(ಲೇಖನ -54)ಹೀಗಿತ್ತು ಹಳ್ಳಿ ಜೀವನ... ಹೌದು ಇಂದು ಕಾಣಸಿಗುತ್ತಿಲ್ಲ ಆ ದಿನಗಳು, ಹೇಗಿತ್ತು ಹಳ್ಳಿ ಜೀವನ, ಇಂದು ಹೇಗಾಗಿದೆ,
(ಲೇಖನ -54)ಹೀಗಿತ್ತು ಹಳ್ಳಿ ಜೀವನ...
ಹೌದು ಇಂದು ಕಾಣಸಿಗುತ್ತಿಲ್ಲ ಆ ದಿನಗಳು, ಹೇಗಿತ್ತು ಹಳ್ಳಿ ಜೀವನ, ಇಂದು ಹೇಗಾಗಿದೆ, ನಮ್ಮ ಬಾಲ್ಯದ ದಿನಗಳಲ್ಲಿ ಅನುಭವಿಸಿರುವ ಹಳ್ಳಿ ಜೀವನ ನಮ್ಮ ಜೀವನದ ಕೊನೆಯವರೆಗೂ ಮರೆಯಲಾಗದು. ಹಳ್ಳಿಯೆಂದರೆ ಹಸಿರು, ನದಿ, ಮಾಲಿನ್ಯಗಳಿಲ್ಲದೆ ಇರುವ ಪ್ರದೇಶಗಳು, ಅಲ್ಲಿ ಬದುಕಿರುವ ಜೀವಗಳು ಪುಣ್ಯವಂತ ರಾಗಿರ ಬೇಕು, ದಿನಬೆಳಗಾದರೆ ಹಕ್ಕಿಗಳ ಚಿಲಿಪಿಲಿ, ಕೋಳಿಯ ಕೂಗು, ಮಂಜಿನ ಹನಿ, ಪರಿಶುದ್ಧವಾದ ವಾತಾವರಣ, ಶುಬ್ರ ಗಾಳಿ, ಹುಲ್ಲಿನ ಮನೆ, ಸೆ ಗಣಿ ಸಾರಿರುವ ಅಂಗಳ, ಮನೆಯ ಮುಂದೆ ಕೊಟ್ಟಿಗೆ, ಕರುಗಳ ಅಂಬಾ ಎನ್ನುವ ಕರೆ, ಮನೆಯ ಅಡುಗೆ ಕೋಣೆಯಲ್ಲಿ, ದೋಸೆ ಹುರಿಯುವ ಶಬ್ದ, ಗೋಡೆಯ ಮೇಲೆ ತೂಗು ಹಾಕಿರುವ ರೇಡಿಯೋ ಇದರ ಭಕ್ತಿಗೀತೆ ಚಿತ್ರಗೀತೆಗಳು, ವಾರ್ತೆಗಳು.
ಬೆಳಗಾಗುತ್ತಲೇ, ಅಪ್ಪ-ಅಮ್ಮನ ಕರೆ, ಏಳು ಮಗನೇ ಬೆಳಗಾಯಿತು, ಬೆಳಗೆದ್ದು ಮುಖ ತೊಳೆದು ಕೃಷಿ ಮಾಡಿದ ಸ್ಥಳಕ್ಕೆ ಹೋಗಿ ಬಾ, ಹೇಳಿದಂತೆ, ಮುಂಜಾನೆ ಕಾಲದಲ್ಲಿ, ಸೂರ್ಯೋದಯಕ್ಕಿಂತ ಮುಂಚೆ, ತೆಂಗು, ಭತ್ತದ ಗದ್ದೆಗಳಲ್ಲಿ ಒಂದು ಮುತ್ತಣ್ಣ ಹಾಕಿ, ಬೆಳಗ್ಗೆ ಬಿತ್ತಿರುವ ತೆಂಗಿನಕಾಯಿಗಳನ್ನು, ತೆಂಗಿನ ಗರಿಗಳನ್ನು ಕೂಡಿ ಹಾಕಿ ಮನೆಯಂಗಳದಲ್ಲಿ ಸೇರಿಸುವ ಕಾಯಕ. ಹಿಂತಿರುಗಿ ಮನೆಗೆ ಬರುತ್ತಿದ್ದಂತೆ, ಮನೆಯೊಳಗೆ ಅಮ್ಮನ ಕರೆ ಬಾ ಮಗು ದೋಸೆ ಇದೆ, ತಿಂಡಿ-ತಿನಸು ಗಳಿದೆ ತಿನ್ನು. ಖುಷಿಯಾಗಿ ತಿಂದು, ತಂದೆ-ತಾಯಿ ಕರೆದು ತಯಾರಿಸಿರುವ ಹಾಲನ್ನು ಹತ್ತಿರದ ಡೈರಿಗೆ ತೆಗೆದುಕೊಂಡು ಹೋಗುವ ಕಾಯಕ. ಅದನ್ನು ಒಪ್ಪಿಕೊಂಡು ತುಂಬಿರುವ ಕ್ಯಾ ನನ್ನ ಡೈರಿಗೆ ಕೊಟ್ಟು, ಹಿಂತಿರುಗಿ ಬಂದು ಶಾಲೆಯ ಕಡೆಗೆ ಪಯಣ. ಶಾಲೆಗೆ ಹೋಗುತ್ತಲೇ, ಗೇರು ಹಣ್ಣಿನ ಮರ, ಮಾವಿನ ಮರ, ನೇರಳೆ ಹಣ್ಣು, ಹೆಬ್ಬಲಸು, ಹಲಸು, ಜಾರಿಗೆ ಕಾಯಿ, ಪುನರ್ಪುಳಿ, ಹುಳಿ ಮರಗಳಿಗೆ ಕಲ್ಲೆಸೆತ, ಕಲ್ಲಿನ ರಭಸಕ್ಕೆ ಕೆಳಗೆ ಬಿದ್ದಿರುವ ಹಣ್ಣನ್ನು ಕಿಸೆಯೊಳಗೆ, ಮತ್ತು ಶಾಲೆಯ ಚೀಲದೊಳಗೆ ಸೇರಿಸಿ ತರಗತಿಯ ಪ್ರವೇಶ.
