(ಲೇಖನ -106)ವಾಯು ಮಾಲಿನ್ಯ , ಜಲ ಮಾಲಿನ್ಯ ಮತ್ತು ಆಹಾರಗಳಲ್ಲಿ ಕಲಬೆರಕೆ ಮತ್ತು ರಾಸಾಯನಿಕ ಸಿಂಪಡಿಸಿ ಬೆಳೆಸಿದ ಮತ್ತು ಶೇಖರಣೆ ಮಾಡಿರುವ ಆಹಾರವನ್ನು ನಮಗೆ ತಿಳಿದು ಮತ್ತು ತಿಳಿಯದೆ ದಿನದಿಂದ ದಿನಕ್ಕೆ ವಿಷವನ್ನು ತಮ್ಮ ಹೊಟ್ಟೆಗೆ ಸೇವಿಸಿ ಕೆಲವು ಸಂಧರ್ಭ
✍️Madhav. K. Anjar
(ಲೇಖನ -106) ಎಲ್ಲವೂ ಇದ್ದು ಆರೋಗ್ಯ ಇಲ್ಲದೇ ಹೋದರೆ ನಾವು ಜೀವನದಲ್ಲಿ ಬಹಳಷ್ಟು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ . .ಆರೋಗ್ಯವೇ ಭಾಗ್ಯ ಆರೋಗ್ಯಕ್ಕಿಂತ ಮಿಗಿಲಾದದ್ದು ಬೇರೇನೂ ಇಲ್ಲ ಅಲ್ಲವೇ ? ನಾವು ಅಥವಾ ನಮ್ಮ ಮನೆಯಲ್ಲಿ ಯಾರಿಗಾದರೂ ಆರೋಗ್ಯ ಸಮಸ್ಯೆಗಳು ಎದುರಾದಾಗ ನಾವು ಮಾನಸಿಕವಾಗಿ,ದೈಹಿಕವಾಗಿ,ಮತ್ತು ಆರ್ಥಿಕವಾಗಿ ಬಹಳಷ್ಟು ಕುಗ್ಗಿಹೋಗುತ್ತೇವೆ . ಇಂದಿನ ದಿನಗಳ ಆಹಾರ ಪದ್ದತಿಯಲ್ಲಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದೇ ದೊಡ್ಡ ಸಾಧನೆ ಆಗಿರುತ್ತದೆ . ನಮಗರಿವಿಲ್ಲದಂತೆ ಎದುರಾಗುವ ಆರೋಗ್ಯ ಸಮಸ್ಯೆಗಳು ದಿನ , ತಿಂಗಳು, ಮತ್ತು ವರ್ಷಾನುಗಟ್ಟಲೆ ನಮ್ಮನ್ನು ಕೊಳೆಯುವಂತೆ ಮಾಡುತ್ತದೆ . ಬದುಕಿನುದ್ದಕೂ ಉತ್ತಮ ಆರೋಗ್ಯ ಕೊಟ್ಟು ನಮ್ಮನ್ನು ಕಾಪಾಡು ದೇವರೇ ಎಂದು ಬೇಡಿಕೊಳ್ಳುವ ನಾವೆಲ್ಲರೂ , ನಮ್ಮ ಆಹಾರ ಪದ್ಧತಿ ಮತ್ತು ಆರೋಗ್ಯವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಲು ಯಾವ ರೀತಿಯಯಲ್ಲಿ ಕಾಳಜಿಯನ್ನು ವಹಿಸುತ್ತೇವೆ ಅನ್ನುವುದು ತಿಳಿದುಕೊಳ್ಳಬೇಕಾಗಿದೆ .
