ಯ ಸಂಪತ್ತಿನ ಲೂಟಿ

 (ಲೇಖನ 78 ) ಅರಣ್ಯ ನಾಶ = ನಮ್ಮೆಲ್ಲರ ನಾಶ. ಎಗ್ಗಿಲ್ಲದೇ ನಡೆಯುತ್ತಿದೆ ಅರಣ್ಯ ಸಂಪತ್ತಿನ ಲೂಟಿ, ಪ್ರಕೃತಿಯ  ಅತ್ಯಾಚಾರ, ಕಾಡನ್ನು ನಾಶಪಡಿಸಿ, ಪಟ್ಟಣವನ್ನಾಗಿ ಪರಿವರ್ತಿಸಲು ಪ್ರಭಾವಿ ವ್ಯಕ್ತಿಗಳ ಮಹಾಕೂಡುಗೆ. ಅಗತ್ಯವಿಲ್ಲದ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದು, ಹೆಕ್ಟೇರುಗಟ್ಟಲೆ ದಟ್ಟಾರಣ್ಯವನ್ನು ಅಗೆದು, ಸುಂದರಮಯ ವಾದ  ಬೆಟ್ಟಗುಡ್ಡಗಳನ್ನು ಸಮತಟ್ಟ ಮಾಡಿ  ಕಾನೂನಿನ  ಲೋಪದೋಷಗಳನ್ನು ದುರುಪಯೋಗ ಮಾಡಿಕೊಂಡು, ಕಾಡಿನ ರಕ್ಷಕರೆಲ್ಲರೂ ಭಕ್ಷಕರಾಗಿ ಮಾರ್ಪಟ್ಟು ತುಂಬಾ ವ್ಯವಸ್ಥಿತವಾಗಿ ಹಣದ ಕಂತೆಯನ್ನು ಕಟ್ಟಿಕೊಂಡು ಐಷಾರಾಮಿ ಬದುಕು ಮಾಡುತ್ತಿರುವ ಕೆಲವರು ಭವಿಷ್ಯದ ಬಗ್ಗೆ ಚಿಂತೆ ಇಲ್ಲದೆ ಬದುಕುತ್ತಿದ್ದಾರೆ. ಈಗಾಗಲೇ  ಹಲವು ರೀತಿಯ ಪ್ರಕೃತಿ ವಿಕೋಪಗಳನ್ನು ಎದುರಿಸಲಾಗದೆ  ನಮ್ಮ ವ್ಯವಸ್ಥೆಗಳೇ ಮಾಡಿ ಕೊಟ್ಟ ಗುಂಡಿಗೆ ಬಿದ್ದು ಸರ್ವನಾಶವಾಗುತ್ತಿದ್ದಾರೆ. ಇತ್ತೀಚೆಗೆ  ಸರ್ಕಾರಿ ಜಾಗದ ಅಕ್ರಮ ಸಕ್ರಮಕ್ಕೆ ಅರ್ಜಿಯನ್ನು ಕರೆದಾಗ, ರಾಜಕೀಯ ಶಕ್ತಿ, ರಾಜಕೀಯ ಚೇಲಾಗಳು ತನ್ನ ಶಕ್ತಿಯನ್ನು ದಟ್ಟಾರಣ್ಯ  ಕಡಿದು  ಕೃಷಿಯೆಂಬ ಸುಳ್ಳು ಕಾರಣ ಕೊಟ್ಟು, ದೊಡ್ಡ ದೊಡ್ಡ ಮರಗಳನ್ನು ನೆಲಕ್ಕುರುಳಿಸಿ ಜಾಗವನ್ನು ಭಕ್ಷಿಸುವ  ಕೆಲಸಕ್ಕೆ ಕೈ ಹಾಕುತ್ತಿದ್ದಾರೆ. ಕೆಲವು ಅಪ್ರಾಮಾಣಿಕ  ಅಧಿಕಾರಿಗಳು, ಗ್ರಾಮಸೇವಕರು, ಗ್ರಾಮ ಲೆಕ್ಕಾಧಿಕಾರಿ, ಅಧ್ಯಕ್ಷರು ಸದಸ್ಯರು, ಅರಣ್ಯ ಅಧಿಕಾರಿಗಳು, ಸಂಪೂರ್ಣ ವ್ಯವಸ್ಥೆ ಕೈ ಜೋಡಿಸಿಕೊಂಡು  ತನಗೆ ಬರುವ ಪಾಲನ್ನು  ಹಂಚಿಕೊಂಡು  ಹಾಯಾಗಿ ನಿದ್ರಿಸುತ್ತಿದ್ದಾರೆ.



