(ಲೇಖನ -23)ಟಿಪ್ ಟಾಪ್ ಮೋಸಗಾರರು
ಟಿಪ್ ಟಾಪ್ ಮೋಸಗಾರ
ಕೆಲವರು ಬದುಕಲು ಶ್ರಮಿಸಿದರೆ , ಕೆಲವರು ಅನ್ಯರ ಬದುಕನ್ನು ನಾಶಪಡಿಸಲು ಶ್ರಮಿಸುತ್ತಿರುತ್ತಾರೆ. ಪ್ರತಿಯೊಬ್ಬನ ಜೀವನದಲ್ಲೂ ನಮ್ಮ ಈ ಸಮಾಜದಲ್ಲಿ ಒಳ್ಳೆಯವರು ಮತ್ತು ಕೆಟ್ಟವರು ಆಗಾಗ ನಮಗೆ ಸಿಗುತ್ತಿರುತ್ತಾರೆ. ಅದರಲ್ಲಿ ಸಜ್ಜನರು ನಮ್ಮ ಜೀವನದಲ್ಲಿ ನೆಮ್ಮದಿಯನ್ನು ತಂದರೆ, ದುರ್ಜನರು ನೆಮ್ಮದಿಯನ್ನು ಕೆಡಿಸುತ್ತಾರೆ. ಈ ಪ್ರಪಂಚದಲ್ಲಿ ಕೆಲವರ ಜನ್ಮ ಉನ್ನತಿಗಾಗಿ ಇರುವುದಾದರೆ, ಕೆಲವರ ಜನ್ಮ ರಕ್ತ ಹೀರುವ ತಿಗಣೆಗಳಂತೆ.
ಇಂದಿನ ದಿನಗಳಲ್ಲಿ ಯಾರನ್ನು ಯಾವ ರೀತಿ ನಂಬಬೇಕು ಯಾವ ರೀತಿ ನಂಬಬಾರದು ಎಂಬುದನ್ನು ಕೂಡ ನಿರ್ಧರಿಸಲು ಅಸಾಧ್ಯ. ಆದರೆ ನಿನ್ನ ಜೀವನದಲ್ಲಿ ಏನೇ ಕಷ್ಟಕಾರ್ಪಣ್ಯಗಳು ಬಂದರೂ ಮೋಸ ವಂಚನೆ ಮಾಡಬೇಡ, ಸತ್ಯ ಧರ್ಮವನ್ನು ಬಿಟ್ಟು ಅಧರ್ಮವನ್ನು ಮಾಡಬೇಡ ಎಂಬ ಕಿವಿಮಾತು ನನ್ನ ತಂದೆ ಇಂದಿಗೂ ಹೇಳುತ್ತಿದ್ದಾರೆ. ಸತ್ಯವಂತನಿಗೆ ಕಷ್ಟಗಳು ಜಾಸ್ತಿ ಆದರೆ ಕೊನೆಗೆ ಜಯಿಸುವುದು ಸತ್ಯ ಮಾತ್ರವೆಂದು ಅದೆಷ್ಟೋ ಬಾರಿ ನನ್ನಲ್ಲಿ ಹೇಳಿರುವ ಮಾತು ಇಂದು ನನ್ನ ಜೀವನದಲ್ಲಿ ಧೈರ್ಯದಿಂದ ಬದುಕಲು ಮುಖ್ಯ ಕಾರಣವಾಗಿದೆ.
