(ಲೇಖನ -19)ಮೌನ ಮಾತು - ಪ್ರೀತಿ ಮಾತು

ಮೌನ ಮಾತು - ಪ್ರೀತಿ ಮಾತು


ನಮಸ್ಕಾರ, ಮಾತು ಬೆಳ್ಳಿ ಮೌನ ಬಂಗಾರ - ಈ ಗಾದೆ ಮಾತು ಕೇಳಿದ್ದಿರಬಹುದು. ಒಂದೊಂದು ಗಾದೆ ಮಾತುಗಳು ಆಳವಾದ ಅರ್ಥವನ್ನು ಹೊಂದಿರುತ್ತದೆ. ಗಾದೆ ರೂಪದಲ್ಲಿ ಬಂದ ವಾಕ್ಯಗಳು, ಅಥವಾ ನುಡಿಗಳು ಒಬ್ಬ ಯೋಗಿ, ವಿದ್ವಾಂಸ, ಕವಿ, ಅಪಾರ ಜ್ಞಾನವುಳ್ಳ ವ್ಯಕ್ತಿಗಳಿಂದ ಶೃಷ್ಟಿಯಾಗಿರುತ್ತದೆ. ಸಾವಿರಾರು ಪದಗಳನ್ನು ಒಂದು ವಾಕ್ಯದಲ್ಲಿ ಉಲ್ಲೇಖ ಮಾಡುವ ಸಾಮರ್ಥ್ಯ ಕೆಲವೇ ಕೆಲವರಲ್ಲಿ ಬರುತ್ತದೆ.

       ಹೌದು, ನಿನ್ನ ಪ್ರತಿಯೊಂದು ಮಾತು, ಮೌನ, ಪ್ರೀತಿ, ಕರುಣೆ ನಿನ್ನ ವ್ಯಕ್ತಿತ್ವ ತಿಳಿಸುತ್ತದೆ. ನಿನ್ನ ಭಾವನೆಗಳು ಕೆಲವೊಮ್ಮೆ ಮಾತಿನ ಮೂಲಕ ಹೊರಹೊಮ್ಮಿದರೆ, ಮೌನ, ಕೋಪದಲ್ಲೂ ವ್ಯಕ್ತವಾಗುತ್ತದೆ.  ನೀನಾಡುವ ಮಾತು ನಿನಗೆ ಖುಷಿಕೊಟ್ಟರೆ ಸಾಲದು, ನಿನ್ನೆದುರಿನ ಜನರಿಗೆ ಬೇಸರ ತರಿಸದಂತೆ ಜಾಗ್ರತೆ ಹಿಸಿಕೊಳ್ಳಬೇಕಾಗುತ್ತದೆ. ಅದರರ್ಥ ಸಮಯಕ್ಕೆ ತಕ್ಕಂತೆ ಮಾತನಾಡಬೇಕೆಂದೇನಿಲ್ಲ, ಅಥವಾ ಎದುರಿಗೆ ನಿಂತವನ ಓಲೈಕೆ ಮಾಡುವ ಮಾತನ್ನಾಡುವ ಅಭ್ಯಾಸ ಮಾಡಿಕೊಳ್ಳಬೇಡ. ನಾವೆಷ್ಟೋ ಸಂಧರ್ಭಗಳನ್ನು ನೋಡುತ್ತೇವೆ, ಮನಸಾರೆ ಮಾತನಾಡುವ, ಅಥವಾ ಕಲ್ಮಶವಿಲ್ಲದೆ ಮಾತನಾಡುವ ಮಾತುಗಳು ಸದಾ ನಗು, ಪ್ರಾಮಾಣಿಕತೆಯಿಂದಿರುತ್ತದೆ , ಸತ್ಯವಾಗಿರುತ್ತದೆ. ಮುಖದ ಭಾವನೆಗಳು ಇನ್ನಷ್ಟು ಮಾತನ್ನು ಮುಂದುವರಿಸಲು ಅನುವು ಮಾಡಿಕೊಡುತ್ತದೆ. ಸದಾ ನಗುತ್ತಾ ಮಾತನಾಡುವ ಜನರು ಹೆಚ್ಚು ನೋವಿನಿಂದ ಇರುತ್ತಾರೆ ಮತ್ತು ಅಂಥವರು ಇನ್ನೊಬ್ಬರಿಗೆ ನೋವನ್ನು ಬಯಸುವುದಿಲ್ಲ ಮತ್ತು ಮಾತಿನಲ್ಲಿ ಹೆಚ್ಚು ಹಿಡಿತವನ್ನು ಹೊಂದಿರುತ್ತಾರೆ. ಒಂದು ವೇಳೆ ಅಕಸ್ಮಾತ್ ತಪ್ಪಿ ಮಾತಾಡಿದರೂ ಆಡಿದ ಮಾತಿಗೆ ಕ್ಷಮೆ ಕೇಳಿ ಮತ್ತೆ ಮಾತನ್ನು ಮುಂದುವರೆಸುತ್ತಾರೆ.

