(ಲೇಖನ -67)-ಮೌನ - ನಾನು ಮತ್ತು ನನ್ನ ಗೆಳೆಯನೊಬ್ಬನ ದೀರ್ಘವಾದ ಸಂಭಾಷಣೆಯಲ್ಲಿ ಆಯ್ಕೆಯಾದ ಮೌನ ಶಬ್ದದ ಲೇಖನ ಎನ್ನ ಬಾಳಿನ ಪುಟದಲಿ

 (ಲೇಖನ -67)-ಮೌನ - ನಾನು ಮತ್ತು ನನ್ನ ಗೆಳೆಯನೊಬ್ಬನ ದೀರ್ಘವಾದ ಸಂಭಾಷಣೆಯಲ್ಲಿ ಆಯ್ಕೆಯಾದ ಮೌನ ಶಬ್ದದ ಲೇಖನ ಎನ್ನ ಬಾಳಿನ ಪುಟದಲಿ......

          ಮೌನಕ್ಕೆ ಅದೆಷ್ಟು ಶಕ್ತಿ ಇದೆ ಎಂಬುದನ್ನು ಹಲವಾರು ಸಂದರ್ಭಗಳಲ್ಲಿ ನಾವೆಲ್ಲರೂ ಅನುಭವಿಸಿರುತ್ತೇವೆ, ಮೌನ  ಅಸ್ತ್ರ ವಾಗಬಹುದು, ಮೌನ  ಉತ್ತರ ವಾಗಬಹುದು, ಮೌನ ಮಾತಾಗಲೂ ಬಹುದು, ಮೌನವೆಂಬುದು ತಂತಿ ಯೊಳಗಿನ ವಿದ್ಯುತ್ತಿನಂತೆ, ನಿರ್ದಿಷ್ಟ ಜಾಗಕ್ಕೆ ಸೇರಿ  ಅದನ್ನು ಬೆಳಗಲು ಬೇಕಾಗುವ ಸಾಮಗ್ರಿಗಳು ಸಿಕ್ಕಾಗ ಬೆಳಕನ್ನು  ನೀಡಬಹುದು ಅಥವಾ ಬೆಂಕಿಯ ಜ್ವಾಲೆ ಯಾಗಲು ಬಹುದು. ನಮ್ಮ ಜೀವನದಲ್ಲಿ ಬರುವ ಹಲವಾರು ಸಂದರ್ಭಗಳಲ್ಲಿ ಕೆಲವೊಮ್ಮೆ ಮೌನವಾಗಿ ಉತ್ತರವನ್ನು ಕೊಡುವ ಸಂದರ್ಭಗಳನ್ನು  ರೂಢಿ ಮಾಡಿಕೊಳ್ಳುತ್ತೇವೆ. ಅಜ್ಞಾನಿಗೆ ಮೌನವೆಂಬುದು ಹೇಡಿಯ ಲಕ್ಷಣವೆಂದು ಕಂಡರೂ, ಜ್ಞಾನಿಗೆ  ಮೌನವೆಂಬುದು ಪ್ರಬುದ್ಧತೆಯ   ಲಕ್ಷಣವಾಗಿ ಕಾಣುತ್ತದೆ. ನಮ್ಮ ಸಂಸ್ಕಾರಗಳಲ್ಲಿ ವೃತ, ಪ್ರಾರ್ಥನೆಯನ್ನು ಮಾಡುತ್ತಿರುವಾಗ ಮೌನವಾಗಿ ಶ್ರದ್ಧೆಯಿಂದ  ಆಚರಿಸುವ ಕಾರ್ಯಕ್ರಮಗಳು  ಅದೆಷ್ಟೋ ಇದೆ. ದೇವಸ್ಥಾನ, ಮಂದಿರ ಮಸೀದಿಗಳಲ್ಲಿ, ಪ್ರಾರ್ಥನೆಯ ನಂತರ ಒಂದೆರಡು ನಿಮಿಷ ಮೌನವಾಗಿ ಪ್ರಾರ್ಥನೆಯನ್ನು ಸಲ್ಲಿಸುವ ವಿಧಗಳು ನಮ್ಮ ಮನಸ್ಸಿಗೆ ಅತ್ಯಂತ ಪ್ರಬಲ ಶಕ್ತಿಯನ್ನು ನೀಡುತ್ತದೆ. ಮೌನಕ್ಕೆ ಇರುವಷ್ಟು ಶಕ್ತಿ  ಬೇರೆ ಯಾವುದಕ್ಕೂ ಇಲ್ಲ, ಮೌನ ನಿಮ್ಮನ್ನು, ದೊಡ್ಡ ಸಮಸ್ಯೆಯಿಂದ  ಹೊರ ಗೆಳೆಯ ಬಹುದು, ಮೌನ ನಿಮ್ಮನ್ನು  ತುಂಬಾ ಆಲೋಚಿಸಿ  ನಿರ್ಧಾರ ತೆಗೆದುಕೊಳ್ಳುವ ಸಾಧನವಾಗಬಹುದು,   ಮೌನ  ಮತ್ತು ಶ್ರದ್ಧೆ ಎರಡೂ ಮೇಧಾವಿಯನ್ನಾಗಿಯೂ ಪರಿವರ್ತಿಸಬಹುದು.