ವಾಯು ಮಾಲಿನ್ಯ , ಜಲ ಮಾಲಿನ್ಯ ಮತ್ತು ಆಹಾರಗಳಲ್ಲಿ ಕಲಬೆರಕೆ ಮತ್ತು ರಾಸಾಯನಿಕ ಸಿಂಪಡಿಸಿ ಬೆಳೆಸಿದ ಮತ್ತು ಶೇಖರಣೆ ಮಾಡಿರುವ ಆಹಾರವನ್ನು ನಮಗೆ ತಿಳಿದು ಮತ್ತು ತಿಳಿಯದೆ ದಿನದಿಂದ ದಿನಕ್ಕೆ ವಿಷವನ್ನು ತಮ್ಮ ಹೊಟ್ಟೆಗೆ ಸೇವಿಸಿ ಕೆಲವು ಸಂಧರ್ಭದಲ್ಲಿ ನಮ್ಮ ಜೀರ್ಣಾಂಗ ಮತ್ತು ದೇಹದ ಪ್ರಮುಖ ಭಾಗವನ್ನೇ ನಿಷ್ಕ್ರಿಯಗೊಳಿಸಿ ಹಾಸಿಗೆ ಹಿಡಿಯುವಂತೆ ಮಾಡುವ ಉದಾಹರಣೆಗಳು ಅಲ್ಲಲ್ಲಿ ನೋಡಬಹುದು . ಕ್ಯಾನ್ಸರ್ನಂತಹ ಮಹಾ ರೋಗಕ್ಕೆ ಬಲಿಯಾಗಿರುವ ಜೀವಗಳು , ಚರ್ಮ ರೋಗ, ಎಲುಬು ರೋಗಗಳಿಂದ ಒದ್ದಾಡುವ ಅನೇಕ ಮಂದಿ ಪರೋಕ್ಷವಾಗಿ ತಮ್ಮ ಆಹಾರ ಪದ್ದತಿಯಿಂದ ಕೂಡ ಎಂದು ಹೇಳಬಹುದು ಅನಿಸುತ್ತದೆ .
ಹಾಗೆಂದು ಸಮಾನ ಆಹಾರ ಪದ್ದತಿಯನ್ನು ರೂಡಿಸಿಕೊಂಡಿರುವ ಎಲ್ಲರೂ ಆರೋಗ್ಯವಾಗಿ ಇದ್ದಾರೆಯೇ ಎಂಬ ಪ್ರಶ್ನೆ ನಮ್ಮಲ್ಲಿ ಮೂಡಬಹುದು , ಏನೂ ದುಶ್ಚಟಗಳಿಲ್ಲದೆ ಇರುವವರಿಗೆ ರೋಗ ರುಜಿನ ಬರುವುದಿಲ್ಲವೇ ಎಂಬ ಪ್ರಶ್ನೆಯು ಮೂಡುತ್ತದೆ , ಅದು ಒಂದೆಡೆಯಾದರೆ ಬರುವುದಿದ್ದರೆ ಯಾರಿಗೂ ತಪ್ಪಿಸಲು ಸಾಧ್ಯವಿಲ್ಲ ಎಂದು ಹೇಳುತ್ತಾ ಅಸಮತೋಲನ ಆಹಾರಪದ್ಧತಿಗೆ ಮತ್ತು ಅತಿಯಾದ ದುಶ್ಚಟಗಳಿಗೆ ಬಲಿಯಾಗಿ ಇರುವ ಆರೋಗ್ಯವನ್ನು ಕೆಡಿಸಿಕೊಳ್ಳುವ ಜನರ ಸಂಖ್ಯೆ ಕೂಡ ಇದೆ . ಕೆಲವೊಮ್ಮೆ ಎಷ್ಟು ಜಾಗರೂಕರಾಗಿದ್ದರೂ ನಮ್ಮ ಜೀವನದಲ್ಲಿ ಆರೋಗ್ಯ ಸಮಸ್ಯೆ ಬಂದಾಗ ಬೇಸತ್ತುಹೋಗುವ ಘಟನೆಗಳು ಕೂಡ ನಡೆಯುತ್ತವೆ .
ನಾವು ತಿನ್ನುವ ಮತ್ತು ಮಕ್ಕಳಿಗೆ ಕೊಡುವ ಆಹಾರದಲ್ಲಿ ಪೌಷ್ಟಿಕತೆಯ ಅಂಶ ಹೊಂದಿದ್ದು ಸಮಯಕ್ಕೆ ತಕ್ಕ ಆಹಾರವನ್ನು ತೆಗೆದುಕೊಳ್ಳಲು ರೂಡಿಸಿಕೊಳ್ಳಬೇಕು . ಇಂದಿನ ದಿನಗಳಲ್ಲಿ ಕೆಲಸವೆಂಬ ಕಾರಣದಿಂದ ಆಹಾರವನ್ನು ಸಮಯಮೀರಿ ತೆಗೆದುಕೊಳ್ಳುವುದು , ಬೆಳಗ್ಗಿನ ಆಹಾರವನ್ನು ಮದ್ಯಾಹ್ನ ಸಂಜೆಯ ಆಹಾರವನ್ನು ರಾತ್ರಿಗೆ ಸೇವಿಸುವ ಜನರ ಸಂಖ್ಯೆ ಅತಿಯಾಗಿದೆ . ಕೇಳಿದರೆ ನಮಗೆ ಸಮಯವಿಲ್ಲ ಎಂಬ ಸಬೂಬು , ಅನಿವಾರ್ಯ ಕಾರಣ ಗಳಿಂದ ಒಮ್ಮೊಮ್ಮೆ ಏರುಪೇರಾದರೂ ಅಲ್ಪ ವ್ಯಾಯಾಮವನ್ನು ಮಾಡಿ ನಿಯಮಿತ ಆಹಾರ ಪದ್ಧತಿ ನಮ್ಮ ಜೀವದ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ .
ವಿಪರೀತ ಮಾಂಸಹಾರ, ಕರಿದು ತಿನ್ನುವ ಆಹಾರ ಪದಾರ್ಥಗಳು ನಮ್ಮ ಆರೋಗ್ಯವನ್ನು ಕೆಡಿಸುತ್ತವೆ. ನಮ್ಮ ಜೀವ ಜೀರ್ಣಸಿಕೊಳ್ಳುವಷ್ಟು ನಿಯಮಿತ ಮತ್ತು ಸೊಪ್ಪು ತರಕಾರಿ ಒಣ ದ್ರಾಕ್ಷಿ, ಗೋಡಂಬಿ, ಬಾದಾಮಿ ಹಾಗೆ ಇನ್ನಿತರ ಪೌಷ್ಟಿಕ ಆಹಾರ ಪದಾರ್ಥಗಳನ್ನು ಕಾಲನುಗುಣಕ್ಕೆ ತಕ್ಕಂತೆ ತಿಂದಾಗ ನಮ್ಮ ಆರೋಗ್ಯದಲ್ಲಿ ಏರುಪೇರುಗಳಾಗುವುದು ಕಡಿಮೆಯಾಗಬಹುದು.
"ಅತಿಯಾದರೆ ಅಮೃತವು ವಿಷವಂತೆ" ಎಂಬ ಮಾತಿನಂತೆ ದುಷ್ಟಚಟಕ್ಕೆ ಬಲಿಯಾಗಿ ಒಂದೇ ವಸ್ತುವನ್ನು ಅತಿಯಾಗಿ ಸೇವಿಸಿ ದೇಹ ಜೀರ್ಣಸಿಕೊಳ್ಳದಷ್ಟು ಸೇವಿಸಿದಾಗ ಸಹಜವಾಗಿ ನಮ್ಮ ಆರೋಗ್ಯವನ್ನು ಬೇಗನೆ ಕಳೆದುಕೊಳ್ಳುವ ಸಂಭವ ಜಾಸ್ತಿ ಆಗಿರುತ್ತದೆ.
ನಮ್ಮ ನಿಮ್ಮೆಲ್ಲರಿಗೂ ಉತ್ತಮವಾದ ಆರೋಗ್ಯ ಬದುಕಿನ ಕೊನೆಯವರೆಗೂ ಸಿಗಲೆಂಬ ಹಾರೈಕೆಯೊಂದಿಗೆ .
✍️ಮಾಧವ. ಕೆ. ಅಂಜಾರು
Comments
Post a Comment