ತಂದೆ-ತಾಯಿಗಳು ಮಕ್ಕಳ ಜೀವನ ಸುಖಮಯವಾಗಿರಬೇಕು,ಉತ್ತಮವಾದ ವ್ಯಕ್ತಿ ಆಗಬೇಕು, ಜೀವನದಲ್ಲಿ ಏನಾದರೂ ಸಾಧನೆ ಮಾಡುವ ಮಕ್ಕಳು ನಮ್ಮದಾಗಲಿ ಎನ್ನುತ್ತಾ ಸಂಪೂರ್ಣ ಜೀವನವನ್ನು ತನ್ನ ಮಕ್ಕಳಿಗಾಗಿ ಸರ್ವಸ್ವ ತ್ಯಾಗಮಡುತ್ತ ಬದುಕುತಿರುತ್ತಾರೆ. ಬೆಳೆಯುವ ಮಕ್ಕಳಿಗಾಗಿ ಗುಣ, ನಡತೆ, ಶಿಸ್ತು, ಆಚಾರ, ವಿಚಾರ, ಬದುಕಿನ ಪಾಠ, ಇವೆಲ್ಲವನ್ನೂ ಬೋಧಿಸಿ, ಪ್ರಪಂಚದಲ್ಲಿ ಜಾಗರೂಕನಾಗಿ ಬದುಕು ಎಂದು ಹಾರೈಸುತ್ತಾರೆ. ಆದರೂ, ಕೆಲವು ಮಕ್ಕಳು ದಾರಿ ತಪ್ಪಿ ಅವನತಿ ಹೊಂದಿದರೆ, ಕೆಲವರು ಚಿಕ್ಕ ಪುಟ್ಟ, ದೊಡ್ಡ ಸಾಧನೆ ಮಾಡಿ ಮತ್ತವರಿಗೆ ಆದರ್ಶಗಳನ್ನು ಬಿಟ್ಟು ಹೋಗುತ್ತಿರುತ್ತಾರೆ. ಮಕ್ಕಳು ಪ್ರಬುದ್ಧರಾದ ಮೇಲೆ ತಮ್ಮ ಜೀವನವನ್ನು ಸಾಗಿಸಲು ಶಕ್ತರಾಗುವಂತೆ ಬೆಳೆಸಿ ಸಮಾಜಕ್ಕೆ ಬಿಟ್ಟುಬಿಡುತ್ತಾರೆ. ಕೆಲವೇ ವರ್ಷಗಳ ಹಿಂದೆ ಕೂಡು ಕುಟುಂಬಗಳು ಅಲ್ಲಲ್ಲಿ ಕಾಣ ಸಿಗುತ್ತಿತ್ತು, ಆದರೆ ಇತ್ತೀಚಿನ ದಿನಗಳಲ್ಲಿ ನಾವಿಬ್ಬರು ನಮಗೊಬ್ಬರು ಅನ್ನುತ್ತಾ, ದೊಡ್ಡ ಕುಟುಂಬಗಳು ಚಿಕ್ಕದಾಗುತ್ತಾ ಒಂದು ಮನೆಗೆ ಮೂರು ಜನರಂತೆ ಬದುಕುತ್ತಿದ್ದಾರೆ. ಇದು ನನಗೂ ಅನ್ವಯ ನಿಮಗೂ ಅನ್ವಯ. ಎಲ್ಲವೂ ಬೇಕೆಂಬ ಆಸೆಯೊಂದಿಗೆ ಇರುತ್ತಿರುವ ಇಂದಿನ ಸಂಸಾರಗಳು ತಿನ್ನಲು ಆಹಾರ, ಹಾಕಲು ಬಟ್ಟೆ, ಓಡಾಡಲು ವಾಹನ, ಸುಸಜ್ಜಿತ ಮನೆ ಇಷ್ಟೆಲ್ಲ ಇದ್ದರೂ ಅದಕ್ಕಿಂತಲೂ ಜಾಸ್ತಿ ವಿಲಾಸಿ ಜೀವನಕ್ಕೆ ಮಾರುಹೋಗಿ ಕಷ್ಟಪಡದೆ ಹಣ ಸಂಪಾದನೆಗೆ ಇಳಿದು, ಸ್ವಾರ್ಥಕ್ಕಾಗಿ ಸಾವಿರಾರು ಸುಳ್ಳುಗಳನ್ನು ಹೇಳುತ್ತಾ ಹಣ ಸಂಪಾದನೆಗೆ ಮಾಡುವ ಸಂದರ್ಭ ಬಹಳಷ್ಟಿದೆ.
