(ಲೇಖನ -18)ವಿಷವಾಗುತ್ತಿದೆ ಅತಿಯಾಗಿ ಸೇವಿಸಿದ ಅಮೃತ.....!

ವಿಷವಾಗುತ್ತಿದೆ ಅತಿಯಾಗಿ ಸೇವಿಸಿದ ಅಮೃತ.....!

     ಪ್ರತಿಯೊಬ್ಬರ ಜೀವನವು, ಸುಖ ಶಾಂತಿ ನೆಮ್ಮದಿಯಿಂದಿರಬೇಕೆನ್ನುವ ಆಸೆಆಕಾಂಕ್ಷೆಗಳು  ಸಹಜವಾಗಿರುತ್ತದೆ. ಅದಕ್ಕಾಗಿ ಹುಟ್ಟಿದಂದಿನಿಂದ ಬೆಳೆದು ದೊಡ್ಡವರಾಗುವವರೆಗೆ, ಸಂಪ್ರದಾಯ, ಸಂಸ್ಕಾರ, ಆಚಾರ, ವಿಚಾರಗಳನ್ನು ಕ್ರಮಬದ್ಧವಾಗಿ ಪಾಲಿಸಲು ಧರ್ಮಶಾಲೆಗಳು,  ವಿದ್ಯಾಮಂದಿರ, ಕಾಲೇಜು, ಮತ್ತಿತರ ವ್ಯವಸ್ಥೆ ಮನುಜರು ಮಾಡಿಕೊಂಡಿರುತ್ತಾರೆ. ವ್ಯವಸ್ಥೆಯನ್ನು ಮಾಡಿಕೊಂಡು ಒಂದಷ್ಟು ಜನರು ಯಾವುದೇ ತೊಂದರೆಗಳುoಟಾಗದಂತೆ ನೋಡಿಕೊಳ್ಳುತ್ತಾ ಎಲ್ಲವನ್ನೂ ಸರಿದೂಗಿಸಿಕೊಂಡು ಜೀವನ ಮಾಡಿ ಬದುಕಿಗೊಂದು ಅರ್ಥವನ್ನು ಸೃಷ್ಟಿ ಮಾಡುತ್ತಾರೆ.

     ಮನೆಯಿಂದ ಕಲಿಯುವ ಪಾಠ, ಶಾಲೆ ಕಾಲೇಜುಗಳಿಂದ ಕಲಿಯುವ ಪಾಠ,  ಆ ವ್ಯಕ್ತಿಯಲ್ಲಿ ಅಡಗಿರುವ ಸಂಪ್ರದಾಯ ಮತ್ತು ಗೌರವವನ್ನು  ತೋರಿಸುತ್ತದೆ. ಆ ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ ತಿಳಿಯಲು ಸಾಧ್ಯವಾಗುತ್ತದೆ. ಏನಿದ್ದರೂ ಶಾಲೆ, ಕಾಲೇಜು, ಮನೆ ಇವೆಲ್ಲವೂ ನಮ್ಮ ಭವಿಷ್ಯದ ಅಡಿಗಲ್ಲಾಗಿರುತ್ತದೆ. ಇನ್ನೊಂದು ಅರ್ಥದಲ್ಲಿ ನಮ್ಮ ಮನೆಕಟ್ಟುವ ಪಂಚಾಂಗಕ್ಕೆ ಹಾಕುತ್ತಿರುವ ಗಟ್ಟಿಯಾದ ಅಡಿಪಾಯವಾಗಿರುತ್ತದೆ. ನಾವು ನಮ್ಮ ಸಮಾಜದಲ್ಲಿ ಎಷ್ಟು ಪ್ರಮಾಣದಲ್ಲಿ ಒಳಿತನ್ನು ಬಯಸುತ್ತೇವೆ, ಎಷ್ಟು ಕೆಡುಕನ್ನು ಬಯಸುತ್ತೇವೆ ಎಂಬುದು ತಿಳಿಯುತ್ತದೆ.  ನಾವು ನಮ್ಮ ಜೀವನದಲ್ಲಿ ಯಾವುದು ಅತಿಯಾಗಿ ಹಚ್ಚಿಕೊಳ್ಳುತ್ತೇವೆಯೋ ಅದರ ಅಂತ್ಯ ದುಃಖಕರವಾಗಿರುತ್ತದೆ ಅಥವಾ ನಮಗೆ ಸಿಗುವುದಕ್ಕಿಂತ ಮೊದಲೇ ನಮ್ಮ ಅಂತ್ಯವಾಗಿಬಿಡುತ್ತದೆ. ಇಂದಿನ ಸಮಾಜದಲ್ಲಿ ನಡೆಯುತ್ತಿರುವ ಕೆಲವು ಘಟನೆಗಳು, ಭವಿಷ್ಯಕ್ಕೆ ದೊಡ್ಡ  ಕಂಟಕವಾಗುವ ಲಕ್ಷಣಗಳು ಎದ್ದು ಕಾಣುತ್ತಿವೆ. ಇದಕ್ಕೆ ಕಾರಣಗಳು ಹಲವಾರು, ನಾವು ಶಾಲೆ ಕಾಲೇಜುಗಳಿಗೆ ಹೋಗುತ್ತಿರುವ ಸಮಯಲ್ಲಿನ ಶಿಕ್ಷಣ ವ್ಯವಸ್ಥೆ, ಶಿಸ್ತು, ಅಧ್ಯಾಪಕ ಅಧ್ಯಾಪಕಿಯರ ಮೇಲಿನ ಗೌರವ, ಭಯ, ವಿನಮ್ರತೆ, ಆಟೋಟ, ಮಾನಸಿಕ ಸದೃಢತೆ, ಗುರಿ, ಸಾಧನೆ, ಭವ್ಯ ಭಾರತದ ಸಂಸ್ಕೃತಿ ಮತ್ತು ವೈಭವಗಳನ್ನು ಅತೀ ಪ್ರೀತಿಯಿಂದ ಸ್ವೀಕರಿಸಿ, ಸುಂದರ ಭವಿಷ್ಯದ ಕನಸುಗಳನ್ನು ಹೆಣೆಯುತಿತ್ತು ಮತ್ತು ಶೇಕಡಾ 80% ವಿದ್ಯಾರ್ಥಿಗಳು ಒಂದಲ್ಲ ಒಂದು ರೀತಿಯಲ್ಲಿ ದೇಶದ ಅಥವಾ ಮನೆಯ ಬೆನ್ನೆಲುಬಾಗಿ ಮಾರ್ಪಡುತಿದ್ದರು.

