(ಲೇಖನ =21)ಒಳಗಿನ ಗುಟ್ಟು ಶಿವನೇ ಬಲ್ಲ.......

 ಒಳಗಿನ ಗುಟ್ಟು ಶಿವನೇ ಬಲ್ಲ....

           ಈ ಮೇಲಿನ ನುಡಿಮಾತು, ನೀವೆಲ್ಲರೂ ಈ ಹಿಂದೆ ಕೇಳಿರಬಹುದು, ಸಾಮಾನ್ಯವಾಗಿ ದೀರ್ಘಕಾಲದ ಮಾತುಗಳನ್ನಾಡಿ ಕೊನೆಗೆ ಒಳಗಿನ ಗುಟ್ಟು ಶಿವನೇ ಬಲ್ಲ ಎಂದು ಪೂರ್ಣವಿರಾಮ ಹಾಕುವ ಸಂದರ್ಭ, ಅಥವಾ ಸದಾ ಅನ್ಯರ ಬಗ್ಗೆ ಯೋಚಿಸುತ್ತಾ ವ್ಯಂಗ್ಯ ವಾಡಲು  ಉಪಯೋಗಿಸುವ ಈ ವಾಕ್ಯ ಬಹು ಅರ್ಥವನ್ನು ಹೊಂದಿದೆ. ಈ ಪದವು ನಿಮ್ಮ ನಿಮ್ಮ ಯೋಚನೆಗಳಿಗೆ  ಅನುಸಾರವಾಗಿ ಒಂದು ವ್ಯಕ್ತಿಯ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಸೂಚಿಸುವ  ಮಾತಾಗಿ ಕೂಡ ಹೊರಹೊಮ್ಮಬಹುದು.

           ನಮ್ಮ ಜೀವನದಲ್ಲಿ ಎಲ್ಲವೂ ಇದ್ದು ಏನೂ ಇಲ್ಲದಂತೆ ಮರುಗುತ್ತಲೇ ಇರುವ  ನಾವು , ಜೀವನಪರ್ಯಂತ  ಆಸೆಗಳ ನಡುವೆ ಸಿಕ್ಕಿಕೊಂಡು ಇರುವುದನ್ನು ಅನುಭವಿಸದೆ ಇಲ್ಲದ್ದನ್ನು ಆಶಿಸುತ್ತಾ ಕೊನೆಯುಸಿರೆಳೆಯುವ ಅಲ್ಪ ಜೀವಿಗಳು.  ನಮ್ಮ ಚಿಂತನೆಗಳು ನಮ್ಮನ್ನು  ಸರಿದಾರಿಯಲ್ಲಿ ಅಥವಾ ಅಡ್ಡ ದಾರಿಯಲ್ಲಿ ಕೊಂಡು ಹೋಗಬಹುದು.

ಅವರಿಗಿರುವ ಐಶ್ವರ್ಯ ನಮಗಿಲ್ಲ ವೆಂದು ಕೊರಗುವುದು, ಅವರಿಗಿರುವ ಮನೆ ನಮ್ಮಲ್ಲಿ ಇಲ್ಲವೆಂದು ಕೊರಗುವುದು, ಅವರ ಮನೆಯ ಸಂತೋಷ ನಮ್ಮ ಮನೆಯಲ್ಲಿ ಇಲ್ಲವೆಂದು ಕೊರಗುವುದು, ಅವರು ಮಾಡುತ್ತಿರುವ ಕೆಲಸ ನನ್ನಲ್ಲಿ ಆಗುತ್ತಿಲ್ಲವೆಂದು ಕೊರಗುವುದು, ದೇಹದ ಪ್ರತಿಯೊಂದು ಭಾಗಗಳು ಸರಿಯಾಗಿ ಕೆಲಸ ಮಾಡುತ್ತಿದ್ದಾಗಲೇ ಇಲ್ಲ ಇಲ್ಲಗಳ ಹಿಂದೆ ಬೆನ್ನತ್ತಿ ಹೋಗುತ್ತಿರುವ ನಾವು ನೀವುಗಳು! ಬದುಕಿನಲ್ಲಿ ತೃಪ್ತಿ ಇಲ್ಲದೇ ಮಣ್ಣಾಗಿ ಹೋಗುತ್ತಾ, ನಿರಂತರ ನಿರಾಸೆ, ದುರಾಸೆಯಲ್ಲಿ ಅಂತ್ಯ ಕಾಣುತ್ತಿರುತ್ತೇವೆ.