ಹಣಸಂಪಾದನೆಗೆ, ತನ್ನ ವೃತ್ತಿಯನ್ನು ಬಳಸಿಕೊಳ್ಳುವವರು ಕೆಲವರಾದರೆ, ತನ್ನ ಬುದ್ಧಿವಂತಿಕೆಯನ್ನು ಉಪಯೋಗಿಸಿ ಹಣ ಸಂಪಾದಿಸಿಕೊಳ್ಳುವವರು ಕೆಲವರು ಆಗಿರುತ್ತಾರೆ ಮತ್ತು ಹಣವೊಂದಿದ್ದರೆ ಸಾಕು ಅನ್ನುವವರು ತನ್ನ ಜೀವನದಲ್ಲಿ ಯಾವ ಕೀಳು ಮಟ್ಟಕ್ಕೂ ಇಳಿದುಬಿಡುತ್ತಾರೆ. ಪ್ರಪಂಚದ ವಿಲಾಸಿ ಜೀವನಕ್ಕೆ ಮಾರು ಹೋಗಿ, ಸುಳ್ಳುಗಳ ಕಂತೆ ಸೃಷ್ಟಿಸಿ, ಬಲೆ ಬೀಸುತ್ತಾ ಸತ್ಯವಂತರ ನ್ನು, ಅಮಾಯಕರನ್ನು ಬಲಿ ಪಡೆದುಕೊಳ್ಳುತಿರುತ್ತಾರೆ. ಕೆಲವರಿಗೆ ಸಂಘ ದೋಷದ ಪರಿಣಾಮವಾದರೆ, ಕೆಲವರಿಗೆ ಮಾನಸಿಕತೆಯ ಪರಿಣಾಮವಾಗಿರುತ್ತದೆ. ಏನಿದ್ದರೂ 90% ಜನರು ಪೂರ್ವಯೋಜಿತ ಕೃತ್ಯ, ವಂಚನೆ, ಮೋಸವನ್ನು ಮಾಡುತ್ತಾರೆ.
ಕೆಲವೊಂದು ನಿದರ್ಶನ ಈ ಮೂಲಕ ತಿಳಿಸಲು ಇಚ್ಚಿಸುತ್ತೇನೆ , ಎಷ್ಟು ಜಾಗ್ರತರಾಗಿದ್ದರೂ ನಮಗೆ ಅರಿವಿಲ್ಲದೆ ನಮ್ಮನ್ನು ಮೋಸ ಮಾಡಿದ ಅನುಭವ ಕೊನೆಗೆ ತಿಳಿದುಬಿಡುತ್ತದೆ. ಮೋಸ ಹಣದ ವಿಚಾರದಲ್ಲಿ ಮಾತ್ರ ಅಲ್ಲ, ವಿಶ್ವಾಸ, ಆಸ್ತಿ, ದಾಖಲೆ, ನ್ಯಾಯ, ಪ್ರಾಮಾಣಿಕತೆ, ಕೆಲಸದಲ್ಲಿಯೂ ಮೋಸ ಮಾಡುವವರ ಪಟ್ಟಿ ಒಂದಷ್ಟು. ಇದನ್ನೆಲ್ಲಾ ಗಮನಿಸುವಾಗ ನಾವಿರೋದೇ ಸುಳ್ಳಿನ ಪ್ರಪಂಚದಲ್ಲಿ ಅನಿಸುತ್ತದೆ.
