(ಲೇಖನ -22)ಸ್ವಯಂ- ದಿಗ್ಬಂದನ (ಜೀವನ ಪಾಠ )

Self Quarantine - ಸ್ವಯಂ ದಿಗ್ಬಂದನ

  ಜೀವನವೇ ಹಾಗೆ ಯಾವ ಸಮಯದಲ್ಲಿ ಏನಾಗುತ್ತದೆ ಎಂಬುದು ನಮಗೆ ತಿಳಿಯದು, ಇವಾಗ  ಸರಿ ಇದ್ದರೆ, ಮರುಗಳಿಗೆಯಲ್ಲಿ ಏನಾಗುತ್ತದೆ ಎಂಬುದಷ್ಟು ತಿಳಿಯದ ಎಲ್ಲಾ ಮನುಷ್ಯರು, ಪ್ರಾಣಿಗಳು ಹಾಗೂ ಸಕಲ ಜೀವರಾಶಿಗಳು ಆದರೆ ನಮ್ಮ ಜೀವನದಲ್ಲಿ ನಡೆಯುವ ಎಲ್ಲಾ ಘಟನೆಗಳಲ್ಲಿ ಒಂದಲ್ಲ ಒಂದು ರೀತಿಯ ಪಾಠಗಳನ್ನು ನಾವು ಕಲಿಯುತ್ತಲೇ ಇರುತ್ತೇವೆ. ಹೊಸ ಹೊಸ ಅಧ್ಯಾಯಗಳು, ಸಂದರ್ಭಗಳು, ಘಟನೆಗಳು ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಕೆಲವೊಂದು ಘಟನೆಗಳು ಒಪ್ಪಿಕೊಳ್ಳಲು ಅಸಾಧ್ಯ ಮತ್ತು ಜೀವನವನ್ನೇ ಸಂಪೂರ್ಣವಾಗಿ ನಾಶ ಪಡಿಸುವಂತಹ ಮಟ್ಟಕ್ಕೆ ತಲುಪಿಸಿ ಬಿಡುತ್ತದೆ.

ಆದರೆ ನಮಗರಿವಿಲ್ಲದಂತೆ  ಎಲ್ಲಾ ಸಂದರ್ಭಗಳನ್ನು ಎದುರಿಸುವ ಶಕ್ತಿ ತಾನಾಗಿಯೇ ಹುಟ್ಟಿಕೊಳ್ಳುವುದು. ಬಂದಂತಹ ತೊಂದರೆಗಳನ್ನು ನಿಭಾಯಿಸುವ ಶಕ್ತಿ ವೃದ್ಧಿಸಿ ಕೊಳ್ಳುತ್ತೇವೆ ಅಥವಾ ಇದು ನಮ್ಮ ಭಾಗ್ಯವೆಂದು ದೇವರ ಬಳಿ ಮೊರೆಹೋಗುತ್ತೇವೆ. ದೇವರೇ ನನಗ್ಯಾಕೆ ಈ ಶಿಕ್ಷೆಯನ್ನು ಕೊಟ್ಟಿರುವೆ ಎಂದು ಪ್ರಶ್ನಿಸುತ್ತ  ಕಣ್ಣೀರು ಹಾಕಿ ಕೊನೆಗೆ ನಮ್ಮನ್ನು ನಾವು ಹತೋಟಿಗೆ ತಂದುಕೊಳ್ಳಲು ಪ್ರಯತ್ನಪಡುತ್ತೇವೆ.