        ಮೊಬೈಲು, ವಾಹನ, ಬಟ್ಟೆ, ಆಹಾರ, ಹಣದ ಕೊರತೆಯಿಂದ ಬಳಳುತಿದ್ದ ಆ ದಿನಗಳು, ಕಿಲೋಮೀಟರ್ಗಟ್ಟಲೆ ನಡೆದುಕೊಂಡು ಸೈಕಲು ತುಳಿದುಕೊಂಡು ಅಥವಾ ಬಸ್ಸಿನ ಪ್ರಯಾಣ ದೂರದ ಶಾಲಾ ಕಾಲೇಜುಗಳಿಗೆ. ಎಲ್ಲವೂ ಸುಲಭವಾಗಿ ಸಿಗುತ್ತಿರಲಿಲ್ಲ ಅದೆಷ್ಟು ಕಷ್ಟ ನಷ್ಟಗಳು.ಮನೆಯಿಂದ ಸಿಗುವುದಿಲ್ಲ ಕೈ ಖರ್ಚಿಗೆ ಹಣ, ಸರಿಯಾದ ಪುಸ್ತಕ, ಬಟ್ಟೆ ಬರೆ, ಎಲ್ಲವನ್ನೂ ಪಡೆಯಲು ಕಷ್ಟ ಪಡೆಯಬೇಕಾಗಿತ್ತು. ಆದರೆ ಇಂದು, ಎಲ್ಲವೂ ಕೈಗೆಟಕುವ ಮಟ್ಟಿಗೆ ಬೆಳೆದುನಿಂತಿದೆ. ಇಂದು ನಮ್ಮ ಸಮಾಜಕ್ಕೆ ಪರಿಶ್ರಮದ ಅರಿವಿಲ್ಲ, ಮಾನ, ಮರ್ಯಾದೆ, ಗೌರವ, ಅರಾಜಕಾಕತೆ, ಮತ್ಸರ, ಗಲಾಟೆ, ಮಾದಕ ವ್ಯಸನ ಮತ್ತು ಮಾನವೀಯತೆ ಮರೆತು ನಡೆಯುತ್ತಿದೆ. ಮನೆಯಲ್ಲಿ ಸಂಸ್ಕಾರ ಕಲಿಸುವವರು ಅಂಧರಾಗಿದ್ದಾರೆ, ಸಮಾಜದ ಜವಾಬ್ದಾರಿ ತೆಗೆದುಕೊಂಡವರೂ ಅಂಧರಾಗಿದ್ದಾರೆ, ಧರ್ಮವನ್ನರಿಯದವರು ಅಧರ್ಮ ಮಾಡುತ್ತಿದ್ದಾರೆ, ಧರ್ಮವನ್ನು ಕಲಿಸುವವರು ಅವಿವೇಕಿಗಳಾಗಿದ್ದಾರೆ. ಧರ್ಮವೇನೆಂದು ತಿಳಿಯದವರು ಬೋಧನೆ ಮಾಡುತ್ತಾರೆ, ಫೇಸ್ಬುಕ್ ವಾಟ್ಸಪ್ಪ್, ಟಿವಿ ಮಾದ್ಯಮದಲ್ಲಿ ತಮಗೆ ತೋಚಿದಂತೆ ಗೀಚುತ್ತಾರೆ, ಕಿರಿಚುತ್ತಾರೆ, ದ್ವೇಷದ ಕಿಚ್ಚು ಹತ್ತಿಸುತ್ತಾರೆ ಒಂದೊಂದು ಸಂಘಟನೆಯ ಒಂದಷ್ಟು ಜನರು ಎಗ್ಗಿಲ್ಲದಂತೆ ತಮಗಿಷ್ಟಬಂದಂತೆ ನಡೆದುಕೊಳ್ಳುತ್ತಾರೆ. ನಮ್ಮದೇ ಸರಿಯೆಂದು ವಾದ ಮಾಡುತ್ತಾರೆ, ನಮ್ಮ ಧರ್ಮಗ್ರಂಥವೇ ಸರಿ ಅನ್ನುತ್ತಾರೆ, ನಿಜವಾದ ಧರ್ಮ ತಿಳಿಯದೆ ಹುಚ್ಚು ಹುಚ್ಚಾಗಿ ವರ್ತಿಸುತ್ತಾರೆ.