          ಇನ್ನು ಕೆಲವರು, ಮಾತಾನ್ನಾಡದೆ ಮನಸಲ್ಲೇ ಇಟ್ಟುಕೊಂಡು ಕೊರಗುತ್ತಿರುತ್ತಾರೆ, ಅಂಥವರು ಸದಾ ದುಃಖದಲ್ಲಿ ಮುಳುಗಿರುತ್ತಾರೆ, ತನ್ನನ್ನು ತಾನು ಸರಿಯಾಗಿ ನೋಡಿಕೊಳ್ಳುವ ಸಾಮರ್ಥ್ಯ ಕಳೆದುಕೊಂಡಿರುತ್ತಾರೆ. ಚಿಕ್ಕ ಪುಟ್ಟ ವಿಷಯಗಳಿಗೆ ಕೋಪಿಸಿಕೊಳ್ಳುತ್ತಾ  ಸರಾಸರಿ ವಾರಕ್ಕೆರಡು ದಿನ ಸಾಧಾರಣ ಖುಷಿಯಲ್ಲಿರುತ್ತಾರೆ. ಕೆಟ್ಟ ಆಲೋಚನೆಗಳು ಮನಸಿನ ತುಂಬಾ ತುಂಬಿಸಿಕೊಂಡಿರುತ್ತಾರೆ.  ಪ್ರತಿಯೊಂದು ಬಾರಿಯೂ ತನ್ನೆದುರಿನವರೇ ಸರಿಯಾಗಿಲ್ಲ ಎಂದು ಭಾವಿಸುತ್ತಾರೆ ಮತ್ತು ಜಾಸ್ತಿ ಕಷ್ಟವನ್ನು ಅನುಭವಿಸುತ್ತಾರೆ. ಹೆಚ್ಚಾಗಿ ಯಾರಲ್ಲಿಯೂ ಬೆರೆತು ಜೀವಿಸಲು ಇಷ್ಟಪಡದೆ ಇರುತ್ತಾರೆ.

         ಮಾತು ಹಿತವಾಗಿರಬೇಕು, ಮಿತವಾಗಿರಲು ಬೇಕು, ಆದರೆ ಸಂಸ್ಕಾರವಿಲ್ಲದ ಮನೆಗಳಿಂದ ಹೊರಬಂದ ಜನರಿಂದ, ಸವಿಮಾತನ್ನು ಬಯಸಲು ಸಾಧ್ಯವಿಲ್ಲ. ಬಾಯ್ತೆರೆದರೆ ಕೆಟ್ಟದಾಗಿ ಮಾತನಾಡುತ್ತ, ತನ್ನ ಜೀವನ ಪೂರ್ತಿ ಸಮಾಜಕ್ಕೆ ಮತ್ತು ತನ್ನವರಿಗೂ ತೊಂದರೆಗಳನ್ನು ಕೊಡುತ್ತ, ಅವಿವೇಕಿಗಳಾಗಿ ಜೀವಿಸುತ್ತಾರೆ. ಇಂತವರಲ್ಲಿ ಅವಿದ್ಯಾವಂತರಿಗಿಂತ ವಿದ್ಯಾವಂತರೆ ಜಾಸ್ತಿಯಾಗಿ ಇರುತ್ತಾರೆ.  ಮಾತು ತಿಳಿದವರೆಂದು ಸದಾ ಇನ್ನೊಬ್ಬರನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ಶ್ರಮಿಸುತ್ತಾರೆ. ಅಥವಾ ಒಂದು ವಾಕ್ಯದಲ್ಲಿ ಸರಿಸುಮಾರು 75% ಕೆಟ್ಟ ಪದಗಳನ್ನೇ ಉಪಯೋಗಿಕೊಳ್ಳುತ್ತಾರೆ. ಅಂಥವರಿಂದ ಆದಷ್ಟು ದೂರದಲ್ಲಿದ್ದರೆ ಒಳಿತು. ನೀನು ಮಾತನಾಡುವ ಅಥವಾ ಚರ್ಚೆಯನ್ನು ಮಾಡಬೇಕಿದ್ದರೆ  ಜ್ಞಾನ ಹೊಂದಿರುವ ಜನರಲ್ಲಿ ಮಾಡು, ನೀನು ಜಗಳ ಮಾಡಿದರೂ ಅವರಿಂದ ನಿನಗೆ ಜ್ಞಾನ ಸಿಗುತ್ತದೆ ಹೊರತು ದ್ವೇಷವಲ್ಲ. ನೀನು ನಿನ್ನ ಜೀವನದಲ್ಲಿ ಅಜ್ಞಾನಿಗಳ ಆರ್ಭಟಕ್ಕೆ ಸಿಕ್ಕಿದ್ದರೂ ನಿನ್ನಲಿರುವ ಜ್ಞಾನ ನಿನ್ನನ್ನು ರಕ್ಷಿಸುವಲ್ಲಿ ಯಾವುದೇ ಸಂಶಯವಿಲ್ಲ.

       ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು ಈ ಗಾದೆ ಮಾತಿಗೂ ಅದೆಷ್ಟು ಅರ್ಥ ನೋಡಿ, ನಿನ್ನ ಮಾತಲ್ಲಿ ಗೌರವ, ಸಂಯಮ, ಪ್ರೀತಿ, ಎಲ್ಲವನ್ನೂ ಒಗ್ಗೂಡಿಸಿ ಸಮಾನ ರೀತಿಯಲ್ಲಿ ಮಾತಾನ್ನಡಬೇಕು, ಇಲ್ಲವಾದಲ್ಲಿ ನೀನಾಡಿದ ಮಾತುಗಳು ಎದುರಿನ ವ್ಯಕ್ತಿಗೆ ಘಾಸಿಮಾಡಬಹುದು ಅಥವಾ ನಿನ್ನ ಮೇಲಿರುವ ಗೌರವ, ಮರ್ಯಾದೆ ಕಳೆದುಕೊಳ್ಳುವ ಸಾಧ್ಯತೆಗಳು ಮತ್ತು ಆಡಿದಮಾತನ್ನು ಎಷ್ಟು ಸರಿಪಡಿಸಲು ನೋಡಿದರೂ ಸಾಧ್ಯವಾಗಲಿಕ್ಕಿಲ್ಲ. ಇದರಿಂದ ಅದೆಷ್ಟೋ ಸಂಬಂಧಗಳು, ಗೆಳೆತನ,ವಿಶ್ವಾಸ ಕಳೆದುಕೊಳ್ಳುವ ಸಾಧ್ಯತೆಗಳು ಅತಿಯಾಗಿರುತ್ತದೆ. ಹೊಡೆದ ಪೆಟ್ಟು ಮರೆತು ಹೋಗಬಹುದು ಆದರೆ ಆಡಿದ ಮಾತು ಮರೆತು ಹೋಗದು ಅನ್ನುವುದನ್ನು ಕೂಡ ಕೇಳಿದ್ದಿರಬಹುದು.

        ನಿನ್ನಲಿರೋ ಅಧಿಕಾರದ ಮದದಿಂದ ನಿನ್ನೊಂದಿಗಿರುವ ಜನರನ್ನು ಹೀಯಾಳಿಸಬೇಡ, ನಿನ್ನಲಿರುವ ಹಣದ ಮದದಿಂದ ನಿನ್ನ ಬಳಿ ಬಂದವರ ಹಂಗಿಸಬೇಡ, ನಿನ್ನಲಿರುವ ಆರೋಗ್ಯದಿಂದ ಅನಾರೋಗ್ಯ ಹೊಂದಿರುವವನ ಟೀಕಿಸಬೇಡ. ಇಂದು ನಿನ್ನಲಿರುವುದು ನಾಳೆ ಇರಬೇಕೆಂದೇನಿಲ್ಲ, ನಿನಗೂ ಯಾವ ಸಂಧರ್ಭದಲ್ಲೂ ಒಳಿತಾಗಬಹುದು ಕೆಡುಕಾಗಲೂಬಹುದು. ಮಾತು ಬರುತ್ತದೆಂದು ಜಾಸ್ತಿ ಮಾತಾನ್ನಾಡಬೇಡ, ಮಾತು ಬರುವವನೆಂದು ಸುಳ್ಳನ್ನು ಹೇಳಬೇಡ, ಮಾತುಗಾರನೆಂದು ತಂದೆ ತಾಯಿಯ ಜೊತೆ ವಾದಕ್ಕಿಳಿಯಬೇಡ.  ಮಾತು ಕಲಿಸಿದ ತಂದೆ ತಾಯಿಗೆ ದ್ರೋಹಬಗೆದು ಜೀವಿಸಬೇಡ.