 ಒಂದೆರಡು ವರ್ಷದಿಂದ, ಜಗತ್ತನ್ನೇ ತತ್ತರಿಸಿ ಬಿಟ್ಟಿರುವ ಮಹಾಮಾರಿ ಕೊರೊನ ವೈರಸ್ ಎಂಬ ಹೆಸರೊಂದಿಗೆ, ಲಕ್ಷಲಕ್ಷ ಜನರ ಜೀವವನ್ನು ಬಲಿ ತೆಗೆದುಕೊಂಡು ಇನ್ನೂ ರೂಪಾಂತರದ ಹೆಸರೊಂದಿಗೆ ತನ್ನ ಆಟವನ್ನು ಮುಂದುವರಿಸುತ್ತಿರುವ ಒಮಿಕ್ರೋನ್ ವೈರಸ್ ಮನುಷ್ಯನ  ಉಸಿರಾಟದಲ್ಲಿ ತನ್ನ ಹಿಡಿತವನ್ನು ಇಟ್ಟುಕೊಳ್ಳಲು ಶ್ರಮಿಸುತ್ತಿದೆ. ಭಾಗ್ಯವಂತರು ಉಳಿದರೆ  ಇನ್ನು ಕೆಲವರು ಜೀವವನ್ನೇ ಕಳೆದುಕೊಳ್ಳುತ್ತಿದ್ದಾರೆ. ಇದು ಮಾನವ ಜನ್ಮಕ್ಕೆ ಬಹುದೊಡ್ಡ ದೌರ್ಭಾಗ್ಯವೆಂದು ಹೇಳಬಹುದು. ಕೊರೋನ ಜಗತ್ತಿಗೆ ಪಸರಿಸುವ ಮುನ್ನ ದೇಶ ದೇಶಗಳ ನಡುವೆ ದ್ವೇಷ, ಧರ್ಮ-ಧರ್ಮಗಳ ನಡುವೆ ದ್ವೇಷ, ಪೈಪೋಟಿಯ ಸಂದರ್ಭಗಳು ಎದ್ದು ಕಾಣುತ್ತಿದ್ದವು. ಆ ಕಷ್ಟಕಾಲ ಸಂದರ್ಭದಲ್ಲಿಯೂ ವಿಕೃತರು ವಿಕೃತಿಯನ್ನು ಮೆರೆಯುತ್ತಿದ್ದರು.

ಮಾರ್ಚ್ 4, 2020, ಒಲ್ಲದ ಮನಸ್ಸಿನಿಂದ  ಪರದೇಶಕ್ಕೆ ಪಯಣಿಸಿದ ನನ್ನ ಕುಟುಂಬ ಅನಿವಾರ್ಯವಾಗಿ ಜನ್ಮಭೂಮಿ ಯಿಂದ ಕರ್ಮಭೂಮಿ ಗೆ ಹೋಗಲೇಬೇಕಾಯಿತು. ಅದಕ್ಕೂ ಮುಂಚೆ ಕೊರೊನಾ ವೈರಸ್ ಹೆದರಿಕೆ ಹುಟ್ಟಿಸುತ್ತಿದ್ದು ಕುವೈಟ್ ಎಂಬ ಮಹಾನಗರಿಯಲ್ಲಿ ಮಾರ್ಚ್ 5 ನೇ ತಾರೀಖಿನಂದು ಸಂಪೂರ್ಣವಾಗಿ  ಭಯದಲ್ಲಿ, ತುಂಬಿಬಿಟ್ಟಿತು, ಎಲ್ಲಾ ವ್ಯಾಪಾರ ವಹಿವಾಟುಗಳನ್ನು ಇಲ್ಲಿನ ಸರ್ಕಾರ ಸ್ಥಗಿತಗೊಳಿಸಿತ್ತು. ಅದೆಷ್ಟೋ ಜನರು  ಜೀವವನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದರು. ಸಾವು-ನೋವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಾ, ಬದುಕಿರುವವರನ್ನು ಇನ್ನಷ್ಟು ದುರ್ಬಲಗೊಳಿಸುತಿತ್ತು. ಚೀನಾ, ಅಮೇರಿಕಾ, ಬ್ರಿಟನ್, ಇಟಾಲಿಯನ್ ತರ ಮುಂದುವರಿದ ಅದೆಷ್ಟೋ ದೇಶಗಳು ತತ್ತರಿಸಿ ಲಕ್ಷಾನುಗಟ್ಟಲೆ ಪ್ರಜೆಗಳನ್ನು ಕಳೆದುಕೊಂಡಿತು. ಹೇಗೆ ಸರದಿ ಮುಂದುವರಿಯುತ್ತಾ ಭಾರತದಂತಹ, ಮುಂದುವರೆಯುತ್ತಿರುವ  ದೇಶಗಳಿಗೆ ಲಗ್ಗೆಯಿಟ್ಟು ಇನ್ನಷ್ಟು ಜೀವಗಳನ್ನು ಬಲಿಪಡೆದುಕೊಂಡಿತ್ತು.