ಅದೊಂದು ದಿನ, ಆಪ್ತನೆನಿಸಿಕೊಂಡವ - ತನ್ನ ತಂಗಿಗೆ ಮದ್ವೆ ಕರ್ಚಿಗೆ ಹಣದ ತುಂಬಾ ಅವಶ್ಯಕತೆ ಇದೆ ತುರ್ತಾಗಿ ಹಣ ಬೇಕಾಗಿದೆ ಸ್ವಲ್ಪ ಹಣ ನೀಡುತ್ತಿಯ ಕೇಳಿ ಬಿಟ್ಟ, ಮದ್ವೆ ಎಂದರೆ, ಮನೆ ಎಂದರೆ ಹಣದ ಅವಶ್ಯಕತೆ ಇದ್ದೆ ಇದೆ ಅನ್ನೋದನ್ನು ಅರಿತಿದ್ದ ನಾನು ಆಗುವ ಹಣದ ಸಹಾಯ ಮಾಡಿಬಿಟ್ಟೆ, ಮತ್ತೊಬ್ಬ ಅಯ್ಯೋ ನನ್ನ ತಾಯಿಗೆ ಹುಷಾರಿಲ್ಲ ಬಹಳ ತೊಂದ್ರೆಗೆ ಸಿಕ್ಕಿಕೊಂಡಿದ್ದೇನೆ ಹಣದ ಅವಶ್ಯಕತೆ ಇದೆ ಹೇಳಿಬಿಟ್ಟ, ಇನ್ನೊಬ್ಬ ನನ್ನ ಮನೆ ಕಟ್ಟುತಿದ್ದೇನೆ ಸ್ವಲ್ಪ ದಿನ ಬಿಟ್ಟು ಕೊಡೆತ್ತೇನೆ ಅಂದುಬಿಟ್ಟ, ಹಾಗೆಯೇ ಇನ್ನೊಬ್ಬ ಇನ್ನಿತರ ಕಾರಣ ಹೇಳಿ ಹಣ ಸಾಲವಾಗಿ ಕೇಳಿ ತೆಗೆದುಕೊಂಡ. ಕರುಣೆ, ಸಹೃದಯ, ಇನ್ನೊಬ್ಬರ ನೋವನ್ನು ಅರ್ಥ ಮಾಡಿಕೊಂಡು ಮಾಡಿದ ಹಣದ ಸಹಾಯಗಳು ಯಥಾ ಸ್ಥಿತಿಯಲ್ಲಿ ಮರಳಿ ಸಿಕ್ಕಿದರೆ ಸಹಾಯ ಮಾಡಿದವನಿಗೂ, ತೆಗೆದುಕೊಂಡವನಿಗೂ ಸಂತೋಷ ಮತ್ತು ವಿಶ್ವಾಸ ಇನ್ನಷ್ಟು ಜಾಸ್ತಿ ಆಗಬಹುದು. ಆದರೆ ಇಲ್ಲಿ ಎಲ್ಲರಿಗೂ ಸಂಭವ ನೇರ ತವಿರುದ್ಧ ಆಗಿರುತ್ತದೆ. ಯಾವುದೋ ಒಂದು ನೆಪದಲ್ಲಿ ತೊಂದರೆಗಳನ್ನು ಮುಂದಿಟ್ಟು ನನಗಿರುವ ಸಮಸ್ಯೆಗಳು ಅವನಿಗಿಲ್ಲ ಅನ್ನುವ ಭಾವನೆಯಿಂದ ತೊಂದರೆಗೆ ಒಳಗಾದವ ಹಣಕ್ಕಾಗಿ ಬೇಡಿಕೆ ಇಟ್ಟಾಗ ಸಹಾಯದ ಮನೋಭಾವನೆ ಇರುವವರು ಸಹಾಯ ಮಾಡಿದರೆ, ಕೆಲವರು ಸಹಾಯ ಮಾಡುವ ಸ್ಥಿತಿಯಲ್ಲಿ ಇರದೇ ಇರುವಾಗ ಆಗುವುದಿಲ್ಲ ಎಂದು ಹೇಳಬಹುದು, ಅಥವಾ ಕೆಲವರು ಇನ್ನೊಬ್ಬರಿಗೆ ಸಹಾಯ ಮಾಡಿದರೆ ಪುಣ್ಯ ಬರುವುದೆಂದು ಭಾವಿಸಿ ಹೇಗಾದರೂ ಸಹಾಯ ಮಾಡಬೇಕೆಂದು ಮತ್ತೊಬ್ಬರಲ್ಲಿ ಬೇಡಿಕೆ ಇಟ್ಟು ತೊಂದರೆಗೆ ಒಳಗಾದವನಿಗೆ ಹಣದ ಸಹಾಯವೋ ಅಥವಾ ಇನ್ನಿತರ ಸಹಾಯ ಮಾಡುತ್ತಿರುತ್ತಾರೆ. ಆಶ್ಚರ್ಯವೆಂದರೆ ಉಪಕಾರ ಮಾಡಿದವನ ಪಾಡು ಭವಿಷ್ಯದಲ್ಲಿ ತುಂಬಾ ನೋವನ್ನು ತಂದಿಡುತ್ತದೆ, ಕಾರಣ ಸಹಾಯ ಪಡೆದವನು ಬರ ಬರುತ್ತಾ ತನ್ನ ನಿಜವಾದ ಬಣ್ಣ ತೋರಿಸಲು ಆರಂಭಿಸಿರುತ್ತಾನೆ, ಅದೆಂತಹ ಉದಾಹರಣೆಗಳೆಂದರೆ, ಹೌದಾ ನೀನು ನನಗೆ ಹಣ ಕೊಟ್ಟಿದೀಯಾ ನನಗೆ ನೆನಪೇ ಇಲ್ಲ, ನೀನು ಕೊಡಲೇ ಇಲ್ಲ, ಹೌದಪ್ಪ ನೀನು ಹಣ ಕೊಟ್ಟಿರುವೆ ನನ್ನಲ್ಲಿ ಇವಾಗ ಇಲ್ಲ ಕೊಡುವುದಕ್ಕೆ ನಾನೇನು ಮಾಡ್ಲಿ, ನೋಡು ನಿನ್ನ ಉಪಕಾರ ಎಂದಿಗೂ ಮರೆಯುವುದಿಲ್ಲ ಇಂದಲ್ಲ ನಾಳೆ ನಿನ್ನ ಹಣ ಕೊಡುತ್ತೇನೆ, ದೇವರಾಣೆಗೂ ನಾನು ನಿನ್ನ ದುಡ್ಡನ್ನು ಇಟ್ಟುಕೊಳ್ಳುವುದಿಲ್ಲ, ಸತ್ಯ ಹೇಳ್ಬೇಕೆಂದರೆ ನನ್ಹತ್ರ ಸ್ವಲ್ಪ ಹಣ ಇರುತಿದ್ದರೆ ನಾನು ನಿಜ್ವಾಗ್ಲೂ ತಂದು ಕೊಡುತಿದ್ದೆ..... ಹೀಗೆ ಹತ್ತು ಹಲವಾರು ವಿಧದ ಉತ್ತರಗಳು ಸಮಾಜಯಿಸುವ ಮಾತುಗಳು.
ಆದರೆ, ಉಪಕರಿಸಿದವನು ತೊಂದರೆಗೆ ಒಳಗಾದಾಗ ತಾನು ನೀಡಿದ ಹಣದ ಬಗ್ಗೆ ಮೊದಲು ಕೇಳಲು ಹೋಗುತ್ತಾನೆ, ಹೇ ಗೆಳೆಯ ನಾನು ತುಂಬಾ ತೊಂದ್ರೆಗೆ ಸಿಕ್ಕಿಬಿದ್ದಿದ್ದೇನೆ ನೋಡು ನನಗೆ ಇವಾಗ ಹಣದ ಅವಶ್ಯಕತೆ ಇದೆ, ನಾನು ಕೆಲವು ವರುಷದ ಹಿಂದೆ ಕೊಟ್ಟ ಹಣ ಮರು ಪಾವತಿ ಮಾಡುತ್ತಿಯ? ಒಹ್ ಅದ್ರಲ್ಲಿ ಕೆಲವರು ಹಣ ತಿರುಗಿ ಕೇಳದವರೆಗೆ ಕೊಡುವುದಿಲ್ಲ, ಕೆಲವರು ಕೊಟ್ಟ ಹಣ ಕೇಳಿಬಿಟ್ಟನೆಂದು ಮುಖ ಕಪ್ಪು ಮಾಡಿ ಅಲ್ಪ ಸ್ವಲ್ಪ ಹಣ ಪಾವತಿಸಲು ಪ್ರಯತ್ನ ಪಟ್ಟರೆ, ಕೆಲವರು ಹಣ ಕೇಳಿದ ಕೂಡಲೇ ಮೊಬೈಲು, ವಾಸಸ್ಥಳ ಬದಲಾಯಿಕೊಳ್ಳುತ್ತಾರೆ, ನಿಮ್ಮ ಪರಿಚಯ ಇಲ್ಲದಂತೆ ನಡೆದುಕೊಳ್ಳುತ್ತಾರೆ. ಇನ್ನಿತರರು ತನ್ನ ಜಾಣ್ಮೆ ತೋರಿಸುತ್ತಾರೆ, ಕಾನೂನು ಹೋರಾಟ ಮಾಡು ಅಂತಾರೆ. ದೇವರೇ ಇಂತವರೂ ಇದ್ದಾರೆಯೇ ಎಂದು ಕೇಳಬೇಡಿ, ಇದ್ದಾರೆ ಇಂತವರೂ ಇದ್ದಾರೆ.
