(ಲೇಖನ -82) ಅಧಿಕಾರಿಗಳು ಭ್ರಷ್ಟರಾದರೆ ವ್ಯವಸ್ಥೆಗಳು ಭ್ರಷ್ಟವಾಗಿರುತ್ತವೆ
(ಲೇಖನ -82) ಅಧಿಕಾರಿಗಳು ಭ್ರಷ್ಟರಾದರೆ ವ್ಯವಸ್ಥೆಗಳು ಭ್ರಷ್ಟವಾಗಿರುತ್ತವೆ, ಗ್ರಾಮ ಪಂಚಾಯತ್ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳ ಅದೀನದಲ್ಲಿ ಕೆಲಸ ಮಾಡುತ್ತಿರುವ ಕೆಲವು ಸರ್ಕಾರಿ ಕೆಲಸಗಾರರು ಬ್ರಷ್ಟಾಚಾರವನ್ನು ದೊಡ್ಡಮಟ್ಟದಲ್ಲಿ ನಡೆಯುವುದಕ್ಕೆ ತಮ್ಮ ತಮ್ಮ ಕೊಡುಗೆಯನ್ನು ನೀಡುತ್ತಾ ಬಂದು ಬರುತ್ತಿರುವುದು ಬಹಳ ದುಃಖಕರವಾದ ಸಂಗತಿ. ಭ್ರಷ್ಟಾಚಾರ ಎಂಬುದನ್ನು ಯಾರಿಂದಲೂ ತೆಗೆದುಹಾಕಲು ಸಾಧ್ಯವಿಲ್ಲವೆಂಬ ಭಾವನೆಯೊಂದಿಗೆ ತನ್ನ ಸುತ್ತಲೂ ನಡೆಯುತ್ತಿರುವ ಅವ್ಯವಹಾರಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಪಾಲಿಗೆ ಬಂದದ್ದು ಪಂಚಾಮೃತವೆನ್ನುತ್ತಾ ತನ್ನನ್ನು ತಾನು ಭ್ರಷ್ಟಾಚಾರಕ್ಕೆ ತಳ್ಳಿಕೊಂಡು ಐಷಾರಾಮದ ಜೀವನ ಮಾಡಲು ಪ್ರಯತ್ನ ಪಡುತ್ತಿರುವ ಅದೆಷ್ಟು ಸರ್ಕಾರಿ ನೌಕರರು. ಒಂದು ಆಫೀಸಿನಲ್ಲಿ ಸರಾಸರಿ 25 ಜನ ಕೆಲಸಗಾರರಿದ್ದರೆ ಅದರಲ್ಲಿ 20 ಜನ ತನ್ನನ್ನು ತಾನು ಭ್ರಷ್ಟಾಚಾರದಲ್ಲಿ ತೊಡಗಿಸಿಕೊಳ್ಳುವ ಅಧಿಕಾರಿ. ಕೇವಲ ಕೆಲವೇ ಕೆಲವು ಮಂದಿ ತಾನು ಮಾಡುತ್ತಿರುವ ನೌಕರಿಗೆ ಬೆಲೆ ಕೊಟ್ಟು ನ್ಯಾಯಯುತವಾಗಿ ಬದುಕನ್ನು ಸಾಗಿಸುತ್ತಾರೆ.
