( ಲೇಖನ -85- (ಅ) ರಾಜಕೀಯವೆಂಬುದು ಒಬ್ಬರನ್ನೊಬ್ಬರು ಟೀಕೆಮಾಡಿಕೊಂಡು ಸಮಾಜದ ಸ್ವಾಸ್ತ್ಯ ಕಳೆಯುವುದೇ?
( ಲೇಖನ -85- (ಅ) ರಾಜಕೀಯವೆಂಬುದು ಒಬ್ಬರನ್ನೊಬ್ಬರು ಟೀಕೆಮಾಡಿಕೊಂಡು ಸಮಾಜದ ಸ್ವಾಸ್ತ್ಯ ಕಳೆಯುವುದೇ? ರಾಜಕೀಯದಲ್ಲಿ ಪ್ರಭುದ್ಧತೆ ಇಲ್ಲದೆ ಹೋದಲ್ಲಿ, ಪಕ್ಷಗಳು ಒಂದರ ಮೇಲೆ ಒಂದರಂತೆ ಟೀಕೆ ಟಿಪ್ಪಣಿಗಳನ್ನು ಮಾಡುತ್ತಾ, ನಿಜವಾದ ರಾಜಕೀಯವನ್ನು ಸಮಾಧಿ ಮಾಡಿದಂತೆ. ರಾಜ್ಯವನ್ನು, ಅಥವಾ ದೇಶವನ್ನಾಳಲು ರಾಜಕೀಯ ಎಂಬುದು ಬಹಳ ಪ್ರಾಮುಖ್ಯ, ಆದರೆ ನಾವೆಲ್ಲರೂ ನೋಡುತ್ತಿರುವಂತೆ ಈ ಹಿಂದೆ ಮತ್ತು ಇಂದಿನ ದಿನಗಳಲ್ಲೂ ಕೆಲವೊಂದು ಪ್ರಸಂಗಗಳನ್ನು ಅವಲೋಕಿಸಿದಾಗ ಪಕ್ಷ ಪ್ರತಿಪಕ್ಷಗಳ ಉನ್ನತ ಸ್ಥಾನದಲ್ಲಿ ಇದ್ದುಕೊಂಡು ಕೊಡುವ ಕೆಲವು ಭಾಷಣ, ಸಂದೇಶ, ಆರೋಪ ಪ್ರತ್ಯಾರೋಪಗಳು ಜನರ ದಿಕ್ಕನ್ನು ತಪ್ಪಿಸಲು ಸಹಕಾರಿ ಆದಂತಿದೆ. ಮೇಲ್ನೋಟಕ್ಕೆ ಪ್ರಜೆಗಳ ಭಾವನೆಗಳಿಗೆ ಧಕ್ಕೆ ಬರುವಂತೆ, ಪ್ರಜೆಗಳ ಸಂಸ್ಕಾರಗಳಿಗೆ ಧಕ್ಕೆ ಬರುವಂತೆ, ಧರ್ಮ ಧರ್ಮಗಳ ನಡುವೆ ದ್ವೇಷ ಹಂಚಿಕೆಯ ಭಾಷಣಗಳು, ಒಂದೊಂದು ಬಣಗಳ ನಡುವೆ ದ್ವೇಷಗಳನ್ನು ಹೆಚ್ಚಿಸುವ ಕಾರ್ಯಕ್ಕೆ ಕೆಲವರು ತುದಿಗಾಲಲ್ಲಿ ನಿಂತು ವಿಷ ಬೀಜವನ್ನು ಬಿತ್ತಿ ಸುಮ್ಮನಾಗಿಬಿಡುತ್ತಾರೆ. ರಾಜರ ಕಾಲದ ರಾಜಕೀಯಕ್ಕೂ ಇಂದಿನ ಕಾಲದ ರಾಜಕೀಯಕ್ಕೂ ಬಹಳ ವ್ಯತ್ಯಾಸವಿದೆ ಎನಿಸುತ್ತದೆ. ರಾಜರುಗಳು ತನ್ನ ದೇಶಕ್ಕೆ ಆಕ್ರಮಣಗಳಾದಾಗ ತನ್ನ ಜೀವವನ್ನೇ ಬಲಿಕೊಟ್ಟು ಪ್ರಜೆಗಳನ್ನು ಮಕ್ಕಳಂತೆ ನೋಡಿಕೊಳ್ಳುತ್ತಾ ತಪ್ಪಿದರೆ ರಾಜನಾಗಿ ತಾನು ಶಿಕ್ಷೆಗೆ ಒಳಪಡಿಸಿಕೊಳ್ಳುವ ಪ್ರಾಮಾಣಿಕ, ಧೈರ್ಯ, ಮತ್ತು ಧರ್ಮ ಯುದ್ದವನ್ನು ಮಾಡುತ್ತಿದ್ದ ಕಾಲವಾಗಿತ್ತು. ರಾಜ್ಯಕ್ಕಾಗಿ ರಾಜನು ತನ್ನ ಸರ್ವಸ್ವವನ್ನೇ ಕಳೆದುಕೊಂಡು ಪ್ರಜೆಗಳನ್ನು ರಕ್ಷಣೆ ಮಾಡುತ್ತಿದ್ದ. ಅದೆಷ್ಟೋ ಧರ್ಮ ಯುದ್ದಗಳು ಸತ್ಯವಿಲ್ಲದೆ ನಡೆಯುತ್ತಿರಲಿಲ್ಲ, ಸಂಕಷ್ಟಗಳು ಎದುರಾದಾಗ ರಾಜ ರಾಜರುಗಳು ಒಂದಾಗಿ ಸೇರಿಕೊಂಡು ಅಧರ್ಮವನ್ನು ಕಿತ್ತು ಹಾಕುತ್ತಿದ್ದರು. ಜಾತಿ ಮತ ಭೇದ ಪಂಥಗಳೆನ್ನೆಲ್ಲದೆ ಸಮಾನ ರೀತಿಯಲ್ಲಿ ನ್ಯಾಯವನ್ನು ಕೊಡುವ ರಾಜರ ಕಾಲದ ರಾಜಕೀಯವಾಗಿತ್ತು.