        ಇಂದಿನ ಮಾಧ್ಯಮಗಳಲ್ಲಿ, ಕಾಡು ನದಿ ಪ್ರಕೃತಿ ಉಳಿಸುವ ಬಗ್ಗೆ ಯಾವುದೇ ಸುದ್ದಿಗಳು ಬರುವುದೇ ಇಲ್ಲ, ಜಾತಿ ಧರ್ಮ ಬಣ್ಣ ಇಂತಹ ಹಲವು ಸುದ್ದಿಗಳು ತಿಂಗಳಿಗೊಮ್ಮೆಯಾದರೂ ನೋಡುತ್ತಿರುವ ನಾವೆಲ್ಲರೂ, ಪ್ರಕೃತಿಯನ್ನು ಉಳಿಸುವ, ಬೆಳೆಸುವ ಕಾರ್ಯಕ್ರಮಗಳನ್ನು ನೋಡುತ್ತಲೇ ಇಲ್ಲ. ಈ ಲಂಚಾವತಾರ, ಎಲ್ಲಾ ವಿಚಾರಗಳನ್ನು ಮುಚ್ಚಿ ಬಿಟ್ಟು ಕಾಡನ್ನು ನಾಶ ಮಾಡಲು ಸುಲಭ ದಾರಿಯಾಗಿ ಮಾರ್ಪಾಡಾಗಿದೆ. ನಮ್ಮ ಊರು ಬಹಳಷ್ಟು ಅಭಿವೃದ್ಧಿ ಹೊಂದಿದೆ ಹೇಗೆಂದರೆ ಎಕರೆಗಟ್ಟಲೆ ಕಾಡನ್ನು ನಾಶ ಮಾಡಿ ಲೇಔಟ್ಗಳಲ್ಲಿ ಪರಿವರ್ತಿಸಿ ಸುಂದರವಾದ ಮನೆಗಳನ್ನು ನಿರ್ಮಿಸಲು ಅವಕಾಶವನ್ನು ಮಾಡಿಕೊಟ್ಟಾಗಿದೆ. ಕೊನೆಯ ಪಕ್ಷ ಒಂದು ಎಕರೆ ಜಾಗವನ್ನು ಸಮತಟ್ಟ ಮಾಡಿದರೆ ಅದರಲ್ಲಿದ್ದ ಮರ-ಗಿಡಗಳನ್ನು  ಎಣಿಸಿ  ಸುಮಾರು 50 ಶತಮಾನದಷ್ಟಾದರೂ ನೆಡುವಂತೆ ಮಾಡುತ್ತಿದ್ದರೆ ನಮ್ಮ ಅರಣ್ಯ ಸಂಪತ್ತುಗಳು ಅಲ್ಪವಾದರೂ ಉಳಿಯುತ್ತಿತ್ತು.