ಹಣ ಕಂಡರೆ ಹೆಣವು ಬಾಯಿ ಬಿಡುತ್ತದೆ ಎಂಬ ಗಾದೆಯಂತೆ ಹೆಣವಾಗಿ ಅಧಿಕಾರಿಗಳು ಬಾಯ್ ಬಿಡುತ್ತಾ ಭಾರತದ ಸಂಪೂರ್ಣ ವ್ಯವಸ್ಥೆಗೆ ಮುಳುವಾಗಿ ಜೀವಿಸುತ್ತಿದ್ದಾರೆ. ರಾಜಕಾರಣಿಗಳು, ಐಎಎಸ್, ಐಪಿಎಸ್, ಬ್ಯಾಂಕ್ ವಲಯ, ಪಂಚಾಯತ್ ವ್ಯವಸ್ಥೆಗಳಲ್ಲಿ ಅತಿಯಾಗುತ್ತಿರುವ ಬ್ರಷ್ಟಾಚಾರವು ಭಾರತವನ್ನು ಅತಂತ್ರ ಸ್ಥಿತಿಗೆ ತಲುಪಿಸಲು ತಾವುಗಳು ಕೊಡುತ್ತಿರುವ ಕೊಡುಗೆ ಬರುವ ದಿನಗಳಲ್ಲಿ ಬಹಳ ದೊಡ್ಡ ಸಮಸ್ಯೆಯನ್ನು ಎದುರಿಸುವ ಮಟ್ಟಿಗೆ ತಲುಪಬಹುದು. ಒಬ್ಬ ಸಾಮಾನ್ಯ ಪ್ರಜೆ ಸರ್ಕಾರಿ ಸವಲತ್ತನ್ನು ತೆಗೆದುಕೊಳ್ಳಲು ನೇರವಾಗೆ ಪಂಚಾಯತಿಗೆ ಕಾಲಿಟ್ಟ ಕ್ಷಣ ಅಲ್ಲಿಂದಲೇ ಪ್ರಾರಂಭವಾಗುವ ಭಕ್ಷಕರ ತಂಡ ಹತ್ತು ರೂಪಾಯಿಯಲ್ಲಿ ಆಗುವ ಕೆಲಸವನ್ನು ಸಾವಿರ ರೂಪಾಯಿ ಕೇಳಿ ಕಿತ್ತುಕೊಂಡು ಆ ಕಡೆ ಸವಲತ್ತು ಇಲ್ಲದೆ ಈ ಕಡೆ ಹಣವು ಇಲ್ಲದೆ ಒಂದಷ್ಟು ಹಿಡಿ ಶಾಪವನ್ನು ಹಾಕಿ ಹಿಂದಿರುಗುವ ಅದೆಷ್ಟು ಮುಗ್ಧ ಜನರ ಹಣವನ್ನು ತಿಂದು ಜೀವನ ಸಾಗಿಸುತ್ತಿರುವ ಅವಿವೇಕಿ ಅಧಿಕಾರಿಗಳು.
ನಾಚಿಕೆಯಾಗಬೇಕು, ಸರ್ಕಾರ ಒಂದೊಂದು ಹುದ್ದೆಗೆ ಅದಕ್ಕೆ ಬೇಕಾಗುವಷ್ಟು ಸಂಬಳವನ್ನು ನೀಡಿ ಜನಸೇವೆ ಮಾಡಿ ಎಂದು ಆಯ್ಕೆ ಮಾಡಿದ ಕೂಡಲೇ, ಕೆಲಸಕ್ಕೆ ಸೇರಿದ ಮರುದಿನದಿಂದಲೇ ಗಿಂಬಳಕ್ಕಾಗಿ ಬಾಯಿ ಬಿಟ್ಟುಕೊಂಡು ಕುಳಿತುಕೊಳ್ಳುವ ವಿದ್ಯಾವಂತ, ಬುದ್ಧಿವಂತ, ಆರೋಗ್ಯವಂತ ಬಿಕ್ಷುಕರು. ಹೊಟ್ಟೆಗಿಲ್ಲದ ಭಿಕ್ಷುಕರು ಹೊಟ್ಟೆ ಅನ್ನಕ್ಕಾಗಿ ಭಿಕ್ಷೆಯನ್ನು ಬೇಡುತ್ತಾರೆ, ಹೊಟ್ಟೆ ತುಂಬಿದ ಭಿಕ್ಷುಕರು ಬಡವರ ಹೊಟ್ಟೆಯನ್ನು ಬಗೆದು ಐಷಾರಾಮಕ್ಕಾಗಿ ಭಿಕ್ಷೆಯನ್ನು ಬೇಡುತ್ತಾರೆ. ತನ್ನ ಹೆಂಡತಿ ಮಕ್ಕಳಿಗಾಗಿ ಅಂತೆ ಕಂತೆ ನೋಟನ್ನು ಸೇರಿಸಿಕೊಂಡು ಪಾಪದ ಕೊಡವನ್ನು ತುಂಬಿಸಿಕೊಳ್ಳುತ್ತಾ ತಾನು