(ಲೇಖನ -107)ಕೊರೋನ ಕಾಲದಲ್ಲಿ ಮನೆಯಿಂದ ಕಿತ್ತೊಗೆಸೆದ ಕೇಬಲ್ ಇಂದಿಗೂ ಇಲ್ಲ ಕಾರಣವಷ್ಟೇ, ನಮ್ಮನ್ನು ಅತಿಯಾಗಿ ಭಯಗೊಳಿಸಿ ದಿನಾಲೂ ಸಾಯಿಸುತ್ತಿದ್ದ TV
✍️Madhav. K. Anjar
(ಲೇಖನ -107) ಮೂರ್ಖರ ಪೆಟ್ಟಿಗೆಯೆಂದು ಕರೆಯಲ್ಪಡುವ (TV)ಯನ್ನು ನೋಡುವುದನ್ನೇ ಬಿಟ್ಟಿದ್ದೇನೆ! ಯಾಕೆಂದರೆ ನನ್ನನ್ನು ಇನ್ನಷ್ಟು ವಿಶ್ರಾಂತಿಇಲ್ಲವಾಗಿಸುವುದು ಬೇಡವೆಂದು, ನಮ್ಮ ಇಂದಿನ ಮಾಧ್ಯಮಗಳು ವಿಷಯಗಳನ್ನು ಖಾರ ಪುಡಿ ಮಸಾಲಾ ಹಾಕಿ ರುಬ್ಬುತ್ತಾ ವೀಕ್ಷಕರ ಒಳ್ಳೆಯ ಮನಸ್ಸನ್ನು ವಿಕಾರಗೊಳಿಸಿ ಒಂದಷ್ಟು ಅವಿವೇಕಿಗಳನ್ನು ತನ್ನ ಕ್ಯಾಮೆರ ಮುಂದೆ ಕೂರಿಸಿ ವಿಚಾರವಲ್ಲದ ವಿಚಾರಗಳನ್ನು ಗಂಟೆಗಟ್ಟಲೆ ಮಾತನ್ನಾಡಿ ಸ್ವಲ್ಪ ದಿನ ಜಾಸ್ತಿ ಬದುಕುವವರನ್ನು ಬೇಗನೆ ಮುಗಿಸಿಬಿಡುವ ತಾಕತ್ತು ಕೆಲವು TV ಮಾಧ್ಯಮಗಳಿಗೆ ಇದೆ. ತನ್ನ ಜಾತಿಗಾಗಿ, ಧರ್ಮಕ್ಕಾಗಿ, ಪಕ್ಷಕ್ಕಾಗಿ ಮತ್ತು ಬೆಂಬಲಿಗರಿಗಾಗಿ ಬೆಳಗ್ಗಿನಿಂದ ಮಧ್ಯರಾತ್ರಿಯವರೆಗೆ ಬಾಯಿಗೆ ಬಂದ ಹಾಗೆ ಮಾತನಾಡುತ್ತ ಮಕ್ಕಳಿಂದ ಹಿರಿಯರವರೆಗಿನ ಮನಸ್ಸನ್ನು ಹಾಳು ಮಾಡುತ್ತಿರುವ ಮಟ್ಟಿಗೆ ಬೆಳೆದು ಹೋಗಿದೆ. ಹತ್ತಿಪ್ಪತು ವರುಷದ ಹಿಂದೆ ಮಾಧ್ಯಮಗಳಿಗೆ ಅದರದ್ದೇ ಆದ ನಿಯಮಗಳಿತ್ತು ಆ ನಿಯಮಗಳನ್ನು ಜನರ ಒಳಿತಿಗಾಗಿ ಪಾಲಿಸುತಿದ್ದ ಚಾನೆಲ್ಗಳು ಇಂದು ಬರೇ ಹಣ ಸಂಪಾದನೆಯ ಗುರಿಯೊಂದಿಗೆ ಸತ್ಯವನ್ನು ಸುಳ್ಳಾಗಿಸಿ, ಸುಳ್ಳನ್ನು ಸತ್ಯವಾಗಿಸಿ ಬಿತ್ತರಿಸುವ ಕೆಲಸವನ್ನು ಮಾಡುತ್ತ ತನ್ನ ಹೊಟ್ಟೆಯನ್ನು ತುಂಬಿಸುತ್ತ ಇದ್ದಾರೆ.