      ಬಾವುಟಗಳನ್ನು ಹಾರಿಸುತ್ತಾರೆ,ಬಣ್ಣ ಬಣ್ಣದ ಬಟ್ಟೆಗಳನ್ನು ಬಿಂಬಿಸುತ್ತಾರೆ, ಬಣ್ಣಗಳನ್ನು ಬಳಿಯುತ್ತಾರೆ, ಅಲ್ಲಲ್ಲಿ ಗುಂಪು ಗುಂಪಾಗಿ ದ್ವೇಷದ ಭಾಷಣ ಮಾಡಿ ಎಲ್ಲರ ಮೊಬೈಲು ತುಂಬಿಸುತ್ತಾರೆ, ಬೆಳಗಾಗುತ್ತಿದ್ದಂತೆ ದೇವರು ಮುಖವನ್ನೂ ನೋಡದೆ, ಅಥವಾ ದಿನಕ್ಕೊಂದು ಬಾರಿಯೂ ಪ್ರಾರ್ಥನೆಯ ಗಂಧಗಾಳಿ ಇರದವರು ಒಂಮಿಂದೊಮ್ಮೆಲೆ ಎದ್ದು ಬಂದು ಸಂವಿದಾನ, ಆರ್ಥಿಕತೆ, ಭಾವಕ್ಯತೆ, ಸಹಬಾಳ್ವೆ, ದೇಶಪ್ರೇಮದ ಬಗ್ಗೆ ಮಾತಾನಾಡಲು ಪ್ರಾರಂಭ ಮಾಡುತ್ತಾರೆ. ಎಲ್ಲಿಗೆ ಮುಟ್ಟುತಿದೆ ನಮ್ಮೆಲ್ಲರ ಸ್ಥಿತಿ!