         ನಿನ್ನೊಳಿತಿಗಾಗಿ ಪ್ರೀತಿಯಿಂದ ಆಡಿದ ಮಾತನ್ನು ಸರಿಯಾಗಿ ಕೇಳಿಕೊಳ್ಳು, ನಿನ್ನೊಳಿತಿಗಾಗಿ ಬುದ್ದಿವಾದದ ಮಾತನ್ನು ಒಪ್ಪಿಕೊಳ್ಳು, ನಿನ್ನೊಳಿತಿಗಾಗಿ ಮಾರ್ಗದರ್ಶನದ ಮಾತುಗಳನ್ನು ಆಲಿಸಿ ರೂಡಿಸಿಕೊಳ್ಳು. ಹಳಿ ತಪ್ಪಿದ ರೈಲು ನಿಲ್ದಾಣ ತಲುಪಲು ಸಾಧ್ಯವಿಲ್ಲ, ನಾವಿಕನಿಲ್ಲದ ದೋಣಿ ದಡಸೇರಲು ಸಾಧ್ಯವಿಲ್ಲ, ದೊಡ್ಡ ರಥವಾಗಿದ್ದ ಮಾತ್ರಕೆ ಮುಂದೆ ಎಳೆಯುವವರಿರದೆ ಮುಂದುವರಿಯಲು ಸಾಧ್ಯವಿಲ್ಲ. ದೊಡ್ಡವರ ಮಾರ್ಗದರ್ಶವಿಲ್ಲದೆ ನಿನ್ನ ಜೀವನ ಸರಿದಾರಿಯಲ್ಲಿ ನಡೆಯಲು ಸಾಧ್ಯವಿಲ್ಲ. ಎಲ್ಲವನ್ನೂ ಅನುಭವಿಸಲು ಆಯುಷ್ಯ ಸಾಕಾಗೋದಿಲ್ಲ. ಎಲ್ಲವನ್ನು ಪಡೆಯಲು ನಿನ್ನಿಂದ ಸಾಧ್ಯವಿಲ್ಲ. ಇರುವ ಸ್ಥಿತಿಯಲ್ಲಿ ನಿನ್ನ ನೀನು ಸರಿದೂಗಿಸುತ್ತಾ ನಿನ್ನ ಸಂತೋಷವನ್ನು ನೀನು ಸಂಪಾದಿಸಿ ಜೀವಿಸಲು ಪ್ರಯತ್ನವಿಲ್ಲದ್ದರೆ ಜೀವನವೇ ಇಲ್ಲ.

          ಯವ್ವನದ ದಿನಗಳಲ್ಲಿ ಸಹಜವಾಗಿ ತಪ್ಪುಮಾಡುತ್ತಿಯ, ಆದರೆ ನಿನ್ನ ತಂದೆ ತಾಯಿಯ ಮಾತನ್ನು ಮೀರಿ ನಡೆಯಬೇಡ. ಪ್ರೀತಿಯಂಬ ಬಲೆಯಲ್ಲಿ ಸಿಕ್ಕಿಕೊಳ್ಳುತ್ತಿಯ ಆದರೆ ಮನೆಯವರ ಬಿಟ್ಟು ಹೋಗಲೇಬೇಡ. ನಿಜ ಜೀವನದ ಗುಟ್ಟು ಅನುಭವಿಸಿ ಗೊತ್ತಾಗಬೇಕು ವಿನಃ ನೀನು ನೋಡಿದಂತೆ, ಕನಸುಕಂಡಂತೆ ಇರಲು ಸಾಧ್ಯವಿಲ್ಲ. ಸಿನೆಮಾ ಜೀವನಕ್ಕೂ ನಿಜಜೀವನಕ್ಕೂ ಅಜಾಗಜಾಂತರ ವ್ಯತ್ಯಾಸವಿದೆ ಬದುಕಿದು ಜಟ್ಕಾ ಬಂಡಿ ದೇವರೇ ನೀನದರ ಸಾಹೇಬ ಪ್ರಾರ್ಥಿಸುತ್ತ ಹೆಜ್ಜೆ ಹೆಜ್ಜೆಗೂ ಜಾಗ್ರತನಾಗಿರು.

       ಮಾತು ಜಗಳಕ್ಕೆ ಹೋದರೆ ಮೌನವಾಗು, ಮಾತು ಜಗಳದಲ್ಲಿ ಮುಗಿದರೆ ದ್ವೇಷವನ್ನು ಬಿಟ್ಟುಬಿಡು. ಮಾತು ಪ್ರೇಮಕ್ಕೆ ಜಾರಿದರೆ ನೀ ಜಾರಿ ಬೀಳದಂತೆ ನೋಡಿಕೊಳ್ಳು. ಮಾತು ಮಾತಲ್ಲಿ ಕಷ್ಟವನ್ನು ಅನುಭವಿಸಿದರೆ ಭಗವಂತನ ನೆನೆದು ಬದುಕುತ್ತಿರು.

ಈ ಲೇಖನ ಇಷ್ಟವಾಗಿದ್ದರೆ ನಿಮ್ಮ ಗೆಳೆಯ ಗೆಳತಿಯರಿಗೆ ಕಳುಹಿಸಿ.

                     

                  ✍️ಮಾಧವ. ಕೆ. ಅಂಜಾರು









Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