           ಪ್ರಪಂಚದಲ್ಲಿ  ಯಾವ ಮನುಷ್ಯನು  ಸಂಪೂರ್ಣವಾಗಿ ಸರಿಯಾಗಿರಲು ಸಾಧ್ಯವಿಲ್ಲ, ಒಂದಲ್ಲ ಒಂದು ತರಹ ನ್ಯೂನತೆಗಳು  ಎಲ್ಲರಲ್ಲಿಯೂ ಇದ್ದೇ ಇದೆ, ಆದರೆ ನಿನ್ನಲಿರುವ ನ್ಯೂನ್ಯತೆಗಳನ್ನು ಆಯುಧವಾಗಿ  ಬಳಸುವ  ಜನರು ನಿನ್ನ ಅಕ್ಕಪಕ್ಕದಲ್ಲಿ ಯೂ  ಇರಬಹುದು. ಇನ್ನು, ಸದಾ ಅನ್ಯರ ನ್ಯೂನ್ಯತೆಗಳನ್ನು ಹುಡುಕುತ್ತಾ ತಾನೊಬ್ಬನೇ ಸರಿ ಎಂದು ಹೇಳಿಕೊಳ್ಳುವ ಮನುಷ್ಯರು  ನಿಮ್ಮ ಜೊತೆಗೆ ಇರಬಹುದು, ಅಥವಾ ತನ್ನ  ತಪ್ಪನ್ನು ಹೇಳಿಕೊಳ್ಳದೆ, ಅನ್ಯರ ತಪ್ಪನ್ನು  ಊರೆಲ್ಲಾ ಹೇಳುತ್ತಾ ತಿರುಗುತ್ತಿರುವ ಜನರು ನಿನ್ನೊಂದಿಗೆ ಇರಬಹುದು. ಈ ಮೇಲಿನವರು ನಿನಗೆ ತಿಳಿದೋ ತಿಳಿಯದೆಯೋ ಅಲ್ಲಲ್ಲಿ ಸಿಗುತ್ತಾರೆ. ಆತ್ಮಸಾಕ್ಷಿಯಾಗಿ ಬದುಕುತ್ತಿರುವವರಿಗೆ ಯಾರೇನು ಹೇಳಿದರೂ ವ್ಯತ್ಯಾಸ ಬಾರದು. ಆತ್ಮವಂಚನೆ ಯಲ್ಲಿ ಬದುಕುವವರಿಗೆ  ಯಾವ ಮಾತುಗಳು ಬಿಸಿ ತಟ್ಟದು. ಆಡಂಬರದ ಜೀವನ ಹಲವರದಾದರೆ, ಸರಳ ಜೀವನ  ಕೆಲವರದು ಆಗಿರುತ್ತದೆ. ಅತಿಯಾಸೆ ಗೆ  ಬಿದ್ದು  ತನ್ನೊಂದಿಗೆ, ತಮ್ಮವರ ಜೀವನವನ್ನು ನಾಶ ಮಾಡುವ ಪ್ರವೃತ್ತಿ ಕೆಲವರದ್ದಾಗಿರುತ್ತದೆ. ಅಷ್ಟೈಶ್ವರ್ಯಗಳು, ಆರೋಗ್ಯ ಸಂಪತ್ತು, ವಿದ್ಯೆ ಬುದ್ಧಿ, ಎಲ್ಲವೂ ಇದ್ದು ಸದಾ ಹೊಟ್ಟೆಕಿಚ್ಚು ಪಡುವ  ನಡತೆ  ಕೆಲವರದು ಆಗಿರುತ್ತದೆ. ಕೆಲವೊಮ್ಮೆ ನೀನು ನಿನ್ನಷ್ಟಕ್ಕೆ  ಬದುಕಲು ಆಸೆಪಟ್ಟರು  ಕಾಲು ಕೆರೆದು ತೊಂದರೆ ಕೊಡಲು ಇಚ್ಚಿಸುವ ಜನರು ಕೂಡ ನೀನು ನೋಡುತ್ತಿರಬಹುದು. ನಿನ್ನೊಳಗಿನ ಗುಟ್ಟು ನಿನಗೆ ಗೊತ್ತಿದ್ದರೆ, ನಿನ್ನೊಳಗಿನ ಗುಟ್ಟು  ಶಿವನಿಗೂ ಗೊತ್ತಿರುತ್ತದೆ, ನೀನು ಮಾಡುತ್ತಿರುವ  ನಾಟಕದ ದೃಶ್ಯಗಳು ಬ್ರಹ್ಮ ಬರೆದುದಕ್ಕಿಂತ ಜಾಸ್ತಿ ಆಗಿದ್ದರೆ, ನಿನ್ನ ಎಲ್ಲಾ ದೃಶ್ಯಗಳು ಅದೃಶ್ಯವಾಗುವುದರ ಬಗ್ಗೆ ಯಾವುದೇ ಸಂದೇಹವಿಲ್ಲ!