ಶಾಲೆಯಲ್ಲಿ, ಪಾಠವ ಮುಗಿದಂತೆ, ಚೀಲದೊಳಗಿನ ಗೇರುಹಣ್ಣು, ಗೇರುಬೀಜ ಹೊರಗೆ ತೆಗೆದು, ಅದರಲ್ಲಿ ಆಟವಾಡಿದ ಕ್ಷಣಗಳು ಎಂದೂ ಮರೆಯಲಾಗದು. ದಾರಿಯುದ್ದಕ್ಕೂ ಸಿಗುತ್ತಿದ್ದ ಎಲ್ಲಾತರದ ಹಣ್ಣು-ಹಂಪಲುಗಳು ನಮ್ಮ ಜೀವನದಲ್ಲಿ ಅಚ್ಚಳಿಯದಂತೆ ಉಳಿದುಬಿಟ್ಟಿದೆ. ಊರಲ್ಲಿ ನಡೆಯುವ ಯಕ್ಷಗಾನ ಬಯಲಾಟ, ಕೋಲಾಟಗಳು, ಹಬ್ಬ-ಹರಿದಿನಗಳು, ದೈವ ಭೂತಗಳ ಸೇವೆಗಳು, ಹೋಳಿ, ನವರಾತ್ರಿ, ಶಿವರಾತ್ರಿ, ಯುಗಾದಿ, ಮತ್ತಿತರ ಹಬ್ಬಗಳನ್ನು ಅನುಭವಿಸಿದ ಕ್ಷಣಗಳು ಎಂದಿಗೂ ಅಚ್ಚಳಿಯದಂತೆ ಉಳಿದುಬಿಟ್ಟಿದೆ. ಶಾಲೆಯನ್ನು ಸೇರ ಬೇಕಿದ್ದರೆ ಕಿಲೋಮೀಟರುಗಟ್ಟಲೆ ನಡೆದು ಸೇರುತಿದ್ದ ಕಾಲವದು. ಶಾಲಾ ತರಗತಿಗಳಲ್ಲಿ ನೆಚ್ಚಿನ ಅಧ್ಯಾಪಕರು ನೀಡುತ್ತಿದ್ದ ಬೋಧನೆ ಆಟಗಳು, ಪಾಠಗಳು, ನಮ್ಮ ಜೀವನವನ್ನು ಸದೃಢ ಗೊಳಿಸಿದೆ.
ಊರಿನ ಜಾತ್ರೆಗಳಲ್ಲಿ, ತೆಗೆದುಕೊಂಡಿರುವ ಮಿಠಾಯಿಗಳು, ಆಟವಾಡು ಸಾಮಾನಗಳು, ಬಲೂನು, ತುತ್ತೂರಿ, ಖರ್ಜೂರ, ಐಸ್ ಕ್ರೀಮ್, ಬಟ್ಟೆಗಳನ್ನು ತೆಗೆದುಕೊಂಡು ಸಂಭ್ರಮಿಸಿದ ದಿನಗಳು ಬಹಳ ಕೃಷಿಯನ್ನು ಇಂದಿಗೂ ತಂದುಕೊಡುತ್ತಿದೆ. ಅದೆಷ್ಟು ಬಡತನವಿದ್ದರೂ ನಮಗೆ ಸಂತೋಷಕ್ಕೆ ಕಡಿಮೆ ಇರಲಿಲ್ಲ. ಅಜ್ಜಿ ಅಜ್ಜ, ತಮ್ಮ ತಂಗಿ, ಮಾವ, ಕುಟುಂಬದ ಎಲ್ಲಾ ಸದಸ್ಯರು ಒಂದಲ್ಲ ಒಂದು ರೀತಿಯಲ್ಲಿ ಸೇರಿ ಸಂಭ್ರಮಿಸುತ್ತಿದ್ದ ಆ ದಿನಗಳು, ಮನೆಯಲ್ಲಿ ಆದಷ್ಟು ಕೊರತೆಗಳಿದ್ದರೂ, ತೊಂದರೆಗಳಿದ್ದರೂ, ಸಮಯ ಸಮಯಕ್ಕೆ ಬರುತ್ತಿದ್ದ ಹಬ್ಬ-ಹರಿದಿನಗಳು ಎಲ್ಲಾ ಸಮಸ್ಯೆಗಳನ್ನು ಮುಚ್ಚಿ ಬಿಡುತ್ತಿದ್ದವು. ಮನೆಯಲ್ಲಿ ಸೇರುತಿದ್ದ ಎಲ್ಲಾ ಮಕ್ಕಳು, ಗುರು ಹಿರಿಯರು, ಸಂಭ್ರಮ ಸಡಗರದಲ್ಲಿ ಪಾಲ್ಗೊಳ್ಳುತ್ತಾ,ಖುಷಿಯಾಗಿ ಬದುಕುತಿದ್ದೆವು.
