(ಲೇಖನ -25)ಬಾನೆತ್ತರದಲ್ಲಿ ಕಂಡ ಸ್ಮಶಾನ
ಬಾನೆತ್ತರದಲ್ಲಿ ಕಂಡ ಸ್ಮಶಾನ
ಪ್ರತಿಯೊಂದು ಜೀವಿಯೂ ಹುಟ್ಟಿದಾಗ ಸಾವೆಂಬ ಬುತ್ತಿಯನ್ನು ಕಟ್ಟಿಕೊಂಡು ಬಂದಿರುತ್ತದೆ. ಆ ಸಾವಿನ ಬುತ್ತಿಯನ್ನು ಯಮರಾಜ ಯಾವಾಗ ತೆರೆದು ಬಿಡುವನು ಎಂಬುದು ಯಾರಿಗೂ ಹೇಳಿರೋದಿಲ್ಲ. ಸಹಜವಾಗಿ ಎಂದಿನಂತೆ ಮನೆಯಲ್ಲಿನ ಕೆಲಸ ಕಾರ್ಯಗಳನ್ನು ಮುಗಿಸಿ ಕಛೇರಿಗೆ ಹೊರಟ ನಾನು ಸಮಯಕ್ಕಿಂತ ಹತ್ತು ನಿಮಿಷಗಳ ಕಾಲ ಮೊದಲೇ ತಲುಪಿದ್ದೆ. ತಾಂತ್ರಿಕ ಸಂಬಂದಿಸಿದ ಕೆಲಸಗಳು ವಿವಿಧ ಸರಕಾರಿ ಕಛೇರಿ ಮತ್ತು ಖಾಸಗಿ ಸಂಸ್ಥೆ ಗಳಿಗೆ ಹೋಗಿ ಮಾಡಿ ಬರಬೇಕಾದ ಅನಿವಾರ್ಯತೆ. ಅಂದು ಬುಧವಾರ ಕುವೈಟ್ ಎಂಬ ಮಾಯಾನಗರ ಅದರ ಹೃದಯ ಭಾಗದಲ್ಲಿ ಬಾನೆತ್ತರದ ಕಟ್ಟಡಗಳು ಅದರ ಸುತ್ತ ಸುಂದರ ಸುವ್ಯವಸ್ಥಿತ ರಸ್ತೆಗಳು, ಸಾವಿರಾರು ಜನರ ಓಡಾಟ ಪ್ರಪಂಚದಲ್ಲಿ ತಯಾರಾಗುವ ಎಲ್ಲಾ ತರಹದ ಕಾರುಗಳು ಶಬ್ದ ಮಾಲಿನ್ಯ ವಿಲ್ಲದೆ ಓಡಾಟ ಮಾಡುತ್ತಿರುತ್ತದೆ . ಅದರೊಳಗೆ ಸಾಮಾನ್ಯ ಜನರಿಂದ ಸೇರಿ ಪ್ರಭಾವಿ ಜನರು ಜೀವನಕ್ಕಾಗಿ, ಸಂತೋಷಕ್ಕಾಗಿ, ಪರಿಶ್ರಮ, ಚಿಂತೆ ದುಮ್ಮಾನಗಳೊಂದಿಗೆ ದಿನವನ್ನು ಕಳೆಯುತ್ತಿರುತ್ತಾರೆ.