ಕೊರೋನ ಕಾಲದಲ್ಲಿ ಮನೆಯಿಂದ ಕಿತ್ತೊಗೆಸೆದ ಕೇಬಲ್ ಇಂದಿಗೂ ಇಲ್ಲ ಕಾರಣವಷ್ಟೇ, ನಮ್ಮನ್ನು ಅತಿಯಾಗಿ ಭಯಗೊಳಿಸಿ ದಿನಾಲೂ ಸಾಯಿಸುತ್ತಿದ್ದ TV ಮಾಧ್ಯಮ ಮತ್ತು ನನ್ನ ಹೆಚ್ಚಿನ ಸಮಯವನ್ನು ತಿನ್ನುತಿದ್ದ ಆ ಮೂರ್ಖ ಪೆಟ್ಟಿಗೆ. ಗೋಡೆಯಲ್ಲಿ ಕುಳಿತು ನಮ್ಮನ್ನು ಆಳುತಿತ್ತು. ಒಳ್ಳೆಯ ವಿಚಾರಗಳು ಬಿತ್ತರಿಸುವ ಚಾನೆಲ್ಗಳು ಅತೀ ಕಡಿಮೆಯಾಗಿ ಇರುವುದರಿಂದ ಅದರಿಂದ ನಮ್ಮ ಸಮಯ ವ್ಯರ್ಥವಲ್ಲದೆ ಬೇರೆ ಯಾವ ಲಾಭಗಳು ನನಗೆ ಸಿಕ್ಕಿಲ್ಲ ಎಂಬ ಭಾವನೆ. ಮೃದುಮಾತಿನ ಸುದ್ಧಿಗಾರರಿಗೆ ಬೆಲೆ ಇಲ್ಲದೇ ಬರೇ ದೊಡ್ಡ ಶಬ್ದ ಮತ್ತು ಅದಕ್ಕೆ ಬೇಕಾಗುವ ಮ್ಯೂಸಿಕ್ ಗಳನ್ನು ಸೇರಿಸಿ ಭಯಂಕರ ದೃಶ್ಯಗಳನ್ನು ತೋರಿಸಿ ಹೆದರಿಸಿಬಿಡುವ ಈ ಮಾಧ್ಯಮಗಳು ಮಕ್ಕಳ ಮನಸ್ಥಿತಿಯನ್ನು ಯಾವ ಮಟ್ಟಕ್ಕೆ ತಲುಪಿಸಬಹುದು ಅಲ್ಲವೇ?
ಟಿವಿ ಮಾಧ್ಯಮಗಳ ಹೊರತಾಗಿ ವಾಟ್ಸಪ್ಪ್ ಫೇಸ್ಬುಕ್ ಗಳ ಅವಾಂತರ, ಬೆಳಗೆದ್ದು ನೋಡಿದ್ರೆ ಒಂದೊಂದು ಗುಂಪುಗಳ ಸಾವಿರಾರು ಮೆಸೇಜ್ಗಗಳು ಅದು ಕೂಡ ಪ್ರಯೋಜನಕ್ಕೆ ಬರುವಂತದ್ದು ಬಹಳಷ್ಟು ಕಡಿಮೆ, ಇಂದಿನ ಸಮಾಜದಲ್ಲಿ ವಿಷಬೀಜ ಬಿತ್ತಲು ಸಾಮಾಜಿಕ ಜಾಲ ತಾಣ ಬಹಳಷ್ಟು ಕಾರಣವಾಗಿದೆ, ಅರಿವಿದ್ದು ಅರಿವಿಲ್ಲದೆ ನಡೆಯುವ ಎಲ್ಲಾ ಘಟನೆಗಳು ನಿಮಿಷದೊಳಗೆ ಎಲ್ಲರ ಮೊಬೈಲ್ ಸೇರಿ ಕುಣಿಯುತ್ತದೆ ಮತ್ತು ಪ್ರತಿಯೊಬ್ಬ ಮನುಷ್ಯನ ನೆಮ್ಮದಿಯೊಂದಿಗೆ ಸಮಯವನ್ನು ಮತ್ತು ಆರೋಗ್ಯವನ್ನು ಹಾಳು ಮಾಡುತ್ತಿದೆ. ಅದೆಷ್ಟು ಕಟ್ಟು ಕಥೆ ಬಿತ್ತರವಾಗುತ್ತದೆ, ಅದೆಷ್ಟು ಸುಳ್ಳು ಹಬ್ಬುತ್ತದೆ, ಅದೆಷ್ಟು ಸತ್ಯ ಸುದ್ದಿಗಳಿವೆ ಯಾವುದನ್ನು ಯೋಚಿಸದೆ ಸುಮ್ಮನೆ ಫಾರ್ವರ್ಡ್ ಮಾಡಿ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಜನರಾಗಿಬಿಡುತಿದ್ದೇವೆ.
ಪೈಪೋಟಿಯಲ್ಲಿ ಸುಳ್ಳು ಸುದ್ದಿಯನ್ನು ಹಬ್ಬಿಸುವ ಕೆಲವು ಜನರು ಅದಕ್ಕಾಗಿಯೇ ಕಾಯುತ್ತಿರುತ್ತಾರೆ. ನಮ್ಮ ವಿರೋಧವಾಗಿ ಮಾತಾನ್ನಾಡಿದರೆ ಒಂದಷ್ಟು ಜನರ ಗಲಾಟೆ, ಪರವಾಗಿ ಮಾತಾನ್ನಾಡಿದರೆ ಒಂದಷ್ಟು ಸಂಭ್ರಮ, ಈ ಜಗತ್ತಿನಲ್ಲಿ ಏನಾಗುತ್ತಿದೆ ಎಂಬುವುದನ್ನು ನಂಬಲಾಸಾಧ್ಯವೆಂಬುದರ ಮಟ್ಟಿಗೆ ಮಾಧ್ಯಮಗಳು ಕೆಲಸ ಮಾಡುತ್ತಿವೆ ಅನಿಸುತ್ತದೆ. ಕಡಿಮೆ ದುಡ್ಡಿನಲ್ಲಿ ಹೆಚ್ಚಿನ ನೆಮ್ಮದಿಯನ್ನು ಕಳೆದುಕೊಳ್ಳುವ ನಾವೆಲ್ಲರೂ ನಮಗೆ ಹಿತಕೊಡುವ ಚಾನೆಲ್ಗಳನ್ನು ಮಾತ್ರ ನೋಡುವಂತೆ ಅಭ್ಯಾಸ ಮಾಡಿಕೊಳ್ಳಬೇಕು. ನಮಗೆ ಅರಿವಿಲ್ಲದಂತೆ ಮನಸ್ಸನ್ನು ಸೇರುವ ಸುದ್ದಿಗಳು ಮನಸ್ಥಿತಿಯನ್ನು ಹಾಳು ಮಾಡಿಬಿಡುವ ಸಾಧ್ಯತೆಗಳು ಅಲ್ಲಗಳೆಯುವಂತಿಲ್ಲ. ಹಾಗೆಂದು ಎಲ್ಲಾ ಸುದ್ದಿ ಮಾಧ್ಯಮಗಳು ಹಾಗಿಲ್ಲ, ಮನ ರಂಜಿಸುವ ಸುದ್ದಿಗಳನ್ನು ಸಾಧಾರಣ ರೀತಿಯಲ್ಲಿ ಬಿತ್ತರಿಸುವ ಈ ಹಿಂದಿನ ಸರಕಾರಿ ಚಾನೆಲ್ಗಳು ಕಿರುಚಾಡುವ ಮಾಧ್ಯಮಗಳ ಮುಂದೆ ಮೌನವಾಗಿ ಕಾರ್ಯನಿರ್ವಹಿಸುತ್ತಿವೆ, ಸದ್ದು ಗದ್ದಲವಿಲ್ಲದೆ ಸುದ್ದಿಯನ್ನು ನೀಡುತ್ತಿವೆ. ಇದು ಸಂತೋಷಮಯ ವಿಷಯ.