       ದೇಶ ಪ್ರೇಮವಿರುವವರು ದೇಶದ ಬಗ್ಗೆ ಕಾಳಜಿಯನ್ನು ತೋರುತ್ತಾರೆ, ದೇಶ ಪ್ರೇಮವಿರುವವರು ನಮ್ಮ ದೇಶ ನನ್ನ ಮನೆ ಎಂದು ತಿಳಿದುಕೊಂಡು ನಡೆಯುತ್ತಾರೆ, ದೇಶ ಪ್ರೇಮ ಇರುವವರು ವಿದ್ಯೆಯನ್ನು ಕಲಿತು ಸಾಧನೆಯ ಹಾದಿ ಹಿಡಿಯುತ್ತಾರೆ. ನನ್ನ ದೇಶಕ್ಕೆ ಯಾವುದೇ ತೊಂದರೆ ಆಗದಂತೆ ಬದುಕಲು ಪ್ರಯತ್ನ ಮಾಡುತ್ತಾರೆ. ನಾನೊಬ್ಬ ಉತ್ತಮವಾದ ಪ್ರಜೆಯಾಗಬೇಕು ಅನ್ನುವ ಧ್ಯೆಯ ಹೊಂದಿರುತ್ತಾರೆ. ಆದರಿಂದು! ದೇಶವನ್ನು ಮರೆತು, ತಂದೆ ತಾಯಿ ಬಂದು ಬಳಗ, ಗೆಳೆಯ, ಗೆಳತಿ, ಗುರುಗಳು, ಹಿರಿಯರು, ಕಿರಿಯರು ಇವೆಲ್ಲವನ್ನೂ ಮೀರಿ ನಿರ್ದಿಷ್ಟವಾದ ಮತಗಳ ದಾಸರಾಗಿ ಇದು ನನ್ನ ಧರ್ಮ ಅನ್ನುವ ಜನಗಳು ಸೃಷ್ಟಿ ಯಾಗುತ್ತಿದ್ದಾರೆ.  ಸರಾಸರಿ ಒಂದು ಸಲವೂ ಸರಿಯಾಗಿ ಓದಿರಕ್ಕಿಲ್ಲ ಧರ್ಮ ಗ್ರಂಥಗಳು, ಒಂದಲ್ಪವೂ ಗೊತ್ತಿರಲಿಕ್ಕಿಲ್ಲ ಧರ್ಮವೇನೆಂದು, ಇಂದಿನ ಯುವಕರು, ಯುವತಿಯರು, ವಿದ್ಯಾರ್ಥಿಗಳು ತುಂಬಾ ಜಾಗ್ರತರಾಗಿರಬೇಕು, ದುರುದ್ದೇಶದ ಜನರೊಂದಿಗೆ ಸೇರಬೇಡಿ, ಸದುದ್ದೇಶದ ಜನರನ್ನು ಬಿಡಬೇಡಿ, ನೀವು ಊಟ ಮಾಡುವ ಬಟ್ಟಲಿಗೆ ವಿಷವನ್ನು ಹಾಕಿದ್ದಾರೆ ಅನ್ನುವ ಸಂಶಯ ಬಂದರೆ ನೀವು ಆ ಆಹಾರವನ್ನು ಸೇವಿಸಲು ಹೋಗಬೇಡಿ! ಏನೂ ಆಗುವುದಿಲ್ಲ ಅನ್ನುವ ಚಿಂತನೆಯಲ್ಲಿ ಮುಂದುವರೆದರೆ ವಿಷ ತಿಂದವನೇ ಸಾಯುವುದು ವಿನಃ ವಿಷ ಹಾಕಿದವರಲ್ಲ.

           ದಿನದಿಂದ ದಿನಕ್ಕೆ ಸಾವಿರಾರು ತಪ್ಪು ಮಾಹಿತಿಗಳು ಸುಲಭವಾಗಿ ನಮ್ಮ ಮನಸ್ಸು ಸೇರುತ್ತಿದೆ, ನಮ್ಮ ಹೃದಯ ಕಲ್ಲಾಗುತ್ತಿದೆ, ದ್ವೇಷ ನಮಗೆ ಅರಿವಿಲ್ಲದೆ ಹುಟ್ಟುತಿದೆ, ನಮ್ಮೆಲ್ಲರ ಒಡನಾಟಗಳು ಹಾಳಾಗುತ್ತಿವೆ, ನಮ್ಮ ಭಾವನೆಗಳು, ಪ್ರೀತಿ, ವಿಶ್ವಾಸ ಎಲ್ಲವೂ ಸಾಯುತ್ತಿದೆ ಕಾರಣ, ನಾವುಗಳು ಓದುತ್ತಿರುವ ದ್ವೇಷದ ಮೆಸೇಜು, ವಿಡಿಯೋ, ಆಡಿಯೋ ತುಣುಕುಗಳು. ಅಧರ್ಮ ಭಾಷಣಗಳು, ದೌರ್ಜನ್ಯ, ಅವ್ಯವಹಾರ, ಮೋಸ, ವಂಚನೆ, ವಿಕೃತಿ, ನಮ್ಮ ಮನಸ್ಸನ್ನು ನಾವೇ ವಿಷವನ್ನಾಗಿ ಪರಿವರ್ತನೆ ಮಾಡಿಕೊಳ್ಳುತ್ತಿದ್ದೇವೆ. ಅದನ್ನೇ ನಮ್ಮ ಸಮಾಜಕ್ಕೆ ಕೊಡುತ್ತಿದ್ದೇವೆ.