ಸಮಯ ಬೆಳಗ್ಗಿನ 8 ಗಂಟೆ 50 ನಿಮಿಷ ಎಂಬತ್ತು ಮಹಡಿಯ ಬೃಹದಾಕಾರದ ಗಗನಚುಂಬಿ ಕಟ್ಟಡ, ಕೆಲಸನಿಮಿತ್ತ 78ನೇ ಮಹಡಿ ಗೆ ನನ್ನ ಪಯಣ, ಆ ದಿನಕ್ಕಿಂತ ಮೊದಲು ಅದೆಷ್ಟೋ ಬಾರಿ ಅಲ್ಲಿಗೆ ಹೋಗಿದ್ದೆ ಆದರೆ ಈ ಬರವಣಿಗೆ ಮೂಡಿ ಬರಲು ನಾನು ಆ ದಿನ ಕಂಡ ದೃಶ್ಯ ಕಾರಣವಾಯಿತು. ಕಟ್ಟಡದ ಹೊರ ಆವರಣ ಪಾರದರ್ಶಕ ಗಾಜು ಮೇಲೆ ಹೋದಾಗ ಆಕಾಶದಲ್ಲಿ ಇರುವ ಅನುಭವ, ಸುತ್ತಲೂ ಕಣ್ಣು ಹಾಯಿಸಿದಾಗ ಒಂದು ಭಾಗದಲ್ಲಿ ಸಮುದ್ರ, ಇನ್ನೊಂದು ಭಾಗದಲ್ಲಿ ಸಾವಿರಾರು ಕಟ್ಟಡಗಳು, ದೊಡ್ಡ ಪಟ್ಟಣ, ಅದರ ನಡುವೆ ಮೈದಾನ, ಉದ್ಯಾನವನ, ಮತ್ತಿತರ ಸ್ಥಳಗಳು ಬಹಳ ಚಿಕ್ಕದಾಗಿ ಕಾಣುತ್ತವೆ. ಮೇಲಿಂದ ಕೆಳಗೆ ನೋಡುವಾಗ ಮೈ ಜುಮ್ಮೆನಿಸಿದರೂ ಆ ಪ್ರಕೃತಿಯ ಸೌಂದರ್ಯ ಸವಿಯಲು ಬಹಳ ಸಂತೋಷ ಕೂಡ ಆಗುತ್ತದೆ. ನಾನು ನನ್ನ ಸಹುದ್ಯೋಗಿಗಳನ್ನು ಕಾಯುತ್ತ, ಕಿಟಕಿಯ ಹೊರಗೆ ಕಣ್ಣು ಹಾಯಿಸಿದೆ. ಈ ಮೊದಲೇ ಹೇಳಿದಂತೆ ಎಲ್ಲಾ ಸ್ಥಳಗಳನ್ನು ಕಾಣುತ್ತಿರುವಾಗ, ನನ್ನ ಕಣ್ಣಿಗೆ ಕಂಡದ್ದು ವಿಶಾಲವಾದ ಮೈದಾನ ಅದರಲ್ಲಿ ಆಯತಾಕಾರದ ಪೆಟ್ಟಿಗೆಗಳು, ಒಮ್ಮೆಲೆ ನೋಡಿದಾಗ ಅಷ್ಟು ಗೊತ್ತಾಗದಿದ್ದರೂ ಸರಿಯಾಗಿ ನೋಡಿದಾಗ "ಸ್ಮಶಾನ "ವೆಂಬುದು ತಿಳಿಯಿತು. ಅರೆ, ಇದೇನು ಮಹಾ ಅನ್ನೋದು ಒಂದು ಕ್ಷಣಕ್ಕೆ ಮನಸ್ಸು ಹೇಳಿದರೂ, ಮತ್ತೊಂದು ದೃಷ್ಟಿಯಲ್ಲಿ ಪ್ರಪಂಚದಲ್ಲಿ ಎಷ್ಟೇ ಶಕ್ತಿವಂತನಾಗಿದ್ದರು, ಯುಕ್ತಿವಂತನಾಗಿದ್ದರು, ಶ್ರೀಮಂತ, ಬಡವ, ದೇಶವನ್ನಾಳುವ ಜನರು ಯಾವುದೇ ಮೇಲು ಕೀಳೆಂಬ ಬೇಧಭಾವಗಳಿಲ್ಲದೆ ಕೊನೆಯದಾಗಿ ಸೇರುವ ಜಾಗ. ಛೆ, ಜೀವನ ಇಷ್ಟೇನಾ ಅಂದುಕೊಂಡೆ, ಒಮ್ಮೆ ತಟಸ್ಥನಾಗಿಬಿಟ್ಟೆ, ನಾವೆಲ್ಲರೂ ಯಾಕಾಗಿ, ಯಾರಿಗಾಗಿ ಒಂದಷ್ಟು ಸಂಪಾದನೆ ಮಾಡುತ್ತಿದ್ದೇವೆ, ನಾವು ಮಾಡಿರುವ ಆಸ್ತಿ ಅಂತಸ್ತು ಗಳು ನಮ್ಮೊಂದಿಗೆ ಬರೋದಿಲ್ಲ ಅನ್ನೋದು ನಮಗೆ ಗೊತ್ತಿದ್ದರೂ ನಮ್ಮಲ್ಲಿರೋ ಅಹಂಕಾರ, ಆಸೆಗಳಿಗೆ ಮಿತಿಗಳೆಲ್ಲಿ! ನಾನು ನನಗಾಗಿ ನನ್ನಿಂದಲೇ ಅನ್ನುವ ನಿದರ್ಶನ, ನಾನೇನು ಬೇಕಾದರೂ ಮಾಡಬಲ್ಲೆ, ನನಗೆ ದೊಡ್ಡ ದೊಡ್ಡ ವ್ಯಕ್ತಿಗಳ ಪರಿಚಯವಿದೆ, ತುಂಬಾ ಪ್ರತಿಭೆಯುಳ್ಳವನು, ಪ್ರಭಾವಶಾಲಿ ಅದೆಷ್ಟು ವ್ಯಾಖ್ಯಾನ ಅಲ್ಲವೇ?