        ಸರ್ಕಾರಿ ರಜಾ ದಿನಗಳನ್ನು ಆಯ್ಕೆ ಮಾಡಿಕೊಂಡು ರಿಜಿಸ್ಟ್ರೇಷನ್ ನಂಬರ್ ಗಳೇ ಇಲ್ಲದ ಬುಲ್ಡೋಜರ್ಗಳನ್ನು ತಂದು 24 ಗಂಟೆಯೊಳಗೆ ಹಸಿರು ಭೂಮಿಯನ್ನು ಬರಡು ಭೂಮಿಯಾಗಿಸಿ ದೊಡ್ಡ ಸಾಧನೆಯನ್ನು ಮಾಡುತ್ತಿದ್ದಾರೆ. ಎಲ್ಲವೂ ಕಣ್ಣೆದುರೇ ನಡೆಯುತ್ತಿದ್ದರು, ಏನೋ ಗೊತ್ತಿಲ್ಲದಂತೆ ವರ್ತಿಸುವ ಬೇಜವಾಬ್ದಾರಿ ಜನರು ಕೂಡ ಬೆನ್ನೆಲುಬಾಗಿ ನಿಲ್ಲುತ್ತಿದ್ದಾರೆ. ಬಹಳ ದುಃಖದ ಸಂಗತಿ ಎಂದರೆ ಈಗಾಗಲೇ ಕೋಟಿಗಟ್ಟಲೆ ಹಣ ಮಾಡಿರುವ ಒಂದಷ್ಟು ಹಣವಂತರು ಮರಗಳನ್ನು ಕಡಿಯಲು, ಪ್ರಕೃತಿಯನ್ನು ಸುಲಭವಾಗಿ ನಾಶ ಮಾಡಲು ಉಪಯೋಗಿಸಲ್ಪಡುವ ಬುಲ್ಡೋಜರ್ ಮತ್ತು ಮರ ಕಡಿಯುವ  ಯಂತ್ರಗಳನ್ನು ನಾಲ್ಕು ಪಟ್ಟು ಹೆಚ್ಚು ತೆಗೆದುಕೊಂಡು, 50 ಪಟ್ಟು ಪ್ರಕೃತಿಯನ್ನು ಸುಲಭವಾಗಿ ನಾಶ ಮಾಡುತ್ತಿದ್ದಾರೆ. ಇದೇ ರೀತಿ ಮುಂದುವರೆದರೆ ಉಡುಪಿ ಕಾರ್ಕಳ ಬ್ರಹ್ಮಾವರ ಆಗುಂಬೆ ಶಿವಮೊಗ್ಗ ಸೋಮೇಶ್ವರ ಕುಂದಾಪುರ ಶಂಕರನಾರಾಯಣ ಹಾಲಾಡಿ, ಸುಬ್ರಹ್ಮಣ್ಯ, ಪಶ್ಚಿಮ ಘಟ್ಟಗಳು  ಬಹಳ ಬೇಗವಾಗಿ  ಪಟ್ಟಣಗಳಾಗಿ ಮಾರ್ಪಡುವುದರಲ್ಲಿ ಯಾವುದೇ ಸಂಶಯವಿಲ್ಲ. ನಮ್ಮ ಮರಿ ಮಕ್ಕಳು ನೀರು ಗಾಳಿ ಮಳೆಗಳಿಲ್ಲದೆ ಪರದಾಡುವ ಸ್ಥಿತಿ ಖಂಡಿತ ಬರುತ್ತದೆ. ಸಾಲು ಸಾಲಾಗಿ ಪ್ರಕೃತಿಯ ವಿಕೋಪಕ್ಕೆ  ಪ್ರಾಣಿ-ಪಕ್ಷಿಗಳ ಜೊತೆಗೆ ಮನುಜರು ಸಾಯುವ ಸ್ಥಿತಿ ಖಂಡಿತವಾಗಿಯೂ ಬರುತ್ತದೆ.

            ಅದಕ್ಕಿಂತ ಬದಲು ಪ್ರಸ್ತುತ ಸ್ಥಿತಿಯಲ್ಲಿ ಅರಣ್ಯ ನಾಶ ಮಾಡುತ್ತಿರುವ ಅವಿವೇಕಿ ಜನರ ಅಂತ್ಯವಾಗಲಿ, ಹಣದಾಸೆಗೆ ಬಿದ್ದು ಪ್ರಕೃತಿ ನಾಶಕ್ಕೆ ಕೈಜೋಡಿಸುವವರ ಅಂತ್ಯವಾಗಲಿ, ಭೂಮಿಯನ್ನು ಹಸಿರಾಗಿಸಿ  ಸಾವಿರ ಜನರಿಗೆ ಉಸಿರಾಗಿ ಬದುಕುವ ವಿವೇಕಿ ಜನರು, ಪ್ರಕೃತಿ ಪ್ರಿಯರ ಸಂಖ್ಯೆ ಹೆಚ್ಚಾಗಲಿ.

       ಭಾರತದ ಅನುರಾಗ ನೀನಾಗು, ಭೂಮಿ ತಾಯಿಯ ಸೌಂದರ್ಯಕ್ಕೆ ಬಲವಾಗು. ನಾವೆಲ್ಲರೂ ಸೇರಿ  ಪ್ರಕೃತಿಯನ್ನು ಉಳಿಸಲು  ಮುಂದಾಗೋಣ. 🙏

                          ✍️Madhav. K. Anjar 
















Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