( ಲೇಖನ -85- (ಅ) ರಾಜಕೀಯವೆಂಬುದು ಒಬ್ಬರನ್ನೊಬ್ಬರು ಟೀಕೆಮಾಡಿಕೊಂಡು ಸಮಾಜದ ಸ್ವಾಸ್ತ್ಯ ಕಳೆಯುವುದೇ? ರಾಜಕೀಯದಲ್ಲಿ ಪ್ರಭುದ್ಧತೆ ಇಲ್ಲದೆ ಹೋದಲ್ಲಿ, ಪಕ್ಷಗಳು ಒಂದರ ಮೇಲೆ ಒಂದರಂತೆ ಟೀಕೆ ಟಿಪ್ಪಣಿಗಳನ್ನು ಮಾಡುತ್ತಾ, ನಿಜವಾದ ರಾಜಕೀಯವನ್ನು ಸಮಾಧಿ ಮಾಡಿದಂತೆ. ರಾಜ್ಯವನ್ನು, ಅಥವಾ ದೇಶವನ್ನಾಳಲು ರಾಜಕೀಯ ಎಂಬುದು ಬಹಳ ಪ್ರಾಮುಖ್ಯ, ಆದರೆ ನಾವೆಲ್ಲರೂ ನೋಡುತ್ತಿರುವಂತೆ ಈ ಹಿಂದೆ ಮತ್ತು ಇಂದಿನ ದಿನಗಳಲ್ಲೂ ಕೆಲವೊಂದು ಪ್ರಸಂಗಗಳನ್ನು ಅವಲೋಕಿಸಿದಾಗ ಪಕ್ಷ ಪ್ರತಿಪಕ್ಷಗಳ ಉನ್ನತ ಸ್ಥಾನದಲ್ಲಿ ಇದ್ದುಕೊಂಡು ಕೊಡುವ ಕೆಲವು ಭಾಷಣ, ಸಂದೇಶ, ಆರೋಪ ಪ್ರತ್ಯಾರೋಪಗಳು ಜನರ ದಿಕ್ಕನ್ನು ತಪ್ಪಿಸಲು ಸಹಕಾರಿ ಆದಂತಿದೆ. ಮೇಲ್ನೋಟಕ್ಕೆ ಪ್ರಜೆಗಳ ಭಾವನೆಗಳಿಗೆ ಧಕ್ಕೆ ಬರುವಂತೆ, ಪ್ರಜೆಗಳ ಸಂಸ್ಕಾರಗಳಿಗೆ ಧಕ್ಕೆ ಬರುವಂತೆ, ಧರ್ಮ ಧರ್ಮಗಳ ನಡುವೆ ದ್ವೇಷ ಹಂಚಿಕೆಯ ಭಾಷಣಗಳು, ಒಂದೊಂದು ಬಣಗಳ ನಡುವೆ ದ್ವೇಷಗಳನ್ನು ಹೆಚ್ಚಿಸುವ ಕಾರ್ಯಕ್ಕೆ ಕೆಲವರು ತುದಿಗಾಲಲ್ಲಿ ನಿಂತು ವಿಷ ಬೀಜವನ್ನು ಬಿತ್ತಿ ಸುಮ್ಮನಾಗಿಬಿಡುತ್ತಾರೆ. ರಾಜರ ಕಾಲದ ರಾಜಕೀಯಕ್ಕೂ ಇಂದಿನ ಕಾಲದ ರಾಜಕೀಯಕ್ಕೂ ಬಹಳ ವ್ಯತ್ಯಾಸವಿದೆ ಎನಿಸುತ್ತದೆ. ರಾಜರುಗಳು ತನ್ನ ದೇಶಕ್ಕೆ ಆಕ್ರಮಣಗಳಾದಾಗ ತನ್ನ ಜೀವವನ್ನೇ ಬಲಿಕೊಟ್ಟು ಪ್ರಜೆಗಳನ್ನು ಮಕ್ಕಳಂತೆ ನೋಡಿಕೊಳ್ಳುತ್ತಾ ತಪ್ಪಿದರೆ ರಾಜನಾಗಿ ತಾನು ಶಿಕ್ಷೆಗೆ ಒಳ...