        ಎಲ್ಲರ ಮನೆಯ ದೋಸೆ ತೂತು ಹೇಳುವ ಮೊದಲು ನಿನ್ನ ಮನೆಯ ದೋಸೆ ತೂತು ಎಂದು ಹೇಳಿದರೆ ನಿನಗೆ ಅಸಯ್ಯ ವಾಗಬಹುದು. ಸದಾ ಅನ್ಯರ ಅಂಗಳವನ್ನು ಗುಡಿಸುವ  ಅಭ್ಯಾಸವಿರುವವರಿಗೆ ತನ್ನ ಅಂಗಳದ  ಕಸಕಡ್ಡಿಗಳು  ಕಾಣುವುದೇ ಇಲ್ಲ. ದಿನದ 24 ಗಂಟೆ ಸೂಟು-ಬೂಟು ಹಾಕಿ ಇರುವವನಿಗೆ ಪಾದರಕ್ಷೆ ಇಲ್ಲದೇ ನಡೆಯುವ ಕಷ್ಟ ಅರಿವಿಗೆ ಬರುವುದಿಲ್ಲ! ಸದಾ ಚಿನ್ನದ ತಟ್ಟೆಯಲ್ಲಿ ಊಟವನ್ನು ತಿನ್ನುತ್ತಿದ್ದವರಿಗೆ ತುತ್ತು ಅನ್ನದ ಮೂಲ ಎಲ್ಲಿದೆ ಎಂದು  ತಿಳಿದಿರುವುದಿಲ್ಲ!  ಅವನೇನು ಮಹಾ ಸಂಭಾವಿತನೇ ಎಂದು ಹೇಳುವವರಿಗೆ, ತನ್ನ ಯೋಗ್ಯತೆಯ ಬಗ್ಗೆ ಅರಿವು ಇರುವುದಿಲ್ಲ!

       ಒಳಗಿನ ಗುಟ್ಟು ಶಿವನೇ ಬಲ್ಲ, ನೀನೆಷ್ಟು ಒಳ್ಳೆಯ ಮನುಷ್ಯ ಶಿವನೇ ಬಲ್ಲ, ನೀನೆಷ್ಟು ಸತ್ಯವಂತ ಶಿವನೇ ಬಲ್ಲ, ನೀನೆಷ್ಟು ಗುಣವಂತ ಶಿವನೇ ಬಲ್ಲ, ನೀನೆಷ್ಟು ಬುದ್ದಿವಂತ ಶಿವನೇ ಬಲ್ಲ, ನೀನೆಷ್ಟು ಶಕ್ತಿವಂತ ಶಿವನೇ ಬಲ್ಲ, ನೀನೆಷ್ಟು ಕರುಣೆಯುಳ್ಳವ ಶಿವನೇ ಬಲ್ಲ, ನೀನೆಷ್ಟು ಹೃದಯವಂತ ಶಿವನೇ ಬಲ್ಲ, ಎಲ್ಲಾ ಬಲ್ಲವನೆದುರು ಈ ಜಗದಲಿ ನಿನ್ನ ನಾಟಕವೆಲ್ಲ ಆ ಶಿವನೇ ಬಲ್ಲ.....