            ಆ ಸಮಯದಲ್ಲಿ ಪ್ರತ್ಯೇಕವಾಗಿ ಭಾರತದಲ್ಲಿ ಬುದ್ದಿ ಇಲ್ಲದ ಮನುಷ್ಯರು ಕೋರೋನ ಎಂಬ ರೋಗವಿಲ್ಲವೆಂದು ನಾನಾ ತರಹದ ಮಾತುಗಳನ್ನಾಡಿ ಸಹಾಯದ ಬದಲು  ತೊಂದರೆಗಳನ್ನು ಸೃಷ್ಟಿಸಿದವರು ಜಾಸ್ತಿ. ಜಗತ್ತಿನಲ್ಲಿ ಅತಿ ಹೆಚ್ಚು ಜನಸಂಖ್ಯೆ ಇರುವ ದೇಶ ನಮ್ಮ ಭಾರತ, ಇಂತಹ  ರೋಗಗಳು ಆವರಿಸಿಕೊಂಡಾಗ ದೇಶವನ್ನಾಳುತ್ತಿರುವ ಪ್ರಧಾನಿಗೆ ಜನರ ಚಿಂತೆ ಅತಿ ಹೆಚ್ಚಾಗಿರುತ್ತದೆ. ದೇಶದ ಜನರನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಬೇಕು ಎಂಬ ಸರ್ವಪ್ರಯತ್ನ ಹಾಗೆ ಬಂದಂತಹ ಸಂದರ್ಭವನ್ನು  ನಿವಾರಿಸಿಕೊಳ್ಳಲು ಹರಸಾಹಸ ಪಟ್ಟಂತಹ ಧೀಮಂತ ನಾಯಕನಿಗೆ ನಾನೆಂದಿಗೂ ಗೌರವಿಸುತ್ತೇನೆ ಮತ್ತು ತಲೆಬಾಗುತ್ತೇನೆ. ಸಮಸ್ಯೆಗಳ ನಡುವೆಯೂ ಕೊರೋನಾ ಮಹಾಮಾರಿಗೆ  ಚುಚ್ಚುಮದ್ದನ್ನು ಕಂಡುಹಿಡಿಯಲು ಎಲ್ಲಾ ದೇಶದ ವಿಜ್ಞಾನಿಗಳು, ಡಾಕ್ಟರ್ಗಳು  ಹರಸಾಹಸ ಪಡುತ್ತಿದ್ದರು. ಮುಂದುವರಿದ ದೇಶಗಳು ಒಂದಷ್ಟು ಹೆಸರಿನೊಂದಿಗೆ ಚುಚ್ಚುಮದ್ದನ್ನು ತಯಾರಿಸಿ ತಮ್ಮ ದೇಶದ ಜನರಿಗೆ ಮಾತ್ರ ಮದ್ದನ್ನು ಕೊಟ್ಟುಬಿಟ್ಟರು. ಆದರೆ ಕ್ರಮೇಣವಾಗಿ ಭಾರತದಲ್ಲಿ ತಯಾರಾದ ಚುಚ್ಚುಮದ್ದು WHO ನಿರಾಕರಿಸಿದರೂ ತನ್ನದೇ ಶೈಲಿಯಲ್ಲಿ ಅತ್ಯಂತ ಕಡಿಮೆ ವೆಚ್ಚದ ಚುಚ್ಚುಮದ್ದನ್ನು ಕಂಡು ಹಿಡಿದು ಸರ್ವ ಭಾರತೀಯರಿಗೆ ಕೊಡಲಾರಂಭಿಸಿತು ಹಾಗೆಯೇ ಶತ್ರು ದೇಶಗಳನ್ನು ಬಿಡದೆ ತಾನು ತಯಾರಿಸಿದ ಚುಚ್ಚುಮದ್ದನ್ನು ಪ್ರಪಂಚದ ಎಲ್ಲಾ ದೇಶಗಳಿಗೆ ರಫ್ತು ಮಾಡಲಾರಂಭಿಸಿತು. ಭಾರತವೊಂದು ಶ್ರೇಷ್ಠ ರಾಷ್ಟ್ರವೆಂದು ತೋರಿಸಿಕೊಟ್ಟಿತು.