ನಿನ್ನ ಒಳ್ಳೆತನಕ್ಕೆ ಕಿಂಚಿತ್ತೂ ಬೆಲೆ ಕೊಡದ ಜನರಿದ್ದಾರೆ, ನಿನ್ನ ಉಪಕಾರವನ್ನು ನೆನಪಿಸಿಕೊಳ್ಳುವುದಕ್ಕೂ ಸಮಯವಿಲ್ಲದವರು ಇದ್ದಾರೆ, ನಿನ್ನ ನಿಜವಾದ ಸಮಸ್ಯೆಯನ್ನು ಹಣಪಡೆದವನೇ ಊರೆಲ್ಲ ಹೇಳಿ ತಿರುಗುವ ಜನರೂ ಇದ್ದಾರೆ, ಕೈಲಿ ಮೂರು ಕಾಸು ಇಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಎಂಬಂತೆ, ಕಾರು, ಬೈಕು, ಸೆಂಟು ಹಾಕಿ ಹಣವಂತನಂತೆ ತಿರುಗುವವರು ಇದ್ದಾರೆ, ಒಬ್ಬನನ್ನೂ ಬಿಡದೆ ಹಣ ಕೇಳಿ ಪಲಾಯನ ಮಾಡಿ ನಾನೊಬ್ಬ ಬಹಳ ಒಳ್ಳೆಯ ವ್ಯಕ್ತಿ ಎಂದು ಬಿಂಬಿಸಿಕೊಳ್ಳುವವರು ಇದ್ದಾರೆ! ಇದು ಆಶ್ಚರ್ಯವಲ್ಲ ಇವತ್ತಿನ ದಿನದಲ್ಲಿ ನಡೆಯುತ್ತಿರುವ ಅದೆಷ್ಟೋ ಘಟನೆಗಳು.
ಟಿಪ್ ಟಾಪ್ ಮೋಸಗಾರರು ಹೇಗಿರುತ್ತಾರೆಂದರೆ, ಮೈ ಬಗ್ಗಿ ಕೆಲಸ ಮಾಡುವುದಿಲ್ಲ, ಹಣವಂತರ ಹಿಂದೆ ಸುತ್ತುತ್ತಾರೆ, ಸ್ಪೋರ್ಟ್ಸ್ ಬೈಕು ಕಾರು, ಶೋಕಿ ಜೀವನ ಮಾಡಲು ಜಾಸ್ತಿ ಇಷ್ಟಪಡುತ್ತಾರೆ, ನನಗೆ ಕಂಪನಿ ಓನರ್ ಪರಿಚಯವಿದೆ, ನನ್ನಲ್ಲಿ ips ಇದಾರೆ, ನನ್ನ ಗೆಳೆಯ ಹೈ ಕೋರ್ಟು ವಕೀಲ, ನನ್ನಲ್ಲಿ ಕೋಟಿಗಟ್ಟಲೆ ಆಸ್ತಿ ಇದೆ, ನನಗೇನೂ ಕಮ್ಮಿ ಇಲ್ಲ ಹತ್ತು ಸೈಟ್ ಇದೆ, ನಾನು ಇಂತಹ ಜುಜುಬಿ ಹಣಕ್ಕೆ ಕೈ ಚಾಚುವವನಲ್ಲ ಕೇವಲ ಒಂದು ತಿಂಗಳಿಗೆ ಮಾತ್ರ ನನಗೆ ಹಣದ ಅವಶ್ಯಕತೆ... ಮತ್ತೆ ಇನ್ನೇನೋ ಕೆಲವು ಮತಿಗೆಟ್ಟ ಮಾತುಗಳನ್ನಾಡುವ ಸುಂದರ ಮುಖದ, ಸುಂದರ ವಾಹನದಲ್ಲಿ ತಿರುಗುವ, ಸುಂದರವಾದ ಮನೆಯಲ್ಲಿ ಇರುವ ಪ್ರಪಂಚದ ಅತೀ ದೊಡ್ಡ ಮೋಸಗಾರರು.
