Posts

Showing posts from April, 2026

ಕಿರಣವಾಗಿ

ಜೇನಾಗಿ ಹಾಲಾಗಿ ನಿನ್ನ ಪ್ರೇಮಕೆ ಸಿಲುಕಿ, ರವಿಯನ್ನೇ ಮೀರುವ ಬಾಳಿನ ಕಿರಣವಾಗಿ ನಿನ್ನ ಕಣ್ಣು ನೋಡಲು ಮನವು ಮರುಳಾಗಿ, ನಿನ್ನ ನೆನಪಿನ ದಾರಿಯಲ್ಲಿ ಜೀವನವೇ ಸಾಗಿಹೋಗಿ ನಿನ್ನ ನಗುವಿನ ಬೆಳಕಲ್ಲಿ ಕತ್ತಲು ಕರಗಿಹೋಗಿ, ನೀ ಇದ್ದರೆ ಸಾಕೆಂದು ಹೃದಯವೇ ಹಾಡಿಹೋಗಿ ಜೊತೆಯಾಗಿ ಹಿತವಾಗಿ  ಬದುಕು ಸಾಗಲಿ  ನೆಮ್ಮದಿಯಾಗಿ  ನಾನಿರುವುದೇ ನಿನಗಾಗಿ  ✍🏻ಮಾಧವ ಕೆ ಅಂಜಾರು 

ಮಧುರತೆ

ಸಿಹಿಜೇನಿನ ಗೂಡಿನೊಳಗೆ ನಿನ್ನದೇ ಮಧುರತೆ ಮಳೆಯ ತುಂತುರು ಹನಿಗಳಲಿ  ನಿನ್ನದೇ ಸ್ಪರ್ಶವೆ.. ಮನದಾಳದ ಪ್ರತೀ ಕನಸಿನಲ್ಲಿ ನಿನ್ನದೇ ಉಪಸ್ಥಿತಿಯೆ ಚಂದ್ರನು ಮಿಂಚುವ ರಾತ್ರಿ ಕೂಡ ನಿನ್ನದೇ ಹೊಳಪಿದೆ ನನ್ನ ಹೃದಯದ ಪ್ರತೀ ಬಡಿತಕೂ  ನಿನ್ನದೇ ನಾದವಿದೆ            ✍🏻ಮಾಧವ. ಕೆ. ಅಂಜಾರು 

ಪ್ರೇಯಸಿ

ಓ ನನ್ನ ಪ್ರೇಯಸಿ, ನೀ ನನ್ನ ಕೀರ್ತಿ, ನಿನ್ನೊಡಲ ಪ್ರೇಮಕೆ ನಾನೇ ಸಾರಥಿ. ನಿನ್ನ ನಗುವ ಕಾಣಲು ಈ ಜೀವ ಕಾತುರ, ಬಯಸಿ ಬಂದ ಭಾಗ್ಯ, ನೀ ನನ್ನ ದೇವತೆ. ನಿನ್ನ ಕಣ್ಣಲಿ ಕಂಡೆ ಸ್ವರ್ಗದ ಸೌಂದರ್ಯ, ನಿನ್ನ ಮಾತಲಿ ಕೇಳೆ ಮನದ ಮಧುರ ಧ್ವನಿ. ನಿನ್ನ ಹೆಜ್ಜೆಯ ದಾರಿಗೆ ಹೂಗಳು ಅರಳುವವು  ನಿನ್ನ ನೆರಳಾದರೂ ಸಾಕು ಜೀವನ ಪೂರ್ಣವಾಗುವುದು. ✍🏻ಮಾಧವ ಕೆ ಅಂಜಾರು 

ಕನಸು

ಕಾಡುವೆ ಕನಸಾಗಿ  ಹಾರುವ ಹಕ್ಕಿಯಾಗಿ  ನೀನಿರುವೆ ನನ್ನ ಜೊತೆಯಾಗಿ  ಈ ಪ್ರೀತಿಯ ಬೆಸುಗೆ  ಇರಲು ಜೊತೆಯಾಗಿ  ನೆಮ್ಮದಿ ನನಗಾಗಿ  ತಂಪಾಗಿ ಬೀಸುವ ಗಾಳಿಯಂತೆ  ಇಂಪಾಗಿ ಹಾಡುವ ಕೋಗಿಲೆಯಂತೆ  ನಿನ್ನ ಪ್ರತೀ ನುಡಿಯು  ಇರಲಿ ನನ್ನ ಜೊತೆಯಾಗಿ  ಕಾಡುವ ಕನಸಿಗೆ ಜೊತೆಗಿರು  ಉಸಿರಾಗಿ        ✍🏻ಮಾಧವ ಕೆ ಅಂಜಾರು 