ಹಳ್ಳಿಯ ಆಟೋಟಗಳು, ಮರಕೊತಿ, ಲಗೋರಿ, ಬುಗರಿಯಾಟ, ಹರಿಯುವ ತೋಡಿನಲಿ ಚಿಕ್ಕ ಪುಟ್ಟ ದೋಣಿ ಮಾಡಿ ಬಿಟ್ಟ ಸಂಭ್ರಮ, ಮಳೆಯಲಿ ನೆನೆದು ನಡೆದ ದಿನಗಳು, ಗಾಳಿಯಲಿ ಹಾರಿ ಹೋಗಿರುವ ಕೊಡೆಗಳು, ಸಿಡಿಲು ಮಿಂಚಿನ ಬೆಳಕಿನ ಸಹಾಯದಿಂದ ಕತ್ತಲ ಹಾದಿಯನ್ನು ನಡೆದ ನೆನಪುಗಳು! ಇವೆಲ್ಲವೂ ನೆನಪಾಗಿಯೇ ಅಚ್ಚಳಿಯದೆ ನನ್ನ ಮನದಲಿ ಉಳಿದುಬಿಟ್ಟಿದೆ.
ದಿನಕ್ಕೊಂದು ಬಾರಿ ಹಳ್ಳಿ ರಸ್ತೆಯಲ್ಲಿ ಓಡಾಡುವ ಬಸ್ಸು, ಎತ್ತಿನ ಗಾಡಿ, ಹತ್ತಿರದಲ್ಲಿರುವ, ಅಂಗಡಿಯಲ್ಲಿ ತೆಗೆದುಕೊಂಡ ಚಾಕಲೇಟು, ಬಾಳೆ ಹಣ್ಣು, ಗಟ್ಟಿ ಬಜೆ, ಬನ್ಸು, ಪಾನೀಯ, ಶರಬತ್ ಗಳನ್ನು ಸವಿದ ಆ ದಿನಗಳು ಇಂದು ಮಾಯವಾಗಿ ಬಿಟ್ಟಿದೆ. ಇಂದು ಎಲ್ಲೆಲ್ಲೂ ಕಂಗೊಳಿಸುವ ಸುಂದರ ಮನೆಗಳು, ಕಾರು, ಬೈಕು, ದಾರಿ ದೀಪ, ಕಾಡು ಮರಗಳಿಲ್ಲದೆ ಭಣಗುಡುವ ಜಾಗಗಳಾಗಿ ಮಾರ್ಪಟ್ಟಿದೆ ಆ ಸುಂದರ ಹಳ್ಳಿಗಳು.
ಆ ದಿನಗಳನ್ನು ಕಳೆದ ನಾವೇ ಭಾಗ್ಯವಂತರು, ಆ ದಿನಗಳನ್ನು ಅನುಭವಿಸಿರುವ ನಾವೇ ಭಾಗ್ಯವಂತರು. ಎಲ್ಲಾ ಆಸೆಗಳಿಗೆ ತುತ್ತಾಗಿ ಹಳ್ಳಿಯನ್ನು ನಾಶ ಪಡಿಸುತ್ತ, ಹಳ್ಳಿಯನ್ನು ಪಟ್ಟಣವಾಗಿ ಮಾರ್ಪಡಿಸಿ ಇಂದು ಪಡಬಾರದ ಕಷ್ಟವನ್ನು ಅದೇ ಹಳ್ಳಿಯಲ್ಲಿ ಅನುಭವಿಸಿ ಸಾಯುತ್ತಿದ್ದೇವೆ.
ಭಾರತದ ಅನುರಾಗ ಹಳ್ಳಿ ಜೀವನ ಅನುಭವಿಸಿದ ಜೀವಗಳನ್ನು ನೆನೆಯುತ್ತ.
ಬರಹ : ಮಾಧವ. ಕೆ. ಅಂಜಾರು
..
Comments
Post a Comment