     ನೋಡು ಅವಳ ಗಂಡ ಹೇಗಿದಾನೆ ಅನ್ನಬೇಡ, ನೋಡು ಅವಳ ಹೆಂಡತಿ ಹೇಗಿರುವಳು ಹೇಳಬೇಡ, ನೋಡು ಅವರ ಮಕ್ಕಳು ಹೇಗಿದಾರೆ ಹೇಳಬೇಡ, ನೋಡು ಅವರ ಮನೆ ಹೇಗಿದೆ ಹೇಳಬೇಡ, ನೋಡು ಅವರ ಐಶ್ವರ್ಯ ಎಂದು ಆಶ್ಚರ್ಯಪಡಲೇ ಬೇಡ, ಇಂದು ಇರುವ ಜೀವ, ಜೀವನ, ನಾಳೆ ಇದ್ದರೂ ಇರಬಹುದು ಹೋದರೂ ಹೋಗಬಹುದು, ಇರುವಷ್ಟು ದಿನ ನಿನ್ನ ಆತ್ಮ ಸಂತಸದಿಂದ ಇರುವಂತೆ ನೋಡಿಕೊಳ್ಳುವ ಜವಾಬ್ದಾರಿ ನಿನ್ನದಾಗಲಿ. ಇಂದಲ್ಲ ನಾಳೆ, ಆತ್ಮ ಜೀವ ಬಿಟ್ಟಾಗ, ಓಂ ಶಾಂತಿ, ರೆಸ್ಟ್ ಇನ್ ಪೀಸ್ ಕೇಳಲು ನೀನಿರುವುದಿಲ್ಲ. ಬದುಕಿನ ದಾರಿಯಲಿ ಅಲ್ಪ ಸ್ವಲ್ಪ ಸಿಗುವ ಶಾಂತಿ ನೆಮ್ಮದಿಯ ಕಳೆದುಕೊಂಡು ಕೊರಗಿ ಕೊರಗಿ ಬದುಕುತ್ತಿರಬೇಡ. ನನ್ನ ಅಪ್ಪ ಹೇಳುತ್ತಿರುವ ಇನ್ನೊಂದು ಮಾತು..ಈ ಲೇಖನದ ಕೊನೆಯಲ್ಲಿ.....

ಹುಟ್ಟಿಸಿದಾತ ದಾತ, ನಡೆಸುವವನು ಆತ, ಸತ್ಯ, ಧರ್ಮ, ನ್ಯಾಯ ನೀತಿ ಬಿಟ್ಟು ಅನ್ಯರಿಗೆ ಮೋಸ ವಂಚನೆ ಮಾಡಬೇಡ.

                                         


                          ✍️ಮಾಧವ. ಕೆ. ಅಂಜಾರು.


       

      







Comments

Post a Comment

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.

(ಲೇಖನ -100), "ಕುವೈಟ್ ಕಲಾ ಮಾಣಿಕ್ಯ" ಒಬ್ಬ ಕಲಾಗಾರನ ನಿಜವಾದ ಜೀವನ ಕ್ರಮ, ಶ್ರಮ ಮತ್ತು ಸಾಧನೆಯ ಹಾದಿ, ಕಲೆ ಎಂಬುವುದು ಎಲ್ಲರಿಗೂ ಒಲಿಯುವುದಿಲ್ಲ ಆದರೆ ಒಂದಲ್ಲ ಒಂದು ರೀತಿಯ ಕಲೆಯ ಶಕ್ತಿ ಪ್ರತಿಯೊಬ್ಬರಲ್ಲೂ ಇರುತ್ತದೆ