         ದಿನಾಲು, ಟಿವಿ ಮಾಧ್ಯಮದಲ್ಲಿ, ಸಾಮಾಜಿಕ ಜಾಲತಾಣದಲ್ಲಿ, ಭಯ ಹುಟ್ಟಿಸುವಂತಹ ಸಾವು-ನೋವುಗಳದ್ದೆ ಸುದ್ದಿ-ಸಮಾಚಾರಗಳು ಇನ್ನಷ್ಟು ಭಯ ಹುಟ್ಟಿಸಿ ಈಗ ಸಾಯುತ್ತೇವೆ ಮತ್ತು ಸಾಯುತ್ತೇವೆ ಎಂಬ ಪ್ರಚಾರವನ್ನು ರಾಜಾರೋಷವಾಗಿ ಮಾಡುತ್ತಿದ್ದ ಸಮಯ. ಸರ್ಕಾರದ ನಿಯಮಗಳನ್ನು ಪಾಲಿಸದೆ ಗಾಯದ ಮೇಲೆ ಬರೆ ಎಳೆಯುವ ಕೆಲಸಗಳನ್ನೂ ಅದೆಷ್ಟು ಜನರು ಮಾಡಿರುತ್ತಾರೆ. ಕೆಲಸಕ್ಕೆಂದು ಆಗಮಿಸಿದ ನಾನು ಕೆಲಸಕ್ಕೆ ಸೇರಲಾಗದೆ ಮೂರರಿಂದ ನಾಲ್ಕು ತಿಂಗಳು ಮನೆಯಲ್ಲಿ ಇರುವಂತಹ ಸಂದರ್ಭ ಎದುರಿಸಿ, ಪಡಬಾರದ ಕಷ್ಟಗಳನ್ನು ಅನುಭವಿಸಿ ಬಿಟ್ಟಿದ್ದೇನು. ಟಿವಿ ಮಾಧ್ಯಮವನ್ನು ನೋಡಿದರೆ ಭಯ ಇನ್ನಷ್ಟು ಹೆಚ್ಚುತ್ತದೆ ಎಂಬ ಕಾರಣಕ್ಕೆ ಮನೆಯಲ್ಲಿರುವ ಟಿವಿ ಕೇಬಲ್ ಸಂಪರ್ಕವನ್ನೇ  ಕಡಿತಗೊಳಿಸಿ ಇಂದಿಗೂ ಸುದ್ದಿ ಸಮಾಚಾರವನ್ನು ನೋಡುವುದನ್ನು ಮರೆತುಬಿಟ್ಟಿದೆನೆ. ಆರಂಭದಲ್ಲಿ ಟಿವಿ ನೋಡಬೇಕೆಂದು ತೋಚಿದರೂ, ಇವಾಗ ಟಿವಿಯ ಅಗತ್ಯವೇ ಇಲ್ಲ ಎಂಬಂತೆ ಭಾಸವಾಗುತ್ತಿದೆ.