        ಇಂದಿನ ಕಾಲದಲ್ಲಿ  ಮೌನವಹಿಸಿ ಕುಳಿತವರು ದುರ್ಬಲನೆಂದು ಅಂದುಕೊಂಡು, ಅವಿವೇಕಿ ಮನುಷ್ಯ  ಸತ್ಯವನ್ನು ಮುಚ್ಚಿಹಾಕಲು  ಹರಸಾಹಸ ಪಡುತ್ತಾರೆ , ತನಗಿಂತ ಇನ್ನೊಬ್ಬರಿಲ್ಲ, ತಾನೇ,  ನನ್ನಿಂದಲೇ ಎಂಬುದನ್ನು ತೋರ್ಪಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ . ಆದರೆ  ತುಂಬಿದ ಕೊಡ ತುಳುಕುವುದಿಲ್ಲ ಎಂಬ ಕಾರಣಕ್ಕೆ  ಕೊಡವ ನೇ ತೂತು ಮಾಡಿ  ತುಳುಕಿಸುವ ಪ್ರಯತ್ನ ಮಾಡುವ ಜನರು ಕೂಡ  ನಾವು ನೀವು ನೋಡಿರಬಹುದು. ಯಾವುದೇ ಸಂದರ್ಭಕ್ಕೂ ಅಂತಹ ಸನ್ನಿವೇಶಗಳನ್ನು  ನಿಭಾಯಿಸುವ ಶಕ್ತಿಯನ್ನು ಹೊಂದಿದ್ದರೆ, ನಿಮ್ಮ ಮೇಲಿನ ಹಿಡಿತ ನಿಮ್ಮ ಕೈಲಿದೆ ಎಂಬರ್ಥ, ಒಬ್ಬ ವ್ಯಕ್ತಿ  ಅತಿಯಾದ ಸಿಟ್ಟು ಬಂದಾಗ, ಅಥವಾ ಇನ್ನೊಬ್ಬರು ನಿಮ್ಮ ಮೇಲೆ ಕಾಲ್ಕೆರೆದು ಜಗಳ ಮಾಡಲು ಬಂದಾಗ ನಿಮ್ಮ ಮನಸ್ಸು ಹಿಡಿತದಲ್ಲಿದೆ ಎಂದಾದರೆ, ಅದೇ ಸಂದರ್ಭದಲ್ಲಿ  ಪ್ರತಿಕ್ರಿಯೆಯನ್ನು ನೀಡದೆ ಮೌನವಾಗಿ ಎಲ್ಲವನ್ನೂ ಕೇಳಿ ಸಾಕಷ್ಟು ಸಮಯವನ್ನು ತೆಗೆದುಕೊಂಡು ಎದುರಾಳಿಗೆ ಅಥವಾ ತೊಂದರೆಯನ್ನು ಸೃಷ್ಟಿಸುತ್ತಿರುವ ವ್ಯಕ್ತಿಗೆ ಸರಿಯಾದ ರೀತಿಯಲ್ಲಿ ಉತ್ತರವನ್ನು ಕೊಡಬಹುದು. ಸಾಮಾನ್ಯವಾಗಿ  ಕೆಲವು ಸಂದರ್ಭಗಳಲ್ಲಿ ನಮ್ಮ ಮನಸ್ಸಿನ ಹಿಡಿತವನ್ನು ಕಳೆದುಕೊಂಡಾಗ ಸಮಸ್ಯೆಗಳು ಇನ್ನಷ್ಟು  ಜಾಸ್ತಿಯಾಗಿ  ಪರಿಹಾರವಾಗದ ಮಟ್ಟಕ್ಕೆ ತಲುಪಬಹುದು. ಒಂದು ವ್ಯಕ್ತಿಯ  ಒಳ ಮನಸ್ಸನ್ನು ಅರ್ಥಮಾಡಿಕೊಳ್ಳಲು   ಬಹಳಷ್ಟು ಸಮಯ ಬೇಕಾಗುತ್ತದೆ, ಸಂಪೂರ್ಣ ವಲ್ಲದಿದ್ದರೂ, ಶೇಕಡ 75ರಷ್ಟು  ಅವರ ಒಡನಾಟದಿಂದ   ಅರ್ಥ ಮಾಡಿಕೊಳ್ಳಬಹುದು.  ದಿನಗಳೆದಂತೆ  ಒಂದರಮೇಲೊಂದು ನಿಜ ಬಣ್ಣ ತಿಳಿಯುತ್ತಲೆ ಸಾಧ್ಯವಾದರೆ ವಾಸ್ತವವನ್ನು ಮನವರಿಕೆಯಾಗುವ ರೀತಿಯಲ್ಲಿ ಹೇಳಲು ಪ್ರಯತ್ನಿಸಿ, ಇಲ್ಲವಾದಲ್ಲಿ ಆ ಮನುಷ್ಯನನ್ನು  ಅವನ ಪ್ರಪಂಚದಲ್ಲಿಯೇ  ಬದುಕಲು ಬಿಟ್ಟುಬಿಡಿ.