ಅರಮನೆ

ಒಂದಷ್ಟು ಅಮಾಯಕರನ್ನು  ಬಲಿಕೊಟ್ಟು   ದಿನಕ್ಕೆ ಕುಡಿದ ಮೂರು ಬೀರು   ತೆಗೆದುಕೊಂಡ ಒಂದು ದೊಡ್ಡ ಕಾರು  ಮನೆಯೊಳಗೆ ಭಯವೇ   ಮನೆಯ ಹೊರಗೂ ಭಯವೇ   ಎಲ್ಲಿ ಹೋದರೂ ಅವನಿಗಿಲ್ಲ   ನೆಮ್ಮದಿ ಒಂದು ಚೂರು   ಸಂಪಾದಿಸಿದ ಸಂಪತ್ತೆಲ್ಲ   ಕಣ್ಣಿಗೆ ಕಾಣದ ಶಾಪವಾಗಿ   ನಿದ್ದೆಯನ್ನೇ ಕದಿಯುತಿದೆ   ನಿಶ್ಶಬ್ದದ ಕೂಗು ಆಗಿ   ನಗುವ ಮುಖದ ಹಿಂದೆ   ಕಡಿದುಕೊಳ್ಳುವ ಪಶ್ಚಾತ್ತಾಪ   ಮನದಾಳದ ಕತ್ತಲಿಯಲ್ಲಿ   ಹರಿದು ಹೋಗುತಿದೆ ಅವನ ಸ್ವಭಾವ   ಇತರರ ಕಣ್ಣೀರಿನಿಂದ   ಕಟ್ಟಿದ ಆ ಅರಮನೆ   ಒಂದು ದಿನ ಕುಸಿಯುತ್ತದೆ   ಸತ್ಯದ ಭಾರ ತಡೆಯದೆ   ಧನವೇ ದೇವರೆಂದವನು   ಮಾನವೀಯತೆ ಮರೆತವನು   ಕೊನೆಗೆ ಅರಿಯುವನು   ನೆಮ್ಮದಿಯ ಬೆಲೆ ಹಣವಲ್ಲವೆಂದು      ✍🏻ಮಾಧವ ಕೆ ಅಂಜಾರು 

ನೇರ ಮಾತು

ನೇರ ಮಾತು ಕಷ್ಟವೇನಿಸಿದರೂ ಸತ್ಯದ ದಾರಿ ತೋರಿಸುತ್ತದೆ ಸುತ್ತಿ ಬಳಸಿ ಆಡುವ ಮಾತು ಕ್ಷಣಕ್ಕೆ ಸಿಹಿಯಾದರೂ ಮನದಾಳದಲ್ಲಿ ಕಹಿ ಬಿಡುತ್ತದೆ ಹೆಚ್ಚು ಮಾತುಗಳಿಂದ ಮನಸುಗಳು ದೂರವಾಗುವವು ಅಲ್ಪ ಮಾತಿನಲ್ಲೇ ಅರ್ಥಗಳು ಆಳವಾಗುವವು ಮೌನದೊಳಗಿನ ಮಾತುಗಳು ಹೃದಯವನ್ನು ಸ್ಪರ್ಶಿಸುವವು ಕಡಿಮೆ ಮಾತಾಡಿ ಬದುಕಿದರೆ ಶಾಂತಿ ನಮ್ಮನ್ನು ಸೇರುವದು ಸತ್ಯವೊಂದು ಕಠಿಣವಾದರೂ ಜೀವನವನ್ನು ಸರಿಪಡಿಸುವುದು ಸುಳ್ಳಿನ ಸಿಹಿ ಹೊದಿಕೆಯಲಿ ನಿಜದ ನೋವು ಮರೆವುದಿಲ್ಲ ಹೆಚ್ಚು ಮಾತುಗಳ ಗದ್ದಲಕ್ಕಿಂತ ಮೌನವೇ ಒಳ್ಳೆಯ ಗೆಳೆಯ          ✍🏻ಮಾಧವ. ಕೆ. ಅಂಜಾರು 