ಹುಟ್ಟುವಾಗ ನಮಗೆ ನಮ್ಮ ಧರ್ಮದ ಬಗ್ಗೆ ತಿಳಿದಿರುವುದಿಲ್ಲ, ಹುಟ್ಟಿ ಬೆಳೆದು ಸಾಯುವವರೆಗೂ ನಿಜವಾದ ಧರ್ಮ ಪಾಲಿಸುವ ಜನರು ಬೆರಳನಿಕೆಯಷ್ಟು, ಅಂತವರು ದ್ಯಾನಿಗಳಗಿರುತ್ತಾರೆ, ವಿದ್ವಾಂಸರಾಗಿರುತ್ತಾರೆ, ದೊಡ್ಡ ಸಾಧನೆ ಮಾಡುತ್ತಾರೆ, ಪ್ರೀತಿಯಿಂದ ಬದುಕುತ್ತಾರೆ, ಹುಚ್ಚು ಹುಚ್ಚಾಗಿ ಬೀದಿ ಬೀದಿ ಕುಣಿದು ಹುಚ್ಚನ್ನು ಇನ್ನೊಬರಿಗೆ ಹಚ್ಚುವ ಕೆಲಸ ಮಾಡಬೇಡಿ, ಧರ್ಮವಿರಲಿ ಮನದೊಳಗೆ, ಸತ್ಕರ್ಮವಿರಲಿ ನಮ್ಮೊಳಗೇ,  ಅತಿಯಾದ ವ್ಯಾಮೋಹಕ್ಕೊಳಗಾಗಿ ನಿಜವಾದ ಧರ್ಮಕ್ಕೆ ಕಪ್ಪುಚುಕ್ಕೆಯಾಗಬೇಡ.

ಪ್ರತಿಯೊಬ್ಬನ ಮನಸಿನಲ್ಲಿ ಧರ್ಮದ ಬಗ್ಗೆ ವಿವಿಧ ವ್ಯಾಖ್ಯಾನ ನೀವು ಕೇಳಿರಬಹುದು, ಅನ್ಯರಿಗೆ ತೊಂದರೆಪಡಿಸದೆ ಇರುವುದು ನಿನ್ನ ಧರ್ಮ, ಮನುಷ್ಯನಾಗಿ ಬಾಳುವುದು ನಿನ್ನ ಧರ್ಮ, ಸತ್ಯ, ನ್ಯಾಯ ನೀತಿ ಪಾಲಿಸುವುದು ನಿನ್ನ ಧರ್ಮ, ನಿನಗೆ ಮಾತ್ರ ಖುಷಿ ಬೇಕೆನ್ನುವುದು ನಿನಗೆ ಧರ್ಮವಾಗಿ ಕಂಡರೆ,  ಅದಕ್ಕಾಗಿ ನೀನು ಮಾಡುವ ವಿಕೃತ ಕರ್ಮಗಳು ನಿನ್ನ ಅಧರ್ಮ. ಮೊದಲು ನಿನ್ನ ಮನಸ್ಸನ್ನು ಕಲ್ಮಶದಿಂದ ಶುದ್ದಿ ಮಾಡಿಕೊಳ್ಳು, ನಿನ್ನ ಮನದಲಿರುವ ಅಂಧಕಾರ, ಅಹಂಕಾರ, ವಿಕೃತಿ ಬಿಟ್ಟುಬಿಡು. ನಿನ್ನ ಜೀವನದ ಒಳ್ಳೆಯ ಗುಣಗಳು ಉನ್ನತ ಧರ್ಮವಾಗಿ ಮಾರ್ಪಡುತ್ತದೆ.