ಇಂದಿನ ದಿನಗಳಲ್ಲಿ ರಾಜರ ಸ್ಥಾನದಲ್ಲಿ ನಿಂತು ಕೆಲವು ಅರಾಜಕರ ಸ್ಥಿತಿಗತಿಗಳನ್ನು ನೋಡಿದರೆ ರಾಜ್ಯವನ್ನಾಳುವ ಯಾವುದೇ ಗುಣಮಟ್ಟಗಳನ್ನು ಹೊಂದಿರದ ಜನಗಳು ಬಾಯಿಗೆ ಬಂದಂತೆ ಹೇಳಿಕೆಗಳನ್ನು ಕೊಟ್ಟು ಪ್ರಜೆಗಳ ನೆಮ್ಮದಿಯನ್ನು ಕೆಡಿಸುತ್ತಲೇ ಬಂದಿರುತ್ತಾರೆ. ಸಾವಿರಾರು ಕೋಟಿಗಳ ಧುರೀಣರು ಹಣಕ್ಕಾಗಿ ಮಾತ್ರ ಹೋರಾಟ ಮಾಡುವ ಕಾಲ, ಸಭ್ಯತೆ, ಮಾನ ಮರ್ಯಾದೆಗಳನ್ನು ಬಿಟ್ಟು ಕೇವಲ ಅಧಿಕಾರ ಸಿಗುವ ತನಕ ಹೋರಾಟ ಮಾಡುವ ಅದೆಷ್ಟು ಮಂದಿಗಳು ರಾಜ್ಯವನ್ನು, ದೇಶವನ್ನು ನಾಶ ಮಾಡುತ್ತಿದ್ದಾರೆ. ಕೇವಲ ಗ್ರಾಮಮಟ್ಟ, ಜಿಲ್ಲಾ ಮಟ್ಟದಲ್ಲಿ ತನ್ನ ಸ್ಥಾನವನ್ನು ಪಡೆದುಕೊಂಡವರು, ಒಂದು ಅವಧಿಯ ಅಧಿಕಾರದಲ್ಲಿ ಹತ್ತು ತಲೆಮಾರಿಗೆ ಆಗುವಷ್ಟು ಆಸ್ತಿಗಳನ್ನು ಮಾಡಿಟ್ಟುಕೊಳ್ಳುತ್ತಾರೆ. ಇಲ್ಲಿ ಪ್ರತಿಯೊಬ್ಬ ಪ್ರಜೆಯು ಗಮನಿಸಬೇಕಾದ ವಿಷಯ, ನಾವು ಆಯ್ಕೆ ಮಾಡುವ ಜನಪ್ರತಿನಿಧಿ ಯಾವೆಲ್ಲ ಶ್ರೇಷ್ಠತೆಯನ್ನು ಹೊಂದಿರುತ್ತಾನೆ ಎಂಬುದನ್ನು ಕೂಲಂಕುಶವಾಗಿ ವಿಮರ್ಶೆ ಮಾಡಿಕೊಳ್ಳಬೇಕು. ಯಾರೇನೇ ಹೇಳಿದರೂ ತನ್ನ ಸ್ವಂತ ಬುದ್ಧಿ ಆಯ್ಕೆ ಇಲ್ಲದೆ ಕಾಟಾಚಾರಕ್ಕಾಗಿ ಮತದಾನ ಮಾಡುವ ಕೆಲಸ , ಮುಂದಿನ ದಿನಗಳಲ್ಲಿ ಪಶ್ಚಾತಾಪ ಪಡಬೇಕಾದೀತು. ಅವಕಾಶಗಳನ್ನು ಕೊಡುವಾಗ ಜನಪ್ರತಿನಿಧಿಗಳ ಭಾಷಣಕ್ಕೆ ಮಾತ್ರ ಕಿವಿಗೊಡದೆ ಅವರಲ್ಲಿರುವ ಪ್ರಾಮಾಣಿಕತೆ, ನೈತಿಕತೆ, ಸತ್ಯ, ಅಸತ್ಯ, ಧರ್ಮ ಧರ್ಮಗಳನ್ನು ತುಲನೆ ಮಾಡುವಂತ ಕೆಲಸವನ್ನು ಮಾಡಿಕೊಂಡು ಮತದಾನವೆಂಬ ಮಹಾದಾನವನ್ನು ಸಂತೋಷದಿಂದ ಮಾಡಬಹುದು. ನಿಮ್ಮ ಕಿವಿಯನ್ನು ಹಿತ್ತಾಳೆಯಾಗಿಸಿಕೊಳ್ಳಬೇಡಿ, ನಿಮ್ಮ ಮನಸ್ಸನ್ನು ವಿಷವಾಗಿಸಿಕೊಳ್ಳಬೇಡಿ, ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲು ಕೂಡ ಹೋಗಬೇಡಿ, ದ್ವೇಷ ದ್ವೇಷಗಳ ನಡುವೆ ಬೆಂಕಿ ಹಚ್ಚಿ ಜನಸಾಮಾನ್ಯರು ನಾಶವಾಗುವ ಪರಿಸ್ಥಿತಿ ಬಂದಾಗ ನಾಯಕರೆಂದು ಹೇಳಿಕೊಳ್ಳುವ ಜನರು ಕೂಡ ನಿಮ್ಮನ್ನು ರಕ್ಷಿಸಲಾಗದ ಪರಿಸ್ಥಿತಿಯನ್ನು ತಂದಿಡಬಹುದು.
ಯುವಕರು ಈ ವಿಷಯಗಳಲ್ಲಿ ಬಹಳ ಎಚ್ಚರಿಕೆಂದಿರಬೇಕು, ಬಹಳ ಸುಲಭವಾಗಿ ಪ್ರಪಂಚವನ್ನೇ ಅರಿಯದ ಮುಗ್ದ ಯುವಕರನ್ನು ಬಲಿ ತೆಗೆದುಕೊಳ್ಳುವ ಕಾರ್ಯಗಳು ಭ್ರಷ್ಟ ರಾಜಕೀಯದಲ್ಲಿ ನಡೆಯಲುಬಹುದು. ಅಲ್ಲಲ್ಲಿ ಸಣ್ಣಪುಟ್ಟ ಆಸೆಗಳನ್ನು ತೋರಿಸಿ ಮನೆ ಮನೆಗೆ ಎಡದಾಡಿಕೊಂಡು ಹೋಗಿ ಕೊನೆಗೆ ಯಾರನ್ನೂ ನೋಡದ ಪರಿಸ್ಥಿತಿಗೆ ಬರುವ ಜನನಾಯಕರ ಬಗ್ಗೆ ಮತದಾನದ ಮುಂಚೆ ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡಿ. ಉತ್ತಮವಾದ ನಾಯಕರು ಪ್ರಜೆಗಳ ಅಭಿವೃದ್ಧಿಗೆ ನಿಜವಾದ ಪ್ರಯತ್ನವನ್ನು ಮಾಡುತ್ತಾರೆ. ಹೆಚ್ಚಾಗಿ ನಿಷ್ಕಲ್ಮಶ ಮನಸ್ಸಿನ ಜನಪ್ರತಿನಿಧಿಗಳು ನಿಜವಾದ ಪ್ರಯತ್ನವನ್ನು ತನ್ನ ಕ್ಷೇತ್ರಕ್ಕಾಗಿ ಉಪಯೋಗಿಸಿಕೊಳ್ಳುತ್ತಾರೆ.