ಹೌದು ಅದೆಷ್ಟು ಸಜ್ಜನರು, ತನ್ನ ಕಷ್ಟವನ್ನು ಲೆಕ್ಕಿಸದೆ ನಿನಗೆ ಸಹಾಯ ಮಾಡಿರಬಹುದು, ಅದೆಷ್ಟು ಸಜ್ಜನರು ನಿನ್ನ ದುಃಖಕ್ಕೆ ಮರುಗಿ ಕೈಮೀರಿ ಹಣವನ್ನು ಕೊಟ್ಟಿರಬಹುದು, ಅದೆಷ್ಟು ಜನರು ನಿನ್ನ ಮನೆ, ಮದುವೆ, ಕಾರು, ಬೈಕು ಅಥವಾ ಆರೋಗ್ಯ ಸಮಸ್ಯೆ ಬಂದಾಗ ಬಂಗಾರ ಅಡವಿಟ್ಟು ಹಣ ಕೊಟ್ಟಿರಬಹುದು, ಅದೆಷ್ಟು ಜನರು ನಿನ್ನನ್ನು ನಂಬಿ ಆಸ್ತಿಯನ್ನೇ ಅಡವಿಟ್ಟು ನಿನಗೆ ಸಹಾಯ ಮಾಡಿರಬಹುದು. ಇದೆಲ್ಲ ನಿನ್ನ ಮೇಲಿರುವ ನಂಬಿಕೆಯಿಂದ, ನಿನ್ನ ಮೇಲಿರೋ ಭಾವನೆ, ನಿನ್ನ ಕಷ್ಟದಲ್ಲಿ ನಾನು ಸಹಬಾಗಿ ಅನ್ನುವ ಯೋಚನೆಯಿಂದ. ಹಣವೆಂದರೆ ಜೀವನವಲ್ಲ ಎಂದು ಅರ್ಥ ಮಾಡಿಕೊಂಡಿರುವವರು, ಹಣ ಇಂದು ಇದ್ದರೆ ನಾಳೆ ಹೋಗಬಹುದು ಬರಬಹುದು ಎಂಬ ಆತ್ಮ ವಿಶ್ವಾಸದಿಂದ.
ಕಷ್ಟ, ಸುಖಗಳು ಎಲ್ಲರಿಗೂ ಬರುತ್ತದೆ ಆದರೆ ಆ ಸಮಯ ಶಾಶ್ವತ ಅಲ್ಲ, ಕಷ್ಟ ಬಂದರೂ ಕಳೆದು ಹೋಗುತ್ತದೆ, ಸುಖ ಬಂದರೂ ಮುಗಿದು ಹೋಗುತ್ತದೆ. ಆದರೆ ಕಷ್ಟ ಸುಖಗಳ ನಡುವೆ ನಾವು ಮಾಡುವ ಪಾಪ ಕರ್ಮಗಳು ನಿನ್ನ ಜೊತೆಯಲ್ಲಿ ಇರುತ್ತದೆ ಇದು ಮಾತ್ರ ಶಾಶ್ವತವಾಗಿ ನಿನ್ನಲಿ ಉಳಿಯುತ್ತದೆ. ನೀನು ಮಾಡಿರುವ ವಂಚನೆ, ನಿನಗಾಗಿ ತೋಡುತ್ತಿರುವ ಕೊನೆಯ ಜಾಗ, ನೀನು ಮಾಡುತ್ತಿರುವ ಮೋಸ ನಿನ್ನ ನಂಬಿ ಬದುಕಿರುವ ಜನರಿಗೆ ಮಾಡುತ್ತಿರುವ ದೊಡ್ಡ ಆಸ್ತಿ. ನಿನ್ನ ಆಸೆಗಳನ್ನು ಈಡೇರಿಸಲು ಅಮಾಯಕರನ್ನು ಬಲಿ ತೆಗೆದುಕೊಳ್ಳಬೇಡ, ನಿನ್ನ ಮೋಜು ಮಸ್ತಿಗಾಗಿ ಸತ್ಯವಂತರನ್ನು ಬಲಿಕೊಡಬೇಡ, ನಿನ್ನ ಆಸ್ತಿ ಸಂಪಾದನೆಗೆ ಅವಿದ್ಯಾವಂತರನ್ನು