    ಕುವೈಟ್, ಚಿಕ್ಕ ರಾಷ್ಟ್ರ ವಾಗಿದ್ದರಿಂದ    ಹರಡುವ ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ವಲಯವಾರು ತಂತಿ ಬೇಲಿಗಳನ್ನು ಹಾಕಿ ಸಂಪೂರ್ಣವಾಗಿ ಜನ ಸಂಚಾರವನ್ನು ಸ್ಥಗಿತಗೊಳಿಸಿತ್ತು, ದಿನದ 24 ಗಂಟೆಯಲ್ಲಿ ವಾಹನಗಳಲ್ಲಿ ತುಂಬಿತುಳುಕುತ್ತಿದ್ದ ರಸ್ತೆಗಳು ಬಿಕೋ ಎನ್ನುತ್ತಿದ್ದ ದಿನಗಳು ನೋಡಲಾರಂಭಿಸಿದ ಆಗಲೇ ಪ್ರಪಂಚದ ಅಂತ್ಯ  ಆರಂಭವಾಯಿತು ಎಂಬ ಭಯ ಇನ್ನಷ್ಟು ನಮ್ಮನ್ನು ಆತಂಕಕ್ಕೆ ಈಡು ಮಾಡಿತ್ತು.  ಮೇ 5, 2020  ರಿಂದ  ಒಂದು ತಿಂಗಳು ಯಾರೂ ಮನೆ ಬಿಟ್ಟು ಹೊರಗೆ ಹೋಗದಂತೆ ಕುವೈಟ್ ಸರ್ಕಾರ ಆದೇಶವನ್ನು ಹೊರಡಿಸಿತು, ವಿದೇಶಿಗಳು ಹೆಚ್ಚಿರುವ ಪ್ರದೇಶದಲ್ಲಿ ಪೊಲೀಸ್ ಗಸ್ತು ವಲಯ ಪ್ರದೇಶಗಳಿಗೆ ಆಗಮಿಸುವ ಮತ್ತು ನಿರ್ಗಮಿಸುವ ಸ್ಥಳಗಳಲ್ಲಿ  ಪೊಲೀಸರು ನಿಂತು ಸಂಪೂರ್ಣವಾಗಿ ಕುವೈತ್ ಜನರನ್ನು ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದರು.

ಕಾನೂನಿನ ಭಯ  ಜನರಲ್ಲಿ ಇರುವುದರಿಂದ  ತಪ್ಪಿದ್ದಲ್ಲಿ ತುಂಬಲಾರದ ದಂಡದ ಶಿಕ್ಷೆಯನ್ನು ವಿಧಿಸಿದ ರಿಂದ  ಎಲ್ಲಾ ವಿದೇಶಿಗರು ಮತ್ತು ದೇಶದ ಜನರು ಪಾಲಿಸಿದ್ದಾರೆ. ಕಾಲ ಕ್ರಮೇಣ ಹಣವಂತ ದೇಶ ಕುವೈಟ್ ಆದ್ದರಿಂದ ಚುಚ್ಚುಮದ್ದನ್ನು ಆಮದು ಮಾಡಿಕೊಂಡು ತಮ್ಮ ಪ್ರಜೆಗಳಿಗೆ ಮೊದಲ ಆದ್ಯತೆಯನ್ನು ಕೊಟ್ಟು ನಂತರ ವಿದೇಶಿಯರಿಗೆ ಕೊಡುತ್ತಾ ಕೋರೋಣ ರೋಗ ತಡೆಗಟ್ಟುವಲ್ಲಿ ಯಶಸ್ವಿಯಾಯಿತು.