                       ಎಲ್ಲರೂ ಒಳ್ಳೆಯವರಾಗಿದ್ದರೆ ಪ್ರಪಂಚದಲ್ಲಿ  ಯಾವುದೇ ಸಮಸ್ಯೆಗಳು ಉದ್ಭವಿಸುತ್ತಿರಲಿಲ್ಲ, ಸಕಲ ಜೀವರಾಶಿಗಳಿಗೆ ಪ್ರಕೃತಿ ಕೊಟ್ಟಿರುವಂತಹ ಜೀವನ ಪದ್ಧತಿಗಳನ್ನು ಅಳವಡಿಸಿಕೊಂಡು ಜೀವನವನ್ನು ಮುಗಿಸಿ ಕೊಳ್ಳುತ್ತವೆ, ಆದರೆ ಬುದ್ಧಿವಂತನೆಂಬ ಮನುಷ್ಯನು ಅತಿಯಾದ ವಿಕೃತಿಗಳನ್ನು  ಮಾಡುತ್ತಾ, ಅಧಿಕಾರ, ಸಂಪತ್ತು, ಆಸೆ-ಆಕಾಂಕ್ಷೆಗಳಿಗೆ ಬಲಿಯಾಗಿ, ಮಾಡಬಾರದ್ದನ್ನು ಮಾಡುತ್ತಾ  ತನಗೆ ತೃಪ್ತಿ ಮಾಡಿಕೊಳ್ಳುತ್ತಿರುತ್ತಾರೆ. ಕೆಸರಿನಲ್ಲಿ ಜೀವಿಸುತ್ತಿರುವ ಮೀನುಗಳು ಶುದ್ಧ ನೀರಿನಲ್ಲಿ ಹೇಗೆ ಬದುಕುವುದಿಲ್ಲ ವೋ ಹಾಗೆಯೇ ಶೋಧ ನೀರಿನಲ್ಲಿರುವ ಮೀನುಗಳು ಕೆಸರಿನಲ್ಲಿ ಬದುಕುವುದಿಲ್ಲ. ಹಾಗಾಗಿ ನಿಮ್ಮ ಸುತ್ತಲ ಪ್ರಪಂಚದಲ್ಲಿ ನಡೆಯುವ ಕೆಟ್ಟ ಸಂದರ್ಭಕ್ಕೆ ನಿಮ್ಮ ಸಮಯವನ್ನು ವ್ಯರ್ಥ ಮಾಡದೆ, ಬದುಕಿನುದ್ದಕ್ಕೂ ಬರುವ ಸು ಸಂದರ್ಭಗಳಿಗೆ ಹೆಚ್ಚಿನ ಒತ್ತನ್ನು ನೀಡಿದಾಗ ಜೀವನದ ಹಾದಿ ಸುಗಮವಾಗಿರುವುದು.