ಮಾಡಿಕೊಂಡ ಹಣವನ್ನು ತಿನ್ನಲಾಗದೆ ದುರ್ಮರಣ ಹೊಂದಿದ ಉದಾಹರಣೆಗಳು ಅದೆಷ್ಟಿದೆ. ಅದೊಂದಡೆಯಾದರೆ ಯಾವುದನ್ನು ಲೆಕ್ಕಿಸದೆ ಜನಸೇವೆಯೇ ನೆಪದಲ್ಲಿ ಜನರನ್ನೇ ತಿಂದು ಮುಗಿಸುವ ಕಾಯಕದಲ್ಲಿ ತೊಡಗಿಸಿಕೊಂಡ ಅದೆಷ್ಟು ಜನ ಸೇವಕರು. ಎಂತಹ ವಿಚಿತ್ರ! ನನಗೆ ಗೊತ್ತಿರುವ ಪ್ರಕಾರ, ಭ್ರಷ್ಟಾಚಾರವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಹೋಗುತ್ತಿದೆ, ಬ್ರಷ್ಟಾಚಾರ ನಿರ್ಮೂಲನಕ್ಕೆ ತಂಡವನ್ನು ಮಾಡಿದರು, ಅದೇ ತಂಡವು ಭ್ರಷ್ಟಾಚಾರದಲ್ಲಿ ತೊಡಗಿಸಿಕೊಳ್ಳುವಷ್ಟು ಕೀಳು ಮಟ್ಟಕ್ಕೆ ನಮ್ಮ ವ್ಯವಸ್ಥೆಗಳು ಬಂದು ತಲುಪಿದೆ.
ಭ್ರಷ್ಟರನ್ನು ಬೇಟೆಯಾಡಲೆಂದು ದೂರನ್ನು ಕೊಟ್ಟಾಗ ದೂರನ್ನು ಸ್ವೀಕರಿಸದೆ ದೂರನ್ನು ಕೊಡುವವರ ಮೇಲೆ ದಬ್ಬಾಳಿಕೆ ನಡೆಸಿ ಇನ್ನಷ್ಟು ಪ್ರೋತ್ಸಾಹ ಮಾಡುತ್ತಿರುವ ನಪುಂಸಕ ಅಧಿಕಾರಿಗಳು ತುಂಬಾ ಜಾಸ್ತಿ ಆಗಿದ್ದಾರೆ. ಕಾನೂನು ಪಾಲಕರು ಕಾನೂನನ್ನು ಪಾಲಿಸದೆ, ನ್ಯಾಯಪಾಲಕರು ನ್ಯಾಯವನ್ನು ಪಾಲಿಸದೆ, ಹೆಗಲ ಮೇಲೆ ಕೈ ಹಾಕೊಂಡು ಒಗ್ಗೂಡಿ ಬಹಳ ಶ್ರದ್ಧೆಯಿಂದ ತಮಗೆ ಬರುವ ಪಾಲನ್ನು ಹಂಚಿಕೊಳ್ಳುವ ಮಟ್ಟಿಗೆ ಬ್ರಷ್ಟಾಚಾರ ತುಂಬಿ ಹೋಗಿದೆ. ಮನೆ ಕಟ್ಟಲು ಪರವಾನಿಗೆಗೆ ಲಂಚ, ಪಿಡಿಯೋ ಅಧಿಕಾರಿಗಳ ಲಂಚ, ಗ್ರಾಮ ಲೆಕ್ಕಾಧಿಕಾರಿಗಳು, ತಹಶೀಲ್ದಾರರು, ಆರೋಗ್ಯ ಅಧಿಕಾರಿಗಳು, ಸಬ್ಇ ನ್ಸ್ಪೆಕ್ಟರ್ಗಳು, ಐಎಎಸ್ ಐಪಿಎಸ್ ಅಧಿಕಾರಿಗಳು, ಅಬಕಾರಿ ಅಧಿಕಾರಿಗಳು, ಕಂದಾಯ ಅಧಿಕಾರಿಗಳು, ವಾಹನ ಇಲಾಖೆಯ ಅಧಿಕಾರಿಗಳು, ಸರ್ಕಾರದ ಹೆಚ್ಚಿನ ಕಚೇರಿಗಳಲ್ಲಿ ಭ್ರಷ್ಟಾಚಾರ ಎಂಬುದು ಬಹಳ ದೊಡ್ಡ ಮಟ್ಟಿಗೆ ಪಸರಿಸಿಕೊಂಡಿದೆ. ಅವಸ್ಥೆಗಳು ಇದೇ ತರ ಮುಂದುವರೆದಲ್ಲಿ ಜನರು ಕೂಡಿ ಮತ್ತಿಗೆ ಹಾಕೋ ಸಮಯ ಬಹಳ ಬೇಗನೆ ಬರಲಿಕ್ಕಿದೆ.