ಇಷ್ಟಕ್ಕೆ ಮುಗಿಯಲಿಲ್ಲ, ನನ್ನ ಸಹುದ್ಯೋಗಿಗಳು ಬಂದಾಗ ಆ ಜಾಗವನ್ನು ತೋರಿಸಿ ಹೇಳಿದೆ ಓ ಅಲ್ಲಿ ಕಾಣುತಿದೆ ನಮ್ಮೆಲ್ಲರ ಶಾಶ್ವತ ಪ್ರಪಂಚ ಓ ಅಲ್ಲಿ ಕಾಣುತಿದೆ ನೋಡಿ, ನಾವು ಹೆದರಿದರೂ, ಹೋಗೋದಿಲ್ಲ ಅಂದರೂ ಹೋಗದಿರಲು ಸಾಧ್ಯವಿಲ್ಲ. ದೇವನೊಬ್ಬ ಮಾನವನಿಗೆ ನೂರು ವರುಷ ಆಯುಷ್ಯ ಕೊಟ್ಟು ಭೂಮಿಗೆ ಕಳುಹಿಸಿದಾಗಲೇ ಇಷ್ಟೆಲ್ಲ ಸಮಸ್ಯೆಗಳನ್ನು ಸೃಷ್ಟಿಸಿ, ಸ್ವಲ್ಪ ಒಳ್ಳೆಯವನಾಗಿ ಬದುಕಲೂ ಬಿಡದಿರುವ ಅದೆಷ್ಟೋ ಎಡಬಿಡಂಗಿಗಳು ಅಲ್ಲವೇ? ಅದೊಂದು ಹತ್ತು ನಿಮಿಷ ಮನದಲ್ಲಿರೋ ಚಿತ್ರಣವನ್ನೇ ಬದಲಿಸಿತು. ಹೇಗೆಂದರೆ ಬಾನೆತ್ತರದಲ್ಲಿ ದೂರದಲ್ಲಿ ಕಾಣುವ ಸ್ಮಶಾನ ಅದರ ಸುತ್ತಲೂ ಸಾವಿರಾರು ಕಟ್ಟಡಗಳು, ಸಿರಿವಂತರು, ಬಡವರು, ಅತೀ ಬೆಲೆಬಾಳುವ ಕಾರು, ಐಶ್ವರ್ಯ - ಆದರೆ ಸ್ಮಶಾನಕ್ಕೆ ಯಾರು ಕಣ್ಣು ಹಾಯಿಸುತ್ತಾರೆ ಅಲ್ಲವೇ? ಒಂದುವೇಳೆ ಕಣ್ಣಾಯಿಸಿದರು ಇಷ್ಟೆಲ್ಲ ಯೋಚೆನೆ ಕೂಡ ಮಾಡೋದಿಲ್ಲ!