ಆಯ್ಕೆ ಮಾಡಬೇಡ. ದಿನದ ಒಂದು ಹೊತ್ತಿನ ಊಟಕ್ಕೆ ಶ್ರಮಿಸುವವರಲ್ಲಿ ನಿನ್ನ ಜಾಣತನ ತೋರಿಸಬೇಡ. ಕಷ್ಟ ಸಮಯದಲ್ಲಿ ಪಡೆದ ಹಣ ಹಿಂತಿರುಗಿಸಲು ಪ್ರಯತ್ನಿಸು, ಮನೆ ಕಟ್ಟಲು ಪಡೆದ ಹಣ ಹಿಂತಿರುಗಿಸಲು ಪ್ರಯತ್ನಿಸು, ಆರೋಗ್ಯ ಸಮಸ್ಯೆ ಗೆ ತೆಗೆದುಕೊಂಡ ಹಣ ಹಿಂತಿರುಗಿಸು. ನಿನ್ನ ಬದುಕು ಪಾವನವಾಗಬೇಕಿದ್ದರೆ ನಿನ್ನ ಹಾಸಿಗೆ ಇದ್ದಷ್ಟು ಮಾತ್ರ ಕಾಲು ಚಾಚು. ಅನ್ಯರಿಗೆ ಪೂರ್ವಯೋಜಿತ ವಂಚನೆಗಳನ್ನು ಮಾಡಿ ಪಾಪದ ಬ್ರಮ್ಮ ಗಂಟನ್ನು ಕಟ್ಟಿಸಿಕೊಳ್ಳಬೇಡ.
ನೀನು ಹಾಗೇನು ಮಾಡಿದ್ದರೆ, ನಿನ್ನ ಗೆಳೆಯನಲ್ಲಿ ಕ್ಷಮೆ ಕೇಳು, ನೀನು ಪಡೆದ ಹಣ ಹಿಂತಿರುಗಿಸಲು ಪ್ರಯತ್ನಿಸು, ಇನ್ನು ಮುಂದಿನ ಜೀವನದಲ್ಲಿ ಯಾರಿಗೂ ಮೋಸ ಮಾಡಿ ಬದುಕುವುದಿಲ್ಲವೆಂದು ಶಪಥ ಮಾಡಿಕೊಳ್ಳು. ನಾನೂ ನಿನ್ನವನಂತೆ ಸಜ್ಜನಿಕೆಯ ಜೀವನ ಮಾಡುವೆನೆಂದು ಪ್ರಮಾಣ ಮಾಡು, ಮಾಡಿದ ತಪ್ಪನ್ನು ತಿದ್ದಿ ಮುಂದಿನ ದಿನದಲ್ಲಿ ಸುಖವಾಗಿ ಬಾಳುತ್ತಿರು.
(ಈ ಲೇಖನ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಯಾರಿಗೂ ಬರೆದಿಲ್ಲ, ಸಮಾಜದಲ್ಲಿ ನಡೆಯುತ್ತಿರುವ ಕೆಲವು ಘಟನೆ ಅಕ್ಷರದಮೂಲಕ ನಿಮ್ಮ ಜಾಗೃತಿಗಾಗಿ )
✍️ಮಾಧವ. ಕೆ. ಅಂಜಾರು
ಬಹಳ ವಾಸ್ತವಾಂಶಗಳನ್ನೇ ಬಿಂಬಿಸಿದ್ದೀರಿ. ಆದರೇನು ಮಾಡುವುದು? ನಮ್ಮೊಳಗಿನ ಒಳ್ಳೆಯತನವನ್ನು ವಂಚಕರು ಬಳಸಿಕೊಳ್ಳುತ್ತಾರಲ್ಲಾ.. ಆದರೂ ನಮ್ಮ ಒಳ್ಳೆಯತನವನ್ನು ನಿಯಂತ್ರಿಸಿಕೊಳ್ಳುವುದು ನಮ್ಮ ವಿವೇಕಕ್ಕೆ ಬಿಟ್ಟಿದ್ದು. ಚಂದದ ಲೇಖನ
ReplyDelete