ದುರುದ್ದೇಶ ಇಟ್ಕೊಂಡು ರಾಜಕೀಯ ಸೇರುವವರು ಜನಸೇವೆ ಮಾಡಲು ಸಾಧ್ಯವಿಲ್ಲ, ಹಣದಾಸೆ ಇರುವವರು ಸರ್ಕಾರಿ ಕೆಲಸವನ್ನು ಮಾಡುದಿದ್ದರೆ ವ್ಯವಸ್ಥೆಗಳು ಸರಿಯಾಗುವುದಿಲ್ಲ, ಅತಿಯಾದ ಭ್ರಷ್ಟಾಚಾರ ನಾಗರಿಕರನ್ನು ದಿನ ಹೋದಂತೆ ದೊಡ್ಡ ಕೂಪಕ್ಕೆ ತಳ್ಳುತ್ತಿದೆ. ಹಣವಂತರು ಹಣವಂತರಾಗುತ್ತಿದ್ದಾರೆ, ಬಡವರು ಕಡುಬಡವರಾಗುತ್ತಿದ್ದಾರೆ, ಮಧ್ಯಮ ವರ್ಗದವರು ನೇಣಿಗೆ ಶರಣಾಗುತ್ತಿದ್ದಾರೆ. ನೋಡುವವರ ಕಣ್ಣಿಗೆ ಅವನು ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡ ಎಂಬ ಕಾರಣವಷ್ಟೇ. ಆದರೆ ಅದೆಷ್ಟು ಆತ್ಮಹತ್ಯೆಗಳು ಪ್ರಕರಣಗಳು ಸಾಮಾಜಿಕವಾಗಿ ಅನುಭವಿಸುತ್ತಿರುವ ಕಷ್ಟಗಳಿಂದ ಹೊರತು ಸ್ವಂತ ವಿಚಾರಗಳಿಗೆ ಸಂಬಂಧಿಸಿದಲ್ಲ. ಒಬ್ಬ ರೈತನು, ಒಬ್ಬ ವ್ಯಾಪಾರಿ, ಒಬ್ಬ ಬಡವನು, ಒಬ್ಬ ಮಧ್ಯಮ ವರ್ಗದವನು ತನ್ನನ್ನು ತಾನು ಬಲಿಕೊಡುವ ಕಾರಣ ಪ್ರಸ್ತುತ ಸ್ಥಿತಿಯಲ್ಲಿ ಎಲ್ಲಾ ವಿಚಾರಗಳಲ್ಲಿ ನೋವನ್ನು ಅನುಭವಿಸಿ, ಭ್ರಷ್ಟರ ಬಹಳ ದೊಡ್ಡ ಕೊಡುಗೆಯಿಂದ ತನ್ನ ಜೀವವನ್ನು ಕಳೆದುಕೊಳ್ಳುತ್ತಿದ್ದಾನೆ. ಭ್ರಷ್ಟರು ಸರ್ವನಾಶವಾಗಲಿ, ಅವರುಗಳು ಕೂಡಿಟ್ಟ ಹಣವೆಲ್ಲ ದೊಡ್ಡ ದೊಡ್ಡ ರೋಗಗಳಿಗೆ ಹೋಗಲಿ, ಅವರ ಐಷಾರಾಮಗಳೆಲ್ಲ ಮಣ್ಣು ಪಾಲಾಗಿ ಹೋಗಲಿ. ಜನುಮಜನುಮಕ್ಕು ಮಾಡಿದ ಪಾಪಕ್ಕೆ ದೇವರು ಕ್ಷಮೆ ಕೊಡದೆ ಇರಲಿ.
ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿರುವ ಪ್ರತಿಯೊಬ್ಬರಿಗೂ ನನ್ನ ಧಿಕ್ಕಾರವಿರಲಿ. 😢
✍️ಮಾಧವ. ಕೆ. ಅಂಜಾರು
Comments
Post a Comment