ಬದುಕೊಂದು ಕವನ,

ಬದುಕೊಂದು ಕವನ  ಅಲ್ಲಿಯ ಏರಿಳಿತಗಳೇ ಜೀವನ. ಇಂದು-ನಾಳೆಯ ಹೊಸ ಕನಸಿನ ಪುಟಗಳು, ತೆರೆಯುವ ಕ್ಷಣದಲ್ಲಿ ನನಸಾಗುವದೇ ಜೀವನ. ಸಂತಸದ ಸುರಿಮಳೆಯಲಿ ನಗು ಮೂಡುತ್ತದೆ, ದುಃಖದ ನೆರಳಲ್ಲಿ ಮನಸ್ಸು ಗಾಢವಾಗುತ್ತದೆ. ಪ್ರತಿ ಹೆಜ್ಜೆಯಲ್ಲೂ ಪಾಠವೊಂದು ಬಿಟ್ಟು, ಕಾಲವು ನಮ್ಮನ್ನು ರೂಪಿಸುತ್ತಿದೆ. ಆಸೆಯ ದೀಪಗಳು ದಾರಿಯನ್ನು ತೋರಿಸಿ, ನಂಬಿಕೆಯ ಬೆಳಕು ಹೃದಯ ತುಂಬಿ, ಬಿದ್ದಾಗಲೂ ಮತ್ತೆ ಎದ್ದೇಳುವ ಶಕ್ತಿ— ಅದೇ ಬದುಕಿನ ಸತ್ಯ. ಕ್ಷಣ ಕ್ಷಣವೂ ಕಥೆಯಾಗುತ್ತಾ, ನಮ್ಮ ಹೆಜ್ಜೆಗಳು ಗುರುತು ಬಿಡುತ್ತಾ, ಅಂತಿಮವಾಗಿ ನೆನಪಾಗುವುದು ನಾವು ನಡೆದ ಪಯಣವೇ ಜೀವನ.          ✍🏻ಮಾಧವ ಕೆ ಅಂಜಾರು 

ಜೊತೆಗಿರಬೇಕು

ತಾಯಿಯಾದವಳಿಗೂ   ತಾಯಿಯ ಮಮತೆ ಬೇಕು ದುಃಖವಿರುವಾಗ  ಸಂತೋಷವಿರುವಾಗ  ತಾಯಿ ಜೊತೆಗಿರಬೇಕು, ತಂದೆಯಾದವನಿಗೂ  ತಂದೆಯ ಮಮತೆ ಬೇಕು  ಸವಾಲೆದುರಾದಾಗ  ಜಗವ ಗೆಲ್ಲಬೇಕಾದಾಗ  ತಂದೆ ಜೊತೆಗಿರಬೇಕು  ತಂಗಿಯಾದವಳಿಗೂ  ಅಣ್ಣನ ಮಮತೆ ಬೇಕು  ತಂದೆ ತಾಯಿಯಂತೆ  ಪ್ರೀತಿ ನೀಡಬೇಕಾದಾಗ  ಭಯವಿಲ್ಲದೆ ಬದುಕಬೇಕಾದಾಗ       ✍🏻ಮಾಧವ ಕೆ ಅಂಜಾರು 

ಪ್ರಯತ್ನ

ದೇವರು ಬರೆವ ಹಣೆಬರಹಕ್ಕೆ  ಹೊಣೆಯಾದರೂ  ರಕ್ಕಸರು ಬರೆವ ಹಣೆಬರಹಕ್ಕೆ  ಹೊಣೆಯಾಗಬೇಡ  ನೀತಿವಂತರ ಮಾತಿಗೆ  ಬೆಲೆಕೊಟ್ಟರೂ  ಪಾಪಿಗಳ ಮಾತಿಗೆ  ತಲೆಬಾಗಬೇಡ  ಜೀವನವೆಂಬ ಸಾಗರದಲ್ಲಿ  ಬಿರುಗಾಳಿ ಬಂದರೂ  ದಡ ಸೇರುವ ಪ್ರಯತ್ನ  ನಿಲ್ಲಿಸಲೇ ಬೇಡ.      ✍🏻ಮಾಧವ ಕೆ ಅಂಜಾರು 

ನೆಮ್ಮದಿಯಿತ್ತು

ಅವನು ತಂದ ಒಡವೆಯೊಳಗೆ  ಬಡವರ ಶಾಪವಿತ್ತು  ದರೋಡೆಯ ಮೂಲವಿತ್ತು  ಮೋಸದ ಜಾಲಾವಿತ್ತು  ಕಣ್ಣೀರ ಹನಿಯಿತ್ತು, ಇವನು ತಂದ ಒಡವೆಯೊಳಗೆ  ನಿಯತ್ತಿನ ಏಣಿಇತ್ತು  ಸಂತೋಷದ ಕ್ಷಣಗಳಿತ್ತು  ಪ್ರೀತಿಯ ಪುಟಗಳಿತ್ತು  ಭರವಸೆಯ ದಿನಗಳಿತ್ತು  ಅವನ ಅಂತಸ್ತು ಬೆಳೆಯುತ್ತಿತ್ತು  ಆತ್ಮಸಾಕ್ಷಿ ಅಳುತ್ತಳಿತ್ತು  ಇವನ ಅಂತಸ್ತು ಬೆಳೆಯುತಿತ್ತು  ಅಂತರಾಳದ ನೆಮ್ಮದಿಯಿತ್ತು.     ✍🏻ಮಾಧವ. ಕೆ ಅಂಜಾರು