ಕೆಲವು ನಿಯಮ ಪಾಲಿಸಿ, ಅತಿಯಾಗಿ ಟಿವಿ ಮಾಧ್ಯಮ ನೋಡಬೇಡಿ, ಅತಿಯಾಗಿ ನಕಾರಾತ್ಮಕ ಚಿಂತನೆ ಮಾಡಬೇಡಿ, ಅತಿಯಾಗಿ, ಕೆಟ್ಟಜನರಿಂದ ದೂರವಿರಿ, ನಿಮ್ಮನ್ನು ಪುಸಲಾಯಿಸಿ ನಡು ನೀರಲ್ಲಿ ಬಿಟ್ಟು ಹೋಗುವವರ ಬಗ್ಗೆ ಜಾಗ್ರತರಾಗಿರಿ, ಮತ ನಿಮ್ಮನ್ನು ರಕ್ಷಿಸದು, ಧರ್ಮವೂ ನಿನ್ನನ್ನು ರಕ್ಷಿಸದು, ಸದಾ ವಿವೇಚನೆ, ನಿನ್ನಲಿರೋ ವಿನಮ್ರತೆ ನಿನ್ನನು ಅಲ್ಪಮಟ್ಟಿಗಾದರೂ ರಕ್ಷಿಸಲು ಸಾಧ್ಯ. 

       ಎಲ್ಲರೂ ಮನುಜನಾಗಿ ಹುಟ್ಟಿರುವವರು, ದೇವರು ಬುದ್ದಿಯ ನ್ನು ಕೊಟ್ಟಿದ್ದರೆ, ಹಣವನ್ನು, ಆರೋಗ್ಯ ಕೊಟ್ಟಿದ್ದರೆ ಒಳಿತಿಗಾಗಿ ಉಪಯೋಗಿಸು, ಹೋರಾಟ ಮಾಡು ಪ್ರಪಂಚದಲ್ಲಿ ನಡೆಯುವ ಕೆಟ್ಟ ಪದ್ಧತಿ ನಿಲ್ಲಿಸಲು, ಹೋರಾಟ ಮಾಡು ಸುಂದರ ಗ್ರಾಮ, ದೇಶ, ಸುಂದರವಾದ ಜನರನ್ನು ಬೆಳೆಸಲು. ಹೋರಾಟ ಮಾಡು ನಿನ್ನ ಊರಿನ, ಮನೆಯ ಸುಂದರವಾದ ರಸ್ತೆಗೆ, ಸುಂದರವಾದ ಪರಿಸರಕ್ಕೆ, ಹೋರಾಟ ಮಾಡು, ವಿದ್ಯಾಲಯಕ್ಕೆ, ಆಸ್ಪತ್ರೆಗೆ, ವೃದ್ದಾಶ್ರಮಕ್ಕೆ, ವಿಕಲಾಂಗ ಜನರ ಉನ್ನತಿಗಾಗಿ.

   ಉಳಿಯಲಿ ನಮ್ಮ ದೇಶ, ದೇಶದ ಸಂಸ್ಕೃತಿ, ಉಳಿಯಲಿ ನಮ್ಮ ಸಹಬಾಳ್ವೆ, ಉಳಿಯಲಿ ನಮ್ಮ ವಿಶ್ವಾಸ.

ಧರ್ಮ ಅಮೃತದಂತೆ, ಅತಿಯಾಗಿ ಸೇವಿಸಬೇಡಿ, ಅತಿಯಾದರೆ ಅಮೃತವು ವಿಷವಾಗುತ್ತದೆ, ಗಾದೆ ಮಾತು ನಿಮಗೆ ನೆನಪಿಸುತ್ತ. ಈ ಬರವಣಿಗೆಗೆ ಪೂರ್ಣ ವಿರಾಮ.


ಈ ಲೇಖನ ಇಷ್ಟವಾಗಿದ್ದಲ್ಲಿ ನಿಮ್ಮ ಗೆಳೆಯರಿಗೂ ತಲುಪಿಸಿ 🌹🙏


                    ✍️ಮಾಧವ. ಕೆ. ಅಂಜಾರು 








Comments

Post a Comment

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.

(ಲೇಖನ -100), "ಕುವೈಟ್ ಕಲಾ ಮಾಣಿಕ್ಯ" ಒಬ್ಬ ಕಲಾಗಾರನ ನಿಜವಾದ ಜೀವನ ಕ್ರಮ, ಶ್ರಮ ಮತ್ತು ಸಾಧನೆಯ ಹಾದಿ, ಕಲೆ ಎಂಬುವುದು ಎಲ್ಲರಿಗೂ ಒಲಿಯುವುದಿಲ್ಲ ಆದರೆ ಒಂದಲ್ಲ ಒಂದು ರೀತಿಯ ಕಲೆಯ ಶಕ್ತಿ ಪ್ರತಿಯೊಬ್ಬರಲ್ಲೂ ಇರುತ್ತದೆ