ಆದರೆ, ಇತ್ತೀಚೆಗೆ  ರೂಪಾಂತರಿ ವೈರಸ್  ಓಮಿಕ್ರೋನ್, ನನ್ನನ್ನು ಆಕ್ರಮಿಸಿಬಿಟ್ಟಿತ್ತು. ದಿನಚರಿಯಂತೆ ಕೆಲಸಕ್ಕೆ ಹೋಗುತ್ತಿದ್ದೆ, ನನ್ನೊಂದಿಗೆ ಕೆಲಸ ಮಾಡುತ್ತಿರುವ ಒಬ್ಬ ವ್ಯಕ್ತಿಗೆ ಒಮಿಕ್ರೋನ್ ದೃಢಪಟ್ಟಿದ್ದರಿಂದ, ನಾನು ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಬೇಕಾದ ಅನಿವಾರ್ಯತೆ ಬಂತು. ಧೈರ್ಯದಲ್ಲಿ ನನಗೇನೂ ಆಗಿಲ್ಲವೆಂದು ಹೋದಾಗ, ಒಮಿಕ್ರೋನ್ ಪತ್ತೆಹಚ್ಚಿ  ಏಳುದಿನಗಳ ಸ್ವಯಂ ದಿಗ್ಬಂಧನಕ್ಕೆ ಒಳಗಾಗಿ,ಆರಂಭದ  ಮೊದಲ ದಿನ  ಆರೋಗ್ಯದಲ್ಲಿ ಏರುಪೇರು ಇಲ್ಲದಿದ್ದರೂ ಎರಡನೇ ದಿನ  ಸಮಸ್ಯೆಗಳನ್ನು ಎದುರಿಸಿ ನಿಯಂತ್ರಣವಾಯಿತು.  ಸುಸ್ತು ತಲೆನೋವು ಇನ್ನಷ್ಟು ದಿನ ಕಾಡಿತ್ತು. ಆಸ್ಪತ್ರೆಯಲ್ಲಿ ಕೆಲಸ ಮಾಡುವ ನನ್ನೊಡತಿಗೆ ಕೂಡ ದಿಗ್ಬಂದನ ಅನುಭಸಿಸುವ ಭಾಗ್ಯ ಸಿಕ್ಕಿತು.