ಈ ಮಾಧ್ಯಮಗಳನ್ನು ಹತೋಟಿಗೆ ತರಲು ಮತ್ತು ಶಿಸ್ತುಗಳಿಲ್ಲದ ಚಾನೆಲ್ಗಳನ್ನು ನಿಯಂತ್ರಿಸಿ ಸಮಾಜವನ್ನು ಒಳ್ಳೆಯ ದಾರಿಯಲ್ಲಿ ಕೊಂಡುಹೋಗುವ ಸಾಧನವಾಗಿ ಬದಲಾಗಬೇಕು. ವೀಕ್ಷಕರು ಒಪ್ಪಿಕೊಳ್ಳುವಂತೆ ಸುದ್ದಿಯನ್ನು ಬಿತ್ತರಿಸಿ ಸತ್ಯವನ್ನು ಪ್ರಪಂಚಕ್ಕೆ ತಿಳಿಸಿ ಜಾಗ್ರತಿಯನ್ನು ಮೂಡಿಸುವ ಕೆಲಸ ಮಾಡಬೇಕು. ಇದೆಲ್ಲ ಯಾರಿಗೆ ಹೇಳುವುದು ಅಲ್ಲವೇ? ಕೆಲವು ಮಾಧ್ಯಮಗಳು ಭ್ರಷ್ಟಾಚಾರ ಮತ್ತು ಸುಳ್ಳನ್ನು ಹಬ್ಬಿಸಲು ಹಣದ ಕಂತೆಯನ್ನು ತೆಗೆದುಕೊಂಡು ಎಪಿಸೋಡ್ ಗಳನ್ನು ಮಾಡಿ ಮುಗಿಸುತ್ತಾರೆ ಅಲ್ಲವೇ, ಸಾಮಾನ್ಯ ಜನರು ಹೇಳಿದರೆ ಯಾರು ಕೇಳುವುದಿಲ್ಲ ಮತ್ತು ಬೆಲೆಯೂ ಇರುವುದಿಲ್ಲ.
ಅಂತೂ ಇಂತೂ ಯಾರನ್ನೂ ತಪ್ಪೆಂದು ಹೇಳುವಂತಿಲ್ಲ ಯಾಕೆಂದರೆ ತಾನು ನೋಡಿದ್ದು ಸರಿಯಾಗಿದೆ ಎಂದು ಹೇಳುವ ಮಾಧ್ಯಮ ಮತ್ತು ಅದರ ಅನುಯಾಯಿಗಳು ನಂಬಲೇಬೇಕು. ಒಟ್ಟಾರೆ ಹುಚ್ಚು ಹಿಡಿಸಿಬಿಡುತ್ತವೆ. ಅದೇನೇ ಇರಲಿ ನಮ್ಮ ಕೈಲಿ ರಿಮೋಟ್ ಇರುವುದು ಹಾಗೆಯೇ ಟಿವಿ ಗೆ ಬಾಯಿ ಮುಚ್ಚಿಸುವ ಮತ್ತು ತೆರೆಸುವ ತಾಕತ್ತು ನಮ್ಮ ಕೈಲಿದೆ. ನಿಮ್ಮ ನೆಮ್ಮದಿ ಮತ್ತು ಹೃದಯವನ್ನು ಉಳಿಸುವ ಚಾನೆಲ್ಗಳನ್ನು ನೋಡಿ ನೆಮ್ಮದಿಯಿಂದ ಬದುಕಲು ಕಲಿಯೋಣ.
ಎಲ್ಲರಿಗೂ ಒಳಿತಾಗಲಿ ಜಗತ್ತಿನಲ್ಲಿ ಶಾಂತಿ ಹರಡಲಿ, 🙏🏿
✍️ಮಾಧವ. ಕೆ. ಅಂಜಾರು
Comments
Post a Comment