ಮತವನ್ನು ಕೊಡುವ ಹಿಂದಿನ ದಿನ ನಿಮ್ಮ ಕ್ಷೇತ್ರದ ಮುಖಂಡರ ಬಗ್ಗೆ ತುಲನೆಯನ್ನು ಮಾಡಿಕೊಳ್ಳಿ ನಿಮ್ಮ ಆಯ್ಕೆ ಸುಂದರ ಭಾರತವನ್ನು ನಿರ್ಮಿಸುವ ಜನಪ್ರತಿನಿಧಿಗೆ ಮತದಾನ ಮಾಡುವ ಮೂಲಕ ಜವಾಬ್ದಾರಿಯನ್ನು ಮಾಡಿ. ಹಾಗೆಯೇ ನಮ್ಮ ದೇಶ ಭಾರತವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಭಾರತದ ಪ್ರಜ್ಞಾವಂತ ಪ್ರಜೆಗಳ ಜವಾಬ್ದಾರಿಯಾಗಿರಲಿ. ವಿವಿಧ ಪಕ್ಷಗಳ ಮುಖಂಡರು ದೇಶದ, ರಾಜ್ಯದ ಜನತೆಯ ಪ್ರಾಮಾಣಿಕ ಒಳಿತಿಗಾಗಿ ಕೆಲಸ ಮಾಡುವಂತಾಗಲಿ. ಅರಾಜಕತೆಯನ್ನು ಬಿಟ್ಟು ಶಾಂತಿಯುತ ಸಮಾಜಕ್ಕಾಗಿ ಕೆಲಸ ಮಾಡುವ ಕಾರ್ಯದಲ್ಲಿ ಸರ್ವ ರಾಜಕೀಯ ಮುಖಂಡರು ಒಂದಾಗಿ ಸೇರಲೆಂದು ಬಯಕೆ.
ಪಕ್ಷ ಪ್ರತಿಪಕ್ಷಗಳ ಮುಖಂಡರಲ್ಲಿ ಶ್ರೇಷ್ಠತೆ ಇದ್ದಲ್ಲಿ, ಪ್ರಜೆಗಳ ಶ್ರೇಷ್ಠತೆಯನ್ನು ಹೆಚ್ಚಿಸುವಲ್ಲಿ ಪ್ರಯತ್ನ ಮಾಡುತ್ತಾರೆ. ಗುಣಮಟ್ಟವಿಲ್ಲದ ಜನಪ್ರತಿನಿಧಿಗಳು ಗುಣಮಟ್ಟವಿಲ್ಲದ ಜನರನ್ನೇ ಹೆಚ್ಚಿಸುವಲ್ಲಿ ತನ್ನ ಕೆಲಸವನ್ನು ಮಾಡುತ್ತಾ ಇರುತ್ತಾರೆ. ಹಣದಾಸೆಗಳಿಗೆ ಬಲಿಯಾಗಿ ಮತದಾನ ಮಾಡುವ ಪ್ರತಿ ಪ್ರಜೆಯು ತನ್ನದೇ ಮನೆಗೆ ಬೆಂಕಿ ಹಾಕಿಕೊಂಡಂತೆ. ಅತ್ಯುತ್ತಮ ಜನಪ್ರತಿನಿಧಿಗೆ ಜಯವಾಗಲಿ. ಬದುಕಿರುವಷ್ಟು ದಿನ ನಿಮ್ಮನ್ನು ಉಪಯೋಗಿಸಿಕೊಂಡು ಬದುಕುವ ನಾಯಕರಬಗ್ಗೆ ಜಾಗ್ರತರಾಗಿರಿ. ರಾಜಕೀಯ ನಿಜವಾದ ದಾರಿಗೆ ಬರಲಿ ,
ಈ ಕೆಳಗಿನ ವಿಷಯ ಗಮನದಲ್ಲಿಡಿ.,
*ಕಾರ್ಯಂಗ, ಶಾಸಕಾಂಗ, ನ್ಯಾಯಾಂಗಕ್ಕೆ ಧಕ್ಕೆ ಬರದಂತೆ ನಡೆಯುವ ಜನರನ್ನು ಆಯ್ಕೆ ಮಾಡಿದಲ್ಲಿ ಸುಂದರ ಸಮಾಜ ನಿರ್ಮಾಣ ಮಾಡಲು ಸಾಧ್ಯ.
ನಾನು ಗೌರವಯುತ, ಜವಾಬ್ದಾರಿ ಭಾರತೀಯ ಎಂಬ ಮಾತನ್ನು ಮನದಟ್ಟು ಮಾಡಿಕೊಂಡು ಭವಿಷ್ಯದ ಭಾರತವನ್ನು ಸುಂದರವಾಗಿಸಲು ಪ್ರಯತ್ನಿಸೋಣ.
( ಅನಿಸಿಕೆ ಅಷ್ಟೇ, ಯಾವುದೇ ತಪ್ಪುಗಳಿದ್ದರೆ ಓದುಗರು ಕ್ಷಮಿಸಿ, ತಿದ್ದುಪಡಿಗೆ ಅವಕಾಶ ಮಾಡಿ )
ಈ ಲೇಖನ ನನ್ನ ಪ್ರೀತಿ ಪಾತ್ರರಿಗೆ ಅರ್ಪಣೆ.
ಬರಹ : ✍️ಮಾಧವ. ಕೆ. ಅಂಜಾರು 🙏
Comments
Post a Comment