      ದಿಗ್ಬಂದನವೆಂಬುದರ ಅರ್ಥ ನನಗೆ ಏಳು ದಿನದಲ್ಲಿ ಅರ್ಥವಾಯಿತು, ಇಲ್ಲಿ ಕೇಳಿ, ನೋಡಿ ನನ್ನ ಗೆಳೆಯ ಗೆಳತಿಯರೆ ದಯವಿಟ್ಟು ನಿಮ್ಮ ಆರೋಗ್ಯದ ಕಡೆ ಹೆಚ್ಚು ಗಮನ ಕೊಡಿ ಇಲ್ಲವಾದಲ್ಲಿ ನಾನು ಅನುಭವಿಸಿದ ಕಷ್ಟ ಎದುರಿಸಬೇಕು.  ಮೊಬೈಲ್ನಲ್ಲಿ ಮಾಹಿತಿ ಬಂದಂತೆ, ಆರೋಗ್ಯ ಇಲಾಖೆಯ ಆಪ್ಪ್ ನಲ್ಲಿ ನಮ್ಮ ಆರೋಗ್ಯದ ಬಗ್ಗೆ ತಿಳಿಸುತ್ತ ಇರಬೇಕು, ನಮ್ಮ ಫೋಟೋ ವನ್ನು ಆ ಆಪ್ಪ್ ನಲ್ಲಿ ಕಳುಹಿಸಿ, ಇದ್ದ ಜಾಗದಿಂದ ಆ ಕಡೆ ಈ ಕಡೆ ಕದಲದೆ ಇರಬೇಕು. ಆರೋಗ್ಯ ಇಲಾಖೆಯ ಫೋನ್ ಕರೆಯನ್ನು ಆಲಿಸಬೇಕು. ಅದಿರಲಿ ಇದರ ಹೊರತಾಗಿ  ಮನೆಯಲ್ಲಿ ಮಕ್ಕಳು ಇದ್ದರೆ ಅದರ ಕಷ್ಟ ಯಾರಿಗೂ ಬೇಡ. ನನ್ನೆರಡು ಮಕ್ಕಳು , ಸಾಧಾರಣವಾಗಿ ಕೆಲಸ ಮುಗಿದು ಮನೆಗೆ ಹೋದಾಗ ಸ್ನಾನ ಮಾಡಿ ಮಕ್ಕಳೊಂದಿಗೆ ಮಾತಾಡುವ ರೂಡಿ, ಚಿಕ್ಕವಳು ಅಪ್ಪ, ಅಮ್ಮ, ಬಂದಾಗ ತಬ್ಬಿಕೊಂಡು ತನ್ನ ತುಂಟಾಟ ಮಾಡುತಿದ್ದವಳು. ಒಂದೇ ಸಲ ಅಪ್ಪ ನನ್ನನ್ನು ದೂರ ಮಾಡ್ತಾ ಇದಾರೆ ಅನ್ನುವ ಭಾವನೆ, ಮಕ್ಕಳಿಗೆ ಈ ವೈರಸ್ ಬಗ್ಗೆ ಹೇಳಿದರೆ ತಿಳಿಯುವುದೇ? ಛೆ ಬೇಡ, ಮನೆಯ ಹಾಲ್ನಲ್ಲಿ ನನ್ನ ವಾಸ, ಮಕ್ಕಳೇ ನನ್ನ ಹತ್ರ ಬರಬೇಡಿ, ಯಾಕಪ್ಪ? ಅಲ್ಲ ಮಗು ಕೊರೊನ ಇದೆ . ಆಯ್ತು ಬರಲ್ಲ ಹೇಳಿ ಹೋಗುತ್ತಲೇ,ಅಪ್ಪ  ಅಪ್ಪ ಅಂತ ಮುತ್ತಿಕ್ಕಲು ಬರುವ ಚಿಕ್ಕ ಮಗು, ಹೈ, ನನ್ ಹತ್ರ ಬರ್ಬೇಡ "ಗೊಂಗ ಇದಾನೆ " ಅಳುತ್ತಾ ಅಮ್ಮನ ಬಳಿ ಹೋಗಿ ದೂರು ಹೇಳಿ ಪುನಃ ಹಿಂತಿರುಗಿ ಬರುತ್ತಾ ಅಳುತ್ತಾ ರಾತ್ರಿ ಅಮ್ಮನ ಜೊತೆಗೆ ಮಲಗಿ ಬಿಡುತಿದ್ದರು. ಮನೆ ಬಿಟ್ಟು ಹೋಗುವಂತಿಲ್ಲ, ಒಂದೆರಡು ಮಾತ್ರೆ ತಿಂದು ಮಲಗಿ ಎದ್ದು ಸುಸ್ತಾಗಿ ಹೋಗುತಿತ್ತು. ರಾತ್ರಿ ಎರಡು ಗಂಟೆಯವರೆಗೂ ನಿದ್ದೆ ಬರೋದಿಲ್ಲ, ಮೊಬೈಲ್ ಒತ್ತಿ ಒತ್ತಿ ಸಾಕಾಗುತಿತ್ತು, ಸ್ವಲ್ಪ ಬರವಣಿಗೆಯ ಅಭ್ಯಾಸವಿರುವುದರಿಂದ ಸಮಯ ಹೇಗೋ ಹೋಗುತಿತ್ತು.

ಒಂದಿಷ್ಟು ಗೆಳೆಯರು, ಆತ್ಮೀಯರು ಕರೆ ಮಾಡಿ ಕ್ಷೇಮ ಸಮಾಚಾರ ಕೇಳುತಿದ್ದರು. ವಾಟ್ಸಪ್ಪ್ ಗೆಳೆಯ ನನ್ನ ಸಮಯವನ್ನು ಅತ್ಯಂತ ನಿಯತ್ತಾಗಿ ಉಪಯೋಗಿಸಿಕೊಂಡು ನನ್ನ ದಿಗ್ಬಂದನದ ದಿನ ಕಳೆಯಲು ಸಹಾಯ ಮಾಡಿತ್ತು. 