ಹಾ, ಹೌದು ನಾನು ಮತ್ತು ನನ್ನ ಸಹುದ್ಯೋಗಿಗಳು ಕೆಲಸವನ್ನು ಮುಗಿಸಿ, ಇನ್ನೊಂದು ಪ್ರತಿಷ್ಠಿತ ಮತ್ತು ಕುವೈಟ್ ನ ಉನ್ನತ ಜನರು ಇರುವ ಸ್ಥಳಕ್ಕೆ ಹೋದೆವು ಆದರೆ ಅದು ಸುಮಾರು ಹದಿನೈದು ಮಹಡಿಗಳ ಕಟ್ಟಡ ಇನ್ನೇನು ಕೆಲಸ ಮುಗಿಯುತ್ತಾ ಬಂತು, ಅಷ್ಟರಲ್ಲಿ ನಗುತ್ತಾ ನನ್ನೊಂದಿಗೆ ಇರುವವರು ಅಲ್ಲಿ ದೂರದಲ್ಲಿ ಕಂಡ ಸ್ಮಶಾನ ಇಲ್ಲಿ ತುಂಬಾ ಹತ್ತಿರದಲ್ಲಿ ಇನ್ನೊಂದು ಸ್ಮಶಾನ ವಿದೆ ನೋಡು ಹೇಳಿದರು. ಹೌದು ಅವರು ನೋಡ ಹೇಳಿದಂತೆ ಇಣುಕಿ ನೋಡುವಾಗ ಸಾವಿರಾರು ಹಾಸುಗಲ್ಲು ಮತ್ತು ಗೋರಿಗಳು ಕಾಣಸಿಕ್ಕವು. ಮತ್ತೊಮ್ಮೆ ಮನಸಿನೊಳಗೆ ಪ್ರಪಂಚವೇ ನಶ್ವರ ನಾವೆಲ್ಲರೂ ಏನು ಮಾಡಿದರು, ಎಷ್ಟು ಸಂಪಾದಿಸಿದರೂ ಕೊನೆಗೆ ಯಾವುದೂ ನಮ್ಮೊಂದಿಗೆ ಇರುವುದಿಲ್ಲ ನಮ್ಮ ಒಳ್ಳೆತನವಷ್ಟೇ ನಮಗೆ ತೃಪ್ತಿ, ನಾವು ಮಾಡುವ ಸತ್ಕಾರ್ಯಗಳು ಮಾತ್ರ ನಮ್ಮ ಬದುಕಿಗೆ ಸ್ವರ್ಗ. ಸತ್ತಾಗ ನಮಗೆ ಸ್ವರ್ಗ ಇದೆ ಅಥವಾ ಇಲ್ಲವೆಂದು ಗೊತ್ತಾಗಬೇಕಿದ್ದರೆ ಸತ್ತಾಗ ಮಾತ್ರ ಗೊತ್ತಾಗುವುದು. ಅದೇನೇ ಇರಲಿ ದೇವರು ನಮ್ಮನ್ನು ಮನುಷ್ಯ ಜನ್ಮ ಕೊಟ್ಟು ಈ ಭುವಿಗೆ ಕಳುಹಿಸಿದ್ದಾನೆ. ಅರಿವಿಲ್ಲದೆ ಮಾಡಿದ ತಪ್ಪು ನಿಮಗೆ ಅರಿವಿಗೆ ಬಂದ ನಂತರ ಅದೇ ತಪ್ಪನ್ನು ಇನ್ನೊಮ್ಮೆ ಮಾಡಲು ಪ್ರಯತ್ನಿಸುತಿದ್ದರೆ ನೀನು ತಪ್ಪಾಗಿ ಮನುಜನಾಗಿ ಹುಟ್ಟಿದಂತೆ.
ಖಚಿತವಿಲ್ಲದ ನಾಳೆಗೆ ಚಿಂತಿಸದೆ, ಅಂತ್ಯವಿಲ್ಲದ ಆಸೆಗೆ ಬೀಳದೆ, ಮತ್ತೊಬ್ಬರಿಗೆ ಖುಷಿಯಾಗಿ ಜೀವಿಸಲು ಬಿಟ್ಟು, ನೀನೂ ಕೂಡ ಸ್ವರ್ಗವನ್ನು ಸೃಷ್ಟಿಸಿ ಬದುಕಿ ಮಾದರಿಯಾಗು.
ಒಳಿತು ಮಾಡು ಮನುಜ... ನೀನಿರೋದು "ಒಂದೇ "ದಿವಸ.
✍️ಮಾಧವ ನಾಯ್ಕ್ ಅಂಜಾರು 🌷
Comments
Post a Comment