              ಬೆಣ್ಣೆಯ ಮೇಲೆ ಕೂದಲು ಬಿದ್ದಾಗ ಎದ್ದುಕಾಣುವುದು, ಬೆಣ್ಣೆ ಹಾಳಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಿಮ್ಮದೇ ಆಗಿರುತ್ತದೆ, ಹಾಲಿಗೆ ಹುಳಿ ಹಿಂಡುವ ಜನರಿರುವಾಗ ಹಾಲನ್ನು ಭದ್ರವಾಗಿ ಕಾಪಾಡಿಕೊಳ್ಳುವ ಜವಾಬ್ದಾರಿ ನಿಮ್ಮದಾಗಿರುತ್ತದೆ. ನಿಮ್ಮ ಕಿವಿಗೆ ವಿವಿಧ ಮಾಹಿತಿಗಳನ್ನು ಊದುತ್ತಿರುವವರು ಇರುವಾಗ ಕಿವಿ ಹಿತ್ತಾಳೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಿಮ್ಮದಾಗಿರುತ್ತದೆ. ಗಾಳಿ ಮಳೆ ಬಂದಂತೆ ಕೊಡೆ ಹಿಡಿಯುವ ಜನರು ಅಲ್ಲಿರುವಾಗ ಬಿರುಗಾಳಿಯಲ್ಲಿ ಸಿಲುಕಿ ಮುಳುಗದಂತೆ ಕಾಪಾಡಿಕೊಳ್ಳುವ ಜವಾಬ್ದಾರಿ ನಿಮ್ಮದಾಗಿರುತ್ತದೆ. ಮೌನಂ ಸಮ್ಮತಿ ಲಕ್ಷಣಂ ಎಂಬ ಆಲೋಚನೆಯಲ್ಲಿ, ತಿವಿಯಲು ಬರುವ ಸಂದರ್ಭಗಳು ಕಂಡಾಗ ಮೌನಂ ಅಸಮ್ಮತಿ ಲಕ್ಷಣಂ ಎಂದು ತಿಳಿಸುವ ಜವಾಬ್ದಾರಿ ಕೂಡ ನಿಮ್ಮದಾಗಿರುತ್ತದೆ.

                 TPI- The Passion of India (R) ತಮಗೆಲ್ಲರಿಗೂ ಶುದ್ಧ ಮನಸ್ಸು, ವಿವೇಕ ವಿವೇಚನೆ, ಪ್ರೀತಿ ಬಾಂಧವ್ಯ, ನೆಮ್ಮದಿ, ಆರೋಗ್ಯ, ನಗುನಗುತಾ ಬಾಳುವ  ಜೀವನ ಮುಂದಿನ ದಿನಗಳಲ್ಲಿ  ಸಿಗುತ್ತಿರಲಿ ಎಂಬ ಹಾರೈಕೆಯೊಂದಿಗೆ,  ಮನಸ್ಸಿನ ಎಲ್ಲಾ ಚಿಂತೆಗಳನ್ನು  ದೂರವಿಟ್ಟು ಮನಸ್ಸನ್ನು ಕೇಂದ್ರೀಕರಿಸಿ ಕನಿಷ್ಠ ಹತ್ತು ನಿಮಿಷಗಳ ಕಾಲ  ಮೌನವಾಗಿ ಕುಳಿತುಕೊಂಡು  ಪ್ರಪಂಚವನ್ನ ಮರೆತಾಗ  ನಾವು ನಮ್ಮ ಆತ್ಮಕ್ಕೆ ನೆಮ್ಮದಿಯನ್ನು ನೀಡಿದ ಅನುಭವ ಆಗಿಬಿಡುತ್ತದೆ ಒಮ್ಮೆ ಪರೀಕ್ಷಿಸಿ ನೋಡಿ, ಶುಭಮಸ್ತು.

        ✍️Madhava. K. Anjar.




        










 






                  

              




















Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