   ಹೆಂಡತಿಯೊಬ್ಬಳು ಮನೆಯೊಳಗೇ ಇದ್ದರೆ, ನನಗದು ಊಟ, ತಿಂಡಿ, ಆರೈಕೆ, ಮಾತ್ರೆ, ನೀರು, ಇನ್ನಿತರ ಬುದ್ದಿ ಮಾತು. ಒಟ್ಟಾರೆ ದಿಗ್ಬಂದನದ ಅನುಭವ ಕಾಲಿಗೆ ಕಟ್ಟಿದ ಸರಪಳಿಯಂತೆ. ನಾಳೆ ಜನವರಿ 19, ದಿಗ್ಬಂದನ ಬಿಡುಗಡೆ, ಮತ್ತೊಮ್ಮೆ ಆರೋಗ್ಯ ತಪಾಸಣೆ ಮಾಡಿ ಕೆಲ್ಸಕ್ಕೆ ಸೇರಬೇಕಾಗಿದೆ.  ನನ್ನಂತೆ ನಿಮಗಾಗದಿರಲಿ ವೈರಾಣು ಕೆಲವರಿಗೆ ಅತೀ ಹೆಚ್ಚು ತೊಂದರೆ ಕೊಟ್ಟಿದೆ, ಕೆಲವರ ಪ್ರಾಣ ಹೋಗಿದೆ, ಕುಟುಂಬದ ಆಧಾರವಾಗಿದ್ದ ಜನರೆ ರೋಗಕ್ಕೆ ತುತ್ತಾಗಿ ಅನಾಥವಾಗಿರುವ ಪ್ರಸಂಗ ಅದೆಷ್ಟೋ ನಡೆದು ಹೋಗಿವೆ. 

ಇರುವಷ್ಟು ದಿನ, ಚೆನ್ನಾಗಿ ಬದುಕಬೇಕೆಂಬ ಆಸೆ ಇನ್ನಷ್ಟು ಜಾಸ್ತಿನೇ ಆಗಿದೆ, ಇಂದು ಬದುಕಿರುವ ನಾವು ನಾಳೆ ಬದುಕಿ ಇರುತ್ತೇವೆಯೋ ಇಲ್ಲವೋ ನಮಗೆ ತಿಳಿಯದು, ನಾನು ಇರುವಷ್ಟು ದಿನ, ನನ್ನ ಗೆಳೆಯ, ಗೆಳತಿ, ಸಂಸಾರ, ಸಮಾಜದಲ್ಲಿ ಒಳಿತಿನ ಕೆಲಸ ಮಾಡಬೇಕೆಂಬ ಮನಸ್ಸು ಇಮ್ಮಡಿಯಾಗಿದೆ. ನನ್ನ ಹೆಂಡ್ತಿ ಹತ್ರ ಜಗಳವಂತೂ ಮಾಡೋದಿಲ್ಲ ಅನ್ನುವ ನಿರ್ಧಾರಕ್ಕೆ ಬಂದಿರುವೆ. ನೀವುಗಳು ಕೊರೊನ ಆಹ್ವಾನಿಸಿ ಪಾಠ ಕಲಿಯೋದು ಬೇಡ ಅನ್ನುವ ಯೋಚನೆಯೊಂದಿಗೆ ಈ ಬರಹವನ್ನು ನಿಮ್ಮ ಮುಂದೆ ಇಟ್ಟಿರುವೆ. ನನ್ನ ಪ್ರೀತಿಯ ಗೆಳೆಯ,ಒಂದು ಲೇಖನವನ್ನು ಬರೆಯಿರಿ ಎಂದು ಹೇಳಿ ಪ್ರೇರಣೆ ನಿಡಿದ್ದ ಕಾರಣ, ಈ ಲೇಖನ ಅವರಿಗೆ ಅರ್ಪಿಸಿ ಪೂರ್ಣ ವಿರಾಮ ಹಾಕುತಿದ್ದೇನೆ.

ಕೊರೊನ ತೊಲಗಲಿ ಪ್ರಪಂಚದ ಪ್ರತಿಯೊಬ್ಬರೂ ಸುಂದರ ಜೀವನ ನಡೆಸುವಂತಾಗಲಿ.

                   


                           - ಮಾಧವ. ಕೆ. ಅಂಜಾರು.


              

Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